ಹಟಮಾರಿ ಪುಟ್ಟ ಮೀನು

ಹಟಮಾರಿ ಪುಟ್ಟ ಮೀನು

ಬಹಳ ಹಿಂದೆ ಒಂದು ಕೊಳದಲ್ಲಿ ಪುಟ್ಟ ಮೀನೊಂದಿತ್ತು. ಒಂದು ಚೋಂದಕಪ್ಪೆ ಅದರ ಗೆಳೆಯ. ಅವರಿಬ್ಬರೂ ಯಾವಾಗಲೂ ಜೊತೆಯಾಗಿ ಈಜುತ್ತಾ, ಆಹಾರ ಹುಡುಕುತ್ತಾ ಆಟವಾಡುತ್ತಿದ್ದರು.

ಅದೊಂದು ದಿನ ಬೆಳಗ್ಗೆ ಚೋಂದಕಪ್ಪೆಯ ಬಾಲದ ಹತ್ತಿರ ಒಂದು ಜೊತೆ ಕಾಲುಗಳನ್ನು ಕಂಡು ಮೀನಿಗೆ ಅಚ್ಚರಿ. ಚೋಂದಕಪ್ಪೆಗೆ ಕಾಲುಗಳು ಯಾಕೆ ಮೂಡಿವೆ ಎಂದು ಕೇಳಿತು ಪುಟ್ಟ ಮೀನು.

"ನಾನು ಮೀನಲ್ಲ. ನಾನು ಚೋಂದಕಪ್ಪೆ ಅಂದರೆ ಮರಿಕಪ್ಪೆ. ನಾನು ದೊಡ್ಡವನಾದಾಗ ಈ ಕೊಳದಲ್ಲಿ ವಾಸ ಮಾಡೋದಿಲ್ಲ" ಎಂದು ವಿವರಿಸಿತು ಚೋಂದಕಪ್ಪೆ.

“ನೀನು ಸುಳ್ಳು ಹೇಳುತ್ತಿದ್ದಿ” ಎಂದಿತು ಪುಟ್ಟ ಮೀನು. "ನೀನೀಗ ನನ್ನ ಮಾತು ನಂಬದಿದ್ದರೆ, ಕೆಲವು ದಿನಗಳ ನಂತರ ನೀನೇ ನೋಡುವಿಯಂತೆ" ಎಂದಿತು ಚೋಂದಕಪ್ಪೆ.

ಅನಂತರ ಮೂರು ದಿನ ಚೋಂದಕಪ್ಪೆ ಪುಟ್ಟ ಮೀನಿಗೆ ಕಾಣಿಸಲೇ ಇಲ್ಲ. ಪುಟ್ಟ ಮೀನಿಗೆ ಚಿಂತೆಯಾಯಿತು. ತನ್ನ ಗೆಳೆಯನನ್ನು ಅದು ಎಲ್ಲ ಕಡೆ ಹುಡುಕಿತು. ಎಲ್ಲಿ ಹೋಗಿರಬಹುದು ಚೋಂದಕಪ್ಪೆ?

ಕೆಲವು ದಿನಗಳ ನಂತರ ಚೋಂದಕಪ್ಪೆ ಕೊಳದಲ್ಲಿ ಪುನಃ ಕಾಣಿಸಿತು. ಪುಟ್ಟ ಮೀನಿಗೆ ಖುಷಿಯಾಯಿತು. ಜೊತೆಗೆ ಆಶ್ಚರ್ಯವೂ ಆಯಿತು. ಯಾಕೆಂದರೆ ಚೋಂದಕಪ್ಪೆಗೆ ಇನ್ನೊಂದು ಜೊತೆ ಕಾಲುಗಳು ಮೂಡಿದ್ದವು - ಅದರ ದೇಹದ ಮುಂಭಾಗದಲ್ಲಿ. ಅದರ ಬಾಲವೂ ಸಣ್ಣದಾಗಿತ್ತು.

