ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ಬರಹ

ರಾಮೇಶ್ವರಂನ ರಾಮೇಶ್ವರ.

ಎಲ್ಲಿದೆ?
ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ.

ದೇವಸ್ಥಾನದ ಸ್ವರೂಪ.
೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ್ತರವಾಗಿದೆ. ಸಹಸ್ರಾರು ಕಂಬಗಳು, ಹತ್ತು ಅಂತಸ್ತುಗಳ ಮಹಾದ್ವಾರ, ಹೀಗೆ ದೇಗುಲದ ನೋಟವೇ ಭವ್ಯವಾಗಿದೆ. ಇದರ ಗೋಪುರ ಕೂಡ ೧೨೬ ಅಡಿ ಎತ್ತರವಿದೆ. ಇಲ್ಲಿ ೨೪ ತೀರ್ಥಗಳಿವೆ. ರಾಮತೀರ್ಥ, ಸೀತಾಕುಂಡ, ಲಕ್ಷ್ಮಣ ತೀರ್ಥ, ಕಪಿಲತೀರ್ಥ, ಬ್ರಹ್ಮಕುಂಡ, ಮಂಗಳತೀರ್ಥ ಮುಂತಾದ ಹೆಸರಿನ ಇವುಗಳಲ್ಲಿ ಪ್ರತಿಯೊಂದಕ್ಕೂ ಕತೆಗಳಿವೆ. ಅವೆಲ್ಲವೂ ರೋಗನಿವಾರಕ ಎಂಬುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರದಲ್ಲೇ ಪಾರ್ವತಿ ದೇವಸ್ಥಾನವಿದೆ. ಅಲ್ಲದೇ, ಸಂತಾನ ಗಣಪತಿ, ವೀರಭದ್ರ, ಹನುಮಾನ್, ನವಗ್ರಹ ಮುಂತಾದ ದೇವಸ್ಥಾನಗಳಿವೆ.

ಸ್ಥಳ ಪುರಾಣ.
ಶ್ರೀರಾಮ, ರಾವಣನನ್ನು ಸಂಹರಿಸಿದ ನಂತರ ಆತನಿಗೆ ಕಣ್ಣು ಕಾಣದಂತಾಯಿತಂತೆ. ಇದು ಬ್ರಹ್ಮಹತ್ಯಾ ದೋಷದ ಪರಿಣಾಮ ಎಂದು ತಿಳಿದು ರಾಮೇಶ್ವರದಲ್ಲಿ ಲಿಂಗವನ್ನು ಅರ್ಚಿಸಿ ಪಾಪಮುಕ್ತನಾದನೆಂಬುದು ನಂಬಿಕೆ. ಹಾಗೆಯೇ, ಇದು ಶ್ರೀರಾಮನು ರಾವಣನ ಜೊತೆಗಿನ ಯುದ್ಧಕ್ಕೆ ಮೊದಲು ಶಿವನನ್ನು ಅರ್ಚಿಸಿದ ತಾಣ ಎಂಬ ನಂಬಿಕೆ ಕೂಡ ಇದೆ. ಪವಿತ್ರವಾದ ಕಾಶಿಯಾತ್ರೆ ಮಡುವವರು ಮೊದಲು ಇಲ್ಲಿ ದರ್ಶನ ಪಡೆದು, ಇಲ್ಲಿನ ಮರಳನ್ನು ಕಾಶಿಯ ಗಂಗೆಗೆ ಅರ್ಪಿಸಿ, ಕಾಶಿಯಾತ್ರೆ ಮುಗಿಸಿ ಬಂದು ರಾಮೇಶ್ವರನಿಗೆ ಗಂಗಾಸ್ನಾನ ಮಾಡಿಸಿದಾಗಲೇ ಕಾಶಿಯಾತ್ರೆ ಪೂರ್ಣವಾಗುವುದು ಎಂಬ ನಂಬಿಕೆ ಇದೆ.


ಭೇಟಿ ನೀಡುವ ಸಮಯ.
ಮಹಾಶಿವರಾತ್ರಿ ಮತ್ತು ಆಷಾಡ ಮಾಸದ ಎರಡೂ ಚತುರ್ದಶಿಗಳಂದು ಇಲ್ಲಿ ರಥೋತ್ಸವ ನೆರವೇರುತ್ತದೆ. ಪ್ರತಿನಿತ್ಯವೂ ಬೆಳಗಿನ ಜಾವ ನಾಲ್ಕು ಘಂಟೆಯಿಂದ ರಾತ್ರಿ ಹತ್ತು ಘಂಟೆಯವರೆಗೂ ನಿರಂತರವಾಗಿ ಇಲ್ಲಿ ವಿಶೇಷ ಪೂಜೆ ನಡೆಯುತ್ತಲೇ ಇರುತ್ತದೆ.

ಸೇರುವ ಬಗೆ.
ಬೆಂಗಳೂರಿನಿಂದ ರಾಮೇಶ್ವರಂಗೆ ನೇರವಾದ ರೈಲು ಸೊಲಭ್ಯವಿದೆ. ರಾಮೇಶ್ವರಂ ದಕ್ಷಿಣ ರೈಲ್ವೆಯ ಕಟ್ಟಕಡೆಯ ನಿಲ್ದಾಣ.
ಚೆನ್ನೈ ಇಂದ (೫೬೦ ಕಿ. ಮೀ.), ಮಧುರೈ ಇಂದ (೧೬೦ ಕಿ. ಮೀ.) ದೇವೀಪಟ್ಟಣದಿಂದ ಮಂಟಪಂ ವರೆಗೆ (೫೦ ಕಿ. ಮೀ.) ಹೇರಳವಾದ ಬಸ್ ಸೌಲಭ್ಯವಿದೆ.

ವಸತಿ.
ರಾಮೇಶ್ವರಂ ಟೂರಿಸ್ಟ್ ಆಫೀಸ್ ಮುಖ್ಯವಾದ ವಸತಿ ಕೇಂದ್ರ. ಉಡುಪಿ ಛತ್ರ, ರೈಲ್ವೇ ಹಾಲ್ಟಿಂಗ್ ರೂಂ, ಟಿ. ಟಿ. ಡಿ. ಸಿ. ಹೋಟೆಲ್, ತಮಿಳುನಾಡು ಸರ್ಕಾರದ ಅತಿಥಿಗೃಹ ಸೇರಿದಂತೆ ಉತ್ತಮ ವಸತಿ ಗೃಹಗಳಿವೆ.

--------------------------------------------
ಚಿತ್ರ ಕೃಪೆ: www.skyscrapercity.com