ಹತ್ತಾದ ಹೊತ್ತಲ್ಲಿ...

ಹತ್ತಾದ ಹೊತ್ತಲ್ಲಿ...

ಸಂಪದದ ಹತ್ತರ ಮೌನ ಸಂಭ್ರಮಕ್ಕೆಂದು ಬರೆದಿದ್ದ ತುಣುಕು ಈ ಹತ್ತಾದ ಹೊತ್ತಲ್ಲಿ. ಗದ್ದಲದ ಸದ್ದು ಮಾತ್ರ ಮೊಳಗುವ ಈ ಆಧುನಿಕ ಜಾಗತಿಕ ಗೋಮಾಳದಲ್ಲಿ, ಮೌನ ಸಾಧಕರ ಭಾವ ವಿನಿಮಯಕ್ಕೊಂದು ಸೇತುವೆಯಾಗಿ, ವೇದಿಕೆಯಾಗಿ ಸಂಪದ ನಿರ್ವಹಿಸುತ್ತಿರುವ ಭೂಮಿಕೆ ಮಾತಿನಲ್ಲಿ ಹೇಳಿ ತೀರದ ವ್ಯಾಪ್ತಿಯುಳ್ಳದ್ದು. ಕನ್ನಡಿಗರ ಹುಟ್ಟುಗುಣವೇ ಹಾಗೆ -  ತಮ್ಮ ಜಾಗಟೆಯನ್ನು ತಾವೆ ಬಾರಿಸದೆ ಹೂವಿನ ಪರಿಮಳ ತಾನಾಗಿಯೆ ಪಸರಿಸುವಂತೆ ನೈಸರ್ಗಿಕವಾಗಿ ಹರಡಲೆಂದು ಸುಮ್ಮನಿರುತ್ತಾರೆಯೆ ಹೊರತು, ಕೊಂಬು ಕಹಳೆ ಹಿಡಿದು ಜಗಕ್ಕೆ ಸಾರಲು ಜೊರಡುವುದಿಲ್ಲ ತಮ್ಮ ಸಾಧನೆಗಳ ಪೂರ ಸಾಗರದಷ್ಟಿದ್ದರು. ಸಂಪದ ಕೂಡ ಇದಕ್ಕಿಂತ ಭಿನ್ನವೇನಿಲ್ಲವೆನ್ನುವ ನಿಜದ ಬಗಲಲ್ಲೆ ಆ ಮೌನ ಸಂಭ್ರಮಕ್ಕೊಂದು ಮೌನ ಅಭಿನಂದನೆ ಸಲ್ಲಿಸುತ್ತ ಅವಿರತದೆ ಬೆಂಬಲಿಸಿ ಸಹಕರಿಸುತ್ತ ಸಾಗುವ ಎನ್ನುವ ಅಭಿಲಾಷೆ, ಆಶಯದೊಂದಿಗೆ ಈ ಪುಟ್ಟ ಕವನ ಸಂಪದ ಬಳಗಕ್ಕೆ ಸಮರ್ಪಿತ - ಕನ್ನಡಿಗರ ಹೃದಯಪೂರ್ವಕ ಕೃತಜ್ಞತೆಯ ಕುರುಹಾಗಿ. 

ಹತ್ತಾದ ಹೊತ್ತಲ್ಲಿ...
___________________

ಹತ್ತಾಯಿತು
ಹತ್ತಿದ್ದಾಯಿತು
ಹತ್ತೇನಲ್ಲ ತೀರ ಹತ್ತಿರ
ತಲೆಗೆ ಹತ್ತಲಿಲ್ಲ ಎತ್ತರ
ಹತ್ತರ ಸಂಭ್ರಮದ ಸ್ವರ ||

ಸಿರಿ ಸಂಪದ
ಸರಿ ಸೊಂಪಾದ
ಪದಗಳಲೆ ಇಟ್ಟ ಪಾದ
ಪಾದಗಳ್ಹೆಜ್ಜೆ ವಾಮನನದ
ಅಳೆದ ಕನ್ನಡ ಜಯಪ್ರದ ||

ಒಂದು ದಶಕ
ಹತ್ತಾಗೆ ಶತಕ
ಅಡಿಗಲ್ಲ ಹಾಕಿದ ಜೋರು
ಹತ್ತು ನೂರಾದ ಚಿಗುರು
ಮರೆಯದಂತೆ ಹಳೆ ಬೇರು ||

ಅಂಬೆಗಾಲ ಕಂದ
ಕತ್ತಲಲೆ ಮುನ್ನುಗ್ಗಿದ
ಆಡಲಿರಲಿಲ್ಲ ಜತೆಗೆ ಏಕಾಂಗಿ
ಬಿಡಲೊಲ್ಲದ ಛಲದೆ ಮುನ್ನುಗ್ಗಿ
ಹುರಿದುಂಬಿಸಿ ಮಿಕ್ಕವರಿಗು ಸುಗ್ಗಿ ||

ದಶಕದಾ ಮಗ್ಗಿ
ವಿನಯ ತಗ್ಗಿ ಬಗ್ಗಿ
ಕನ್ನಡತೆ ಸಹೃದಯದ ಸಾರ
ಬೊಬ್ಬಿಡದ ಕರ್ತವ್ಯದ ಭಾರ
ಮೌನ ಸಾಧನೆಯ 'ದಶ'ರ ||

-------------------------------------------------- 
ನಾಗೇಶ ಮೈಸೂರು, ಸಿಂಗಪುರ
--------------------------------------------------
 

Comments

Submitted by makara Thu, 07/10/2014 - 20:24

ಕನ್ನಡಿಗರ ಹುಟ್ಟುಗುಣವೇ ಹಾಗೆ - ತಮ್ಮ ಜಾಗಟೆಯನ್ನು ತಾವೆ ಬಾರಿಸದೆ ಹೂವಿನ ಪರಿಮಳ ತಾನಾಗಿಯೆ ಪಸರಿಸುವಂತೆ ನೈಸರ್ಗಿಕವಾಗಿ ಹರಡಲೆಂದು ಸುಮ್ಮನಿರುತ್ತಾರೆಯೆ ಹೊರತು, ಕೊಂಬು ಕಹಳೆ ಹಿಡಿದು ಜಗಕ್ಕೆ ಸಾರಲು ಹೊರಡುವುದಿಲ್ಲ +೧. ಇದನ್ನೇ ಬಹಳ ಸೊಗಸಾಗಿ ನಿಮ್ಮ ಕವನದಲ್ಲಿ ನಿರೂಪಿಸಿದ್ದೀರಿ ನಾಗೇಶರೆ, ಧನ್ಯವಾದಗಳು.

Submitted by nageshamysore Fri, 07/11/2014 - 04:20

In reply to by makara

ಶ್ರೀಧರರೆ ನಮಸ್ಕಾರ ಮತ್ತು ಧನ್ಯವಾದಗಳು :-) ನಿಮ್ಮನ್ನು ಬಹಳ ದಿನದಿಂದ ಕಾಣಲೆ ಇಲ್ಲ.. ಲಲಿತಾರಾಧನೆಯ ಆಧ್ಯಾತ್ಮಿಕ ಹಾದಿ ಹಿಡಿದು ತುಂಬಾ ಬಿಜಿಯಾಗಿಬಿಟ್ಟಿದ್ದೀರೇನೊ ಎಂದುಕೊಂಡಿದ್ದೆ; ಅಥವಾ ಇನ್ನಾವುದನ್ನೊ ಬರೆಯುವ ಸಿದ್ದತೆಯಲ್ಲಿ ಮುಳುಗಿಹೋಗಿದ್ದಿರೊ ಏನೊ?

Submitted by makara Fri, 07/11/2014 - 17:56

In reply to by nageshamysore

ನನ್ನ ಬಗೆಗಿನ ಕಾಳಜಿಗೆ ಧನ್ಯವಾದಗಳು ನಾಗೇಶರೆ. ಆಧ್ಯಾತ್ಮದ ಹಾದಿಯಲ್ಲೇನೂ ಬ್ಯುಸಿಯಾಗಿರಲಿಲ್ಲ. ಅದೇನೋ ತಿಳಿಯದು ನನಗೆ ಒಂದು ವಿಧವಾದ ನಿದ್ರಾವಸ್ಥೆಯ (ಜಡತ್ವದ ಸ್ಥಿತಿ) ಉಂಟಾಗಿ ಬಿಡುತ್ತದೆ ಕೆಲವೊಮ್ಮೆ :( ಮತ್ತೆ ಈಗ ಸಂಪದದಲ್ಲಿ ಬೇರೆ ವಿಧವಾಗಿ ಸಕ್ರಿಯನಾಗುತ್ತೇನೆ. .

Submitted by nageshamysore Fri, 07/11/2014 - 18:05

In reply to by makara

ನೀವು ಹೇಳುತ್ತಿರುವ ಜಡತ್ವ 'ಪರಬ್ರಹ್ಮ'ದ ಸಹಜ (ಟ್ರೇಡ್ಮಾರ್ಕ್) ಸ್ಥಿತಿಯಲ್ಲವೆ? ಮತ್ತೆ ಕ್ರಿಯಾಶೀಲವಾಗಲಿಕ್ಕೆ ಶಕ್ತಿಯ ಚೇತನ ಬೇಕೆ ಬೇಕಲ್ಲಾ? ನಿದ್ರಾವಸ್ಥೆಯಲ್ಲಿ ಆ ಶಕ್ತಿಯ ಚೇತನ ಹೀರಿ ಸಚೇತನವಾಗಿ ಬಂದಿರುವಿರಾಗಿ ಮತ್ತೆ ಲವಲವಿಕೆಯಿಂದ ಸಕ್ರೀಯರಾಗಬಹುದು ಬಿಡಿ :-)