ಹಳೆಯ ಬೋರ್ ವೆಲ್ ರಿ-ಡ್ರಿಲ್ಲಿಂಗ್ ಲಾಭದಾಯಕವೇ?
ಹಿಂದೆ ಡ್ರಿಲ್ ಮಾಡಲಾದ ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಛೆ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು ಸಿಕ್ಕರೆ ಅದು ಲಾಭ. ಹೇಗೂ ೨೫೦-೩೦೦ ಅಡಿ ಕೊರೆದು ಆಗಿದೆ. ಇನ್ನು ಸ್ವಲ್ಪ ತೋಡಿದರೆ ಖರ್ಚು ಕಡಿಮೆ, ರಿಸ್ಕ್ ಸಹ ಕಡಿಮೆ ಎಂಬುದು ರೈತರ ತರ್ಕ. ಈ ಬಗ್ಗೆ ಬೋರ್ ವೆಲ್ ಡ್ರಿಲ್ಲಿಂಗ್ ಮತ್ತು ಜಲಶೋಧನೆಯಲ್ಲಿ 30 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಕಡಬ ಕೋಡಿಂಬಾಳದ ಗಣಪತಿ ಭಟ್ ಇವರ ಅಭಿಪ್ರಾಯಗಳನ್ನು ತಿಳಿಯೋಣ.
ಹಿಂದೆ ನಮ್ಮಲ್ಲಿ ಕೊಳವೆ ಬಾವಿ ಕೊರೆದಾಗ ಬಹಳ ಬೇಗ ನೀರು ನೀರು ಸಿಗುತ್ತಿತ್ತು. ಹೆಚ್ಚೆಂದರೆ ೨೦೦-೨೫೦ ಅಡಿ ತೋಡಿದಾಗ ಧಾರಾಳ ನೀರು ಸಿಗುತ್ತಿತ್ತು. ಇನ್ನು ಆಳಕ್ಕೆ ಡ್ರಿಲ್ಲಿಂಗ್ ಮಾಡುವುದು ಬೇಡ ಎಂದು ಬೋರ್ ವೆಲ್ ಕೊರೆಸುವವರು ಸಲಹೆ ನೀಡಿ ಗ್ರಾಹಕರನ್ನು ಸಂತೋಷ ಪಡಿಸುತ್ತಿದ್ದರು. ಅಂತಹ ಹಲವಾರು ಬಾವಿಗಳು ನಮ್ಮಲ್ಲಿ ಇವೆ. ಆದರೆ ಈಗ ನೀರಿನ ಇಳುವರಿ ಕಡಿಮೆಯಾಗಿವೆ, ಈ ಬಾವಿಯ ಮೇಲೆ ರೈತರಿಗೆ ಭಾವನಾತ್ಮಕ ಸಂಬಂಧ. ಇದನ್ನು ಉಳಿಸಿಕೊಳ್ಳಬೇಕು.ಅದನ್ನೇ ಆಳ ಮಾಡಿ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ರೈತರ ಈ ಭಾವನಾತ್ಮಕ ಸಂಬಂಧ ಎಷ್ಟೇ ಇದ್ದರೂ ರೀಡ್ರಿಲ್ಲಿಂಗ್ ಎಂಬುದು ಮಾತ್ರ ಅವರಿಗೆ ಬಹಳ ದುಬಾರಿಯೇ. ಯಾಕೆ?
