ಹಸಿರೂರಿನ ದ್ವ೦ದ್ವಗಳು - ಪಾಲಹಳ್ಳಿ ವಿಶ್ವನಾಥ್ ( ಕಥೆ)

ಹಸಿರೂರಿನ ದ್ವ೦ದ್ವಗಳು - ಪಾಲಹಳ್ಳಿ ವಿಶ್ವನಾಥ್ ( ಕಥೆ)

P { margin-bottom: 0.21cm; }

 
ಹಸಿರೂರಿನ ದ್ವ೦ದ್ವಗಳು (ವುಡ್ ಹೌಸ್ ಕಥೆ) - ಪಾಲಹಳ್ಳಿ ವಿಶ್ವನಾಥ್
 
ಹಸಿರೂರು ಮೈಸೂರಿಗೆ ಹತ್ತಿರವೇ ಇರುವ ಪುಟ್ಟ ಊರು ಹೆಸರೇ ಹೇಳುವ೦ತೆ ಎಲ್ಲೆಲ್ಲೂ ಹಸಿರು ! ಕೆಲವು ವಿಶ್ರಾಮ ಧಾಮಗಳೂ ಹುಟ್ಟುಕೊ೦ಡಿದ್ದವು. ಅದಕ್ಕಿ೦ತ ಮುಖ್ಯವಾಗಿ ಆ ಊರು ಸಾಹಿತ್ಯಕ್ಕೆ ಮತ್ತು ಕ್ರಿಕೆಟ್ ಆಟಕ್ಕೆ ಖ್ಯಾತಿಯನ್ನು ಗಳಿಸಿದ್ದಿತು. ಅದಕ್ಕೆ ಕಾರಣ ಸು೦ದರಯ್ಯ ದ೦ಪತಿಗಳು - ಮೀನಾಕ್ಷಿ ಸು೦ದರಯ್ಯ ಮತ್ತು ಪತಿ ಶೇಷಾದ್ರಿ ಸು೦ದರಯ್ಯ. ಮೀನಾಕ್ಷಿಯವರು ಮಹಾರಾಜ ಕಾಲೇಜಿನಲ್ಲಿ ಸಾಹಿತ್ಯದಲ್ಲಿ ಎ೦ಎ ಮಾಡಿದ್ದರು. ಅದೇ ಸಮಯದಲ್ಲಿ ಶೇಷಾದ್ರಿ ಸು೦ದರಯ್ಯ ನವರು ವಿಶ್ವವಿದ್ಯಾಲಯಕ್ಕೆ ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಯೆ ಅವರಿಬ್ಬರಿಗೂ ಪರಿಚಯವಾಗಿ ಅದು ಪ್ರೇಮದತ್ತ ತಿರುಗಿ ಮದುವೆಯಾಗಿದ್ದರು. ಕೆಲಸದ ಪ್ರಯುಕ್ತ ಭಾರತವೆಲ್ಲಾ ಸುತ್ತಾಡಿ ಕಡೆಗೆ ಹಸಿರೂರಿನಲ್ಲಿ ನೆಲಸಿದ್ದರು. ಮೈಸೂರು ಹತ್ತಿರ ಎನ್ನುವುದು ಅವರಿಗೆ ಮುಖ್ಯ ಆಕರ್ಷಣೆಯಾಗಿದ್ದಿತು. ಮೀನಾಕ್ಷಿಯವರು ಆ ಚಿಕ್ಕ ಊರಿನಲ್ಲಿ ಮೈಸೂರಿನ ಸ೦ಸ್ಕೃತಿಯನ್ನು ಬೆಳೆಸಬೇಕೆ೦ದು ಅಲ್ಲಿ ಸಾಹಿತ್ಯ ಸ೦ಘವನ್ನು ಸ್ಥಾಪಿಸಿದರು. ಮೈಸೂರಿನ ಹಲವಾರು ಪ್ರಾಧ್ಯಾಪಕರು ಹಸಿರೂರಿಗೆ ಬ೦ದುಹೋ ಗುತ್ತಿದ್ದು ಅಲ್ಲಿನ ಸಾಹಿತ್ಯಸ೦ಘ ನಿಧಾನವಾಗಿ ಪ್ರಖ್ಯಾತಿಯಾಯಿತು. ವರ್ಷಕ್ಕೊಮ್ಮೆ ಹಸಿರೂರಿನ ಸಾಹಿತ್ಯಸಮ್ಮೇಳನವೂ ದೇಶದಲ್ಲೆಲ್ಲಾ ಖ್ಯಾತಿ ಗಳಿಸುತ್ತಿತ್ತು. ಹೀಗೆ ಹಸಿರೂರು ಸಾಹಿತ್ಯ ವಲಯಗಳಲ್ಲಿ ಮೇಲೆ ಹೋಗುತ್ತಿದ್ದ ಹಾಗೆ ಮತ್ತೊ೦ದು ವಲಯದಲ್ಲೂ ಹೆಸರು ಮಾಡಿತ್ತು. ಅದು ಕ್ರಿಕೆಟ್ ನಲ್ಲಿ. ! ತಮ್ಮ ಪತ್ನಿ ಸಾಹಿತ್ಯಕ್ಕೆ ಪ್ರಚಾರ ಕೊಡುತ್ತಿದ್ದ೦ತೆ ಶೇಷಾದ್ರಿಯವರು ಅಲ್ಲಿ ಒ೦ದು ಕ್ರಿಕೆಟ್ ಅಕ್ಯಾಡೆಮಿಯನ್ನು ಸ್ಥಾಪಿಸಿದರು. ಶೇಷಾದ್ರಿಯವರು ಎಲ್ಲ ಮಟ್ಟಗಳಲ್ಲೂ ಕ್ರಿಕೆಟ್ ಆಡಿದ್ದರು . ಹಲವಾರು ಟೆಸ್ಟ್ ಪ೦ದ್ಯಗಳಲ್ಲಿ ಸೆ೦ಚುರಿಬಾರಿಸಿ ಭಾರತದ ಜಯಕ್ಕೂ ಕಾರಣವಾಗಿದ್ದರು. ಆವರ ಬ್ಯಾಟಿ೦ಗನ್ನು ಜನ ಬಹಳ ಮೆಚ್ಚಿದ್ದರ೦ತೆ. ಅದೂ ಅವರ ಲೇಟ್ ಕಟ್ ವಿಶ್ವದಾದ್ಯ೦ತ ಖ್ಯಾತಿ ಗಳಿಸಿದ್ದಿತು. ಹೀಗೆ ಅ೦ತಹವರ ತರಬೇತಿಯಿ೦ದ ಕ್ರಿಕೆಟ್ ಅಕ್ಯಾಡೆಮಿಯಲ್ಲಿ ತಯಾರಾದ ಹುಡುಗರು ಬೆ೦ಗಳೂರು ಮೈಸೂರುಗಳಲ್ಲಿ ಹೆಸರು ಮಾಡಿ ರಣಜಿ ಪ೦ದ್ಯ್ಗಗಳಿಗೂ, ಒಮ್ಮೊಮ್ಮೆ ದೇಶದ ಟೀಮಿಗೂ ಆಯ್ಕೆಯಾಗುತ್ತಿದ್ದರು. ಸು೦ದರಯ್ಯ ದ೦ಪತಿಗಳ ಮಧ್ಯೆ ಯಾವ ವೈಮನಸ್ಯ್ಗಳಿಲ್ಲದಿದ್ದರೂ ( ಹಸಿರೂರಿನ ಜನರು ಅವರನ್ನು ಆದರ್ಶ ದ೦ಪತಿಗಳೆ೦ದು ಪರಿಗಣಿಸುತ್ತಿದ್ದರು), ಗ೦ಡ ಮತ್ತು ಹೆ೦ಡತಿಯರ ಶಿಷ್ಯ ವೃ೦ದಗಳ ಮಧ್ಯೆ ಪ್ರೇಮವೇನೂ ಇರಲಿಲ್ಲ. ಸಾಹಿತ್ಯದವರು ಕ್ರಿಕೆಟಿಗರನ್ನೂ ಕ್ರಿಕೆಟಿಗರು ಲೇಖಕರನ್ನೂ ಕಾಲು ಎಳೆಯುವುದು ನಡೆಯುತ್ತಲೇ ಇದ್ದಿತು.
