'ಸ್ತ್ರೀರತ್ನ' ದಿಂದ ಬೆಳಕಿಗೆ ಬಂದ ‘ಪುರುಷ ರತ್ನ' - ಕೆ ಎಸ್ ಅಶ್ವಥ್

'ಸ್ತ್ರೀರತ್ನ' ದಿಂದ ಬೆಳಕಿಗೆ ಬಂದ ‘ಪುರುಷ ರತ್ನ' - ಕೆ ಎಸ್ ಅಶ್ವಥ್

೧೯೫೫ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ೧೩. ಈ ಚಿತ್ರಗಳಲ್ಲಿ ‘ಸ್ತ್ರೀರತ್ನ' ಎಂಬ ಚಿತ್ರವೂ ಒಂದು. ಈ ಚಿತ್ರದ ವಿಶೇಷತೆಗಳು ಹಲವಾರು. ಈ ಚಿತ್ರದ ಪ್ರಥಮಾರ್ಧ ವರ್ಣದಲ್ಲೂ ಉಳಿದ ಭಾಗ ಕಪ್ಪು ಬಿಳುಪಿನಲ್ಲೂ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಸಂಭಾಷಣೆ ಬರೆಯಲು ಒಪ್ಪಿದ್ದ ಅಂದಿನ ಖ್ಯಾತ ಸಾಹಿತಿ ಅ ನ ಕೃಷ್ಣರಾವ್ ಅರ್ಧದಲ್ಲೇ ಚಿತ್ರವನ್ನು ಬಿಟ್ಟು ಹೋದದ್ದು, ಖ್ಯಾತ ಕಾದಂಬರಿಕಾರ್ತಿಯಾದ ತ್ರಿವೇಣಿ ಅವರು ಚಿತ್ರ ಕಥೆ ಬರೆದದ್ದು ಎಲ್ಲವೂ ಈಗ ಇತಿಹಾಸ. 

ಈ ಸ್ತ್ರೀರತ್ನ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಆದ ಬಹು ದೊಡ್ದ ಲಾಭವೆಂದರೆ ಕೆ ಎಸ್ ಅಶ್ವಥ್ ಅವರ ರಂಗಪ್ರವೇಶ. ಇವರೇ ಸ್ತ್ರೀರತ್ನದಿಂದ ಹೊರಹೊಮ್ಮಿದ ‘ಪುರುಷರತ್ನ’ ಎಂದು ಹೇಳಬಹುದು. ಹಾಸನ ಜಿಲ್ಲೆಯ ಹೊಳೆನರಸೀಪುರದ ಕರಗನಹಳ್ಳಿಯಲ್ಲಿ ಜನಿಸಿದ ಇವರ ಮೂಲ ಹೆಸರು ಅಶ್ವಥ ನಾರಾಯಣ. ಕನ್ನಡ ಚಲನಚಿತ್ರಗಳಲ್ಲಿ ಇವರಂತೆ ಪೋಷಕ ಪಾತ್ರಗಳನ್ನು ಮಾಡಿದವರು ಅತೀ ವಿರಳ. ಯಾವುದೇ ಪಾತ್ರಗಳಿಗೆ ಜೀವ ತುಂಬುವ ಕೆಲಸ ಇವರು ಮಾಡುತ್ತಿದ್ದರು. ಅಶ್ವಥ್ ಅವರನ್ನು ಚಿತ್ರರಂಗಕ್ಕೆ ತಂದ ಕೀರ್ತಿ ಸಲ್ಲಬೇಕಾದದ್ದು ಪ್ರೀಮಿಯರ್ ಫಿಲಂನ ಬಸವರಾಜಯ್ಯನವರಿಗೆ. ಹೊಟ್ಟೆಪಾಡಿಗಾಗಿ ಆಹಾರ ಇಲಾಖೆಯಲ್ಲಿ ಗುಮಾಸ್ತನಾಗಿ ನೌಕರಿ ಮಾಡುತ್ತಿದ್ದ ಕೆ ಎಸ್ ಅಶ್ವಥ್ ಅವರು ಬಿಡುವಿನ ಸಮಯದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು. ಬಸವರಾಜಯ್ಯನವರು ಅಶ್ವಥ್ ಅವರ ನಟನಾ ಕೌಶಲ್ಯಕ್ಕೆ ಬೆರಗಾಗಿ ಆಹಾರ ಇಲಾಖೆಯ ನೌಕರಿಯಿಂದ ಬಿಡಿಸಿ ಚಿತ್ರರಂಗಕ್ಕೆ ಕರೆತಂದರು. 

