ಸ್ವಲ್ಪ ಇಲ್ಲಿ ಕೇಳಿ ಮನುಜರೇ..
ನಾನು ಯಾರೆಂದು ತಿಳಿದಿರಬೇಕಲ್ಲ! ಹೇಗೆ ಮರೆಯೋಕೆ ಸಾಧ್ಯ ಅಲ್ವಾ? ನಿಮ್ಮೊಂದಿಗೆ ಸದಾ ಇರುವವಳು ನಾನೇ ತಾನೇ? ಹೇಗಿದ್ದೀರಾ? ಆರಾಮವಾಗಿದ್ದೀರಾ?ಅಥವಾ ಚಿಂತಾಕ್ರಾಂತರಾಗಿ ಉಸಿರುಗಟ್ಟಿದ ವಾತಾವರಣದಲ್ಲಿ ಇದ್ದೇವೆ ಅಂತ ಅನಿಸುತ್ತಿದೆಯಾ? ಹುಂ... ಗೊತ್ತು ಬಿಡಿ. ನಿಮ್ಮ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂತ.
ಹಿಂದಿನಿಂದಲೇ "ಸಂಸ್ಕ್ರತಿ, ಸಂಪ್ರದಾಯ, ಆಚಾರ-ವಿಚಾರ, ಕೃಷಿಯೇ ಪ್ರಧಾನ ಕಾಯಕ" ಅಂತ ನಂಬಿಕೊಂಡು ಬಂದ ಪದ್ಧತಿ ನಮ್ಮದು. "ಪ್ರಕೃತಿಯೇ ದೇವರು"ಯಾಕೆಂದರೆ ಸಕಲ ಚರಾಚರ ಜೀವರಾಶಿಗಳಿಗೆ ನನ್ನ ಮಡಿಲಲ್ಲಿ ಸಮಾನವಾಗಿ ಬಾಳಲು ಅವಕಾಶ ಮಾಡಿಕೊಟ್ಟೆ.ಕಾಲಕಾಲಕ್ಕೆ ಮಳೆ, ಬೆಳೆ ಸರಿಯಾಗಿ ಬರುವಂತೆ ಮಾಡುತ್ತಿದ್ದೆ. ಆಗೆಲ್ಲ ನನ್ನ ಮನಸ್ಸು ತುಂಬಿ ಬರುತ್ತಿತ್ತು.ಹಾಗಾಗಿ ನೀವು ನನ್ನನ್ನು ದೇವರು ಎಂದು ಕರೆದಿರಿ.
ಆದರೆ ಈಗ ಏನಾಯಿತು? "ಟೆಕ್ನೋಲಜಿ" ಎಂಬ ಹೆಸರಿನಲ್ಲಿ ನನ್ನ ಪ್ರೀತಿಯನ್ನು ಸಹಾಯವನ್ನು ಮರೆತು ಮನುಷ್ಯರಾದ ನೀವು ನಿಮ್ಮ ಅತಿಯಾಸೆಗೆ, ದುರಾಸೆಗೆ ನನ್ನನ್ನೇ ಬಲಿಕೊಡುವುದಕ್ಕೆ ಹೊರಟಿರುವಿರಿ.ನನ್ನ ಆ ಪುಟ್ಟ ಕಂದಮ್ಮಗಳನ್ನು ನಿಮಗೆ ಇಷ್ಟ ಬಂದಂತೆ ಬಳಸಿಕೊಳ್ಳುತ್ತಿರುವಿರಿ. ಸ್ವಚ್ಛಂದವಾಗಿ ಹಾರಾಡುತ್ತಿದ್ದ, ಓಡಾಡುತ್ತಿದ್ದ ನನ್ನ ಕಂದಮ್ಮಗಳು ಇಂದು ಕಣ್ಮರೆಯಾಗುತ್ತಿವೆ.ಇನ್ನೂ ಕೆಲವು ವೀಕ್ಷಣೆಗೆ ಇಟ್ಟ ವಸ್ತುವಿನಂತೆ ಪಂಜರದೊಳಗಿವೆ.ನೀವೇನೋ ಅದಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡಿದ್ದರೂ ಕೂಡ ಅದರ ವೈಯುಕ್ತಿಕ ಸ್ವತಂತ್ರವನ್ನು ಕಸಿದು ಕೊಂಡಿರುವಿರಿ.