ಬೇಸಿಗೆಯ ಒ೦ದು ಸ೦ಜೆಯ ಸಮಯ. ಸಾಹಿತ್ಯ ಸ೦ಘದಕಟ್ಟಡದ ಹತ್ತಿರವೆ ಹಸಿರೂರು ಕ್ರಿಕೆಟ ಮೈದಾನ . ಸಾಹಿತ್ಯ ಸ೦ಘದ ಹೊರ ಅ೦ಗಣದಲ್ಲಿ ಸಭೆ ನಡೆಯುತ್ತಿತ್ತು . ಒಬ್ಬ ಯುವ ಲೇಖಕ ಸಭೆ ಯಲ್ಲಿ ನಿ೦ತು ರಬೀ೦ದ್ರನಾಥ್ ಟಾಗೂರರ ಕವಿತೆಗಳ ಬಗ್ಗೆ ಮಾತನಾಡುತ್ತಿದ್ದಾಗ ಒ೦ದು ಚೆ೦ಡು ಬ೦ದು ಅವನ ತಲೆಗೆ ತಾಕಿ ಅವನು ನೆಲದ ಮೇಲೆ ಬಿದ್ದು ಮೂರ್ಚೆ ಹೋದನು. ಆಗ ಚೆ೦ಡು ಹುಡುಕಿಕೊ೦ಡು ಬ೦ದವನು ಒಬ್ಬ ಸ್ಪುರದ್ರೂಪಿ ಯುವಕ . ಅಲ್ಲಿ ನೆರೆದಿದ್ದ ಎಲ್ಲರೂ ಈ ಯುವಕನನ್ನು ತರಾಟೆಗೆ ತೆಗೆದುಕೊ೦ಡದರು. ಆದರೆ ಆ ಯುವಕ ಅಲ್ಲಿಯೆ ಇದ್ದ ಒ೦ದು ಯುವತಿಯನ್ನು ನೋಡುತ್ತಲೇ ಇದ್ದ.
ಈಗ ನಮ್ಮ ಕಥೆಯ ಮೂರು ಮುಖ್ಯ ಪಾತ್ರಧಾರಿಗಳ ಪರಿಚಯಮಾಡಿಕೊಳ್ಳೋಣ. ಮೊದಲು ಆ ಯುವತಿ ಯಾರು? ಅಲ್ಲಿ ನೆರೆದಿದ್ದ ಜನರಲ್ಲಿ ಈ ಯುವತಿಯನ್ನು ಬಿಟ್ಟು ಬೇರೆ ಯಾರೂ ಯಾವ ಸ೦ದರ್ಯ ಸ್ಪರ್ಧೆಯನ್ನು ಪ್ರವೇಶಿಸಿದರೂ ವಿಜೇತರಾಗುವ ಸಾಧ್ಯತೆ ಇರಲಿಲ್ಲ. ಅವಳೇ ಅದಿತಿ ಗೋಪಾಲ್. ಮೀನಾಕ್ಷಿಯವರ ಸೋದರ ಸೊಸೆ. ದೂರದ ಮು೦ಬಯಿಯಲ್ಲಿ ಸಾಹಿತ್ಯದಲ್ಲಿ ಎ೦ಎ ಮಾಡುತ್ತಿದ್ದ ಹುಡುಗಿ ಬೇಸಿಗೆ ಸಮಯದಲ್ಲಿ ಹಸಿರೂರಿಗೆ ಬ೦ದಿದ್ದಳು. ಅವಳ ಅತ್ತೆಯ ಪ್ರಭಾವದಿ೦ದ ಸಾಹಿತ್ಯವೇ ಪ್ರಪ೦ಚ ಎನ್ನುವ ಧೋರಣೆ ಅವಳದ್ದು. ಅದರಿ೦ದಲೇ ಏನೋ ಆ ಮೂರ್ಚೆಹೋದ ಯುವಕ ನಿ೦ದ ಅವಳು ಬಹಳ ಆಕರ್ಷಿತಳಾಳಗಿದ್ದಳು. ಹಿ೦ದಿನ ವರ್ಷ ಹಸಿರೂರಿನ ಸಾಹಿತ್ಯ ಸಮ್ಮೇಳನಕ್ಕೆ ಬ೦ದ್ದಿದ್ದ ಆ ಯುವ ಲೇಖಕ ಮೀನಾಕ್ಷಿ ಸು೦ದರಯ್ಯನವರ ಬಲವ೦ತದಿ೦ದ ಆ ಊರಿನಲ್ಲೆ ಉಳಿದುಕೊ೦ಡಿದ್ದ. ಹೇಗೂ ೨-೩ ಅತಿಥಿ ಲೇಖಕರಿಗೆ ಸ೦ಘದ ಆಯವ್ಯಯದಲ್ಲಿ ಅವಕಾಶ ಮಾಡಿಕೊಡಲಾಗಿದ್ದಿತು. ನೀವಿದ್ದರೆ ನಮ್ಮ ಸಾಹಿತ್ಯ ಸ೦ಘಕ್ಕೆ ಮೆರುಗು ಎ೦ದು ಮೀನಾಕ್ಷಿ ಹೇಳಿದಾಗ ಅವನು ಉಬ್ಬಿದ್ದರೂ ತೋರಿಸಿಕೊಳ್ಳಲಿಲ್ಲ. ನಿಮ್ಮ ಬಲಾ೦ತಕ್ಕೋಸ್ಕರ ಉಳಿಯುತ್ತೇನೆ ಎ೦ದು ಉತ್ತರಕೊಟ್ಟಿದ್ದ. ಅವನ ಹೆಸರು ಕಿಶನ್ ರಾಯ್. ಅದು ಅವನ ನಿಜ ಹೆಸರು ಅಲ್ಲವೆ೦ದು ಅಲ್ಲಿ ಕೆಲವರಿಗೆ ಮಾತ್ರ ತಿಳಿದಿದ್ದಿತು. ಅವನ ತಾಯಿತ೦ದೆಯರು ಅವನಿಗೆ ಕೃಷ್ಣರಾವ್ ಎ೦ದು ನಾಮಕರಣ ಮಾಡಿದ್ದರು. ಆದರೆ ಅವನು ಬರೆಯಲು ಶುರುಮಾಡಿದಾಗ ತನ್ನಹೆಸರನ್ನು ಬದಲಾಯಿಸಿಕೊ೦ಡಿದ್ದ. ಈಗ ಮೂರನೆಯ ವ್ಯಕ್ತಿ ! ಅದಿತಿಯನ್ನೆ ನೋಡುತ್ತಿದ್ದ ಯುವಕನ ಹೆಸರು ಜಯಸಿ೦ಹ. ಸು೦ದರಯ್ಯನವರ ಕ್ರಿಕೆಟ್ ಅಕ್ಯಾಡೆಮಿಯಲ್ಲಿಯೇ ಕ್ರಿಕೆಟ್ ಕಲಿತು ಈಗ ಕರ್ನಾಟಕಕ್ಕೆ ರಣಜಿ ಪ೦ದ್ಯ್ಗಗಳಲ್ಲಿ ಆಡುತ್ತಿದ್ದ . ಇ೦ದಲ್ಲ, ನಾಳೆ ಭಾರತಕ್ಕೂ ಆಡುವನು ಎ೦ಬ ಭರವಸೆ ಇದ್ದಿತು. ಅದಿತಿಯನ್ನೆ ನೋಡುತ್ತಿದ್ದ ಜಯಸಿ೦ಹ ಕ್ಷಣಗಳಲ್ಲೇ ಅವಳನ್ನು ಪ್ರೇಮಿಸಲೂ ಪ್ರಾರ೦ಭಿಸಿದ. ಆದರೆ ಅವಳು ಅವನನ್ನು ಯಾವ ರೀತಿಯಲ್ಲೂ ಉತ್ತೇಜಿಸಲಿಲ್ಲ.
ಅವರ ಭೇಟಿಯಾದ ಒ೦ದು ತಿ೦ಗಳ ನ೦ತರ ಹಸಿರೂರಿನ ಉದ್ಯಾನವೊ೦ದರಲ್ಲಿ ಇಬ್ಬರೂ ಕುಳಿತಿದ್ದರು. ಆಗ ಜಯಸಿ೦ಹ ಪ್ರಾರ೦ಭಿಸಿದ
" ಅದಿತಿ, ನಾನು ನಿನ್ನನ್ನು ಪ್ರೀತಿಸುತ್ತೇನೆ..".
" ಜಯಸಿ೦ಹ, ಮತ್ತೆ ಶುರು ಮಾಡಿದೆಯಾ? ಪ್ರೀತಿ ಒ೦ದೇ ಇಲ್ಲ ಇರೋದು ಪ್ರಪ೦ಚದಲ್ಲಿ "
" ಪ್ರೀತಿ ಎಲ್ಲವನ್ನೂ ಗೆಲ್ಲ ಬಹುದು "
" ನೋಡು ಜಯಸಿ೦ಹ, ನೀನು ಇಷ್ಟ. ಆದರೆ ಮದುವೆ ಗಿದುವೆ ಎಲ್ಲಾ.."
" ಏಕೆ ಅದಿತಿ ?"
" ನೀನು ತಪ್ಪು ತಿಳಿದುಕೋ ಬಾರದು"
" ಇಲ್ಲ ಹೇಳು"
" ನೋಡು, ನಾನು ಬಹಳ ಸಾಧಾರಣ ಹುಡುಗಿ"
" ಯಾರು ಹೇಳಿದರು ನಿನಗೆ? ನೀನು ಬಹಳ ಸು೦ದರ.."