ಅಶ್ವಥ್ ನಟಿಸಿದ ಮೊದಲ ಚಿತ್ರ ‘ಸ್ತ್ರೀರತ್ನ'. ಈ ಚಿತ್ರದ ನಿರ್ದೇಶನ ಮಾಡಿದವರು ಕೆ ಸುಬ್ರಹ್ಮಣ್ಯಂ. ಚಿತ್ರದ ತಾರಾಗಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ತಾಯಿ ಸಂಧ್ಯಾ ಮತ್ತು ಅವರ ಸಹೋದರಿ ವಿದ್ಯಾ. ಉಳಿದ ಪಾತ್ರಗಳಲ್ಲಿ ಚೆನ್ನಬಸಪ್ಪ, ನಾಗರತ್ನ, ಸರೋಜಾ ಮುಂತಾದವರಿದ್ದರು. ‘ಸ್ತ್ರೀರತ್ನ' ದ ಬಳಿಕ ತಕ್ಷಣಕ್ಕೆ ಯಾವುದೇ ಅವಕಾಶಗಳು ದೊರೆಯದೇ ಇದ್ದರೂ ನಿರಾಶರಾಗದ ಅಶ್ವಥ್ ನಾಟಕ ರಂಗದೆಡೆಗೆ ಮುಖ ಮಾಡಿದ್ದರು. ನಂತರದ ದಿನಗಳಲ್ಲಿ ನಿಧಾನವಾಗಿ ಅವರ ಪ್ರತಿಭೆಯನ್ನು ಗಮನಿಸಿ ಹೇರಳ ಅವಕಾಶಗಳು ಹುಡುಕಿಕೊಂಡು ಬಂದವು. ನೂರಾರು ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡ ಅಶ್ವಥ್ ಅವರ ‘ನಾಗರಹಾವು' ಚಿತ್ರದ ಚಾಮಯ್ಯ ಮಾಸ್ಟರ್ ಪಾತ್ರ ಮರೆಯಲಾಗದ್ದು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ೧೯೭೨ರಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು. ಅದಕ್ಕೂ ಹಿಂದೆ ೧೯೬೮ರಲ್ಲಿ ‘ನಮ್ಮ ಮಕ್ಕಳು' ಚಿತ್ರಕ್ಕಾಗಿ ಪ್ರಶಸ್ತಿ ದೊರೆತಿತ್ತು. ನಂತರ ೧೯೯೦ರಲ್ಲಿ ಮುತ್ತಿನ ಹಾರ ಚಿತ್ರಕ್ಕಾಗಿ ಉತ್ತಮ ಪೋಷಕ ನಟ ಗೌರವವನ್ನು ಪಡೆದುಕೊಂಡರು. 

೧೯೯೩ರಲ್ಲಿ ಜೀವಮಾನದ ಸಾಧನೆಗಾಗಿ ರಾಜ್ಯ ಸರಕಾರದ ಪ್ರತಿಷ್ಟಿತ ‘ಡಾ. ರಾಜ್ ಕುಮಾರ್' ಪ್ರಶಸ್ತಿ ದೊರೆಯಿತು. ಕೆಲವೊಂದು ಘಟನೆಗಳಿಂದ ನೊಂದ ಅಶ್ವಥ ನಟನೆಯಿಂದ ವಿಮುಖರಾಗಿದ್ದರು. ಆದರೆ ಪಾರ್ವತಮ್ಮ ರಾಜಕುಮಾರ್ ಅವರ ಒತ್ತಾಯದ ಮೇಲೆ ‘ಶಬ್ಧವೇಧಿ' ಚಿತ್ರಕ್ಕೆ ಮತ್ತೆ ಬಣ್ಣ ಹಚ್ಚಿದರು. ಅಶ್ವಥ್ ಎಂದರೆ ಶಿಸ್ತು ಮತ್ತು ಸುಸಂಸ್ಕೃತ ನಡವಳಿಕೆ ಎಂಬ ಮಾತು ಇತ್ತು. ಇಂತಹ ಒಂದು ಪ್ರತಿಭೆ ನಮ್ಮನ್ನು ಅಗಲಿದ್ದು ಜನವರಿ ೧೮, ೨೦೧೦ರಲ್ಲಿ.