ಇನ್ನು ವ್ಯವಸಾಯದ ಬಗ್ಗೆ ಹೇಳುವುದಾದರೆ, ಹಿಂದೆಲ್ಲ ನನ್ನ ಒಡಲು ಹಚ್ಚಹಸಿರಿನಿಂದ ಕಂಗೊಳಿಸುತ್ತಿತ್ತು.ಕವಿಗಳೆಲ್ಲ ನನ್ನ ಕೊಂಡಾಡಿದ್ದೇ ಕೊಂಡಾಡಿದ್ದು.ಆದರೆ ಈಗ ನೇಗಿಲು ಊಳಬೇಕಾಗಿದ್ದ ಜಾಗದಲ್ಲಿ ಟ್ರಾಕ್ಟರ್ ಬಂದು ನಿಂತಿದೆ.ನನ್ನನ್ನೇ ನಂಬಿಕೊಂಡು ಕಾಯಕ ಮಾಡುತ್ತಿದ್ದ ಅದೆಷ್ಟೋ ಬಡಜೀವಗಳು ಕಂಗಾಲಾಗಿವೆ. ಯಾಕಂದ್ರೆ, ಹತ್ತು ಜನ ಮಾಡುವ ಕೆಲಸವನ್ನು ಒಂದು ಯಂತ್ರ ಮಾಡಿ ಮುಗಿಸುತ್ತದೆ. ಇದರಿಂದ ಸಮಯ, ಹಣ ಒಳಿತಾಯದ ಜೊತೆಗೆ ಅಧಿಕ ಲಾಭ ಪಡೆಯಬಹುದು ಎಂಬ ನಿಮ್ಮ ಮೂರ್ಖ ಆಲೋಚನೆಯಿಂದಾಗಿ ಅದೆಷ್ಟೋ ಕುಟುಂಬಗಳು ಬೀದಿ ಪಾಲಾದವು ಎಂಬುದನ್ನು ನೀವು ಮರೆತಿದ್ಧೀರಿ.
ಭತ್ತ, ರಾಗಿ, ಜೋಳ, ನವಣೆ, ಸಜ್ಜೆ ಇವುಗಳೊಂದಿಗೆ ವಿವಿಧ ತರಕಾರಿಗಳು, ಹಣ್ಣುಹಂಪಲುಗಳನ್ನು ಬೆಳೆಯುತ್ತಾ ನಿಮ್ಮೊಂದಿಗೆ ಪ್ರಾಣಿಪಕ್ಷಿಗಳಿಗೆ ನೆರಳು, ಆಹಾರ, ಗಾಳಿ, ಮಳೆ, ಆಶ್ರಯವಾಗಬೇಕಿದ್ದ ಜಾಗದಲ್ಲಿ ರಬ್ಬರ್ ಇನ್ನಿತರ ಅಧಿಕ ಲಾಭ ಕೊಡುವ ಗಿಡಗಳನ್ನು ಬೆಳೆಸಿದಿರಿ.ಕಾಡನ್ನು ನಾಶ ಮಾಡಿ ಡೊಡ್ಡ ಡೊಡ್ಡ ಕಟ್ಟಡಗಳನ್ನು ನಿರ್ಮಿಸಿದಿರಿ.ಇದರಿಂದ ಭೂಮಿ ಕಲುಷಿತಗೊಳ್ಳುತ್ತಿದೆ ಅನ್ನೋದನ್ನು ತಿಳಿಯದೇ ಹೋದಿರಿ.