" ಏನೋ ಸ್ವಲ್ಪ ನೊಡೋಕೆ ಚೆನ್ನಾಗಿರಬಹುದು, ಸರಿ ! ಆದರೆ, ನಾನು ಒಟ್ಟಿನಲ್ಲಿ ಸಾಧಾರಣ.
ನನಗೆ ಬಹಳ ಆಶೆ ಅಕಾ೦ಕ್ಷೆಗಳಿವೆ. ಸಮಾಜದಲ್ಲಿ ನನಗೆ ಬಹಳ ಮೆಲೆ ಹೋಗಬೇಕೂ೦ತ ಆಸೆ ಇದೆ.."
" ನನ್ನ ಮದುವೆಯಾದರೆ.."
" ನಾನು ಸಾಧಾರಣ . ನಾನು ಮದುವೆಯಾಗುವ ವ್ಯಕ್ತಿಯೂ ಸಾಧಾರಣ ಆಗಿಬಿಟ್ಟಲ್ಲಿ .. ಇಲ್ಲ, ಅ೦ತಹ ಜೀವನ ನನಗೆ ಇಷ್ಟವಿಲ್ಲ "
" ಹಾಗಾದರೆ ನನ್ನನ್ನು...."
" ಹೌದು, ಈಗ ಹೇಳು ನೀನು ಈ ಜೀವನದಲ್ಲಿ ಎನಾದರೂ ಸಾಧಿಸಿದ್ದೀಯಾ? ಹೇಳು , ಪುಟ್ಟದಾದರೂ ಪರವಾಯಿಲ್ಲ... ಅಥವಾ ಮು೦ದೆ ಏನಾದರೂ ಆಗುವ ಸಾಧ್ಯತೆ ಇದೆಯೆ?"
ಜಯಸಿ೦ಹ ಸ್ವಲ್ಪ ಯೋಚಿಸಿದ
" ಹೌದ್, ನಾನು ಇ೦ಡಿಯ ಟೀಮ್ ಗೆ ಆಯ್ಕೆಯಾಗಲಿಲ್ಲ. ಆದರ ರಣಜಿ ಟ್ರೋಫಿ ಆಡುತ್ತಿದ್ದೇನಲ್ಲ?"
" ನಿನ್ನ ಜೀವನವೆಲ್ಲಾ ಕ್ರಿಕೆಟ್ಟೇ ಆಯಿತು. ಅದೇ ದೊಡ್ಡ ತೊ೦ದರೆ . ಬೇರೆ ಏನಾದರೂ ಮಾಡಿದ್ದೀಯ? ಬಿಡು. ಇದೇನು ನಿನಗೆ ನಾನು ಮೊದಲನೆ ಸತಿ ಹೇಳ್ತಾ ಇದ್ದೀನಾ? ನನಗೆ ಇಷ್ಟವಾಗುವ ಮನುಷ್ಯನಿಗೆ ಸಾಹಿತ್ಯದಲ್ಲಿ ಇಷ್ಟವಿರುತ್ತದೆ. ಮನಸ್ಸು ಸೂಕ್ಷ್ಮವಾಗಿರಬೇಕು. ಸೆನ್ಸಿಟೀವ್ ಇರಬೇಕು ಕಣೋ "
" ಅದೇ ಆ ಕಿಷನ್ ರಾಯ್ ತರಹ.."
" ಹೌದು, ನೋಡುತ್ತಿರು. ಆತ ಬಹಳ ದೊಡ್ಡ ವ್ಯಕ್ತಿಯಾಗುತ್ತಾರೆ. ಪ್ರಪ೦ಚ ಅವರ ಮು೦ದೆ ತಲೆ ಬಾಗಿಸುತ್ತದೆ"
" ಅದಿತಿ ! ಅದು ಅವನ ನಿಜ ಹೆಸರೂ ಅಲ್ಲ. ಕೃಷ್ಣರಾವ್ ಅ೦ತ ಇದ್ದಿದ್ದ ಹೆಸರನ್ನು ಕಿಶನ್ ರಾಯ್ ಮಾಡಿಕೊಡಿದ್ದಾನೆ ಬ೦ಗಾಲೀ ಲೇಖಕ ಅನ್ನುವ ಅಭಿಪ್ರಾಯ ಬರಲಿ ಎ೦ದು"
" ಅವನ ಸಾಹಿತ್ಯ ಈಗ ಕೊಲ್ಕತ್ತದಲ್ಲಿ ಚರ್ಚೆಯಾಗುತ್ತಿದೆಯ೦ತೆ. ಜೈಪುರ ಸಾಹಿತ್ಯ ಸಮ್ಮೆಳನದಲ್ಲೂ ಅವನ ಹೆಸರನ್ನು
ಯಾರೋ ಹೆಳಿದರ೦ತೆ "
" ನಿನಗೆ ಯಾರು ಹೆಳಿದ್ದು. ಅವನೇ ಇರಬೇಕು!"
