ಸ್ಲಂನಲ್ಲಿ ಕನ್ನಡ ಲಿನಕ್ಸ್ ಬಿಡುಗಡೆ

ಸ್ಲಂನಲ್ಲಿ ಕನ್ನಡ ಲಿನಕ್ಸ್ ಬಿಡುಗಡೆ

ಬರಹ

ಸ್ಲಂನಲ್ಲಿ  ಕನ್ನಡ ಲಿನಕ್ಸ್ ಬಿಡುಗಡೆ

 ಗೋಡೆಯ ಈಚೆ  ಹೊಸ ಗುರುಪನಪಾಳ್ಯ  ಸ್ಲಂ. ಗೋಡೆಯ ಆಚೆ ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಕಂಪನಿ - ಐಬಿಎಂ. ಆದರೆ ಕನ್ನಡ ಲಿನಕ್ಸ್ ಸಾಫ್ಟ್ ವೇರ್ ಬಿಡುಗಡೆ  ಈಚೆ ಸ್ಲಂನ ಅಂಬೇಡಕರ ಸಮುದಾಯ ಕಂಪ್ಯೂಟರ್ ಕೇಂದ್ರದಲ್ಲಿ. ಈ ವಿಶಿಷ್ಟ ರೀತಿಯ ಬಿಡುಗಡೆ ಹಮ್ಮಿಕೊಂಡದ್ದು ಕರ್ನಾಟಕ ಸ್ವತಂತ್ರ ತಂತ್ರಾಂಶ  ಆಂದೋಲನದ (ಎಫ್.ಎಸ್.ಎಂ.ಕೆ.) ಸ್ವಯಂಸೇವಕರು. ಈ ವಿಪರ್ಯಾಸದತ್ತ ಗಮನ ಸೆಳೆದವರು ಕನ್ನಡ ಲಿನಕ್ಸ್ ಬಿಡುಗಡೆ ಮಾಡಿ ಮಾತನಾಡಿದ ಹೊಸತು  ಸಂಪಾದಕ ಡಾ. ಜಿ. ರಾಮಕೃಷ್ಣ.

 ಇದು ನಮ್ಮ ದೇಶದ ತುಂಬಾ ಕಾಣುವ ವಿಪರ್ಯಾಸಗಳ ಪ್ರತಿಬಿಂಬ. ಸಮಾಜದ ಒಂದು ದೊಡ್ಡ ವಿಭಾಗವನ್ನು ಶಿಕ್ಷಣ ಮತ್ತಿತರ ಅವಕಾಶಗಳಿಂದ  ವಂಚಿತರಾಗಿ ಮಾಡಿರುವ ವ್ಯವಸ್ಥೆ ಸೃಷ್ಟಿಸಿದ ವಿಪರ್ಯಾಸ ಇದು. ಶಿಕ್ಷಣ ಮತ್ತು ಇತರ ಅವಕಾಶಗಳನ್ನು ಕೊಟ್ಟಾಗ ವಂಚಿತರು ಹೇಗೆ ತಮ್ಮ ಪ್ರತಿಭೆ  ಮೆರೆಯುತ್ತಾರೆ ಎಂಬ ಬಗ್ಗೆ ಹಲವು ಉದಾಹರಣೆಗಳನ್ನು ಕೊಟ್ಟರು. ಈ ಕೇಂದ್ರ ನಡೆಸುವ ಮೂಲಕ ಇಂತಹ ಅವಕಾಶ ಕೊಡುತ್ತಿರುವ ಎಫ್.ಎಸ್.ಎಂ.ಕೆ.  ಕಾರ್ಯಕರ್ತರನ್ನು ಮತ್ತು ಕೇಂದ್ರದ ಪ್ರಗತಿಯನ್ನು ಮೆಚ್ಚಿಕೊಂಡರು. ಇದರಿಂದ ವಿಪರ್ಯಾಸಗಳನ್ನು ಪ್ರಶ್ನಿಸುವ ಕೆಲಸ ಆರಂಭವಾಗಿ ಬದಲಾವಣೆಗೆ ಹಾದಿ  ಮಾಡಿಕೊಡುತ್ತದೆ ಎಂದರು.

