ಸ್ವರಾಜ್ಯ

ಸ್ವರಾಜ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ರಾಧಾಕೃಷ್ಣ ಬೆಳ್ಳೂರು
ಪ್ರಕಾಶಕರು
ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಟ್ರಸ್ಟ್, ಕಾಸರಗೋಡು
ಪುಸ್ತಕದ ಬೆಲೆ
ರೂ. ೭೫.೦೦, ಮುದ್ರಣ : ೧೯೯೯ ಎಪ್ರಿಲ್

ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲೂ ಗಾಂಧೀತತ್ವದ ಗಾಢ ಪ್ರಭಾವವಿದೆ. ಭಾರತೀಯ ಆರ್ಷ ಚಿಂತನೆಯೊಂದಿಗೆ, ಸುಧಾರಣಾವಾದಿ ನಿಲುವುಗಳೂ ಸೇರಿಕೊಂಡು ಅವರೊಬ್ಬ ಪ್ರಾಮಾಣೀಕ ದೇಶ ಭಕ್ತ ಕವಿಯಾಗಿ ರೂಪುಗೊಂಡವರು. ಬರೆದರು, ಬರೆದಂತೆ ಬದುಕಿದರು. ಮದುವೆ ಹಾಡುಗಳಲ್ಲೂ ಸ್ವಾತಂತ್ರ್ಯದ ಪ್ರಸ್ತಾಪ, ಸ್ವಾಗತ ಗೀತೆಗಳಲ್ಲೂ ರಾಷ್ಟ್ರೀಯತೆಯ ಧ್ವನಿ, ಮುಟ್ಟಿದಲ್ಲೆಲ್ಲಾ ಸ್ವರಾಜ್ಯದ ಒರತೆ- ಹೀಗೆ ಸ್ವಾತಂತ್ರ್ಯದ ಹಾಡುಗಳಿಗಾಗಿಯೇ ಅವರ ಜನ್ಮ.

ಪುಣಿಂಚತ್ತಾಯರ ನಾಲ್ಕಾರು ಸಂಕಲನಗಳು ಪ್ರಕಟವಾಗಿವೆ. ಹಲವಾರು ಹಾಡುಗಳು, ಗದ್ಯ ಬರಹಗಳು, ನಾಟಕಗಳು, ಟಿಪ್ಪಣಿಗಳು ಹಸ್ತ ಪತ್ರಿಕೆಗಳಾಗಿಯೇ ಉಳಿದಿವೆ. ಹಲವು ತ್ರುಟಿತ, ಹಲವು ಪಠಾಂತರಗಳಿಂದ ಮಲಿನ, ಕೆಲವು ಅನುಪಲಬ್ಧ ದೊರೆತವುಗಳನ್ನೆಲ್ಲಾ ಗ್ರಂಥ ಸಂಪಾದನೆಯ ಶಾಸ್ತ್ರೀಯ ಹಿನ್ನಲೆಯೊಂದಿಗೆ ಸಂಪಾದಿಸುವ ಪ್ರಯತ್ನ ಈ ‘ಸ್ವರಾಜ್ಯ'. ಹೊಸಗನ್ನಡ ಸಂಪಾದನೆಗೆ ಇದೂ ಒಂದು ಉದಾಹರಣೆ. 

ಕಯ್ಯಾರ ಕಿಂಜಣ್ಣ ರೈ ‘ಸ್ವರಾಜ್ಯ' ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಲೇಖಕರಾದ ರಾಧಾಕೃಷ್ಣ ಬೆಳ್ಳೂರು ಇವರು ತಮ್ಮ ಪ್ರಸ್ತಾವನೆಯಲ್ಲಿ ಬರೆಯುತ್ತಾರೆ ‘ ...ಪುಣಿಂಚತ್ತಾಯರು ಮೊದಲಿಗೆ ಹರಿಜನ ಸಂಧಾನವನ್ನು ಕೈಗೆತ್ತಿಕೊಂಡರು. ‘ಹೊಲೆಯ ಹೊರಗಿಹನೆ? ಅಲ್ಲ ನಮ್ಮೊಳಗಿಹನೆ?’ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯಾಂದೋಲನದ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಹೆಚ್ಚಿನ ಸಮಾಜಸುಧಾರಕರೂ ಬ್ರಾಹ್ಮಣರೆನ್ನುವುದು ಕಟುವಾಸ್ತವ. ಸಂಪ್ರದಾಯವಾದಿ ಶ್ರೀಮಂತ ಜಮೀನ್ದಾರ ಕುಟುಂಬದ ಪುಣಿಂಚತ್ತಾಯರು ಆಗಿನ ಜಡ ಸಮಾಜ ಅವರನ್ನು ‘ಥೇಟ್ ಕೋಂಗ್ರೇಸ್' ಎಂದು ವ್ಯಂಗ್ಯ ದೃಷ್ಟಿಯಿಂದ ನೋಡುತ್ತಿತ್ತು. ಆ ಹೊತ್ತು ಹೊರಗಿನ ಹೊಲೆಯನ್ನು ಒಳಗೆ ದಾಟಿಸಿ, ಒಳಗಿನ ಹೊಲೆಯನ್ನು ಹೊರದಬ್ಬುವ ಧೀರ ನಿರ್ಧಾರ ಪುಣಿಂಚತ್ತಾಯರ ‘ಹರಿಜನ ಸಂಧಾನ' ಹಾಗೂ ಇತರ ಗದ್ಯ ಬರವಣಿಗೆಯಲ್ಲಿ ಅಭಿವ್ಯಕ್ತವಾದದ್ದು ಮಹತ್ವದ ಸಂಗತಿಯೇ.'

ಅನುಕ್ರಮಣಿಕೆಯಲ್ಲಿ ೯೬ ಕಾವ್ಯಗಳಿವೆ. ೧೪ ಗದ್ಯಗಳಿವೆ. ಪುಣಿಂಚತ್ತಾಯರಿಗೆ ಎಂಟು ಮಂದಿ ಹೆಣ್ಣು ಮಕ್ಕಳು. ಅವರೆಲ್ಲರೂ ಈ ಪುಸ್ತಕದಲ್ಲಿ ತಮ್ಮ ತಂದೆಯವರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ೨೧೫ ಪುಟಗಳಿರುವ ಈ ಪುಸ್ತಕವು ಪುಣಿಂಚತ್ತಾಯರ ಸಮಗ್ರ ಕೃತಿಗಳನ್ನು ಪರಿಚಯ ಮಾಡಿಕೊಡುತ್ತದೆ.