ಹದಗೆಟ್ಟ ಪರಿಸರದಿಂದ ಅಪರೂಪವಾಗುತ್ತಿರುವ ಕಾಗೆಗಳು

ಹದಗೆಟ್ಟ ಪರಿಸರದಿಂದ ಅಪರೂಪವಾಗುತ್ತಿರುವ ಕಾಗೆಗಳು

"ನೀವು ಕಾಗೆ ನೋಡದೆ ಎಷ್ಟು ಸಮಯ ಆಯಿತು?" ಹೀಗೆಂದು ಪೇಟೆ ಜನರನ್ನು ಬಿಡಿ; ಹಳ್ಳಿ ರೈತಾಪಿ ಜನರನ್ನು ಕೇಳಿದರೆ ಅವರೂ "ಕಾಗೆಗಳು ಈಗ ಅಪರೂಪ" ಎಂದು ಉತ್ತರಿಸುವುದು ಸಾಮಾನ್ಯ ಆಗಿದೆ. ಈ ಬಗ್ಗೆ ನಗರದ ಜೊತೆಗೆ ಕ್ಷೇತ್ರದ ಹಳ್ಳಿಗಾಡಿನಲ್ಲಿ ಗಮನವಿಟ್ಟು ಪರಿಶೀಲನೆ ಮಾಡಿದರೆ ಕಾಗೆಗಳು ಕಡಿಮೆ ಆಗಿರುವುದು ಗಮನಕ್ಕೆ ಬರುತ್ತದೆ. ಅಪರೂಪಕ್ಕೆ ಹಳ್ಳಿಗಳಲ್ಲಿ ಕಾಗೆಗಳ ಕೂಗು ಕೇಳಿಸುತ್ತದೆ.

ದಶಕಗಳ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಕಾಗೆಗಳು ಇಂದು ಯಾಕೆ ಕಡಿಮೆ ಆಗಿವೆ ಎನ್ನುವುದು ನಿಸರ್ಗ ಪ್ರಿಯರನ್ನು ಕಾಡುವ ಪ್ರಶ್ನೆಯಾಗಿದೆ. ಕಾಗೆಗಳು ಅಪರೂಪ ಆಗಲು ಹೆಚ್ಚಾಗಿರುವ ನೈರ್ಮಲ್ಯ ಪ್ರಜ್ಞೆ, ನಗರೀಕರಣದಿಂದ  ಅವುಗಳ ಆವಾಸ ಆಗಿರುವ ದೊಡ್ಡ ಮರಗಳು ಕಣ್ಮರೆ ಆಗುತ್ತಿರುವುದು, ಕಾಗೆಗಳು ತಿನ್ನುವ ಆಹಾರದಲ್ಲಿ ವಿಷ ಸೇರ್ಪಡೆ ಆಗುತ್ತಿರುವುದು ಪ್ರಮುಖ ಕಾರಣಗಳು ಎಂದು ಪಕ್ಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಗರ ಮಾತ್ರವಲ್ಲ; ಹಳ್ಳಿಗಾಡಿನ ಪ್ರದೇಶ ಅವುಗಳಿಗೆ ಈ ಹಿಂದಿನಷ್ಟು ಜೀವನ ನಡೆಸಲು ಅನುಕೂಲ ಆಗಿಲ್ಲ. ಎತ್ತರದ ಮರಗಳು ಸಿಗದ ಕಾರಣ ಗೂಡು ಕಟ್ಟಲು ಅವುಗಳಿಗೆ ಅನುಕೂಲ ಆಗುತ್ತಿಲ್ಲ. ಇದರಿಂದ ಕಾಗೆಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಒಂದು  ಸಂಶೋಧನೆ ಪ್ರಕಾರ, ಭಾರತದ ಕಾಗೆಗಳು ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಬೇರೆ ದೇಶಗಳಿಗೆ ವಲಸೆ ಹೋಗುತ್ತಿವೆ.