ಹಳೆಯ ಬೋರ್ ಬೆಲೆ ರಿಪೇರಿ ಹೇಗೆ? : ಹಿಂದೆ ಅಂದರೆ ಸುಮಾರು ೧೫-೨೦-೨೫ ವರ್ಷಗಳ ಹಿಂದೆ ತೋಡಿದ ಬಾವಿಗಳಲ್ಲಿ ಆಳ ಮಾಡಿದರೆ ನೀರಿನ ಮೂಲ ಇರಬಹುದು. ಇದನ್ನೇ ಮರು ಕೊರೆಯುವುದರಿಂದ ನೀರು ಹೆಚ್ಚು ಸಿಗುತ್ತದೆ ಎಂಬ ರೈತರ ತಿಳುವಳಿಕೆಯಲ್ಲೂ ತಪ್ಪಿಲ್ಲ. ಇದನ್ನು ರ್ರೀ ಡ್ರಿಲ್ಲಿಂಗ್ ಮಾಡಬೇಕಾದರೆ ತುಂಬಾ ಕಷ್ಟ ಇದೆ. ಹಿಂದೆ ಕೊಳವೆ ಬಾವಿಯ ಕೇಸಿಂಗ್ ಮೆದು ಕಬ್ಬಿಣದ್ದು (MS Mild steel) ನದ್ದು ಹಾಕಿದ್ದರೆ ಅದು ತುಕ್ಕು ಹಿಡಿದು ಹಾಳಾಗಿರುವ ಸಾಧ್ಯತೆಯೂ ಇದೆ. ಹಿಂದೆ ತೋಡುತ್ತಿದ್ದ ಬೋರ್ ವೆಲ್ ಗಳು ೬ ಇಂಚಿನವು. ೮ ಇಂಚು ಮಣ್ಣು ಕೊರೆದು ೬ ಇಂಚಿನ ಕೇಸಿಂಗ್ ಆಳವಡಿಸಲಾಗುತ್ತಿತ್ತು. ಆಗ ಅದಕ್ಕೆ ಡ್ರಿಲಿಂಗ್ ಬಿಟ್ ೬ ಇಂಚು ಇರುತ್ತಿತ್ತು. ಆ ಡ್ರಿಲ್ಲಿಂಗ್ ಬಿಟ್ ಈಗ ಚಾಲ್ತಿಯಲ್ಲಿಲ್ಲ. ಈಗ ೯ ಇಂಚು ಮಣ್ಣಿನಲ್ಲಿ ಕೊರೆದು ೬.೫ ಇಂಚಿನ ಕೇಸಿಂಗ್ ಅಳವಡಿಸಲಾಗುತ್ತದೆ. ಈಗ ಡ್ರಿಲ್ಲಿಂಗ್ ಬಿಟ್ ಸಹ ೬.೫ ಇಂಚು ಆಗಿರುತ್ತದೆ. ಹಾಗಾಗಿ ಹಳೆಯ ಅಳತೆಗೆ ರಿ-ಡ್ರಿಲ್ಲಿಂಗ್ ಆಗುವುದಿಲ್ಲ. ಒಂದು ವೇಳೆ ಯಾರಲ್ಲಿಯಾದರೂ ಹಳೆಯ ಬಿಟ್ ಇದ್ದರೂ ಸಹ ಅದನ್ನು ಹುಡುಕುವುದು ಮತ್ತು ಅದನ್ನು ತರಿಸುವುದು ಬಹಳ ದುಬಾರಿ ಮತ್ತು ಕಿರಿಕಿರಿ. ಕೇಸಿಂಗ್ ಪೈಪು ಏನಾದರೂ ತುಕ್ಕು ಹಿಡಿದಿದ್ದರೆ, ಅಥವಾ ವೆಲ್ಡ್ ಮಾಡಿದಲ್ಲಿ ಅಥವಾ ಕಪ್ಲಿಂಗ್ ಹಾಕಿದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಎಳೆಯುವಾಗ ಅದು ತುಂಡಾಗಬಹುದು. ಕೇಸಿಂಗ್ ಪೈಪು ಒಳಗಡೆ ತುಂಡಾಗಿ ಸಿಕ್ಕಿ ಹಾಕಿಕೊಂಡರೆ ಅದನ್ನು ತೆಗೆಯಲಿಕ್ಕೆ ಆಗುವುದಿಲ್ಲ. ಇಂತದ್ದು ಆದರೆ ಮತ್ತೆ ಡ್ರಿಲ್ಲಿಂಗ್ ಮಾಡಲಿಕ್ಕೆ ಆಗುವುದಿಲ್ಲ.
