ಸ್ಲ್ಯಾಮ್ ಬುಕ್ ಎಂಬ ಮಾಂತ್ರಿಕ

ಸ್ಲ್ಯಾಮ್ ಬುಕ್ ಎಂಬ ಮಾಂತ್ರಿಕ

ಬರಹ

ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ, ಕಾಲೇಜಿನಿಂದ ಹೊರಗಡಿಯಿಡುವ ಸಂದರ್ಭ. ಮುಂದಿನ ಜೀವನದ ಬಗ್ಗೆ, ಹೊರ ಪ್ರಪಂಚದ ಬಗ್ಗೆ ಅರಿವೇ ಇಲ್ಲದೇ ನಮ್ಮದೇ ಲೋಕದಲ್ಲಿ ಕಳೆದುಹೋಗಿದ್ದ ನಮಗೆ ಕಾಲೇಜಿನ ವಿದ್ಯಾರ್ಥಿ ದೆಸೆಯ ಆ ಐದು ವರ್ಷಗಳು ಓಡಿದ್ದೇ ತಿಳಿದಿರಲಿಲ್ಲ.

ಕಾಲೇಜು ಬಿಡುವ ಸಂದರ್ಭ ಅಂದಮೇಲೆ ಎಲ್ಲರ ನೆನಪಿಗಾಗಿ ಸ್ಲ್ಯಾಂ ಬುಕ್ ಬರೆಸಿಕೊಳ್ಳೋದು ಒಂದು ಚಟ. ಈ ಸ್ಲ್ಯಾಂ ಬುಕ್ ಆಟೋ ಗ್ರಾಫ್ ಬುಕ್ ನ ಹಿರಿಯಣ್ಣನ ಹಾಗೆ ಅಂದರೆ ಬರೀ ಆಟೋಗ್ರಾಫ್ ಜೊತೆಗೆ ಬರೆಯುವವರ ಛಾಯಾಚಿತ್ರ ಮತ್ತೆ ಇತರ ವಿವರಣೆಗಳನ್ನೂ,, ನಮ್ಮ ಬಗ್ಗೆ ಅವರ ಅಭಿಪ್ರಾಯಗಳನ್ನೂ ನೇರಮಾತುಗಳಲ್ಲಿ ಯಾವುದೇ ಬಣ್ಣ ಹಚ್ಚದೇ ಅದ್ರಲ್ಲಿ ತುಂಬೋದು ಅದರ ವಿಶೇಷತೆ. ಈಗೀಗ ಸಿನಿಕತನ ಹೆಚ್ಚಾದಾಗ ಇಂಥವುಗಳ ಬಗ್ಗೆ ನಗೆ ಬಂದರೂ ಆಗ ಅದಕ್ಕಿದ್ದ ಮೌಲ್ಯ ನಿಜಕ್ಕೂ ಹೆಚ್ಚಿನದು.

ಹೀಗೆ ಬರೆಸಿಕೊಂಡ ಕೆಲದಿನಗಳ ನಂತರವೂ ಅದನ್ನ ಆಗಾಗ ಓದ್ತಾ ಇದ್ದು ಕೊನೆಗೆ ಎಲ್ಲೋ ಇದ್ದಕ್ಕಿದ್ದಂತೆ ಪುಸ್ತಕವೂ ಅದರ ಜೊತೆ ಬೆಸೆದುಕೊಂಡ ಭಾವನೆಗಳೂ ನೆನಪಿನಾಳಕ್ಕೆ ಹೋಗಿ ಬಿಟ್ಟಿತ್ತು.

ಮುಂದೆ ಮದುವೆ, ಮನೆ, ಮಗು ಎಂದು “ಸಂಸಾರ ಸಾಗರದಲ್ಲಿ ಮುಳುಗಿ ಹೋಗಿ” ಮೊನ್ನೆ ಮೊನ್ನೆ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಮತ್ತೆ ಸಿಕ್ಕಿತ್ತು ಈ ಸ್ಲ್ಯಾಮ್ ಬುಕ್ ಎಂಬ ಮಾಂತ್ರಿಕ. ಇದ್ದ ಕೆಲಸವನ್ನೆಲ್ಲಾ ಅಲ್ಲೇ ಬಿಟ್ಟು ಪುಸ್ತಕ ಹಿಡಿದು ಕುಳಿತೆ, ಬಣ್ಣ ಬಣ್ಣ ದ ಪುಸ್ತಕ, ಅದರಲ್ಲಿನ ಫೋಟೊಗಳು, ಸ್ಕೆಚ್ ಪೆನ್ ಬರಹಗಳನ್ನ ನೋಡಲು ಮಗಳೂ ಕುತೂಹಲದಿಂದ ಹತ್ತಿರ ಬಂದು ಕುಳಿತಳು.

