'' ಸ್ಮಶಾನದಲ್ಲಿ ಶಿವರಾತ್ರಿ"
ರಿಪ್ಪನ್ ಪೇಟೆ 11-3-2013
ವಿಚಾರ ಮತ್ತು ಅನುಭವಗಳು ಜೊತೆ ಜೊತೆಯಾಗಿ ಹೋಗಬೇಕು. ಅವುಗಳಲ್ಲಿ ಜ್ಞಾನದ ಒಳನೋಟ ಗಳಿರುತ್ತವೆ. ಇಂದು ನಾವು ನಮ್ಮನ್ನು ಸೀಮಿತ ವ್ಯಾಪ್ತಿಗೆ ಒಳಪಡಿಸಿ ಕೊಳ್ಳುತ್ತ ಅದರಲ್ಲಿಯೆ ತೃಪ್ತಿ ಕಾಣುತ್ತಿದ್ದೇವೆ. ಈ ಧೋರಣೆಯೆ ನಮ್ಮ ಇಂದಿನ ಸಾರ್ವಜನಿಕ ಹಾಗೂ ಖಾಸಗಿ ಬದುಕು ಪ್ರಕ್ಷುಬ್ಧವಾಗಲು ಕಾರಣ. ನಾವು ಜೀವನದಲ್ಲಿಯ ಅನುಭವಗಳನ್ನು ಜ್ಞಾನದ ಒಳ ನೋಟಗಳ ಒರೆಗಲ್ಲಿಗೆ ಹಚ್ಚಿದರೆ ನಾವು ಎಲ್ಲಿ ತಪ್ಪಿದ್ದೇವೆ ಎನ್ನುವುದರ ಅರಿವು ನಮಗಾಗುತ್ತದೆ. ಸಾಮಾಜಿಕ ವ್ಯವಸ್ಥೆ ಆತಂಕಕಾರಿಯಾಗಿದೆ. ಇಂದು ಒಳ್ಳೆಯದನ್ನು ಗುರುತಿಸುವ ಸಂಸ್ಕೃತಿ ನಮ್ಮ ಕಣ್ಣೆದುರೆ ನಾಶಗೊಳ್ಳುತ್ತ ಹೋಗುತ್ತಿದೆ. ಬ್ರಹ್ಮಾಂಡ ಭ್ರಷ್ಟತೆಯನ್ನು ಒಪ್ಪುವ ಮತ್ತು ಸನ್ಮಾನಿಸುವ ನಮ್ಮ ಈ ಪ್ರವೃತ್ತಿ ಬಹಳ ಆತಂಕ ಹುಟ್ಟಿಸುವ ಸಂಗತಿ.ಎಂದು ಸಾಹಿತಿ ಮತ್ತು ಚಿಂತಕ ಶಿವಮೊಗ್ಗದ ಸರ್ಜಾಶಂಕರ ಹರಳಿಮಠ ಹೇಳಿದರು. ಅವರು ಇಲ್ಲಿಯ 'ಶಾಂತಿಧಾಮ ಕ್ರಿಯಾ ಸಮಿತಿ' ಮಹಾಶಿವರಾತ್ರಿ ಹಬ್ಬದ ಆಚರಣೆಯ ಅಂಗವಾಗಿ ಶಿವನ ಕರ್ಮಭೂಮಿ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಎರಡನೆ ವರ್ಷದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ಈ ಅವ್ಯವಸ್ಥೆಯ ಬೀಜ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿದೆ. ಹಿಂದೆ ಸರ್ಕಾರಿ ಶಾಲೆಗಳಲ್ಲಿ ಎಲ್ಲರೂ ಒದುತ್ತಿದ್ದೆವು. ಅಲ್ಲಿ ಜಾತಿ ಅಂತಸ್ತುಗಳ ಬೇಧವಿಲ್ಲದೆ ನಾವು ನೀವುಗಳೆಲ್ಲ ಸೇರುತ್ತಿದ್ದೆವು. ನಾವು ಸಂಪ್ರದಾಯ ಆಚರಣೆಗಳ ನೆಲಗಟ್ಟಿನಿಂದ ಬಂದವರಾಗಿದ್ದರೂ ನಮ್ಮಲ್ಲಿ ಮಾನವೀಯ ಸೆಲೆಗಳು