ಸ್ನೇಹದ ಮಧುಶಾಲೆ

ಸ್ನೇಹದ ಮಧುಶಾಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಮಲ್ಲಿನಾಥ ಎಸ್. ತಳವಾರ
ಪ್ರಕಾಶಕರು
ಸ್ನೇಹ ಸೇತು ಪ್ರಕಾಶನ, ರಾವೂರ-೫೮೫೨೨೫, ಶಹಾಬಾದ್, ಕಲ್ಬುರ್ಗಿ. ದೂ: ೯೯೮೬೩೫೩೨೮೮
ಪುಸ್ತಕದ ಬೆಲೆ
ರೂ.೧೩೦.೦೦, ಮುದ್ರಣ: ೨೦೨೧

ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು.

ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ, ಸ್ವರೂಪ, ಲಕ್ಷಣ ಹಾಗೂ ಗಜಲ್ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತಿಳಿ ಹೇಳಿದ್ದರೆ, ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" ಗಜಲ್ ಹೂದೋಟ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ ಎರಡು ಪುಸ್ತಕಗಳು ಗಜಲ್ ಓದುಗರಿಂದ ಪ್ರಶಂಸೆ ಪಡೆದುಕೊಂಡು ಗಜಲ್ ಕಲಿಕೆಗೆ ದಾರಿದೀಪವಾಗಿವೆ ಎಂದು ಎಲ್ಲರಿಂದ ಷರಾ ಬರೆಯಿಸಿಕೊಂಡಿವೆ.  ಇನ್ನೂ ಇದರ ಮುಂದುವರಿದ ಭಾಗವೆಂಬಂತೆ "ಸ್ನೇಹದ ಮಧುಶಾಲೆ" ಗಜಲ್ ಗುಲ್ಜಾರ್ ನಲ್ಲಿ ಕನ್ನಡ ಗಜಲ್ ಪರಂಪರೆಯಲ್ಲಿ ಮೊಟ್ಟ ಮೊದಲ ಬಾರಿಗೆ "ಗಜಲ್ ಬೆಹರ್" ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಅಂದರೆ, ಗಜಲ್ ಛಂದಸ್ಸು ಎಂದರೇನು, ಅದರ ಸ್ವರೂಪ, ಲಕ್ಷಣ ಹಾಗೂ ಬೆಹರ್ ನಲ್ಲಿ ಇರುವ ಪ್ರಕಾರಗಳೆಷ್ಟು ಎಂಬುದರ ಕುರಿತು ಸಂಶೋಧನಾತ್ಮಕ ಬರಹವನ್ನು ಇದು ಒಳಗೊಂಡಿದೆ. ಅದರೊಂದಿಗೆ ಸೂಕ್ತ ಉದಾಹರಣೆಗಳೊಂದಿಗೆ ‌ಸರಳವಾಗಿ ನಿರೂಪಿಸಿಲಾಗಿದೆ. ಇನ್ನೂ ಒಂದು ವಿಶೇಷವೆಂದರೆ ವೈವಿಧ್ಯಮಯ ೯೬ ಗಜಲ್ ಗಳಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿಯ ಉರ್ದು ಅಧ್ಯಯನ ಸಂಸ್ಥೆಯ ಮುಖ್ಯಸ್ಥರು, ಉರ್ದು ಭಾಷೆಯ ವಿದ್ವಾಂಸರಾದ ಡಾ. ಅಬ್ದುಲ್ ರಬ್ ಉಸ್ತಾದ್ ರವರ ಉಪಯುಕ್ತ ಮುನ್ನುಡಿ ಇದೆ. 

ಶ್ರೀ ಸಚ್ಚಿದಾನಂದ ಪ.ಪೂ.ಕಾಲೇಜು, ರಾವೂರ ಇದರ ಪ್ರಾಚಾರ್ಯರಾದ ಶ್ರೀ ಕೆ.ಆಯ್.ಬಡಿಗೇರ್ ಅವರು ತಮ್ಮ ಬೆನ್ನುಡಿಯಲ್ಲಿ “ಪ್ರಸ್ತುತ ತಮ್ಮ ಸ್ನೇಹಿತ ಬಳಗದ ಸಹಕಾರದೊಂದಿಗೆ ‘ಸ್ನೇಹದ ಮಧುಶಾಲೆ" ಎಂಬ ಮೂರನೆಯ ಗಜಲ್ ಸಂಕಲನವನ್ನು ಪ್ರಕಟಿಸುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ. ಈ ಕೃತಿಯ ಕೆಲವು ಗಜಲ್ ಗಳು ವಾಸ್ತವಿಕತೆಯನ್ನು ತೆರೆದಿಡುತ್ತಾ, ವೈಚಾರಿಕ ಚಿಂತನೆಗೆ ಹಚ್ಚುತ್ತವೆ. 

‘ಮಂದಿರ-ಮಸೀದಿ-ಚರ್ಚುಗಳು ಜೇಬು ತುಂಬಿಸುತ್ತಿವೆ

ಹೊಟ್ಟೆ ತುಂಬಿಸುವ ಹೊಲ ಗದ್ದೆಗಳು ಬಿಕರಿಗೆ ಸಜ್ಜಾಗುತ್ತಿವೆ’

‘ಮೌಲ್ಯಗಳ ಕುರಿತು ಮಾತನಾಡುವೆವು ದಣಿವಿಲ್ಲದೆ ಹಗಲಿರುಳು

ನಡೆ-ನುಡಿಯಲ್ಲಿ ಸಂಬಂಧವೇ ಇರುವುದಿಲ್ಲ, ನಾವೇಕೆ ಹೀಗೆ?’

‘ಬಾಡಿಗೆಯ ಕಾಯದಲ್ಲಿ ನಾನು ವಾಸಿಸುತ್ತಿದ್ದೇನೆ ಸಾವಿಗಾಗಿ

ಅರ್ಜಿಯನ್ನು ಹಾಕುತ್ತಿರುವೆನು ಸಂದರ್ಶನದ ಗಳಿಗೆಗಾಗಿ ಕಾಯುತ್ತಿರುವೆನು'

ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ.” ಎಂದುದು ಶುಭಕೋರಿದ್ದಾರೆ. ಸುಮಾರು ನೂರು ಪುಟಗಳ ಈ ಪುಸ್ತಕವನ್ನು ಗಜಲ್ ಪ್ರಿಯರು ಕೊಂಡು ಓದಬಹುದಾಗಿದೆ. ಒಟ್ಟಾರೆ ಈ ಮೂರು ಪುಸ್ತಕಗಳು ಗಜಲ್ ಲೋಕದಲ್ಲಿ 'ಆಕರ ಗ್ರಂಥ'ಗಳಾಗಿವೆ.