“ಎಲ್ಲಿ ಹೋಗಿದ್ದೆ ಇಷ್ಟು ದಿನ?" ಎಂದು ಕೇಳಿತು ಪುಟ್ಟ ಮೀನು. "ನಾನು ಜಲದಿಂದ ನೆಲಕ್ಕೆ ಹೋಗಿದ್ದೆ. ನಾನಿಲ್ಲಿ ಹೆಚ್ಚು ದಿನ ಇರುವುದಿಲ್ಲವೆಂದು ಹೇಳಿರಲಿಲ್ಲವೇ? ಇನ್ನು ಕೆಲವೇ ದಿನಗಳ ನಂತರ ನಾನು ನೆಲದಲ್ಲಿಯೇ ವಾಸ ಮಾಡುತ್ತೇನೆ” ಎಂದು ಉತ್ತರಿಸಿತು. “ನನ್ನನ್ನು ಇನ್ನು ಚೋಂದಕಪ್ಪೆ ಎಂದು ಕರೆಯಬೇಡ. ಬದಲಾಗಿ ಕಪ್ಪೆ ಎಂದು ಕರೆಯಬೇಕು. ಮೀನೇ, ನಿನಗೆ ವಿದಾಯ” ಎಂದು ಹೊರಟಿತು.

ಪುಟ್ಟ ಮೀನಿಗೆ ಗೆಳೆಯನ ಮಾತುಗಳಿಂದ ಗೊಂದಲವಾಯಿತು. ತಾನು ಕೇಳಿದ್ದನ್ನು ಮತ್ತು ಕಂಡದ್ದನ್ನು ನಂಬಲು ಪುಟ್ಟ ಮೀನಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಮುಂಚೆ ಅವನ ಗೆಳೆಯ ಮೀನಿನಂತೆ ಈಜುತ್ತಿದ್ದ. ಮುಂಚೆ ಗೆಳೆಯನಿಗೆ ಕಾಲುಗಳಿರಲಿಲ್ಲ. ಈಗ ಗೆಳೆಯನ ರೂಪವೇ ಬದಲಾಗಿತ್ತು.

ಆ ಕೊಳದಲ್ಲಿ ಪುಟ್ಟ ಮೀನು ಏಕಾಂಗಿಯಾಗಿ ಉಳಿಯಿತು. ದಿನಗಳೆದಂತೆ ಅದು ಬೆಳೆಯಿತು. ಮುಂದೊಂದು ದಿನ, ಮೀನು ಆಹಾರ ಹುಡುಕುತ್ತಾ ಕೊಳದಲ್ಲಿ ಈಜುತ್ತಿದ್ದಾಗ, ಹಠಾತ್ತನೇ ಕಪ್ಪೆಯೊಂದು ನೀರಿಗೆ ಜಿಗಿಯಿತು. ಅರರೇ, ಅದು ಮೀನಿನ ಹಳೆ ಗೆಳೆಯ ಕಪ್ಪೆ. ಗೆಳೆಯನನ್ನು ಪುನಃ ಕಂಡು ಮೀನಿಗೆ ಖುಷಿ.

“ಎಲ್ಲಿ ಹೋಗಿದ್ದೆ ಇಷ್ಟು ದಿನ? ಎಂದು ಪ್ರಶ್ನಿಸಿತು ಮೀನು. "ನಾನು ನೀರಿನಿಂದ ನೆಲಕ್ಕೆ ಹೋಗಿದ್ದೆ” ಎಂದು ತನ್ನ ಅಲ್ಲಿನ ಅನುಭವಗಳನ್ನು ಹೇಳಿತು ಕಪ್ಪೆ. ಅದನ್ನೆಲ್ಲ ಕೇಳಿದ ಮೀನು, “ಅಲ್ಲಿ ನಿನ್ನ ಗೆಳೆಯರು ಯಾರ್ಯಾರು? ಎಂದು ಪ್ರಶ್ನಿಸಿತು.

“ಓ, ಅಲ್ಲಿ ನನಗೆ ಹಲವು ಗೆಳೆಯರು - ದನಗಳು, ಪಕ್ಷಿಗಳು, ಬೆಕ್ಕುಗಳು ಮತ್ತು ಇತರರು” ಎಂದಿತು ಕಪ್ಪೆ. "ನಾನು ನಿನ್ನನ್ನು ಹಿಂಬಾಲಿಸಿ ನೆಲಕ್ಕೆ ಬರಲೇ? ನನಗೆ ಅವರನ್ನೆಲ್ಲ ಭೇಟಿ ಮಾಡಬೇಕಾಗಿದೆ” ಎಂದಿತು ಮೀನು.