ಬತ್ತಿರಲಿಲ್ಲ. ಇಂದು ನಾವು ಸಮಾಜದ ನೋವುಗಳಿಗೆ ದುರಂತಗಳಿಗೆ ಸ್ಪಂದಿಸುತ್ತಿಲ್ಲ. ಮಾನವೀಯತೆ ಕೋರುವ ಘಟನೆಗಳು ನಮ್ಮ ಕಣ್ಣೆದುರೆ ಸಂಭವಿಸಿದರೂ ನಮಗೂ ಅದಕ್ಕೂ ಸಂಬಂಧವಿಲ್ಲದವರಂತೆ ಮುಖ ತಿರುಗಿಸಿ ಹೊರಟು ಹೋಗುತ್ತಿದ್ದೇವೆ. ಇದಕ್ಕೆ ಕಾರಣ ಖಾಸಗಿ ಶಿಕ್ಷಣ ಪದ್ಧತಿಯ ವ್ಯವಸ್ಥೆ. ಇದರಿಂದಾಗಿ ಇಂದು ಜಾತಿ ವರ್ಗಗಳು ಸೀಮಿತ ಘಟಕಗಳಾಗಿ ಪರಿವರ್ತನೆಗೊಳ್ಳುತ್ತಿವೆ, ಇದರಿಂದ ನಾವು ಹೊರಬರ ಬೇಕಾದರೆ ಇಂತಹ ಸಕಾರಾತ್ಮಕ ಚಿಂತನೆಗೆ ಪೂರಕವಾಗುವ ಕಾರ್ಯಕ್ರಮಗಳು ಹೆಚ್ಚಬೇಕು ಮತ್ತು ಜನ ತಮ್ಮ ಅಂತರಂಗದ ಧ್ವನಿಯನ್ನು ಕೇಳಬೇಕು ಅಂದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಒಂದು ಅರ್ಥ ಬರುತದೆ ಎಂದರು..
ಇನ್ನೊಬ್ಬ ಮುಖ್ಯ ಅತಿಥಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕ ಮತ್ತು ಕವಿ ಮರಗನಹಳ್ಳಿ ಪ್ರಕಾಶ ಮಾತನಾಡಿ ರಹಮತ ತರಿಕೆರೆಯವರ ಉಕ್ತಿಯೊಂದನ್ನು ಉದಾಹರಿಸುತ್ತ ' ನಾವು ಇಂದು ಹಿಂದು ಮುಂದು ನೋಡದೆ ಮಾತನಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ಮಾತುಕತೆಗೂ ಮತ್ತು ಆಚರಣೆಗೂ ಯಾವುದೆ ಹೊಂದಿಕೆಯಿಲ್ಲ' ಎಂದು ಹೇಳಿದ್ದಾರೆ. ಅದು ವರ್ತಮಾನದ ವಾಸ್ತವ ಕಟುಸತ್ಯ, ಆದರೆ ನುಡಿದಂತೆ ನಡೆ ನಮ್ಮ ಇಂದಿನ ಆದ್ಯತೆಯಾಗಬೇಕು. ನಮ್ಮದು ಶಿವನನ್ನು ಭಿನ್ನವಾಗಿ ಕಂಡ ವಿಭಿನ್ನ ಸಂಸ್ಕೃತಿಯ ನಾಡು. ಹರಿಶ್ಚಂದ್ರ ಕಾವ್ಯ ಮಾತಿನ ಮಹತ್ವವನ್ನು ಬಿಂಬಿಸುವ ಒಂದು ಸಾರ್ವಕಾಲಿಕ ಶ್ರೇಷ್ಟ ಕಥಾನಕ. ಆಸ್ತಿಕವಾದ ನಾಸ್ತಿಕವಾದಗಳ ಕುರಿತು ನಮ್ಮ ಅನಿಸಿಕೆಗಳಲ್ಲಿ ಏನೇ ಭಿನ್ನತೆಗಳು ಇರಲಿ ಅವುಗಳಲ್ಲಿರಬಹುದಾದ ಜೀವನ ಪ್ರೀತಿ ನಮಗೆ ಬಹುಮುಖ್ಯವಾಗಬೇಕು ಎಂದರು.