ಸುಲಲಿತವಾಗಿ ಕೇಸಿಂಗ್ ಪೈಪು ಎಳೆಯಲು ಬಂದರೆ?: ಕೆಲವೊಮ್ಮೆ ನೀರಿನ ಗುಣದ ಮೇಲೆ ಅಥವಾ ಬಹಳ ಕಡಿಮೆ ಕೇಸಿಂಗ್ ಹಾಕಿದಲ್ಲಿ ಕೇಸಿಂಗ್ ಪೈಪು ಎಳೆಯಲು ಬರಬಹುದು. ಬಂದರೆ ಮತ್ತೆ ಡ್ರಿಲ್ಲಿಂಗ್ ಮಾಡುವುದು ಸುಲಭವಲ್ಲವೇ ಎಂಬ ಪ್ರಶ್ನೆ ಇರುತ್ತದೆ. ಹಾಗೇನಿಲ್ಲ. ಒಂದು ವೇಳೆ ಕೇಸಿಂಗ್ ಪೈಪು ತೆಗೆಯಲಿಕ್ಕೆ ಬಂದರೂ ಸಹ ಮತ್ತೆ ಡ್ರಿಲ್ಲಿಂಗ್ ಮಾಡುವುದು ಕಷ್ಟ. ಡ್ರಿಲ್ಲಿಂಗ್ ಮಾಡುವಾಗ ಈಗಿನ ಬಿಟ್ ಉಪಯೋಗಿಸಬೇಕಾಗುತ್ತದೆ. ಈಗ ಬರುವ ಬಿಟ್ ೬.೫ ಇಂಚಿನದ್ದು. ಅರ್ಧ ಇಂಚು ಪ್ರಾರಂಭದಿಂದಲೇ ಕೊರೆಯುತ್ತಾ ಆಳಕ್ಕೆ ಹೋಗಬೇಕಾಗುತ್ತದೆ. ಆದ ಕಾರಣ ರಿ ಡ್ರಿಲ್ಲಿಂಗ್ ಎಂಬ ಶಬ್ಧಕ್ಕೆ ಇಲ್ಲಿ ಅರ್ಥವೇ ಇರುವುದಿಲ್ಲ. ಅದು ಹೊಸ ಕೊಳವೆ ಬಾವಿ ತೋಡಿದಂತೆ. ಎಷ್ಟು ಆಳದ ತನಕ ತೋಡಲಾಗಿದೆಯೋ ಅಷ್ಟರ ತನಕ ಈಗ ಚಾಲ್ತಿಯಲ್ಲಿರುವ ಅಡಿ ಲೆಕ್ಕಾಚಾರದ ದರವೇ ಇರುತ್ತದೆ. ಕೇಸಿಂಗ್ ಪೈಪ್ ಸಹ ಬೇರೆಯೇ ಆಗಬೇಕಾಗುತ್ತದೆ. ೩೦೦ ಅಡಿಯ ನಂತರ ಪ್ರತೀ ೧೦೦ ಅಡಿಯಂತೆ ಏರಿಕೆಯ ದರ ಸೇರಲ್ಪಡುತ್ತದೆ. ಆಗ ಅದು ಹೊಸ ಬಾವಿ ತೋಡಿದಂತೆ ಆಗುತ್ತದೆ.
ಹಳೆಯ ಬಾವಿಗಿಂತ ಹೊಸ ಬಾವಿ ಕೊರೆಯುವುದೇ ಉತ್ತಮ: ರೈತರು ಕೊಳವೆ ಬಾವಿ ತೋಡುವುದು ಉತ್ತಮ ನೀರು ಸಿಗಬೇಕು, ಪಂಪು ಹಾಕಿ ತೋಟ/ ಕೃಷಿ ಮಾಡಬೇಕು, ಆ ಮೂಲಕ ಸಂಪಾದನೆ ಮಾಡಬೇಕು ಎಂಬ ಉದ್ದೇಶದಿಂದ. ಅದರೆ ಡ್ರಿಲ್ ಮಾಡುವವರಿಗೆ ಡ್ರಿಲ್ ಆಗಬೇಕು, ಅದಕ್ಕೆ ಒಂದು ಜಾಗ ಸಿಗಬೇಕು. ಡ್ರಿಲ್ ಆದ ತಕ್ಷಣ ಹಣ ಸಿಗಬೇಕು ಇದು ಅವರ ಉದ್ದೇಶ. ಹಳೆಯ ಬಾವಿಯ ನೀರಿನ ಮೂಲ ಎಷ್ಟೇ ಉತ್ತಮ ಇರಲಿ, ಅದನ್ನು ಮತ್ತೆ ಡ್ರಿಲ್ಲಿಂಗ್ ಮಾಡಬೇಕಾದರೆ ಡ್ರಿಲ್ಲರು ಗಳು ಸಿಗುವುದೇ ಕಷ್ಟ. ಸಿಕ್ಕಿದರೂ ಮೇಲೆ ಹೇಳಿದಂತೆ ದರ ಹೊಸತಕ್ಕೂ ಇದಕ್ಕೂ ಏನೂ ಕಡಿಮೆ ಇಲ್ಲ. ಹಳೆಯ ಬೋರಿನ ಪಕ್ಕದಲ್ಲೇ ಬೇರೆ ಬೋರ್ ಮಾಡಿದರೂ ಹೆಚ್ಚಿನ ಸಂಧರ್ಭಗಳಲ್ಲಿ ಉತ್ತಮ ನೀರಿನ ಇಳುವರಿ ಸಿಗುತ್ತದೆ. ಹೊಸತಾಗಿ ಬಾವಿ ತೋಡಿದಾಗ ಉತ್ತಮ ಜಲ ಶೋಧಕರಿದ್ದರೆ ಹಿಂದಿನದ್ದಕ್ಕಿಂತ ಉತ್ತಮ ನೀರಿನ ಇಳುವರಿ ಸಿಗಬಹುದು. ಹಾಗೆಯೇ ಹಿಂದಿನಂತೆ ಈಗ ಕಬ್ಬಿಣ ಅಥವಾ ಗ್ಯಾಲ್ವನೈಸ್ಡ್ ಪೈಪ್ ಹಾಕುವ ಬದಲು ಉತ್ತಮ ಗುಣಮಟ್ಟದ PVC ಅಥವಾ UPVC ಪೈಪು ಹಾಕಬಹುದು.
ಒಂದು ವೇಳೆ ಹಳೆಯ ಕೊಳವೆ ಬಾವಿಯನ್ನು ರಿ ಡ್ರಿಲ್ಲಿಂಗ್ ಮಾಡಬೇಕಾದರೆ ಈ ಹಿಂದೆ ಹಾಕಿದ ಬಿಟ್ ನ ಅಳತೆಯನ್ನು ನಾವು ತೋಡಿದ ಸಮಯದಲ್ಲೇ ಡ್ರಿಲ್ ಮಾಡುವವರಿಂದ ತಿಳಿದುಕೊಂಡಿರಬೇಕು. ಆ ಅಳತೆಯ ಬಿಟ್ ಸಿಕ್ಕಿದರೆ ಅದರಲ್ಲಿ ತೋಡಬಹುದು. ಆದರೆ ಫ್ಲಷ್ ಮಾಡುವ ದರ ಬೀಳುತ್ತದೆ. ಅಪರೂಪದಲ್ಲಿ ಕೆಲವೊಮ್ಮೆ ಡ್ರಿಲ್ಲಿಂಗ್ ಮಾಡುವ ಲಾರಿಗಳಿಗೆ ಕೆಲಸ ಕಡಿಮೆ ಇದ್ದ ಸಮಯದಲ್ಲಿ ಈ ಕೆಲಸವನ್ನು ಮಾಡಿಸಲಿಕ್ಕಾಗುತ್ತದೆ. ಅದೂ ತೀರಾ ಹಳೆಯ ಬೋರ್ ಗಳಿಗೆ ಆಗುವುದು ಕಷ್ಟ. ಇತ್ತೀಚೆಗಿನ ಬೋರ್ ಗಳಾದರೆ ಆಗಲೂಬಹುದು.ತುಂಬಾ ಸೆಂಟಿ ಮೆಂಟ್ ಹಾಗೂ ಖರ್ಚಿನ ಪ್ರಶ್ನೆಯೇ ಇಲ್ಲ ಎಂಬ ಮನೋಭಾವದರು ರಿ ಡ್ರಿಲ್ಲಿಂಗ್ ಮಾಡಬಹುದು. ಹಳೆಯ ಬೋರ್ ರಿಪೇರಿ ಮಾಡಿಸುವ ಬದಲು ಬರುವಷ್ಟೂ ಸಮಯ ಅದನ್ನು ಹಾಗೆಯೇ ಉಳಿಸಿಕೊಂಡು ಅದರಲ್ಲಿ ಬರುವ ನೀರನ್ನು ಕೆರೆಗೆ ಹಾಕಿ ಬಲಸಿಕೊಳ್ಳುವುದು ಉತ್ತಮ.
ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