ಒಬ್ಬೊಬ್ಬ ಸ್ನೇಹಿತರ ಬಗ್ಗೆಯೂ ಅದರಲ್ಲಿ ಓದುತ್ತಾ, ಅವರನ್ನ ಅವಳಿಗೆ ಪರಿಚಯಿಸುತ್ತಾ, ಅವರು ಬರೆದ ಕಮೆಂಟ್ ಅದರ ಹಿಂದಿರಬಹುದಾದಂಥಾ ಕಾಲೆಳೆತ, ಒಬ್ಬರ ಬಗ್ಗೆ ಇನ್ನೊಬ್ಬರಿಗಿದ್ದ ಕಾಳಜಿ, ಇಟ್ಟುಕೊಂಡ ನಿಕ್ ನೇಮ್ ಗಳು, ಮಾಡುತ್ತಿದ್ದ ಗೇಲಿಗಳು, ಒಟ್ಟಿಗೇ ಬೇಸರ ಪಟ್ಟ ಪ್ರಸಂಗಗಳು, ಹೊಟ್ಟೆ ಹುಣ್ಣಾಗುವಂತೆ ನಕ್ಕ ಸಂದರ್ಭಗಳು ಎಲ್ಲವೂ ಮತ್ತೆ ಮರುಕಳಿಸಿದವು. ಬಹುತೇಕ ಅದರಲ್ಲಿರುವ ಒಂದಿಬ್ಬರು ಈಗಲೂ (ಆಗಿನಷ್ಟು ಅಲ್ಲದಿದ್ದರೂ) ಸಂಪರ್ಕದಲ್ಲಿದ್ದರೂ ಆಗಿನಂತೆ ದಿನವೂ ಭೇಟಿ ಮಾತ್ರ ಸಾಧ್ಯವಿಲ್ಲ. ಈಗ ಸಂಪರ್ಕವೇ ಇಲ್ಲದಿರುವವರನ್ನ ಮತ್ತೆ ಭೇಟಿ ಮಾಡುವ ಆಸೆ ಚಿಗುರಿ ಕೆಲವು ದೂರವಾಣಿ ಸಂಖ್ಯೆಗಳನ್ನ ಸಂಪರ್ಕಿಸುವಾ ಅಂತ ಯೋಚಿಸಿದೆ. ಮೊದಲ ಮೂರು ಕರೆ ಹೋಗಿದ್ದು “ ಈ ದೂರವಾಣಿ ಸಂಖ್ಯೆ ಅಸ್ತಿತ್ವದಲ್ಲಿಲ್ಲ” ಅನ್ನೋ ಉತ್ರ ಪಡೆಯೋಕ್ಕೆ. ಆಗ ಬಿ.ಎಸ್. ಎನ್. ಎಲ್ ಸ್ಥಿರ ದೂರವಾಣಿ ಎಲ್ಲೆಡೆಯೂ ರಾರಾಜಿಸುತ್ತಿದ್ದ ಕಾಲ, ಈಗ ಟಾಟಾ ಇಂಡಿಕಾಂ /ರಿಲಯನ್ಸ್ ಸ್ಥಿರ ದೂರವಾಣಿಗೆ ಅಥವಾ ಇನ್ಯಾವುದೋ ಸಂಚಾರಿ ದೂರವಾಣಿಗೆ ಮೊರೆ ಹೋಗಿರಬೇಕೆಂದು ತೀರ್ಮಾನಿಸಿದೆ. ಆಗ ದಿನವೂ ಕಾಲೇಜಿನಲ್ಲಿ ಸಿಕ್ಕರೂ ಬೆಳಿಗ್ಗೆ ಒಮ್ಮೆ ಸಂಜೆ ಎರಡು ಬಾರಿ ಕರೆ ಮಾಡಿಕೊಳ್ಳುತ್ತಿದ್ದ ಫೋನ್ ಈಗ ಅಸ್ತಿತ್ವದಿಲ್ಲ ಅಂದ್ರೆ ಆಗಿದ್ದದ್ದು ನಿಜವಾದ ಸ್ನೇಹವಾ ಅಥವಾ ಇದೇ ವಾಸ್ತವಾನಾ ಅನ್ನೋ ತಾತ್ವಿಕ ಅನುಮಾನ ಬರತೊಡಗಿತು. :-(

ಪ್ರಯತ್ನಿಸಿದ ಮತ್ತೊಂದು ಸಂಖ್ಯೆ ಪ್ರಿಯಾಳದ್ದು. ರಾಜಕುಮಾರ್ ಅಪಹರಣವಾದ ದಿನ ಅವಳ ಮದುವೆಯಾಗಿದ್ದರಿಂದ ಗಲಾಟೆಯಲ್ಲಿ ಮದುವೆಗೂ ಹೋಗಲಿಕ್ಕೆ ಆಗಿರಲಿಲ್ಲ. ನಂತರ ವಿದೇಶಕ್ಕೆ ಹೋದಳು ಎಂಬುದಷ್ಟೇ ಅವಳ ಬಗ್ಗೆ ಸಧ್ಯ ಲಭ್ಯವಿದ್ದ ಮಾಹಿತಿ. ಏನೇ ಇರಲಿ ಬೆಂಗಳೂರಿನ ಅವಳ ಈ ನಂಬರಿಗೆ ಕರೆ ಮಾಡಿದರೆ ಅಲ್ಲಿಂದ ಕೊನೇ ಪಕ್ಷ ಅವಳ ಇ-ಮೇಲ್ ವಿಳಾಸವಾದರೂ ದೊರೆತೀತೆಂದು ಆ ನಂಬರಿಗೆ ಕರೆ ಮಾಡಿಯೇ ಬಿಟ್ಟೆ.