ಕವಲೆದುರ್ಗ ಸಂಸ್ಥಾನದ ಬೃಹನ್ಮಠದ ಮಹಾಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿ ಮಾತನಾಡಿ ಆಸ್ತಿಕತೆ ಮತ್ತು ನಾಸ್ತಿಕತೆಗಳು ಎಲ್ಲ ಕಾಲಕ್ಕೂ ಚರ್ಚಿತಗೊಳಪಟ್ಟು ಬಹಳ ಗಹನವಾಗಿ ಚರ್ಚಿತಗೊಂಡು ಬಂದಂತಹ ವಿಷಯಗಳು. ಕಾಲ ಯಾವುದೆ ಇದ್ದಿರಲಿ ಇಲ್ಲ ಇರಲಿ ಮನುಷ್ಯನಿಗೆ ಜಡತ್ವ ಬಂದರೆ ಈ ವಾದಗಳು ತಲೆಯೆತ್ತುತಲೆ ಬಂದಿವೆ. ವೈಚಾರಿಕ ಜಗತ್ತಿನಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಹುಡುಕುತ್ತ ಮತ್ತು ಎಲ್ಲರ ಜೀವನವನ್ನು ಸಹನೀಯ ಗೊಳಿಸುತ್ತ ಹೋಗಬೇಕಿದೆ. ಮನುಷ್ಯ ದೇವರು ಬೇಡ ಕನಿಷ್ಟ ಮನುಷ್ಯನಾಗುವತ್ತ ಯೋಚಿಸಬೇಕಿದೆ. ಅದು ಆಗದೆ ಈ ಜಗದ ಸುಧಾರಣೆ ಸಾಧ್ಯವಿಲ್ಲ ಎಂದು ವರ್ತಮಾನದ ಎಲ್ಲರ ಸಾಮಾಜಿಕ ಬದುಕನ್ನು ವ್ಯಾಖ್ಯಾನಿಸಿದರು.
ಇನ್ನೊಬ್ಬ ಅತಿಥಿ ಚಿಂತಕ ಹೊಸನಗರದ ಸುರೇಶ ಮಾತನಾಡಿ ' ಜಾಗರಣೆ ಒಂದು ಅದ್ಭುತವಾದ ಕಾನ್ಸೆಪ್ಟ್. ನಿದ್ರೆ ನಮಗೊಂದು ದೈನಂದಿನ ಕ್ರಿಯೆ. ಜಾಗರಣೆ ಮಾಡುವುದರಿಂದ ನಿದ್ರೆಯ ಮಹತ್ವ ಗೊತ್ತಾಗುತ್ತದೆ. ಜಾಗರಣೆಯನ್ನು ಸುಮ್ಮನೆ ಮಾಡ ಲಾಗುವುದಿಲ್ಲ ಅದಕ್ಕೆ ಇಂತಹ ಕಾರ್ಯಕ್ರಮಗಳ ಆಯೋಜನೆ ಬೇಕು. ನಾವು ಇಂದು ಸಂಧಿಗ್ಧ ಕಾಲಘಟ್ಟದಲ್ಲಿ ಬದುಕಿದ್ದೇವೆ. ಜೀವನದ ಭದ್ರತೆಗೆ ಹಣ ಬಹುಮುಖ್ಯ ಎಂದು ಅದರ ಹಿಂದೆ ಓಡುತ್ತಿದ್ದೇವೆ. ಮನುಷ್ಯ ನಿಜ ಅರ್ಥದಲ್ಲಿ ಮನುಷ್ಯನಾಗಲು ಐಷಾರಾಮಿ ಬದುಕು ಅದಕ್ಕೆ ಬೇಕಾಗುವ ಹಣ ಮುಖ್ಯವಲ್ಲ ಆದರೆ ಆತನ ಬೌದ್ಧಿಕ ವಿಕಸನ ಕ್ರಿಯೆ ಬಹು ಮುಖ್ಯ ಎಂದರು.
ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡದ ಪ್ರೊಫೆಸರ್ ಡಾ. ಮಾರ್ಷಲ್ ಷರಾಂ ನೂತನ ಶೈಲಿಯಲ್ಲಿ ಮಾತು ಪ್ರಾರಂಭಿಸಿ ಇಂದು ಆಸ್ತಿಕರೆಂದರೆ ಆಸ್ತಿ ಇರುವವರು, ಉದಾಹರಣೆಗೆ ಟಾಟಾ ಬಿರ್ಲಾ ಮತ್ತು ಜನಾರ್ಧನ ರೆಡ್ಡಿ ಮುಂತಾದವರು. ನಾಸ್ತಿಕರೆಂದರೆ ಅಸ್ತಿ ಇಲ್ಲದವರು ಎಂದರೆ ಜನ ಸಾಮಾನ್ಯರಾದ ನಾವು ನೀವೆಲ್ಲ ಎಂಬ ವಿಚಾರ ಲಹರಿ ಎಲ್ಲರದೂ ಆಗುತ್ತಿದೆಯೇನೊ ಎನ್ನುವ ಆತಂಕ ನಮ್ಮೆಲ್ಲರದಾಗುತ್ತಿದೆ. ಧರ್ಮ ಎಂಬ ಶಬ್ದಕ್ಕೆ ಅನೇಕ ಬೇರೆ ಬೇರೆ ಅನುಕೂಲಸಿಂಧು ವ್ಯಾಖ್ಯಾನಗಳು ನಮ್ಮ ಇಂದಿನ ಸಾಮಾಜಿಕ ಸಂಧರ್ಭಗಳಲ್ಲಿ ಹುಟ್ಟಿಕೊಂಡಿವೆ. ಬೇರೆಯವರಿಗೆ ನೋವು ಕೊಡದೆ ಬದುಕುವುದೆ ನಮ್ಮ ಧರ್ಮ ವಾಗಬೇಕು. ಶಿವ ಒಂದು ಬಹಳ ಸರಳ ತತ್ವ ' ದೇಹದ ಒಳಗೆ ಉಸಿರಿದ್ದರೆ ಶಿವ ದೇಹದಿಂದ ಅದು ಹೊರಟು ಹೋದರೆ ಶವ ' ಎಂದು ಶಿವನ ಕುರಿತು ತಮ್ಮ ವಿನೂತನ ವ್ಯಾಖ್ಯಾನವನ್ನು ಮಂಡಿಸಿದರು. ಜೊತೆಗೆ ತಮ್ಮ ಸ್ವರಚಿತ ಸ್ಮಶಾನ ಕುರಿತು ಬರೆದ ಕವನವನ್ನು ವಾಚಿಸಿದರು.