"ಅದು ಹೇಗೆ ಸಾಧ್ಯ? ನಿನಗೆ ನೆಲದಲ್ಲಿ ಉಸಿರಾಡಲು ಆಗದು. ನೀನು ಸತ್ತೇ ಹೋಗುತ್ತಿ” ಎಂದು ವಿವರಿಸಿತು ಕಪ್ಪೆ. “ಆದರೆ ನಿನ್ನ ಗೆಳೆಯರಾದ ದನಗಳು, ಪಕ್ಷಿಗಳು ಮತ್ತು ಬೇರೆಯವರನ್ನು ನಾನು ಕಾಣಬೇಕು” ಎಂದು ಬೇಡಿಕೊಂಡಿತು ಮೀನು.

"ಅದಕ್ಕಾಗಿ ನೀನು ನೆಲಕ್ಕೆ ಬರಬೇಕಾಗಿಲ್ಲ. ಅವರು ಹೇಗಿದ್ದಾರೆಂದು ಹೇಳುತ್ತೇನೆ ಕೇಳು” ಎಂದಿತು ಕಪ್ಪೆ. ಅಂತೆಯೇ ನೆಲದ ಗೆಳೆಯರನ್ನೆಲ್ಲ ವರ್ಣಿಸಿತು ಕಪ್ಪೆ. ಆ ಪ್ರಾಣಿಪಕ್ಷಿಗಳು ಹೇಗಿದ್ದಾವೆಂದು ಕಲ್ಪಿಸಲು ಪ್ರಯತ್ನಿಸಿತು ಮೀನು. ಆದರೆ ಅದಕ್ಕೆ ಸಮಾಧಾನವಾಗಲಿಲ್ಲ.

"ನೆಲದಲ್ಲಿ ಬೇರೇನು ನೋಡಿದಿ?" ಎಂದು ಪುನಃ ಕೇಳಿತು ಮೀನು. “ಅಲ್ಲಿ ಜನರು, ಮಕ್ಕಳು, ಗೊಂಬೆಗಳು ಮತ್ತು ಬೇರೆ ಅನೇಕ ವಸ್ತುಗಳಿವೆ" ಎಂದಿತು ಕಪ್ಪೆ. ಹೀಗೇ ಕತ್ತಲಾಗುವ ತನಕ ಅವರ ಮಾತುಕತೆ ಸಾಗಿತು. ತಾನು ನೆಲಕ್ಕೆ ಹೋಗಿ ಆ ಅದ್ಭುತಗಳನ್ನೆಲ್ಲ ಕಾಣಲು ಸಾಧ್ಯವೆಲ್ಲವೆಂದು ಮೀನಿಗೆ ದುಃಖವಾಯಿತು. ಆ ರಾತ್ರಿ ಅದಕ್ಕೆ ನಿದ್ದೆ ಬರಲಿಲ್ಲ. ಅದಕ್ಕೆ ಆ ದಿನ ಕಪ್ಪೆ  ಹೇಳಿದ್ದ ಸಂಗತಿಗಳದ್ದೇ ಯೋಚನೆ.

