ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ
ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ ನೆನಪಿನಲ್ಲಿ ಉಳಿಯುವ ನಂದಾದೀಪ ಈಕೆ. ತನ್ನ ಬದುಕಿಗಾಗಿ ಹೋರಾಡಿದ ಹೆಣ್ಣು ಮಗಳಲ್ಲಲ್ಲ. ದೇಶಕ್ಕಾಗಿ, ತಮ್ಮ ನಾಡಿಗಾಗಿ ಜೀವನ ಮತ್ತು ಜೀವವನ್ನು ಮುಡಿಪಾಗಿಟ್ಟು ಬಲಿಯಾದ ಧೀರೆ ಈಕೆ. ನಾನು ಕಂಡ ಹಾಗೆ ಛಲಗಾತಿ, ಹೋರಾಟಗಾತಿ, ಹಿಡಿದ ಹಠಬಿಡದ ತ್ರಿವಿಕ್ರಮನಂತೆ ಬೆನ್ನು ಬಿಡದ ಧೀಮಂತ, ಶೌರ್ಯವಂತ ಮಹಿಳೆ ‘ಕಿತ್ತೂರ ರಾಣಿ ಚೆನ್ನಮ್ಮ. ನನಗೆ ಇಷ್ಟವಾದ ವೀರ ನಾರಿ.
ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಹಳೆಯನ್ನೂದಿ, ಕಿಚ್ಚು ಹಚ್ಚಿದ ಶೂರೆ, ದಿಟ್ಟತನದವಳೀಕೆ. ಕಾಕತಿ ವಂಶದ ದೇಸಾಯಿಯವರ ಪುತ್ರಿ ಯಾಗಿ, ಚಿಕ್ಕವಯಸ್ಸಿನಿಂದಲೇ ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತಮಾಡಿಕೊಂಡ ನೋಡಲು ಬಹಳ ಸೌಂದರ್ಯವತಿಯಾಗಿದ್ದ ಹೆಣ್ಣು ಮಗಳು. ಬೆಳಗಾವಿಯ ಕಿತ್ತೂರಿನ ಮಲ್ಲಸರ್ಜದೊರೆ ಚೆನ್ನಮ್ಮಳ ಸುಂದರತೆಗೆ ಮಾರುಹೋಗಿ ವಿವಾಹವಾಗುತ್ತಾನೆ. ದೊರೆಯ ಕಿರಿಯರಾಣಿಯಾಗಿ ಕಿತ್ತೂರಿನ ಅರಮನೆಯ ಹೊಸಿಲುದಾಟಿ ಬರುತ್ತಾಳೆ. ಹಿರಿಯ ರಾಣಿಗೆ ಒಂದು ಗಂಡು ಮಗು ಈಗಾಗಲೇ ಇದ್ದು, ಚೆನ್ನಮ್ಮ ಆ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಪತಿಗೆ ತಕ್ಕ ಸತಿಯಾಗಿ, ಕಿತ್ತೂರಿನ ಜನತೆಯ ಕಣ್ಮಣಿಯಾಗಿ, ವೀರಶೈವ ಜನಾಂಗದ ವೀರಮಣಿಯಾಗಿ ಕಂಗೊಳಿಸಿ ಮೆರೆಯುತ್ತಿದ್ದಳು. ಚೆನ್ನಮ್ಮನಿಗೆ ಜನಿಸಿದ ಮಗು ಹೆಚ್ಚು ದಿನ ಬದುಕಲಿಲ್ಲ. ದುಃಖಿತಳಾದ ರಾಣಿ ಪತಿಯ ಮಾತಿನಂತೆ ಪ್ರಜೆಗಳ ಯೋಗಕ್ಷೇಮ, ರಾಜ್ಯದ ಉನ್ನತಿಗಾಗಿ ಹಗಲಿರುಳು ಶ್ರಮಿಸತೊಡಗಿದಳು. ಇದೇ ಸಮಯಕ್ಕೆ ಪೇಶ್ವೆ ಸಂಶಯ ಪಿಶಾಚಿ, ಕಿತ್ತೂರಿನ ಪ್ರಗತಿಯನ್ನು ನೋಡಿ ದೊರೆಯನ್ನು ಬಂಧಿಸಿ ಕಾರಾಗೃಹದಲ್ಲಿರಿಸಿದ. ಮುಂದೆ ಮಲ್ಲಸರ್ಜ ದೊರೆ ಮರಣಿಸಿದಾಗ, ಚೆನ್ನಮ್ಮನಿಗೆ ಆಗಸವೇ ತಲೆ ಮೇಲೆ ಬಿದ್ದ ಹಾಗಾಯಿತು. ಇದೇ ಕಾಲಕ್ಕೆ ಬ್ರಿಟಿಷರು ಪೇಶ್ವೆ ಮೇಲೆ ಯುದ್ಧ ಹೂಡಲು ಕಿತ್ತೂರಿನ ಕುವರ ರುದ್ರಸರ್ಜನ ಸಹಕಾರ ಕೇಳಿದರು. ಹೊರಗಿನವರಿಗೆ ನಾವು ನೆರವು ನೀಡಬಾರದೆಂದು ರಾಣಿ ತಿಳಿ ಹೇಳಿದರೂ ಕೇಳದೆ ಸಹಕರಿಸಿದನು. ಅನಾರೋಗ್ಯದಿಂದ ಅಲ್ಪಾಯುಷಿಯಾದ, ರುದ್ರಸರ್ಜ ಶಿವಲಿಂಗ ಎಂಬ ಬಾಲಕನನ್ನು ದತ್ತು ತೆಗೆದುಕೊಂಡು, ದತ್ತಕ ಪತ್ರಕ್ಕೆರುಜು ಹಾಕುವ ಮೊದಲೇ ಶಿವನಪಾದ ಸೇರಿದ. ನರಿಬುದ್ಧಿಯವರಾದ ಬ್ರಿಟಿಷರು ಒಂದಷ್ಟು ಜನರಿಗೆ ಹಣದ ಆಸೆ ತೋರಿಸಿ ತಮ್ಮತ್ತ ಎಳೆದುಕೊಂಡು, ಕಿತ್ತೂರಿನ ದತ್ತಕವನ್ನು ಅಂಗೀಕರಿಸದೆ,ರಾಣಿ ಚೆನ್ನಮ್ಮಳಿಗೆ ಕಾಟ ಕೊಡಲಾರಂಭಿಸಿದರು. ಇದೇ ಸಮಯಕ್ಕೆ ಆಂಗ್ಲರ ಥ್ಯಾಕರೆ ಎಂಬ ಅಧಿಕಾರಿ ಕಿತ್ತೂರಿನ ಮೇಲೆ ಧಾಳಿ ಮಾಡಿಸಿದ.ರಾಣಿಯ ಸಹಾಯಕ್ಕೆ ಧೀರನಾದ ಸಂಗೊಳ್ಳಿ ರಾಯಣ್ಣ ಮುಂದೆ ಬಂದ. ಯುದ್ಧದಲ್ಲಿ ಕಿತ್ತೂರಿಗೆ ಜಯದೊರಕಿತು.
ಪುನಃ ನರಿಬುದ್ಧಿ ಪ್ರದರ್ಶಿಸಿದ ಆಂಗ್ಲರು ಸೆರೆಸಿಕ್ಕ ಎಲ್ಲಾ ವಿದೇಶಿಗರನ್ನು ಬಿಟ್ಟರೆ, ದತ್ತಕವನ್ನು ಒಪ್ಪಲಾಗುವುದೆಂದು ಹೇಳಿದ್ದನ್ನು ನಂಬಿ, ರಾಣಿ ಎಲ್ಲರನ್ನೂ ಬಿಡುಗಡೆ ಮಾಡಿದಳು. ಆದರೆ ಕೃತಘ್ನ ರಾದ ಆಂಗ್ಲರು ಒಂದಷ್ಟು ಅಲ್ಲಿಯವರನ್ನೇ ಹತ್ತಿರ ಮಾಡಿಕೊಂಡು ದಾಳಿ ಮಾಡಿ ಮೋಸವೆಸಗಿದರು. ವೀರಾವೇಷದಿಂದ ಹೋರಾಡಿದರೂ, ಬ್ರಿಟಿಷರ ಫಿರಂಗಿಯೆದುರು ರಾಣಿ ಬಸವಳಿದು ಕುಸಿದಳು. ಆಂಗ್ಲರು ಆಕೆಯನ್ನು ಸೆರೆ ಹಿಡಿದರು.
ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮವನ್ನು, ಅವಳೊಂದಿಗೆ ಇದ್ದ ಕೆಲವು ಜನ ಅರ್ಥ ಮಾಡಿಕೊಳ್ಳದೆ ಕಿತ್ತೂರ ಕೋಟೆ ಆಂಗ್ಲರು ವಶ ಮಾಡುವಂತಾಯಿತು. ಬೈಲಹೊಂಗಲದ ಸೆರೆಮನೆಯಲ್ಲಿ ಚೆನ್ನಮ್ಮಳನ್ನು ಇರಿಸಿದರು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರಿನ ಹೋರಾಟ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಒಂದೆಡೆ ಸ್ವಾತಂತ್ರ್ಯದ ಕಿಚ್ಚು, ಪರತಂತ್ರದ ಧಿಕ್ಕಾರ,ಸ್ವಾಭಿಮಾನ ಎಲ್ಲವನ್ನೂ ಒಗ್ಗೂಡಿಸಿದ್ದನ್ನು ನಾವು ಕಾಣಬಹುದು.