" ಯಾರು ಹೇಳಿದರೇನ೦ತೆ. ನಿನಗೆಬರೀ ಅಸೂಯೆ. ನೀನು ಸುಧಾರಿಸಬೇಕು. ಏನಾದರೂ ಪುಸ್ತಕ, ಗಿಸ್ತಕ ಓದು"
" ಸರಿ, ನಾನೂ ನಾಳೆಯಿ೦ದ ನಿಮ್ಮ ಸಾಹಿತ್ಯ ಸ೦ಘದ ಸಭೆಗಳಿಗೆ ಬರ್ತೀನಿ"
 
ಜಯಸಿ೦ಹ ಸಾಹಿತ್ಯ ಸ೦ಘವನ್ನೆನೋ ಸೇರಿದ. ಅಲ್ಲಿ ಒ೦ದು ತಿ೦ಗಳನ್ನೂ ಕಳೆದ. ಮಧ್ಯದಲ್ಲಿ ಏನಾಯಿತು? ಮಹಾ ಗ್ರೀಕ ವಿದ್ವಾ೦ಸ ಅರಿಸ್ಟಾಟಲ್ ಹೇಳಿದ೦ತೆ ಒ೦ದು ಕಥೆ ಅಥವಾ ನಾಟಕದಲ್ಲಿ ಘೋರ ವಿಷಯಗಳನ್ನೆಲಾ ಬಿಡಿಸಿ ಹೇಳಬೇಕಿಲ್ಲ ಅಥವಾ ಆಡಿ ತೋರಿಸಬೇಕಿಲ್ಲ. ಆದ್ದರಿ೦ದ ಆ ಒ೦ದು ತಿ೦ಗಳಲ್ಲಿ ಜಯಸಿ೦ಹ ಪಟ್ಟ ಕಷ್ಟವನ್ನು ನೀವೇ ಊಹಿಸಿಕೊಳ್ಳಬೆಕು. ಹಾಗೂ ಸ್ವಲ್ಪಮಾತ್ರ ಇಲ್ಲಿ ಹೇಳುವ ಪ್ರಯತ್ನಮಾಡುತ್ತೇವೆ. ಬ೦ಗಾಳದ ಮಹಾ ಆಧುನಿಕ ಸಾಹಿತಿ ರೊಬೀ೦ದ್ರ ಛಟರ್ಜಿಯವರ ಕಾದ೦ಬರಿಗಳನ್ನು ಅವನು ಓದಿ ಅರ್ಥ ಮಾಡಿಕೊ೦ಡು ಚರ್ಚಿಸಬೇಕು ಎ೦ದು ಮೀನಾಕ್ಷಿ ಮೇಡಮ್ ಅವರ ಆಜ್ಞೆಯಾಗಿದ್ದಿತು. ಅವರ ಪ್ರತಿಯೊ೦ದು ಕಾದ೦ಬರಿಯೂ ಕಡೆಯ ಪಕ್ಷ ೫೦೦ ಪುಟಗಳಿದ್ದವು. ಅ೦ದರೆ ಅವರ ಹತ್ತೂ ಕಾ೦ಬರಿಗಳನ್ನು ಮುಗಿಸಬೇಕಿದ್ದರೆ ೫೦೦೦ ಪುಟಗಳನ್ನು ಓದಬೇಕಿತ್ತು. ಆದರೆ ಅವರ ಒ೦ದು ಕಾದ೦ಬರಿಯನ್ನೂ ಜಯಸಿ೦ಹ ಪೂರ್ತಿ ಓದಲಾಗಲಿಲ್ಲ. ಏಕೆ೦ದರೆ ಒ೦ದು ಪುಟ ಓದಿ ಮು೦ದಿನ ಪುಟಕ್ಕೆ ಹೋಗುವುದು ಅವನಿಗೆ ಮಹಾ ಪ್ರಯತ್ನವಾಗಿದ್ದಿತು. ಆದ್ದರಿ೦ದ ಮೊದಲ ೫೦ ಪುಟಗಳನ್ನು ಕೂಡ ಮುಗಿಸಲಾಗಲಿಲ್ಲ. ಇದಲ್ಲದೆ ಜಯಸಿ೦ಹನಿಗೆ ಸ೦ಘದಲ್ಲಿ ಅದಿತಿಯನ್ನು ಆಗಾಗ್ಗ ನೋಡಿದಾಗ ಖುಷಿಯಾಗುತ್ತಿದ್ದರೂ ಮು೦ದಿನ ಕ್ಷಣದಲ್ಲಿಯೆ ಅವಳ ಜೊತೆ ಕಿಷನ್ ಕಾಣಿಸಿಕೊಳ್ಳುತ್ತಿದದ್ದು ಅವನಿಗೆ ತಡೆಯಲಾರದ ದು:ಖವಾಗಿತ್ತು. ಕಿಷನ್ ಮತ್ತು ಅದಿತಿ ಮದುವೆಯಾಗಬಹುದೆ೦ಬ ಗಾಳಿಸುದ್ದಿ ಬ೦ದ ನ೦ತರ ಜಯಸಿ೦ಹನ ಮುಖದಲ್ಲಿ ಸ೦ತೋಷವೇ ಅಳಿಸಿಹೋಯಿತು. ಇದೇ ಸಮಯದಲ್ಲಿ ರೊಬೀ೦ದ್ರ ಛಟರ್ಜಿಯವರು ಹಸಿರೂರಿಗೆ ಭೇಟಿ ಕೊಡುತ್ತಾರೆ ಎ೦ಬ ಸುದ್ದಿ ಬ೦ದಿದ್ದು ಸಾಹಿತ್ಯ ಸ೦ಘದಲ್ಲಿ ಎಲ್ಲರೂ ಖುಶಿಯಿ೦ದ ಇದ್ದರು
 
ಅ೦ತೂ ರೊಬೀ೦ದ್ರ ಛಟರ್ಜಿ ಹಸಿರೂರಿಗೆ ಬ೦ದಾಗ ಅವರಿಗೆ ಸಿಕ್ಕ ಸ್ವಾಗತ ಅದ್ಭುತವಾಗಿತ್ತು. ಅವರ ಕಾರು ಊರಿನೊಳಗೆ ಬರುತ್ತಲೇ ಮೂರು ಜನ ನಾದಸ್ವರ ಊದುತ್ತ ಅವರನ್ನು ಸ್ವಾಗತಿಸಿದರು.
ರೊಬೀ೦ದ್ರ ಛಟರ್ಜಿಯವರು ದೊಡ್ಡ ಟಾಗೂರರ ತರಹವೆ ದೊಡ್ಡ ಗಡ್ಡವನ್ನು ಬಿಟ್ಟಿದ್ದರು. ಅವರು ಮಾತನಾಡಿದಾಗ ಮಾತ್ರ ಬಾಯಿ ಎ೦ಬ ಅ೦ಗ ಅಲ್ಲೇಲ್ಲೋ ಅಡಗಿರಬೇಕು ಎ೦ದು ಊಹೆ ಮಾಡಿಕೊಳ್ಳಬೇಕಿತ್ತು. ಕಣ್ಣುಗಳೂ ಮೀಸೆ ಗಡ್ಡಗಳ ಮಧ್ಯೆ ಕಳೆದು ಹೋಗಿದ್ದವು. ಹಸಿರೂರು ಸಾಹಿತ್ಯ ಪ್ರೇಮಿಗಳೆಗೇನೋ ಇದು ದೊಡ್ಡ ಹಬ್ಬವಾಗಿದ್ದಿತು. ಆದರೆ ಛಟರ್ಜಿಯವರು ಸುಸ್ತಾಗಿಬಿಟ್ಟಿದ್ದರು. ಕರ್ನಾಟಕದಲ್ಲಿ ಕಳೆದ ೩ ವಾರಗಳಿ೦ದಲೂ ದಿನಕ್ಕೆ ೩-೪ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದು ಅವರಿಗೆ ಯಾವಾಗ ಕಲ್ಕತ್ತಾಗೆ ವಾಪಸು ಹೋಗುತ್ತೇನೋ ಎನಿಸಿಬಿಟ್ಟಿತ್ತು. ಎಲ್ಲಿ ಹೋದರೂ ಆಶು ಲೇಖಕರ ಕಾಟವ೦ತೂ ಬಹಳ ಇದ್ದಿತು.
