ಹಳೆಯ ವಾಹನ ಖರೀದಿಸುತ್ತಿದ್ದೀರಾ...?
ಎಲ್ಲರಿಗೂ ತಮ್ಮದೇ ಆದ ಸ್ವಂತ ವಾಹನ ಖರೀದಿಸುವ ಕನಸು ಇದ್ದೇ ಇರುತ್ತದೆ. ಬಸ್, ರಿಕ್ಷಾಗಳಲ್ಲಿ ಹೋಗುವ ಕಷ್ಟಕ್ಕಿಂತ ತಮ್ಮದೇ ಆದ ಸ್ವಂತ ವಾಹನವೊಂದಿದ್ದರೆ ನಮಗೆ ಬೇಕಾದ ಹಾಗೆ ಹೋಗಬಹುದಲ್ವಾ? ಎನ್ನುವುದು ಎಲ್ಲರ ಯೋಚನೆ. ಹೊಸ ವಾಹನ ಖರೀದಿ ಈಗ ಮೊದಲಿಗಿಂತಲೂ ಸುಲಭ. ನಿಮಗೆ ಬೇಕಾದ ಆಯ್ಕೆಯ ಸಾಲ ಮರುಪಾವತಿಯ ಯೋಜನಾ ಅವಧಿಯನ್ನು ನೀಡುವ ಸಂಸ್ಥೆಗಳು, ಬ್ಯಾಂಕ್ ಗಳು ಇವೆ. ಆದರೆ ಹಲವಾರು ಮಂದಿಗೆ ಹೊಸ ವಾಹನ ಖರೀದಿ ಸ್ವಲ್ಪ ದುಬಾರಿಯೆನಿಸುತ್ತದೆ. ಅದಕ್ಕಾಗಿ ಅವರು ಹಳೆಯ ವಾಹನ (ಸೆಕೆಂಡ್ ಹ್ಯಾಂಡ್) ವನ್ನು ಖರೀದಿಸುತ್ತಾರೆ. ಹಳೆಯ ವಾಹನ ಖರೀದಿ ಸಮಯದಲ್ಲಿ ನಾವು ಹಲವಾರು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಖರೀದಿಸಿದ ಬಳಿಕ ಆ ಭಾಗ ಸರಿಯಿಲ್ಲ, ಅದರ ದಾಖಲೆ ಸರಿಯಿಲ್ಲ ಎಂದು ಚಿಂತೆ ಮಾಡಿ ಕುಳಿತುಕೊಳ್ಳಬಾರದಲ್ವಾ? ಅದಕ್ಕಾಗಿ ಸ್ವಲ್ಪ ಟಿಪ್ಸ್ ಗಳು ನಿಮಗಾಗಿ…
ಕಾರ್ ಅಥವಾ ಬೈಕ್ ಆಯ್ಕೆ: ಮೊದಲಿಗೆ ನೀವು ನಿಮಗೆ ಬೇಕಾದ ವಾಹನ ಯಾವುದು ಎಂಬ ಸ್ಪಷ್ಟವಾದ ಕಲ್ಪನೆ ಇರಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಬಜೆಟ್ ದ್ವಿಚಕ್ರ ವಾಹನಕ್ಕೆ ಹೊಂದಿಕೊಳ್ಳುವುದಾದರೆ ಅದನ್ನೇ ಖರೀದಿಸಿ. ಸುಮ್ಮನೇ ಕಾರು ಖರೀದಿಸಿ ನಂತರ ಹಣಕ್ಕಾಗಿ ಪರದಾಟ ಮಾಡುವುದು ಸರಿಯೆನಿಸದು. ಈಗ ಹಲವಾರು ಹಳೆಯ ವಾಹನ ಮಾರಾಟಗಾರರು (ನೋಂದಾಯಿತ) ಇದ್ದಾರೆ. ಅವರ ಮೂಲಕ ಅಥವಾ ನಿಮ್ಮ ಆತ್ಮೀಯ ಪರಿಚಿತರಿಂದಲೇ ವಾಹನ ಖರೀದಿ ಮಾಡಿ.