ಮರುದಿನ ಬೆಳಗ್ಗೆ ಆಹಾರ ಹುಡುಕುತ್ತಾ ಮೀನು ಈಜುತ್ತಿತ್ತು. ಆಗ ಅದಕ್ಕೆ ಹಾರಾಡುತ್ತಿದ್ದ ಹಕ್ಕಿಯೊಂದರ ನೆರಳು ನೀರಿನಲ್ಲಿ ಕಾಣಿಸಿತು. ಮೀನಿಗೆ ಹಕ್ಕಿಯನ್ನು ಕಾಣಲೇ ಬೇಕೆನಿಸಿತು. ತನ್ನ ಧೈರ್ಯವನ್ನೆಲ್ಲ ಒಗ್ಗೂಡಿಸಿ ಮೀನು ಕೆರೆಯ ದಡಕ್ಕೆ ಜಿಗಿಯಿತು. ಒಂದೇ ಜಿಗಿತದಲ್ಲಿ ದಡದಲ್ಲಿತ್ತು ಮೀನು. ಆದರೆ ಕಣ್ಣು ತೆರೆಯುವ ಮುನ್ನ, ಮೀನು ಉಸಿರಿಗಾಗಿ ಒದ್ದಾಡಿತು. ಅದು ಸಂಕಟದಿಂದ ಕೂಗಿತು. ಅದೃಷ್ಟವಶಾತ್, ಗೆಳೆಯ ಕಪ್ಪೆ ಹತ್ತಿರದಲ್ಲಿತ್ತು.

ಬೇಗಬೇಗನೇ ಜಿಗಿದು ಮೀನಿನ ಹತ್ತಿರ ಬಂದ ಕಪ್ಪೆ ಕಂಡದ್ದೇನು? ಮೀನು ಅದಾಗಲೇ ಮೂರ್ಛೆ ತಪ್ಪಿ ಬಿದ್ದಿತ್ತು. ತಡಮಾಡದೆ ಕಪ್ಪೆ ಮೀನನ್ನು ಕೊಳದ ನೀರಿಗೆ ತಳ್ಳಿತು. ಮೀನಿಗೆ ನೀರಿನಲ್ಲಿ ತಕ್ಷಣವೇ ಪ್ರಜ್ನೆ ಬಂತು. ಅದಕ್ಕೆ ಹೋದ ಜೀವ ಬಂದಂತಾಯಿತು. ಏನಾಗಿತ್ತೆಂದು ಮೀನು ಕಪ್ಪೆಯನ್ನು ಕೇಳಿತು.

ಕಪ್ಪೆ ನಗುತ್ತಾ ಉತ್ತರಿಸಿತು, "ನೆಲ ಎಂಬುದು ನಿನಗಲ್ಲ ಎಂದು ನಾನು ಹೇಳಿದ್ದೆ. ನೀನಲ್ಲಿ ಸಾಯುತ್ತಿದ್ದೆ. ನೀನು ನೆಲದಲ್ಲಿ ಬದುಕುತ್ತೀಯಾ ಅಥವಾ ನೀರಿನಲ್ಲಿ ಬದುಕುತ್ತೀಯಾ ಎಂಬುದು ಮುಖ್ಯವಲ್ಲ. ಎಲ್ಲವೂ ಚೆನ್ನಾಗಿದೆ ಮತ್ತು ಚಂದವಾಗಿದೆ. ನೀನೇಕೆ ಇದನ್ನು ಒಪ್ಪಿಕೊಳ್ಳುತ್ತಿಲ್ಲ?”

“ಓ, ಇಲ್ಲೇ ಇದ್ದರೆ ನನಗೆ ಸಮಾಧಾನವಾಗದು” ಎಂದಿತು ಮೀನು. “ಹೀಗಿರೋದಕ್ಕೆ ನೀನು ಸಂತೋಷ ಪಡಬೇಕು. ಯಾಕೆಂದರೆ ನಿನ್ನ ಹಾಗೆ ಜೀವಮಾನವಿಡೀ ನೀರಿನಲ್ಲಿರಲು ಕೆಲವೇ ಕೆಲವು ಜೀವಿಗಳಿಗೆ ಸಾಧ್ಯ” ಎಂದು ವಿವರಿಸಿತು ಕಪ್ಪೆ.

ಅದನ್ನು ಕೇಳಿದ ಮೀನು ಖುಷಿಯಿಂದ ನೀರಿನಲ್ಲಿದ್ದ ಕಳೆಗಿಡಗಳ ನಡುವೆ ಈಜಿತು. ಗೆಳೆಯ ಕಪ್ಪೆ ಹೇಳಿದ್ದು ಸತ್ಯವೆಂದು ಅದಕ್ಕೆ ಅರ್ಥವಾಯಿತು.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಜೈನುದ್ದಿನ್ ಜಮೀಲ್