ಸುಮಾರು ಹೊತ್ತು ರಿಂಗಣಿಸಿದ ನಂತರ ಫೋನ್ ಗೆ ಉತ್ತರಿಸಿದವರಿಗೆ, “ಹೆಲೋ ! ನಾನು ಪ್ರಿಯಾ ಸ್ನೇಹಿತೆ “ ಅನ್ನೋಷ್ಟರಲ್ಲೇ… “ಹಾಂ ಒಂದು ನಿಮಿಷ” ಅನ್ನೋ ಉತ್ರ, ಸೋಜಿಗವಾಯ್ತು. ಮತ್ತೂ ಕೆಲವು ಕ್ಷಣಗಳ ನಂತರ “ಹೆಲ್ಲೋ” ಕೇಳಿಸಿತು, ಅನುಮಾನವೇ ಇಲ್ಲ ಅದು ಪ್ರಿಯಾಳದ್ದೇ ಧ್ವನಿ, ನಂತರ ನಡೆದದ್ದೆಲ್ಲಾ ನಮ್ಮ ದೀರ್ಘ ಮಾತುಕತೆ. ಕಾಕತಾಳೀಯವೆಂಬಂತೆ ಕ್ಯಾಲಿಫೋರ್ನಿಯಾದಿಂದ ಅವಳು ಬಂದಿದ್ದಳು, ಅದೇ ಸಮಯಕ್ಕೆ ಸ್ಲ್ಯಾಂ ಬುಕ್ ಮಾಂತ್ರಿಕನ ಸಹಾಯದಿಂದ ನಾನು ಕರೆ ಮಾಡಿದ್ದೆ. ಕೊನೆಗೆ ಇತರ ಗೆಳತಿಯರನ್ನೂ ಭೇಟಿ ಮಾಡುವ ಎಂದು ನಿಶ್ಚಯಿಸಿ, ಮನೆ, ಕಚೇರಿ ಎಂದು ಕಳೆದು ಹೋಗಿರುವ ನನ್ನಂಥ ಒಂದೈದು ಕಪ್ಪೆಗಳನ್ನ ತಕ್ಕಡಿಗೆ ಹಾಕುವ ನನ್ನ ಪ್ರಯತ್ನ ಸಫಲವಾಯ್ತು. ಎಲ್ಲರೂ ಸಂತಸದಿಂದಲೇ ಒಪ್ಪಿದರು. :-) ಎಲ್ರೂ ಒಂದಿನ ಸಿಕ್ಕೆವು, ಹಳೇ ದಿನಗಳನ್ನು ರಿವೈವ್ ಮಾಡಿಕೊಂಡು, ಗಂಟೆಗಟ್ಟಲೆ ಹರಟೆ ಹೊಡೆಯಲಿಕ್ಕೆ; ಆಶ್ಚರ್ಯವೆಂದರೆ ನಮಗ್ಯಾರಿಗೂ ಅನ್ನಿಸಲೇ ಇಲ್ಲ ಕಾಲೇಜು ಬಿಟ್ಟು ಹತ್ತು ವರ್ಷಗಳಾಗಿವೆ ಅಂತ… ಎಲ್ಲಾ ನೆನಪುಗಳೂ ಇನ್ನೂ ಹಸಿರಾಗೇ ಇದ್ದವು!!!!! ನಮ್ಮ ಪುಟಾಣಿಗಳ ವಿಷಯ ಬಂದಾಗಷ್ಟೇ ನಾವೂ ಅಮ್ಮಂದಿರು ಅನ್ನೋದು ನೆನಪಾಗುತ್ತಿತ್ತು.:-) ಮಾತಾಡಿ, ಸುತ್ತಾಡಿ ಕೆಲವು ಸುಮಧುರ ಗಂಟೆಗಳಲ್ಲಿ, ಮುಂದಿನ ಹಲವು ದಿನಗಳಿಗಾಗುವಷ್ಟು ಸಂತಸ ತುಂಬಿಸಿಕೊಂಡು ಬೀಳ್ಕೊಟ್ಟೆವು.

ಈ ರೀತಿಯ Unexpected Surprise ಕೊಟ್ಟಿದ್ದರಿಂದಲೇ ನಾನು ಹೇಳಿದ್ದು, ಸ್ಲ್ಯಾಂ ಬುಕ್ ಅನ್ನೋದು ಮಾಂತ್ರಿಕ ಅಂತ. ನೀವೇನಂತೀರಾ ??