ಹರಕೆಯ ಕುರಿ !

ಹರಕೆಯ ಕುರಿ !

ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ
ಅಧರದ ಸುವಾಸನೆ ಆಘ್ರಾಣಿಸುತ್ತ
ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು
ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
 
ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ
ನೋಡ್ಕೊಂಡೇ ಇಹವ ಮರೆತು ಸಾಗುತ್ತ
ಬೈಕನ್ನು ಕಸದ ತೊಟ್ಟಿಯಲಿ ನುಗ್ಗಿಸಿ
ಕಸಾಭಿಷೇಕ ಮಾಡಿಸ್ಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
 
ಹೂದೋಟದ  ಹೂವಿನ ಹಾಗೆ ನಿಂತಿದ್ದ ನಿನ್ನ
ನೋಡ್ಕೊಂಡೇ ಸಾಗಿದ್ದೆ ರೋಡಲ್ಲಿ ನಾನು
whole universe’ನಲ್ಲಿ ನೀನೇ ಸುಂದರಿ ಎಂದುಕೊಳ್ಳುತ್ತ
ಮ್ಯಾನ್-ಹೋಲ್’ನಲ್ಲಿ ಕಾಲಿಟ್ಟು ಮುರ್ಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
 
ದಟ್ಟ ಕರಿ ತಲೆಗೂದಲ ಹೊತ್ತಿಹ ನಿನ್ನ
ತುರುಬಿಗೆ ಹೂವನಲಂಕರಿಸಲು ಬಂದ ನಾನು
ಎದುರು ಸೀಟಿನ ಹೆಣ್ಣ ತುರುಬ ಪಿಡಿದು
ಕೆನ್ನೆಗೆ ಹೊಡೆಸಿಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
 
ಕನಸು ಮನಸಿನಲಿ ತುಂಬಿಕೊಂಡಿದ್ದೆ ನೀನು
ನಿನ್ನನ್ನೇ ಮದುವೆ ಆಗಬೇಕೆಂದಿದ್ದೆ ನಾನು
ಬೆನ್ನಲ್ಲಿ ಬಿದ್ದ ತಂಗಿಯಿದ್ದಳು ಮದುವೆಗೆ
ಅವಳನು ಒಳ್ಳೆಯ ಮನೆಗೆ ಸೇರಿಸಬೇಕಿತ್ತೆನಗೆ
ಕೊಟ್ಟು-ತೊಗೊಳ್ತೀವಿ ಬ್ಯಾಡ ವರದಕ್ಷಿಣೆ ಎಂದಾಗ
ವಿಧಿಯಿಲ್ಲದೆ ಹೂಗುಟ್ಟಿದ್ದು ನಾನೇ ಕಣೆ
ನನ್ನವಳಾಗದ ಚೆಲುವೆ ನೀನೇ ಕಣೆ
ಕೆಟ್ಟ ವ್ಯವಸ್ಥೆಯ ಹರಕೆಯ ಕುರಿ ನಾನೇ ಕಣೆ
 

Comments

Submitted by sathishnasa Fri, 02/08/2013 - 10:23

ಹ್ಹ...ಹ್ಹ...ಹ್ಹ....ಹ್ಹ ಚನ್ನಾಗಿದೆ ಕವನ ಭಲ್ಲೆಯವರೇ ನಿಮ್ಮ ಸ್ನೇಹಿತ ಸುಬ್ಬನನ್ನು ಜ್ಞಾಪಿಸಿತು ಆದರೆ ಕಡೆಯಲ್ಲಿ ಹರಕೆಯ ಕುರಿಯಾಗಿದ್ದಕ್ಕೆ ಬೇಜಾರಾಯಿತು ......ಸತೀಶ್
Submitted by bhalle Fri, 02/08/2013 - 17:13

