ಸ್ಟೇಟಸ್ ಕತೆಗಳು (ಭಾಗ ೯೮೩)- ನಿರ್ವಹಣೆ

ಸ್ಟೇಟಸ್ ಕತೆಗಳು (ಭಾಗ ೯೮೩)- ನಿರ್ವಹಣೆ

ವರ್ಷಗಳನ್ನು ಇಲ್ಲಿ ಕಳೆಯಬೇಕು ಅಂತಂದುಕೊಂಡು ಬಂದಿದ್ದವರಿಗೆ ಇನ್ನೂ ಆ ಸ್ಥಳದಲ್ಲಿ ಬದುಕೋಕೆ ಉಳಿದದ್ದು ಕೆಲವೇ ದಿನಗಳು ಮಾತ್ರ. ಕಾಲ ಸರಿದದ್ದೇ ಗೊತ್ತಾಗಲಿಲ್ಲ. ಈಗ ಬೆನ್ನ ತುಂಬಾ ತುಂಬಿಕೊಂಡಿರುವುದು ನೆನಪಿನ ಮೂಟೆಗಳು, ಅನುಭವದ ಬುತ್ತಿಗಳು, ಸಾಂತ್ವನದ ಮಾತುಗಳು, ಒಂದಷ್ಟು ಹನಿ ಮುನಿಸುಗಳು. ಎಲ್ಲವನ್ನೂ ಹೊತ್ತುಕೊಂಡು ಈಗ ಸಾಗಲೇ ಬೇಕಾಗಿದೆ. ಆ ಕಟ್ಟಡದ ಒಳಗೆ ಬರುವಾಗ ಕನಸುಗಳು ದೊಡ್ಡದಿದ್ದವು. ಜವಾಬ್ದಾರಿಗಳು ಜೊತೆಗೆ ಇದ್ದವು. ಈಗ ಜವಾಬ್ದಾರಿಯ ಜೊತೆ ಕನಸನ್ನು ನಿಭಾಯಿಸಿದವರು ಒಂದು ಕಡೆ, ಹೊಸ ಕನಸಿನ ಕಡೆಗೆ ಸಾಗುತ್ತಿರುವ ಒಂದು ಕಡೆ. ವಿಷಯವನ್ನು ಅರ್ಥ ಮಾಡಿಕೊಂಡವರು ಒಂದು ಕಡೆ. ಸಂಭ್ರಮ ಖುಷಿ, ನೋವು ಎಲ್ಲವನ್ನು ಒಟ್ಟಿಗಿಟ್ಟುಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆಯಲ್ಲಿ ಎಲ್ಲರೂ ಇದ್ದಾರೆ. ಇವರು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದವರು ಇವರನ್ನು ಅದೇ ರೀತಿ ಪ್ರೀತಿಯಿಂದ ಬೀಳ್ಕೊಡಬೇಕಲ್ಲ ಅದಕ್ಕಾಗಿ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಅವರಿಗೆ ಎಲ್ಲ ಕ್ಷಣಗಳು ನೆನಪಾಗಬೇಕು ಅವರಿಗೆ ಆ ದಿನ ಮತ್ತೆ ಮತ್ತೆ ನೆನಪಲ್ಲಿರಬೇಕು ಹೀಗೆ ಏನೇನೊ ಆಸೆಗಳನ್ನು ಇಟ್ಟುಕೊಂಡು ದ್ವಿತೀಯ ವರ್ಷದವರು ಅಂತಿವ ವರ್ಷದವರ ಬೀಳ್ಕೊಡುಗೆ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ದಿನಗಳು ದಾಟಿದ್ರೆ ಅವರೂ ಅಂತಿಮ ವರ್ಷದಲ್ಲೇ ಇದ್ದು ಬಿಡುತ್ತಾರೆ. ಇಷ್ಟು ದಿನ ದೊಡ್ಡವರನ್ನು ನೋಡಿ ಕಲಿತಾಯ್ತು. ಇನ್ನು ಮಾಡಿ ತಿಳಿಯಬೇಕಾಗಿದೆ. ಈಗ ಉತ್ಸಾಹದಲ್ಲಿದ್ದಾರೆ. ಮುಂದೆ ಜವಾಬ್ದಾರಿಯೊಂದಿಗೆ ಬದುಕುತ್ತಾರೆ. ಪ್ರತಿಯೊಂದು ನಿರ್ವಹಿಸಿದಾಗ ಮಾತ್ರ ತಿಳಿಯುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