ಇನ್ನೊಂದು ವಿಶೇಷತೆ ಏನೆಂದರೆ,"ಜಂಗಮವಾಣಿ", ಅದೇ ನೀವು ಬಳಸುತ್ತೀರಲ್ಲ ಮೊಬೈಲ್, ಸೆಲ್ ಫೋನ್, ಹ್ಯಾಂಡ್ ಸೆಟ್ ಅಂತ ಕರೆಯುವ ವಾಣಿ.ಹೌದು ನೀವು ಅಂದುಕೊಂಡಿದ್ದೀರಿ,ಇದು ನಮಗೆ ತುಂಬಾ ಉಪಯೋಗವಾಗಿದೆ ಅಂತ.ಎಷ್ಟರ ಮಟ್ಟಿಗೆ ಉಪಯೋಗವೋ ಅಷ್ಟೇ ಅಪಾಯಕಾರಿ ಅನ್ನೋದನ್ನು ಮರೆತಿದ್ದೀರಿ.ಈ ಮೊಬೈಲ್ ಗಳ ನೆಟ್ವರ್ಕ್ ಗಳಿಗೆ ಕಟ್ಟಿದಂತ ಟವರ್ ಗಳಿಂದ ಬರುವ ವಿಕಿರಣಗಳ ಪರಿಣಾಮದಿಂದಾಗಿ ಎಷ್ಟೋ ಹಕ್ಕಿಗಳು ವಿಲವಿಲನೆ ಒದ್ದಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡವು. ನನ್ನ ಮಡಿಲಿನಲ್ಲಿ ಎಷ್ಟು ಪಕ್ಷಿ ಸಂಕುಲಗಳು ಇತ್ತು ಅನ್ನೋದು ನಿಮಗೇನಾದರೂ ತಿಳಿದಿದೆಯೇ? ಇಲ್ಲ ಅಲ್ವ? ಪುಟ್ಟ ಹಕ್ಕಿಗಳಾದ ಗೀಜುಗ, ಗುಬ್ಬಚ್ಚಿ, ಮೈನಾ ಮುಂತಾದವುಗಳು ಈಗ ಎಲ್ಲಿ ಕಾಣಸಿಗುತ್ತವೆ? ಅವುಗಳ ಅಂದಚೆಂದ, ಹಾರಾಟ, ಕೂಗು ಇವೆಲ್ಲವನ್ನು ಕೇಳುತ್ತಾ ನಾನು ಎಷ್ಟು ಆನಂದ ಪಡುತ್ತಿದ್ದೆ ಗೊತ್ತಾ? ಆದರೆ ಈಗ ಬರಿಯ ಮೌನ.
ಇಷ್ಟೆಲ್ಲ ಮಾಡಿದ ನೀವು ನಾವೇನು ತಪ್ಪೇ ಮಾಡಿಲ್ಲ ಅನ್ನೋತರ ವರ್ತಿಸುತ್ತಿದ್ದೀರಿ. ಹಾಗಾಗಿ ಈಗ ಹಂದಿಜ್ವರ, ಹಕ್ಕಿಜ್ವರ, ನಿಫಾ, ಎಬೋಲ, ಎಚ್1ಎನ್1, ಡೆಂಗ್ಯೂ, ಚಿಕನ್ ಗುನ್ಯ, ಮಲೇರಿಯಾ ಮತ್ತೆ ಈಗ ಹೊಸದಾಗಿ ಬಂದ ಖಾಯಿಲೆ ಕೊರೋನ.ಕೊರೋನ ಮೊದಲಿಗೆ ಬಂದ ಖಾಯಿಲೆಗಿಂತ ಭಿನ್ನವಾದುದು.ಮನುಷ್ಯನಿಂದ ಮನುಷ್ಯನಿಗೆ ಹರಡುವಂತ ಖಾಯಿಲೆ. ಇದರ ಬಗ್ಗೆ ನೀವು ಸಾಕಷ್ಟು ತಿಳಿದುಕೊಂಡಿರುವಿರಿ. ಹೊರಗಡೆ ಹೋಗುವ ಹಾಗಿಲ್ಲ. ಯಾರೊಂದಿಗೂ ಮಾತಾಡೋ ಹಾಗಿಲ್ಲ. ಯಾವುದೇ ವಸ್ತುವನ್ನು ಮುಟ್ಟೋದಕ್ಕೂ ಕೂಡ ಭಯಪಡುತ್ತಿರುವಿರಿ.ಮೊದಲೆಲ್ಲ ಮಣ್ಣನ್ನು ಮುಟ್ಟಿ ಕಾಯಕ ಮಾಡಲು ಹಿಂದೇಟು ಹಾಕುತ್ತಿದ್ದ ನೀವು , ಈಗ ದುಡ್ಡೇ ದೊಡ್ಡಪ್ಪ ಅನ್ನೋ ಕಾಲದಲ್ಲಿ ಹಣವನ್ನು ಬರಿಗೈನಲ್ಲಿ ಮುಟ್ಟೋಕೆ ಹಿಂಜರಿಯುತ್ತಿರುವಿರಿ.ಎಂತಹ ವಿಪರ್ಯಾಸ ನೋಡಿ!