In reply to by sathishnasa

ಮೊದಲಿಗೆ ಸಂಪೂರ್ಣ ಹಾಸ್ಯವೇ ಬರೆಯಬೇಕೆಂಬ ಇರಾದೆ ಇತ್ತು ಹಾಗಾಗಿ ಸುಬ್ಬ ನೆರಳು ಕವನದ ಮೇಲೆ ಬಿತ್ತು ... ಆಮೇಲೆ ಒಂದು ಪುಟ್ಟ ಮೆಸೇಜ್ ಹಾಕುವಾ ಎನ್ನಿಸಿ ಗಂಭೀರವಾಯಿತು. ಧನ್ಯವಾದಗಳು ಸತೀಶ್ ...
Submitted by venkatb83 Fri, 02/08/2013 - 18:51

ಭಲ್ಲೆ ಅವರೇ-ಅಂತೂ ಬಹಳ ದಿನಗಳ ನಂತರ ಧೈರ್ಯ ಮಾಡಿರುವಿರಿ ..!! ಶೀರ್ಷಿಕೆ ನೋಡಿ ಹಾಸ್ಯ ಬರಹ ಎಂದುಕೊಂಡೆ(ಗದ್ಯ ರೂಪದ್ದು) ಆದರಿದು ಪದ್ಯ..!ಸಖತ್ ಮಾರಾರೆ..!! ಇದು ಸಾಮಾನ್ಯಾಗಿ 'ಅವರೆಲ್ಲರೂ ' ಹಾಡುವ ಹಾಡು ಅನ್ಸುತ್ತಿದೆ..!! ಮುಸ್ಸಂಜೇಲಿ ಬಿದ್ದ ಸಣ್ಣ ಮಳೆ ಮತ್ತು ನಿಮ್ಮೀ ಪದ್ಯ ಸಖತ್ ಮುದ ನೀಡಿತು..!! ಶುಭವಾಗಲಿ. \।
Submitted by bhalle Fri, 02/08/2013 - 22:57

In reply to by venkatb83

ಹುಡುಗಿ ಹಿಂದೆ ಹೋಗೋ ಧೈರ್ಯ ಮಾಡಿದೆನೋ ಅಥವಾ ಕವನ ಬರೆಯಲು ಧೈರ್ಯ ಮಾಡಿದೆನೋ, ನಿಮ್ಮ ಮಾತಿನಲ್ಲಿ ಅರ್ಥವಾಗಲಿಲ್ಲ :-( ಹಾಸ್ಯದ ಹಾದಿಯಲ್ಲೇ ಸಾಗಿ ಸಡನ್ನಾಗಿ ಗಂಭೀರದ ಮಾರ್ಗ ಹೊಕ್ಕೆ ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Submitted by ಗಣೇಶ Sat, 02/09/2013 - 00:33

ಭಲ್ಲೇಜಿ, ನಿಮ್ಮ ಅವಸ್ಥೇನೇ ನಮ್ಮದೂ.. ಖುಷಿಯಲ್ಲಿ ಓದುತ್ತಾ ಬಂದು ಕೊನೆಯಲ್ಲಿ ಮ್ಯಾನ್ ಹೋಲ್ನಲ್ಲಿ/ಕಸದರಾಶಿಯಲ್ಲಿ ಬಿದ್ದಹಾಗೆ ಆಯಿತು.:) :)
Submitted by bhalle Sat, 02/09/2013 - 00:53

In reply to by ಗಣೇಶ

ಗಣೇಶ್'ಜಿ ನಿಮ್ಮ ಅವಾಂತರ ಅರಿಯದವರಾರು ? ಚೆನ್ನಾಗಿ ಉಂಡು ವಾಹನದ ಮೇಲೆ ವಾಕಿಂಗ್ ಹೊರಟು, ಚಂದ್ರಮುಖಿಯನ್ನು ಕಂಡು ಎಡವಿ ಬಿದ್ದು, ಹಾವನ್ನೇ ಬೆಲ್ಟ್'ಆಗಿಸಿಕೊಂಡಿದ್ದು :-) ನಿಮ್ಮಷ್ಟು ಹೀರೋಯಿಸಂ ನಮ್ಮದಲ್ಲ :-))) ಹೌದು, ಕವನ ಕಡೆಯಲ್ಲಿ ಯು-ಟರ್ನ್ ತೆಗೆದುಕೊಂಡಿತು !
Submitted by ಗಣೇಶ Sun, 02/10/2013 - 08:26

