ಹಣ ಶಾಶ್ವತವಲ್ಲ..

ಹಣ ಶಾಶ್ವತವಲ್ಲ..

‘ಹಣ ನೋಡಿದರೆ ಹೆಣಾನೂ ಬಾಯಿ ಬಿಡುತ್ತೆ' ಅಂತ ಹಿಂದಿನವರು ಹೇಳ್ತಾ ಇದ್ರು. ಅದಂತೂ ನೂರಕ್ಕೆ ನೂರು ಸತ್ಯ. ದಾರಿಯಲ್ಲಿ ಹೋಗುವಾಗ ಹಣ ಕಂಡರೆ “ಇದು ನನ್ನದಲ್ಲ" ಅಂತ ಯಾರೂ ಹಾಗೆಯೇ ಬಿಟ್ಟು ಹೋಗುವುದಿಲ್ಲ. ಯಾರ ಹಣ ವಿಚಾರಿಸದೇ ಸಿಕ್ಕಿದ್ದೇ ಚಾನ್ಸ್ ಅಂತ ಎತ್ತಿಕೊಂಡು ಬಿಡುತ್ತೇವೆ. ಇಲ್ಲಿ ಹಣಕ್ಕೆ ಇರುವ ಬೆಲೆ ಯಾವುದಕ್ಕೂ ಇಲ್ಲ. ಒಬ್ಬ ಶ್ರೀಮಂತನಾಗಿದ್ದರೆ ಸಂಬಂಧಗಳು ತನ್ನಿಂದ ತಾನೇ ಹುಟ್ಟಿಕೊಳ್ಳುತ್ತವೆ. ಈಗಂತೂ ಎಲ್ಲವೂ ಹಣದಿಂದಲೇ ನಡಿಯುವುದು…

ಕೆಲವೊಮ್ಮೆ ಹಣ ಮನುಷ್ಯರನ್ನೇ ಬದಲಾಯಿಸಿ ಬಿಡುತ್ತದೆ. ಇವತ್ತು ಬಡವನಾಗಿದ್ದವ ನಾಳೆ ಶ್ರೀಮಂತನಾಗಬಹುದು. ಆದರೆ ಹಣ ಯಾವತ್ತಿಗೂ ಶಾಶ್ವತವಲ್ಲ. ಜನರ ಪ್ರೀತಿ ಸಂಪಾದಿಸುವುದು ಜೀವನದಲ್ಲಿ ಅತೀ ಮುಖ್ಯ. “ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ" ಅಂತ ಗಾದೆ ಮಾತೇ ಇದೆ. ಹಣ ಇದ್ದಾಗ ದರ್ಪ ತೋರಿಸಿದರೆ ಮುಂದೊಂದು ದಿನ ಕೆಳಗೆ ಬಿದ್ದಾಗ ಆ ಕರ್ಮ ನಮಗೆ ತಾಗದೇ ಬಿಡೋದಿಲ್ಲ. ಹಣ ಇವತ್ತು ಬಂದು ನಾಳೆ ಹೋಗುತ್ತದೆ. ನಾವು ಒಳ್ಳೆಯದನ್ನು ಮಾಡಿದ್ದರೆ ಸಾಯುವಾಗ ನಾಲ್ಕು ಜನರು ನಮ್ಮನ್ನು ನೆನಪಿಡುತ್ತಾರೆ. ನಾವು ಮಾಡಿದ ಸಹಾಯವನ್ನು ಹೊಗಳುತ್ತಾರೆ. ಅಲ್ಲಾ.. ಹಣ ನೋಡಿದರೆ ಯಾಕೆ ಇಷ್ಟು ಜೀವ ಬಿಡ್ತಾರೋ? ಅಂತ ಗೊತ್ತಾಗ್ತಿಲ್ಲ. ತುಂಬಾ ಹಣ ಇದ್ದ ಕಡೆನೇ ಜಗಳ ಜಾಸ್ತಿ. ಬಡವರಲ್ಲಿ ಹಣಕ್ಕಿಂತ ಜಾಸ್ತಿ ಪ್ರೀತಿ ಇರುತ್ತದೆ. ಎಲ್ಲರ ಪ್ರೀತಿ ಪಡೆಯುವುದು ಹಣ ಮಾಡುವಷ್ಟು ಸುಲಭವಲ್ಲ. ಹಾಗಾಗಿ ಇರುವ ನಾಲ್ಕು ದಿನಗಳಲ್ಲಿ ಎಲ್ಲರ ಪ್ರೀತಿ ಸಂಪಾದಿಸಲು ಪ್ರಯತ್ನಿಸಬೇಕು ಅಷ್ಟೇ…

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