ಕಾರ್ ಅಥವಾ ಬೈಕ್ ಖರೀದಿ ಮಾಡುವಾಗ ಮೊದಲ ಮಾಲಕ ಅಂದರೆ ಸಿಂಗಲ್ ಓನರ್ ಆಗಿದ್ದರೆ ಬಹಳ ಉತ್ತಮ. ಆಗ ಆ ಕಾರು ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆ ಅಧಿಕ. ನೀವು ಖರೀದಿಸ ಬಯಸುವ ಕಾರು ಹಿಂದೆ ಟ್ಯಾಕ್ಸಿ ಆಗಿತ್ತೇ ಎನ್ನುವ ಬಗ್ಗೆ ಗಮನಿಸಿ. ಏಕೆಂದರೆ ಟ್ಯಾಕ್ಸಿಯಾಗಿ ಓಡಾಟ ನಡೆಸುತ್ತಿದ್ದರೆ ತುಂಬಾ ಕಿಲೋ ಮೀಟರ್ ಓಡಿರುತ್ತದೆ ಹಾಗೂ ಸರಿಯಾದ ನಿರ್ವಹಣೆಯೂ (Maintenance) ಇರುವುದಿಲ್ಲ.
ದಾಖಲೆಗಳ ಪರಿಶೀಲನೆ: ಯಾವುದೇ ವಾಹನ ಖರೀದಿಯ ಸಮಯದಲ್ಲಿ ಆ ವಾಹನದ ದಾಖಲೆಗಳ ಪರಿಶೀಲನೆ ಅತ್ಯಂತ ಮುಖ್ಯ. ಪ್ರಮುಖವಾಗಿ ಖರೀದಿಸಿದ ಸಮಯದ ಬಿಲ್ ಪಾವತಿ ದಾಖಲೆ, ಮಾಲಕರ ದಾಖಲಾತಿ ಪುಸ್ತಕ (Manual), ನಿರ್ವಹಣಾ ದಾಖಲಾತಿ (Service Book), ನೋಂದಣಿಯ ಪುಸ್ತಕ (RC book), ಜೀವಮಾನದ ತೆರಿಗೆ ಪಾವತಿಯ ದಾಖಲೆ (Lifetime Tax record), ವಾಹನ ವಿಮಾ ಪಾಲಿಸಿ, ವಾಯುಮಾಲಿನ್ಯದ ದಾಖಲೆ ಇವೆಲ್ಲಾ ಇರಲೇ ಬೇಕು. ಇದರ ಜೊತೆ ಈ ವಾಹನದ ಮೇಲೆ ಯಾವುದಾದರೂ ಪೋಲೀಸ್ ಕೇಸ್ ಅಥವಾ ಚಲಾವಣೆಯ ಸಮಯದಲ್ಲಿನ ಕೇಸ್ ಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕಾದುದು ಅತ್ಯಗತ್ಯ.
ಖರೀದಿ ಸಮಯ: ಯಾವ ಸಮಯ (ತಿಂಗಳು) ದಲ್ಲಿ ನೊಂದಾವಣೆಯಾದ ವಾಹನವನ್ನು ಖರೀದಿಸಬೇಕು? ಏಕೆಂದರೆ ಉದಾಹರಣೆಗೆ ನೀವು ಖರೀದಿಸುತ್ತಿರುವ ಕಾರು ಡಿಸೆಂಬರ್ ೨೦೨೦ ತಿಂಗಳಲ್ಲಿ ನೊಂದಾವಣೆಯಾದರೆ ಅದಕ್ಕೆ ಮಾರ್ಕೆಟ್ ದರ ಕಮ್ಮಿಯಾಗಿರುತ್ತದೆ. ಅದೇ ಕಾರು ಜನವರಿ ೨೦೨೧ರಲ್ಲಿ ನೋಂದಣಿಯಾಗಿದ್ದರೆ ಅದಕ್ಕೆ ದರ ಅಧಿಕವಾಗಿರುತ್ತದೆ. ಇಲ್ಲಿ ವ್ಯತ್ಯಾಸವಿರುವುದು ಕೇವಲ ಒಂದು ತಿಂಗಳು. ಆದರೆ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸವಿರುತ್ತದೆ.