ನಗರ ಪ್ರದೇಶಗಳಲ್ಲಿ ಕಾಗೆಗಳಿಗೆ ಈ ಹಿಂದೆ ಸಾಕಷ್ಟು ಆಹಾರ ವಸ್ತುಗಳು ಲಭ್ಯ ಆಗುತ್ತಿದ್ದವು. ಸತ್ತ ಇಲಿಗಳು ಸೇರಿದಂತೆ ಹಲವು ಪ್ರಾಣಿಜನ್ಯ ವಸ್ತು ತಿನ್ನುತ್ತಿದ್ದ ಕಾಗೆಗಳು ಇಂದು ನಗರದಲ್ಲಿ ಮುಚ್ಚಿದ ಕಸದ ಬುಟ್ಟಿಗಳಲ್ಲಿ ಕಸ ಶೇಖರಣೆ ಆಗುತ್ತಿರುವ ಕಾರಣದಿಂದ ಆಹಾರದ ಅಭಾವ ಎದುರಿಸುತ್ತಿವೆ. ಇದರ ಜೊತೆಗೆ ನಗರೀಕರಣದ ಭರದಿಂದ ಮರಗಳು ಅಭಿವೃದ್ದಿ ಕಾರ್ಯದಲ್ಲಿ ಬಲಿಯಾಗುತ್ತಿರುವ ಕಾರಣ ತಮ್ಮ ಆವಾಸ ಕಳೆದುಕೊಳ್ಳುತ್ತಿವೆ. ಇದರಿಂದ ಕಾಗೆಗಳು ನಗರ ಪ್ರದೇಶದಿಂದ ದೂರ ಸರಿದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಗರ ಪ್ರದೇಶದಲ್ಲಿ ಗಂಟಲ ಬಳಿ  ಬಿಳಿ ಬಣ್ಣ ಇರುವ ಕಾಗೆಗಳು ಕಂಡು ಬಂದರೆ, ಹಳ್ಳಿ ಪ್ರದೇಶದಲ್ಲಿ ಕಡು ಕಪ್ಪು ಬಣ್ಣದ ದೊಡ್ಡ ಗಾತ್ರದ ಕಾಗೆಗಳು ಕಂಡು ಬರುತ್ತವೆ. ಕಾ..ಕಾ.. ಎಂದು ಕೂಗುತ್ತಾ ಇರುತ್ತಿದ್ದ ಕಾಗೆಗಳು ಹಳ್ಳಿಗಾಡು ಪ್ರದೇಶದಲ್ಲಿ ಕಡಿಮೆ ಆಗಲು ಅವುಗಳು ತಿನ್ನುವ ಆಹಾರದಲ್ಲಿ ವಿಷ ವಸ್ತುಗಳು ಸೇರ್ಪಡೆ ಆಗುತ್ತಿರುವುದು ಪ್ರಮುಖ ಕಾರಣ ಎನ್ನುವುದು ಬಿ ಎನ್ ಎಚ್ ಎಸ್ (Bombay Natural History society ) ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಕಾಗೆಗಳನ್ನು ಬುದ್ಧಿವಂತ ಪಕ್ಷಿಗಳು ಎಂದೇ ಗುರುತಿಸಲಾಗುತ್ತದೆ. ಅರ್ಧದಷ್ಟು ನೀರು ತುಂಬಿದ ಹೂಜಿಗೆ ಕಲ್ಲು ಹಾಕಿ ನೀರಿನ ಮಟ್ಟ ಹೆಚ್ಚು ಮಾಡಿ ನೀರು ಕುಡಿದ ಕಾಗೆಯ ಕಥೆಯನ್ನು ಎಲ್ಲರೂ ಕೇಳಿರುತ್ತೇವೆ. ಇಂಥ ಬುದ್ಧಿವಂತಿಕೆಯ ಕಾಗೆಗೆ ಇಲಿ ಕೊಲ್ಲಲು ಬಳಕೆ ಆಗುವ ವಿಷ ಪದಾರ್ಥ ಸತ್ತ ಇಲಿಯ ಮೂಲಕ ದೇಹ ಸೇರಿದಂತೆ ಹಲವು ವಿಧದಲ್ಲಿ ಅದು ತಿನ್ನುವ ಆಹಾರದ ಮೂಲಕ ವಿಷ ದೇಹದ ಒಳಗೆ ಸೇರಿ ಸಾವಿಗೆ ಕಾರಣವಾಗುತ್ತಿದೆ. ಕೃಷಿ ಚಟುವಟಿಕೆಯ ವೇಳೆ ಬಳಕೆ ಆಗುವ ರಾಸಾಯನಿಕ ಗಳೂ ಅದರ ದೇಹ ಸೇರಿ ಅವಸಾನಕ್ಕೆ ಕಾರಣ ಆಗುತ್ತಿದೆ. ಜೊತೆಗೆ ಅವುಗಳ ಸಂಖ್ಯೆ ಕಡಿಮೆ ಆಗಲು ಕಾರಣ ಆಗುತ್ತಿದೆ.

ಕಾಗೆಗಳಿಗೆ  ಬದುಕಲು ಪ್ರತಿಕೂಲ ವಾತಾವರಣ ಹೆಚ್ಚಾದರೆ ಮುಂದೆ ಅವುಗಳು ಅಸ್ತಿತ್ವ ಕಳೆದುಕೊಂಡು ನಮ್ಮಿಂದ ದೂರ ಹೊರಟು ಹೋಗುವ ಭೀತಿ ಉಂಟಾಗಲಿದೆ. ಪಶುಗಳ ನೋವು ನಿವಾರಣೆ ಔಷಧವಾಗಿ ಬಳಕೆ ಆಗುತ್ತಿದ್ದ ಡೈ ಕ್ಲೋ ಫೈನೋಕ್  ರಾಸಾಯನಿಕ ರಣಹದ್ದುಗಳ ಸಾವಿಗೆ ಕಾರಣ ಆಗಿತ್ತು. ಪಿತೃ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಕಾಗೆಗಳು ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಿವೆ. ಮುಂದಿನ ದಿನಗಳಲ್ಲಿ ಇಂಥ ಕಾಗೆಗಳು ನಮ್ಮ ನಡುವೆ ಎಷ್ಟು ಸಮಯ ಇರುತ್ತವೆ ಎನ್ನುವುದು  ನಾವು ಅವುಗಳಿಗೆ ಇಂಥ ಪರಿಸರ ನೀಡುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿದೆ.
ಚಿತ್ರ ಬರಹ: ಅರುಣ್ ಕಿಲ್ಲೂರು.