 ಈ ವಿಶಿಷ್ಟ ಸಮಾರಂಭ  ಮಾರ್ಚ ೨೦/೨೧ ರಂದು ಎಫ್.ಎಸ್.ಎಂ.ಕೆ. ಸಂಘಟಿಸುತ್ತಿರುವ ’ಸ್ವತಂತ್ರ ಸಾಫ್ಟ್ ವೇರ್ ರಾಷ್ಟ್ರೀಯ ಸಮ್ಮೇಳನ ೨೦೧೦’ ಕ್ಕೆ (http://www.nc2010.fsmk.org/)  ಪೂರ್ವಭಾವಿಯಾಗಿ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಒಂದು.  ಡಾ. ಜಿ. ರಾಮಕೃಷ್ಣ ’ಡೆಬಿಯನ್ ಗ್ನು ಲಿನಕ್ಸ್ ಸಾಫ್ಟ ವೇರ್’ ಸಿ.ಡಿ.ಯನ್ನು ಸ್ಲಂ ನ ಹಿರಿಯ  ವಯೋವೃಧ್ಧ ಮಹಿಳೆಗೆ ಕೊಡುವ ಮೂಲಕ ಬಿಡುಗಡೆ ಮಾಡಿದರು. ಸ್ಲಂ ನ ಮಕ್ಕಳು ಮತ್ತು ಯುವಕರು ನಡೆಸಿಕೊಟ್ಟ ಈ ಸಮಾರಂಭ ಇನ್ನೂ ಹಲವು  ವಿಶಿಷ್ಟತೆಗಳನ್ನು ಮೆರೆಸಿತು.

 ದೃಷ್ಟಿ ಮಾಂದ್ಯ ಇರುವವರು ವಿಶಿಷ್ಟ ಸಾಫ್ಟ್ ವೇರಿನ ಮೂಲಕ ಕಂಪ್ಯೂಟರ್ ಬಳಕೆ ಮಾಡುವ ಪ್ರದರ್ಶನವನ್ನು ತಮಿಳುನಾಡಿನ ವಿದ್ಯಾರ್ಥಿ ವಿದ್ಯಾ ಮಾಡಿದರು.  ಮಣಿ ಎಂಬ (ಆತನೂ ಪೋಲಿಯೋ ಪೀಡಿತ ವಿಕಲಾಂಗ) ಕೇಂದ್ರದ ವಿದ್ಯಾರ್ಥಿ ಜಿಂಪ್ ಎಂಬ ಸ್ವತಂತ್ರ ಪೈಂಟಿಂಗ್ ಸಾಫ್ಟ್ ವೇರ್ ಮೂಲಕ ತನ್ನ ಕಲಾ ನೈಪುಣ್ಯ  ಪ್ರದರ್ಶಿಸಿದ. ಆತ ರಚಿಸಿದ ಹಲವು ’ಜಿಂಪ್’ ಪೈಂಟಿಂಗ್ ಗಳ ಪ್ರದರ್ಶನ ಸಹ ಇತ್ತು. ಈ ಕಾರ್ಯಕ್ರಮದ ಮಧ್ಯೆ - ಗೀತೆ, ಕುರಾನ್, ಬಸವಣ್ಣ ವಚನ,  ಅಂಬೇಡ್ಕರ್ ಉಧ್ಧರಣೆಗಳ ಮೂಲಕ  ಕೇಂದ್ರದ ಉದ್ದೇಶಗಳ ಬಗ್ಗೆ ಅದ್ಭುತವಾಗಿ ವಿಶಿಷ್ಟ ರೀತಿಯಲ್ಲಿ ಹೇಳಿದ ಮಹಮ್ಮದ್ ಎಂಬ ಹತ್ತು ವರ್ಷದ ಬಾಲಕನ  ನಿರರ್ಗಳ ಭಾಷಣ, ಅರುಲ್ ಮತ್ತು ತಂಡ, ಸರಸು ಮತ್ತು ತಂಡದ ಹಾಡು-ನೃತ್ಯ - ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ರಂಗು  ತಂದವು.