ವಾಹನದ ಸ್ಥಿತಿ-ಗತಿ: ಯಾವುದೇ ವಾಹನವನ್ನು ನೀವು ಖರೀದಿಸಲು ಹೋದಾಗ ಹೊರಗಿನ ನೋಟವನ್ನೂ ಗಮನಿಸುವುದು ಅಗತ್ಯ. ಕಾರನ್ನು ಸ್ವಲ್ಪ ದೂರದಿಂದ ಗಮನಿದಾಗ ಅದು ಒಂದು ಬದಿಗೆ ವಾಲಿಕೊಂಡಿದ್ದರೆ, ಅದರ ಸಸ್ಪೆನ್ಶನ್ (Suspension) ಅಷ್ಟೇನೂ ಸುಸ್ಥಿತಿಯಲ್ಲಿ ಇಲ್ಲ ಎಂದು ತಿಳಿದುಕೊಳ್ಳಬೇಕು. ಕಾರಿನ ಮೇಲಿನ ಕವಚವನ್ನು ಸ್ವಲ್ಪ ಮೇಲೆತ್ತಿ, ಮತ್ತೆ ಕೆಳಗೆ ಬಿಟ್ಟಗ ಅದು ಮತ್ತೆ ಸರಿಯಾಗಿ ಸ್ವಸ್ಥಾನ ಸೇರಿಕೊಂಡರೆ ಕಾರು ಹಿತಕರವಾದ ಸ್ಥಿತಿಯಲ್ಲಿದೆ ಎಂದರ್ಥ. ಕಾರಿನ ನಾಲ್ಕೂ ಬಾಗಿಲುಗಳು ಮತ್ತು ಡಿಕ್ಕಿಯ ಬಾಗಿಲು ಸುಸ್ಥಿತಿಯಲ್ಲಿದೆಯೇ ಗಮನಿಸಿ. ಸರಿಯಾಗಿ ಲಾಕ್ ಆಗುತ್ತಿದೆಯೇ ಎಂಬುವುದನ್ನು ಪರೀಕ್ಷಿಸುವುದು ಬಹಳ ಮುಖ್ಯ. ಚಾಲನೆಯಲ್ಲಿರುವ ಸಮಯದಲ್ಲಿ ಬಾಗಿಲು ತೆರೆಯಲ್ಪಟ್ಟರೆ ಅಪಾಯ ಖಚಿತ. ಕಾರಿನ ಗಾಜುಗಳು ಸರಿಯಾಗಿವೆಯೇ? ಬಿರುಕುಗಳಿವೆಯೇ, ಸರಿಯಾಗಿ ಮೇಲೆ-ಕೆಳಗೆ ಚಲಿಸುತ್ತಿವೆಯೇ? ಗಮನಿಸಿ. ಮಳೆಗಾಲದಲ್ಲಿ ನೀರು ಒಳಬರುವ ಹಾಗಿದೆಯೇ? ಹಾಗೆಯೇ ಬಾಗಿಲು, ಬಾನೆಟ್ ಹಾಗೂ ಟ್ರಂಕ್ ಗಳ ನಡುವಿನ ಚಡಿ (ಗ್ಯಾಪ್) ಒಂದೇ ತರಹನಾಗಿರಬೇಕು. ಬಾನೆಟ್ ನ ನಟ್ ಗಳು ಮರುಹೊಂದಿಸಿದಂತೆ ಇದ್ದರೆ ಆ ವಾಹನ ಹಿಂದೊಮ್ಮೆ ಅಪಘಾತಕ್ಕೆ ಗುರಿಯಾಗಿದ್ದಿರಬಹುದಾದ ಸಾಧ್ಯತೆ ಇದೆ.
ಟಯರ್ ಗಳ ಸ್ಥಿತಿ: ಯಾವುದೇ ವಾಹನ ಖರೀದಿಸುವಾಗ ಆ ವಾಹನದ ಟಯರನ್ನು ಗಮನಿಸಲೇ ಬೇಕು. ಯಾವ ಕಂಪೆನಿ, ಟಯರ್ ಮೇಲ್ಮೈ ಸವೆದಿದೆಯೇ? ಇದನ್ನು ಗಮನಿಸಲೇ ಬೇಕು. ಕಾರ್ ನ ನಾಲ್ಕೂ ಟಯರ್ ಗಳು ಒಂದೇ ರೀತಿಯಾಗಿದೆಯೇ? ಚಕ್ರಗಳ ಸಮತೋಲನ (Wheel alignment) ಸರಿಯಾಗಿರುವುದು ಬಹು ಮುಖ್ಯ. ಇದರ ಜೊತೆಗೆ ಕಾರಿನ ಹೆಚ್ಚುವರಿ ಚಕ್ರದ (stepni) ಬಗ್ಗೆಯೂ ಗಮನಿಸಿ. ಅದೂ ಸುಸ್ಥಿತಿಯಲ್ಲಿರುವುದು ಅವಶ್ಯಕ. ಇದರ ಸ್ಥಿತಿಯ ಮೇಲೂ ವಾಹನದ ದರದಲ್ಲಿ ವ್ಯತ್ಯಾಸವಾಗುತ್ತದೆ.