ಚಿನ್ನಾಭರಣಗಳನ್ನು ಸಂಗೊಳ್ಳಿ ರಾಯಣ್ಣನಿಗೆ ನೀಡಿ ಕಿತ್ತೂರು ಸಿಗಬಹುದೆಂಬ ಕನಸನ್ನು ಸೆರೆಮನೆಯಿಂದಲೇ ಕಾಣುತ್ತಿದ್ದಳು. ಚೆನ್ನಮ್ಮನ ಹೆಸರು ಹೇಳಿದರೆ ಸಿಂಹಿಣಿಯನ್ನು ಕಂಡಷ್ಟು ಹೆದರುತ್ತಿದ್ದರು ಆಂಗ್ಲರು. ಕೈಹಿಡಿದವನನ್ನು, ಕರುಳಕುಡಿಯನ್ನು ಕಳೆದುಕೊಂಡರೂ ಹೆದರದೆ, ಜಗ್ಗದೆ, ತನ್ನ ನಾಡಿಗಾಗಿ, ತನ್ನ ಮಣ್ಣಿಗಾಗಿ,ತನ್ನ ನಾಡಿನ ಪ್ರಜೆಗಳಿಗಾಗಿ ವೀರಾವೇಷದಿಂದ ಹೋರಾಡಿದರೂ, ಕಿತ್ತೂರಿನ ಸ್ವಾತಂತ್ರ್ಯದ ಕನಸು, ಕನಸಾಗಿಯೇ ಉಳಿಯಿತು. ವೀರನಾರಿ ಕಿತ್ತೂರಿನ ರಾಣಿ ಚೆನ್ನಮ್ಮ ಕಾಣುತ್ತಿದ್ದ ಹೊಂಗನಸು ಕಮರಿ ಹೋಯಿತು. ಆಕೆಯ ಸಾವಿನೊಂದಿಗೆ ಸೆರೆಮನೆಯಲ್ಲಿ ಕೇವಲ ೫೭ ನೇ ವಯಸ್ಸಿನಲ್ಲಿ ೧೮೨೯ನೇ ಫೆಬ್ರವರಿ ೩ ರಂದು. ಕನ್ನಡನಾಡು ಕಂಡ ವೀರವನಿತೆ ಮಣ್ಣಲ್ಲಿ ಮಣ್ಣಾಗಿ ಅಮರಳಾದಳು.
ಧೈರ್ಯ, ಸಾಹಸ, ಸ್ವಾಭಿಮಾನ, ದೇಶಪ್ರೇಮ, ಗಂಡೆದೆಯ ಚೆನ್ನಮ್ಮಳ ಈ ಸ್ವಾತಂತ್ರ್ಯದ ಪರಿಚಯ ಇಂದಿನ ನವ ಪೀಳಿಗೆಗೂ ಬೇಕೆಂಬ ಕಾರಣದಿಂದ ‘ಕಿತ್ತೂರು ಉತ್ಸವ’ ಎಂದು ರಾಜ್ಯದೆಲ್ಲೆಡೆ ಮೂರು ದಿನಗಳ ಕಾಲ ರಾಜ್ಯಮಟ್ಟದಲ್ಲಿ ಆಚರಿಸುತ್ತಾರೆ. ಇಂದು (೨೩ ಅಕ್ಟೋಬರ್) ನಮ್ಮ ದೇಶ ಕಂಡ ಅಪ್ರತಿಮ ಸಾಹಸಿಯಾದ ಕಿತ್ತೂರಿನ ರಾಣಿಯವರ ಜನ್ಮದಿನೋತ್ಸವ. ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಾ ಅವರ ವೀರ ಕಥೆಯನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಮಾಡೋಣ.
-ರತ್ನಾ ಕೆ.ಭಟ್, ತಲಂಜೇರಿ
(ಸಂಗ್ರಹ: ವೀರ ವನಿತೆಯರ ಸಾಹಸಗಾಥೆ)
ಚಿತ್ರ ಕೃಪೆ: ಇಂಟರ್ನೆಟ್ ತಾಣ