In reply to by bhalle

>>...ಚಂದ್ರಮುಖಿಯನ್ನು ಕಂಡು ಎಡವಿ ಬಿದ್ದು, ಹಾವನ್ನೇ ಬೆಲ್ಟ್'ಆಗಿಸಿಕೊಂಡಿದ್ದು :-)...---ಅಲ್ಲಿಂದ ನಂತರ ಚಂದ್ರಮುಖಿಯರು ಶೂರ್ಪನಖಿಯರಂತೆ ಕಾಣಿಸುತ್ತಿದ್ದಾರೆ ನನಗೆ. :( ಇಷ್ಟೆಲ್ಲಾ ತೊಂದರೆ ಆದ ಮೇಲೂ ನೀವು ಇನ್ನೂ "ಸುಂದರಿ ಸುಂದರಿ" ಅಂತಾನೆ ಅವರ ಹಿಂದೆ ಬಿದ್ದಿದ್ದೀರಲ್ಲಾ..:)
Submitted by bhalle Sun, 02/10/2013 - 23:00

In reply to by ಗಣೇಶ

ಖಾರ ತಿಂದು ಮೂಗಲ್ಲಿ ನೀರು ಸುರಿದರೂ ಖಾರ ನಮಗೆ ಸಲ್ಲುವಂತೆ, ಹುಳಿ ತಿಂದಾಗ ಚುಳ್ಳೆಂದರೂ ಸವಿಯಾಗುವಂತೆ, ತೊಂದರಿ ಆದರೂ ಅವಳು ಎನ್ ಸುಂದರಿ :-)))))
Submitted by partha1059 Sat, 02/09/2013 - 08:16

ಕಡೆಯ‌ ಬಾಗ‌ ಪದ್ಯವಷ್ಟೆ ಆಗಿರಲಿ ಇಲ್ಲದಿದ್ದಲ್ಲಿ ನಿಮ್ಮವರು ಆಗುವರು ಮಾರಿ ಆದರು ಮೊದಲ‌ ಪದ್ಯದ‌ ಈ ಬಾಗ‌ ಅರ್ಥವಾಗಲಿಲ್ಲ ಅಧರದ ಸುವಾಸನೆ ಆಘ್ರಾಣಿಸುತ್ತ ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು
Submitted by bhalle Sat, 02/09/2013 - 21:38

In reply to by partha1059

ನಮ್ಮವರು ಮಾರಿ ಆಗಬಹುದು ಅಥವ 'ಮಾರಿ' ಆಗಬಹುದು ಲೇಡಿ ಹರಿಶ್ಚಂದ್ರ ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು ಆಘ್ರಾಣಿಸುತ್ತ, 'ಮನದಲ್ಲಿ' ಪ್ರೇಯಸಿಯನ್ನು ಅಪ್ಪಿ ಹಿಡಿದು ಅವಳ ಅಧರದ ಸುವಾಸನೆಯಬ್ಬೇ ಹೀರುತ್ತಿರುವೆನೇನೋ ಅನ್ನಿಸಿದಾಗ ಕಡಿದಿದ್ದು ಅವಳಲ್ಲ, ದುಂಬಿ ಸಾಲುಗಳಲ್ಲಿ ಏನಾದರೂ ಎಡವಟ್ಟಾಗಿದೆಯೇ ಪಾರ್ಥರೇ?
Submitted by kavinagaraj Sat, 02/09/2013 - 19:45

ಯಾರವಳು ಯಾರವಳು, ದುಂಬಿಯಿಂದ ಕಡಿಸಿದವಳು; ಯಾ..ಯಾ..ಕಸದ ತೊಟ್ಟಿಯಲಿ ಬೀಳಿಸಿದವಳು; ಯಾ..ಯಾ.. ಮ್ಯಾನ್ ಹೋಲಿಗೆ ಹಾಕಿದವಳು; ಯಾ..ಯಾ.. ಕೆನ್ನೆಗೇಟು ಕೊಡಿಸಿದವಳು; ನೀನಂತು ಅಲ್ಲ ಕಣೆ ನಾನು ತಾಳಿ ಕಟ್ಟಿದವಳು!!! :))