ವಾಹನದ ಹೊರಭಾಗ: ನೀವು ಖರೀದಿಸಲು ಬಯಸುತ್ತಿರುವ ವಾಹನದ ಹೊರಭಾಗ ಗಮನಿಸಿದಾಗ ಪೈಂಟಿಂಗ್ ಸೊಗಸಾಗಿರಬೇಕು. ಎಲ್ಲಿಯೂ ವಾಹನಕ್ಕೆ ಏಟಾದ ಗುರುತು ಇರಬಾರದು. ಕೆಲವೊಮ್ಮೆ ವಾಹನಕ್ಕೆ ಏಟಾಗಿದ್ದ ಜಾಗಕ್ಕೆ ಪೈಂಟಿಂಗ್ ಮಾಡಿಸಿ ಅದನ್ನು ಮರೆಮಾಚಿರುತ್ತಾರೆ. ಈ ಬಗ್ಗೆ ಯಾವುದಾದರೂ ಕುರುಹುಗಳು ಸಿಗುತ್ತವೆಯೋ ಗಮನಿಸಿ. ನೀವು ಖರೀದಿಗೆ ಹೋಗುವಾಗ ಈ ಎಲ್ಲಾ ವಿಷಯದಲ್ಲಿ ಪರಿಣತಿಯನ್ನು ಪಡೆದ ನಿಮ್ಮ ಗೆಳೆಯ ಅಥವಾ ನಂಬಿಕಾರ್ಹ ಗ್ಯಾರೇಜಿಗೆ ಸಂಬಂಧಿಸಿದ ವ್ಯಕ್ತಿಯನ್ನು ಕರೆದುಕೊಂಡು ಹೋಗುವುದು ಅಪೇಕ್ಷಣೀಯ. ಕಾರಾಗಿದ್ದಲ್ಲಿ ಅದರ ಹೆಡ್ ಲೈಟ್, ಪಾರ್ಕಿಂಗ್ ಲೈಟ್, ಇಂಡಿಕೇಟರ್ ಲೈಟ್, ಬಂಪರ್ (Bumper) ಇವನ್ನೆಲ್ಲಾ ಪರಿಶೀಲಿಸಿ. ಪೈಂಟಿಂಗ್ ಜಾಗದಲ್ಲಿ ಗುಳ್ಳೆಗಳು ಬಂದಿವೆಯೇ ಗಮನಿಸಿ. Tile pipe ಕಪ್ಪಾಗಿದ್ದರೆ, exhaust ನಲ್ಲಿ soot ಇದೆ ಎಂದರೆ ಪಿಸ್ಟನ್ ರಿಂಗ್ ಸವೆದಿದೆ ಎಂದರ್ಥ. ಇಲ್ಲವೇ ವಾಲ್ವ್ ಸರಿಯಾದ ಸ್ಥಿತಿಯಲ್ಲಿ ಇಲ್ಲ ಎನ್ನಬಹುದು. ಈ ರೀತಿಯ ಸ್ಥಿತಿಯಲ್ಲಿರುವ ವಾಹನಗಳನ್ನು ಖಂಡಿತಾ ಖರೀದಿಸಬೇಡಿ. ಭವಿಷ್ಯದಲ್ಲಿ ನಿಮಗೆ ಹಣವನ್ನು ವೆಚ್ಚ ಮಾಡುವ ಇನ್ನಷ್ಟು ಕೆಲಸಗಳು ಬರಬಹುದು.
ವಾಹನದ ಇಂಜಿನ್: ವಾಹನವನ್ನು ಸ್ಟಾರ್ಟ್ ಮಾಡುವಾಗ ಕೂಡಲೇ ಸ್ಟಾರ್ಟ್ ಆಗುತ್ತದೆಯೋ ಎಂಬುವುದನ್ನು ಗಮನಿಸಿ. ಇಂಜಿನ್ ಗೆ ಹಾಕಿರುವ ಎಣ್ಣೆ (oil) ಪ್ರಮಾಣ ಹಾಗೂ ಸಾಧ್ಯವಾದರೆ ಕಂಪೆನಿಯ ಬಗ್ಗೆ ವಿಚಾರಿಸಿ. ಇಂಜಿನ್ ನಿಂದ ತೈಲ ಸೋರಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ. ವಾಹನ ಸ್ಟಾರ್ಟ್ ಆದಾಗ ಯಾವುದಾದರೂ ವಾಸನೆ ಬರುತ್ತಿದೆಯೇ ಗಮನಿಸಿ.