‘ಸ್ತ್ರೀರತ್ನ' ದಿಂದ ಉಗಮವಾದ ಪುರುಷ ಪ್ರತಿಭೆ ಬಗ್ಗೆ ತಿಳಿದುಕೊಂಡರಲ್ಲಾ, ಈಗ ಸಂಭಾಷಣೆ ಬರೆಯುತ್ತಿದ್ದ ಅ ನ ಕೃಷ್ಣರಾಯರು ಅರ್ಧದಲ್ಲೇ ಏಕೆ ತಮ್ಮ ಕೆಲಸವನ್ನು ಬಿಟ್ಟು ಹೋದರು ಎಂದು ತಿಳಿಯೋಣ. ಅದಕ್ಕೆ ಕಾರಣ ಕೃಷ್ಣರಾಯರ ಕನ್ನಡ ಪ್ರೇಮ. ಈ ಚಿತ್ರದಲ್ಲಿ ತಮಿಳು ಮತ್ತು ತೆಲುಗು ರಂಗದ ಅಂದಿನ ಖ್ಯಾತ ಹಾಸ್ಯ ನಟರಾದ ಎಸ್ ಎಸ್ ಕೃಷ್ಣನ್ ಮತ್ತು ಟಿ ಎ ಮಧುರಂ ಇವರನ್ನು ನಟಿಸಲು ಕರೆಯಲಾಗಿತ್ತು ಎಂಬ ಸುದ್ದಿ ಕೇಳಿ, ಪರಭಾಷಾ ತಾರೆಯರಿಗೆ ಮಣೆ ಹಾಕುವುದನ್ನು ವಿರೋಧಿಸಿ ಕೃಷ್ಣರಾಯರು ತಮ್ಮ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೊರಟುಹೋದರು. ಇದು ಅಂದಿನ ಅನಕೃ ಅವರ ಪರಭಾಷಾ ವಿರೋಧಿ ಚಳುವಳಿ ಇರಬಹುದೇನೋ?

ಅ ನ ಕೃ ಅವರು ಬಿಟ್ಟುಹೋದ ಕೆಲಸವನ್ನು ಪೂರ್ತಿಗೊಳಿಸಿದ್ದು ನರೇಂದ್ರಬಾಬು ಎಂಬವರು. ಅನಕೃ ಅವರ ನಿರ್ಧಾರಕ್ಕೆ ಸಡ್ಡು ಹೊಡೆಯುವಂತೆ ನಟಿಸಿದ್ದ ಪರಭಾಷಾ ಕಲಾವಿದರು ನಂತರ ಕನ್ನಡವನ್ನು ಕಲಿತು ತಮ್ಮ ಸಂಭಾಷಣೆಯನ್ನು ತಾವೇ ‘ಡಬ್' ಮಾಡಿದರಂತೆ. ‘ಸ್ತ್ರೀರತ್ನ' ಚಿತ್ರದ ಮೂಲ ‘ವೈನೀಚಾ ಬಾಂಗಾಡ್ಯಾ’ ಎಂಬ ಮರಾಠಿ ಕಥೆ. ಈ ಚಿತ್ರದ ಮೊದಲಾರ್ಧವನ್ನು ಗೇವಾ ಕಲರ್ ನಲ್ಲಿ ಚಿತ್ರೀಕರಿಸಲಾಗಿದೆ. ನಂತರ ಅನಿವಾರ್ಯ ಕಾರಣಗಳಿಂದಾಗಿ ಉಳಿದ ಭಾಗವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಬೇಕಾಗಿ ಬಂತು. ಚಿತ್ರದಲ್ಲಿ ಹತ್ತು ಹಾಡುಗಳಿದ್ದವು. ಗೋಟು ವಾದ್ಯಂ ಕಲಾವಿದರಾದ ಶ್ರೀನಿವಾಸ್ ಅಯ್ಯಂಗಾರ್ ಅವರು ಈ ಚಿತ್ರದ ಸಂಗೀತ ನಿರ್ದೇಶಕರು. ಅತ್ಯಂತ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರವು ಸಾಧಾರಣ ಯಶಸ್ಸನ್ನು ಕಂಡಿತು. 

(ಆಧಾರ: ಗಣೇಶ್ ಕಾಸರಗೋಡು ಅವರ ಬರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