ಇಲ್ಲಿನ ಜನಪರ ಹೋರಾಟಗಾರ ಮತ್ತು ಜಿಲ್ಲಾ ಪಿಯೂಸಿಎಲ್ ಅಧ್ಯಕ್ಷ ತಿ.ರಾ.ಕೃಷ್ಣಪ್ಪ ಮಾತನಾಡಿ ನಾವು ಬಹಳಷ್ಟು ಜನ ಸಕಾರಾತ್ಮಕವಾಗಿ ಯೋಚಿಸುವುದಿಲ್ಲ ಜೊತೆಗೆ ಆಶಾವಾದಿಗಳಲ್ಲ. ಜಡತೆ ನಮ್ಮನ್ನು ಬಹಳವಾಗಿ ಆವರಿಸಿ ಕೊಂಡಿದೆ. ನಾವು ವೈಚಾರಿಕತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜೊತೆಗೆ ಸರಿ ಕಾಣದ್ದನ್ನು ಪ್ರಶ್ನಿಸುವ ಮತ್ತು ವೈಜ್ಞಾನಿಕ ಮನೋಭಾವಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಬೆಳೆಸಿಕೊಳ್ಳಬೇಕು. ಜಗತ್ತನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ,ಅದು ಹಿಂದೆಯೂ ಹೀಗೆಯೆ ಇತ್ತು, ಇಂದೂ ಇದೆ ಮತ್ತು ಮುಂದೂ ಇರುತ್ತದೆ. ಆತ್ಮಸಾಕ್ಷಿಗನುಗುಣವಾಗಿ ನಡೆದು ಕೊಂಡರೆ ಸಾಕು ಅದು ಎಲ್ಲರ ನೆಮ್ಮದಿಯ ಬದುಕಿಗೆ ಕಾರಣವಾಗುತ್ತದೆ. ಜಗ ಮೆಚ್ಚಲಿ ಬಿಡಲಿ ಅದು ನಾವು ಜಗತ್ತಿಗೆ ಮಾಡುವ ದೊಡ್ಡ ಉಪಕಾರ ಎಂದರು.
ಈ ಕಾರ್ಯಕ್ರಮದಲ್ಲಿ ಜೇನಿ ಗ್ರಾಮದ ಗಣೇಶ ಬಳ್ಳಿ ಮನುಷ್ಯನ ಅಜ್ಞಾನವನ್ನು ಮತ್ತು ಅದರಿಂದ ಹೊರ ಬರಬೇಕಾದ ರೀತಿಯ ಕುರಿತು ರಂಜಕವಾಗಿ ತಮ್ಮ ವಿಚಾರಧಾರೆಯನ್ನು ಸೇರಿದ್ದ ಜನಸಮೂಹಕ್ಕೆ ತಲುಪಿಸಿದರು.ರಿಪ್ಪನಪೇಟೆಯ ನಾಗಪ್ಪ ಮೇಷ್ಟ್ರು ಮತ್ತು ಇತರರು ಸಮಯೋಚಿತವಾಗಿ ಮಾತನಾಡಿ ತಮ್ಮ ಸಮಾಜವಾದಿ ಚಿಂತನೆಯ ಅನುಭವ ಗಳಿಗೆ ಮಾತಿನ ಅಭಿವ್ಯಕ್ತಿ ನೀಡಿದರು.
ಶ್ರೀನಿವಾಸ ಪ್ರಾರ್ಥಸಿದರು, ದೇವದಾಸ ಕಾರ್ಯಕ್ರಮ ನಿರೂಪಿಸಿದರು,. ರಘುರಾಮ ಬಾಳಿಗರು ಶಾಂತಿಧಾಮ ಕ್ರಿಯಾ ಸಮಿತಿ ಹುಟ್ಟು ಮತ್ತು ಅದು ಸಾಗಿಬಂದ ದಾರಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿನಾಥ ವಂದಿಸಿದರು ಈ ಕಾರ್ಯಕ್ರಮದಲ್ಲಿ ಶಾಂತಿಧಾಮ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಆಸಕ್ತ ಮನಸುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ದೇಶದಲ್ಲಿ ಸಕಾರಾತ್ಮಕ ಚಿಂತನಾ ಕ್ರಮಗಳು ಇನ್ನೂ ಲುಪ್ತವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದರು.
ಹನುಮಂತ ಅನಂತ ಪಾಟೀಲ.