ಮೀಟರ್ ಪರೀಕ್ಷೆ: ನೀವು ಖರೀದಿಸಬೇಕಾದ ವಾಹನದ ಮೀಟರ್ ಗಳು ಕೆಲಸ ಮಾಡುತ್ತಿವೆಯೋ ಗಮನಿಸಿ. ಸ್ಪೀಡೋ ಮೀಟರ್, ಫ್ಯುಯೆಲ್ (ತೈಲ) ಮೀಟರ್ ಇವೆಲ್ಲಾ ಸರಿಯಾಗಿವೆಯೋ ಪರೀಕ್ಷಿಸಿ. ಅದೇ ರೀತಿ ವೈಪರ್, ಸೆಂಟ್ರಲ್ ಲಾಕ್, ಹೆಡ್ ಲೈಟ್, ಇಂಡಿಕೇಟರ್ ಲೈಟ್ ಹಾಗೂ ಅವುಗಳ ಸ್ವಿಚ್ ಗಳು ಕೆಲಸ ಮಾಡುತ್ತಿವೆಯೋ ನೋಡಿ. ಕಾರ್ ಆದಲ್ಲಿ ಅದರ ಎಸಿ (AC) ಕೆಲಸ ಮಾಡುತ್ತಿದೆಯೋ ಗಮನಿಸಿ. ಮುಖ್ಯವಾಗಿ ಗಮನಿಸಲೇ ಬೇಕಾದ ವಿಷಯ ಟೂಲ್ ಕಿಟ್ (Tool kit) ಇದೆಯೋ? ಹಾಗೂ ಅದರಲ್ಲಿ ಆ ವಾಹನವನ್ನು ರಿಪೇರಿ ಮಾಡಲು ಸಾಧ್ಯವಿರುವ ಎಲ್ಲಾ ಸಲಕರಣೆಗಳು ಇವೆಯೋ ಎಂದು ಪರೀಕ್ಷಿಸಿ. ಇಲ್ಲವಾದಲ್ಲಿ ತುರ್ತು ಸಂದರ್ಭಗಳಲ್ಲಿ ಅಗತ್ಯ ಬಿದ್ಧಾಗ ನೀವು ಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಚಲಾವಣೆಯ ಪರೀಕ್ಷೆ: ವಾಹನದ ವೀಕ್ಷಣೆಯ ಬಳಿಕ ಮುಖ್ಯವಾಗಿ ಮಾಡಬೇಕಾದ ಕೆಲಸ ಚಲಾವಣೆ. ಕಾರ್ ಆದಲ್ಲಿ ಅದರ ಬ್ರೇಕ್, ಎಮರ್ಜೆನ್ಸಿ ಬ್ರೇಕ್, ಆಕ್ಸಿಲೇಟರ್, ದೀಪಗಳು, ಕಾರ್ ನ ಸಂಗೀತ ಸಲಕರಣೆಗಳು (steerio) ಗಮನಿಸಿ. ಗೇರ್ ಬದಲಾಯಿಸುವಾಗ ಕರ್ಕಶ ಶಬ್ಧ ಬರುತ್ತಿದೆಯೋ ಗಮನಿಸಿ. ಹಾಗೆಯೇ ಹಾರ್ನ್ ಶಬ್ಧ ಮಾಡುತ್ತಿದೆಯೋ ಪರೀಕ್ಷಿಸಿ. ಕೆಲವು ವಾಹನಗಳ ಎಲ್ಲಾ ಬಿಡಿಭಾಗಗಳು ಶಬ್ಧ ಮಾಡುತ್ತಿದ್ದರೂ ಹಾರ್ನ್ ಮಾತ್ರ ಶಬ್ಧ ಮಾಡುವುದಿಲ್ಲ!
