ಹತ್ತು ಔತಣ ಮರೆತು...
ಕವನ
ಸಫಲತೆಯೊಂದಿಗೆ ಪಯಣವು ಸಾಗಿರೆ
ವಿಫಲತೆ ಅವಿತಿಹ ಹಾಗೆ
ಚಪಲದಿ ಮನಗಳು ಗೆಲುವಿಗೆ ಕಾದಿರೆ
ಅಪಜಯ ಬಂದಿದೆ ಹೀಗೆ
ದಶ ದಿನ ಔತಣ ನೀಡಿದೆ ತಂಡವು
ವಿಷಮದ ದಿನದಲಿ ಕೂಡ
ಕಸಿವಿಸಿಯೇತಕೆ ಸೋತಿಹ ದಿನದಲಿ
ಕುಸಿಯದೆ ಮುಂದಕೆ ನೋಡ
ಒಂದಿನ ಸೋತರೆ ಜರೆಯುವುದೇತಕೆ
ಹಿಂದಿನ ವಿಜಯವ ಮರೆತು
ಕುಂದದೆ ಸೋಲಿಗೆ ಬೆಂಬಲ ನೀಡುವ
ಮುಂದಿನ ಗೆಲುವಿನ ಕುರಿತು
ಕಂಬವು ಬಾಗದೆ ಸುಂಟರಗಾಳಿಯ
ಜಂಭದ ದಾಳಿಗೆ ಸೋತು
ತುಂಬುವ ಶಕ್ತಿಯ ಸೋತಿಹ ಮನಸಿಗೆ
ಬೆಂಬಲ ಗೆಲುವಿಗೆ ಹೇತು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