ಅತಿಯಾಸೆಗೆ ನನ್ನ ಒಡಲನ್ನು ಕೊರೆದು ನನಗೆ ಅಸ್ಥಿತ್ವವೇ ಇಲ್ಲದಂತೆ ಮಾಡುತ್ತಿರುವಿರಿ.ಎಷ್ಟೂ ಅಂತ ಈ ನೋವನ್ನು ನಾನು ಸಹಿಸಲಿ. ಇನ್ನು ನಿಮ್ಮ ದುರಾಸೆಯನ್ನು ನೀವು ಬಿಡದೇ ಹೋದರೆ ತುಂಬಾ ತೊಂದರೆಗೊಳಗಾಗುತ್ತೀರಿ. ಈಗ ತತ್ಕಾಲಕ್ಕೆ ಮನೆಯಲ್ಲಿ ಇರುವಿರಿ.ಮುಂದೊಂದು ದಿನ ನೀವು ಕೂಡ ಪ್ರಾಣಿ-ಪಕ್ಷಿಗಳಂತೆ ಪಂಜರದಲ್ಲಿ ಇರಬೇಕಾದ ಪರಿಸ್ಥಿತಿ ಬರಲೂ ಬಹುದು.ಆಗ ಪಶ್ಚಾತ್ತಾಪ ಪಟ್ಟರೂ ಏನೂ ಪ್ರಯೋಜನವಿಲ್ಲ. ಕೊರೋನದಂತ ಖಾಯಿಲೆ ಹೇಗೆ ಮತ್ತೆ ನಮ್ಮ ಆಚಾರ-ವಿಚಾರಗಳನ್ನು ನೆನಪಿಸುತ್ತಿದೆಯೋ, ಹಾಗೆಯೇ ಮತ್ತೆ ಹಿಂದಿನ ಪದ್ಧತಿ ಬರುವಂತಹ ಕಾಲ ಬರಬಹುದು.ಅದು ಖಾಯಿಲೆಯಿಂದಲ್ಲ ನಿಮ್ಮಿಂದ ಆಗಲಿ ಎಂದು ನಿರೀಕ್ಷೆಯೊಂದಿಗೆ ಆಶಿಸುತ್ತೇನೆ.
ನನ್ನನು ಕೆಣಕಿದರೆ, ಸಂಪ್ರದಾಯ ,ಆಚಾರ-ವಿಚಾರಗಳನ್ನು ಮರೆತರೆ ಏನಾಗಬಹುದೆಂದು ಈಗ ನಿಮಗೆ ಅರಿವಾಗುತ್ತಾ ಇದೆ.ಅರಿವಾಗದಿದ್ದರೆ ನಾನೇ ಅರಿವಾಗುವಂತೆ ಮಾಡುತ್ತೇನೆ. ನನ್ನ ವಿರುದ್ಧ ಸೆಣಸಾಡುವುದು ಪ್ರವಾಹದ ವಿರುದ್ಧ ಈಜಾಡಿದಂತೆ. ನಾನು ಮನಸ್ಸು ಮಾಡಿದರೆ ಏನಾಗಬಹುದೆಂದು ಈಗಾಗಲೇ ಹಿಂದೆ ಬಂದಿರುವ ಪ್ರವಾಹ, ಕಾಡ್ಕಿಚ್ಚು ಮುಂತಾದ ಅನಾಹುತಗಳಿಂದ ನಿಮಗೆ ತಿಳಿದಿದೆ.ಇನ್ನಾದರೂ ನಿಮ್ಮ ಮೂರ್ಖ ಆಲೋಚನೆಗಳನ್ನು , ಭಂಡ ಧೈರ್ಯವನ್ನು ಬಿಟ್ಟು ನನ್ನನ್ನು ಬೆಳೆಸಿ ಉಳಿಸಿರಿ. ನನ್ನ ಉಳಿವೇ ನಿಮ್ಮ ಉಳಿವು. ನನ್ನ ಅಳಿವೇ ನಿಮ್ಮ ಅಳಿವು.
✍ಇತೀ ನಿಮ್ಮ ಪ್ರಕೃತಿ..