ವ್ಯವಹಾರ ಪ್ರಕ್ರಿಯೆ: ವಾಹನವನ್ನೆಲ್ಲಾ ನೋಡಿ, ಅದನ್ನು ಚಲಾಯಿಸಿ ನೋಡಿದ ಬಳಿಕ ನಿಮಗೆ ಅದು ಇಷ್ಟವಾದಲ್ಲಿ ನೀವು ಅದರ ಮಾಲೀಕರ ಬಳಿ ಹಣಕಾಸಿನ ವಿಷಯವನ್ನು ಮಾತನಾಡಬಹುದು. ಸೆಕೆಂಡ್ ಹ್ಯಾಂಡ್ ವಾಹನವಾದುದರಿಂದ ಒಂದು ನಿಗದಿತವಾದ ನಿರ್ದಿಷ್ಟ (Fixed) ದರ ಇರುವುದಿಲ್ಲ. ಯಾವ ವರ್ಷದ ಮಾಡೆಲ್ ಮತ್ತು ವಾಹನದ ಕಂಡೀಶನ್ ಗಮನಿಸಿ ನೀವು ಅವರು ಹೇಳಿದ ದರದ ಬಗ್ಗೆ ಚೌಕಾಶಿ ಮಾಡಬಹುದು. ಕೊನೆಗೆ ಒಂದು ನಿಗದಿತ ಮೊತ್ತದ ಮೇಲೆ ಇಬ್ಬರೂ ಸಮ್ಮತಿ ಸೂಚಿಸಿದ ಬಳಿಕ ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬಹುದು. ವಾಹನ ಖರೀದಿ ಮಾಡುವವರು ಅಗತ್ಯವಾಗಿ ತಮ್ಮ ಹೆಸರಿಗೆ ವಾಹನವನ್ನು ವರ್ಗಾಯಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಸಂಭವಿಸುವ ಅನಾಹುತಗಳನ್ನು (ವಿಮಾ ಕ್ಲೈಮ್, ನಂತರದ ಮಾರಾಟ ಇತ್ಯಾದಿ) ತಡೆಗಟ್ಟಬಹುದು. ಯಾವುದೇ ಸಂಶಯವಿದ್ದರೆ ನೀವು ನಿಮ್ಮ ಊರಿನ ಪ್ರಾದೇಶಿಕ ಸಂಚಾರ ಕಚೇರಿಯನ್ನು (RTO) ಸಂಪರ್ಕಿಸಬಹುದು. ನೀವು ವಾಹನ ಚಲಾಯಿಸುವಾದ ಸೂಕ್ತವಾದ ಚಲಾವಣಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಇರಿಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ಖಂಡಿತಕ್ಕೂ ವಾಹನ ಚಲಾಯಿಸಬೇಡಿ. ನಿಮ್ಮ ತಪ್ಪಿನಿಂದಾಗಿ ಬೇರೆಯವರ ಜೀವ ಹಾಗೂ ವಾಹನಕ್ಕೆ ಅಪಾಯವಾಗುವ ಸಾಧ್ಯತೆ ಇದೆ.
ಈಗ ಹೊಸ ವಾಹನಗಳನ್ನು ಮಾರಾಟ ಮಾಡುವ ಸಂಸ್ಥೆಗಳೇ ಹಳೆಯ ವಾಹನಗಳನ್ನೂ ಮಾರಾಟ ಮಾಡುತ್ತವೆ. ಇಂತಹ ನೋಂದಾಯಿತ ಸಂಸ್ಥೆಗಳಿಂದ ವಾಹನ ಖರೀದಿಸುವುದು ಉತ್ತಮ. ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಿದ್ದರೂ ಮಾರಾಟದ ನಂತರವೂ ಅವರು ಒಂದೆರಡು ಉಚಿತ ಸರ್ವಿಸ್ ಗಳನ್ನು ಹಾಗೂ ದಾಖಲೆಗಳ ವರ್ಗಾವಣೆಗಳನ್ನು ಕ್ರಮಬದ್ಧವಾಗಿ ಮಾಡಿಕೊಡುತ್ತಾರೆ. ಏನೇ ಆದರೂ ಹಳೆಯ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖಾರೀದಿಸುವ ಮೊದಲು ಸರಿಯಾಗಿ ಆ ವಾಹನವನ್ನು ಮತ್ತು ಆದರ ದಾಖಲೆಗಳನ್ನು ಪರೀಕ್ಷಿಸಿ, ಬಲ್ಲವರಿಂದ ಕೇಳಿ ತಿಳಿದು ಖರೀದಿಸಿ. ಆಗ ಭವಿಷ್ಯದಲ್ಲಿ ಸುಖಕರ ಪ್ರಯಾಣ ನಿಮ್ಮದಾಗುವುದು.
ಚಿತ್ರ ಕೃಪೆ: ಅಂತರ್ಜಾಲ ತಾಣ