ಸ್ಟೇಟಸ್ ಕತೆಗಳು (ಭಾಗ ೯೬೨)- ಪ್ರಶ್ನೆ
ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ ಕುಳಿತ ದೊಡ್ಡ ದೊಡ್ದ ಮಂದಿಯ ಕಣ್ಣಲ್ಲಿ ಇಳಿಯುತ್ತಿರುವ ನೀರನ್ನು ಕೇಂದ್ರೀಕರಿಸುತ್ತಿದ್ದಾರೆ. ಅವರ ಚಪ್ಪಾಳೆ, ಶಿಳ್ಳೆ, ಸಂಭ್ರಮವನ್ನು ಜನರ ಮುಂದೆ ತೆರೆದಿಡುತ್ತಿದ್ದಾರೆ. ಅವರ ಸಾಧನೆ ಈ ದೊಡ್ಡ ಮಂದಿಗೆ ಸಂಭ್ರಮ ಕೊಟ್ಟಿದೆ. ಖುಷಿಯ ಕಣ್ಣೀರು ತರಿಸಿದೆ ಎನ್ನುವ ಸಂದೇಶ ರವಾನಿಸಿದ್ದಾರೆ. ಆ ವೇದಿಕೆಯಲ್ಲಿ ಅಜ್ಜಿಯ ಸಾಧನೆ ನೋಡಿ ಚಪ್ಪಾಳೆ ತಟ್ಟಿದ ದೊಡ್ಡವರಿದ್ದಾರಲ್ಲ ಅವರು ಯಾರಿಗೂ ಇದಕ್ಕಿಂತ ಮೊದಲು ತಾವು ಸಮಾಜಕ್ಕೆ ಏನಾದರೂ ಕೊಡಬೇಕು ಅಂತ ಯಾಕೆ ಅನಿಸಲಿಲ್ಲ? ಅಥವಾ ಆ ಸಾಧನೆಯು ಆದ ನಂತರವಾದರೂ ಸಹ ಅಂತಹ ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳುವ ಸಣ್ಣ ವಿವೇಕವು ಯಾಕೆ ಬಂದಿಲ್ಲ? ಎಲ್ಲರಿಗೂ ತಾವು ಪ್ರದರ್ಶನವಾಗಬೇಕು, ಹೆಸರುಗಳಿಸಬೇಕು, ದುಡ್ಡು ಮಾಡಬೇಕು, ಸಮಾಜಕ್ಕೆ ಏನಾದರೂ ಮಾಡುವ ಕೆಲಸವನ್ನು ಎಲೆಮರೆಯಿಂದಲೇ ಮಾಡುವವರು ಮಾಡ್ತಾನೇ ಇದ್ದಾರೆ. ಇಂತಹ ದೊಡ್ಡವರು ಕೆಲಸಕ್ಕೆ ಇಳಿದುಬಿಟ್ಟರೆ ಹಲವಾರು ಸಣ್ಣ ಸಮಸ್ಯೆಗಳು ಪರಿಹಾರವಾಗುತ್ತದೆ ಅಲ್ವಾ? ಕಾರ್ಯಕ್ರಮ ನೋಡುತ್ತಿದ್ದ ಪುಟ್ಟ ಹುಡುಗ ರಾಮುವಿನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ಹೇಳುವವರಾರು?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