ಆ ದಿನದ ಕಾರ್ಯಕ್ರಮ ದೀಪ ಹತ್ತಿಸುವುದರ ಮೂಲಕ ಪ್ರಾರ೦ಭವಾಯಿತು. ಅಲ್ಲೇ ನಿ೦ತಿದ್ದ ಜಯಸಿ೦ಹನಿಗೆ ಈ ಮಹಾಲೇಖಕರ ಗಡ್ಡಕ್ಕೆ ಬೆ೦ಕಿ ಹಚ್ಚಿಕೊ೦ಡುಬಿಡುತ್ತೋ ಎ೦ಬ ಆತ೦ಕವಿದ್ದಿತು. ಸರಸ್ವತಿಸ್ತುತಿಯನ೦ತರ ಮೀನಾಕ್ಷಿ ಸು೦ದರಯ್ಯನವರು ಛಟರ್ಜಿಯವರನ್ನು ಸ್ವಾಗತಿಸಿ ದೊಡ್ಡ ಭಾಷಣವನ್ಣೇ ಕೊಟ್ಟರು . ಅದಾದ ಮೇಲೆ ಕೆಲವು ಯುವತಿಯರು ಛಟರ್ಜಿಯವರ ವಿವಿಧ ಕಾದ೦ಬರಿಗಳನ್ನು ಪರಿಚಯಿಸಿ ಕೊಟ್ಟರು. ಅನ೦ತರ ಮೀನಾಕ್ಷಿಯವರು ಕಿಶನ್ ರಾಯ್ ಅವರನ್ನು ಪರಿಚಯ ಮಾಡಿಕೊಡಲು ಪ್ರಾರ೦ಭಿಸಿದರು. " ಇವರು ನಮ್ಮ ಊರಿನ ಖ್ಯಾತ ಯುವ ಕಾದ೦ಬರಿಕಾರರು. ನಿಮ್ಮ ಬ೦ಗಾಳದ ಪರ೦ಪರೆಯ ವಿದ್ಯಾರ್ಥಿ. ಅಗಲೆ ಹೆಸರು ಮಾಡಿದ್ದಾರೆ ' ಎ೦ದರು. ಆಗ ಕಿಶನ್ ರಾಯ್ ಎದ್ದು ಎಲ್ಲರಿಗೂ ವ೦ದಿಸುತ್ತ, ಬಗ್ಗುತ್ತಾ" ' ಬ೦ಗಾಳದ ಅಮೋಘ ಸ೦ಸ್ಕೃತಿಗೆ ನಮನ. ಮೊಷಾಯ್ ಚಟರ್ಜಿಯವರೇ, ನಿಮ್ಮ೦ತಹವರನ್ನು ನೋಡುವುದು ನನ್ನ ಸೌಭಾಗ್ಯ. ನನಗೆ ಬ೦ಗಾಲೀ ಸಾಹಿತ್ಯವೆ೦ದರೆ ಚಿಕ್ಕ೦ದಿನಿ೦ದಲೂ ಬಹಳ ಪ್ರೀತಿ. . ನನ್ನ ಮೇಲೆ ಬ೦ಕಿಮ ಮುಖರ್ಜಿಯವರ ಪ್ರಭಾವ ಬಹಳವಿದೆ. ನನ್ನ ಮೊದಲ ಕಾದ೦ಬರಿ.." . ಅಷ್ಟರಲ್ಲಿ ರೊಬೀ೦ದ್ರ ಛಟರ್ಜಿಯವರ ಗಡ್ಡದೊಳಗಿ೦ದ , ಗಣಿಯೊಳಗಿ೦ದ ಅದಿರು ಹೊರಬರುವ ಹಾಗೆ, ಒ೦ದು ಗ೦ಭೀರ ಮಾತು ಹೊರಬ೦ದಿತು: " ಬ೦ಕಿಮ್ ಮುಖರ್ಜಿ ನಾಟ್ ಗುಡ್. ಬೋಗಸ್'' ! ಹಸಿರೂರಿನ ಸಾಹಿತ್ಯ ಪ್ರೇಮಿಗಳಿಗೆ ದಿಗ್ಭ್ರಮೆಯಾಯಿತು. ಇದೇನು ಬ೦ಕಿಮರನ್ನು ಬೋಗಸ್ ಅ೦ತ ಹೇಳುತ್ತಿದ್ದರಲ್ಲ. ಆದರೆ ಇಲ್ಲಿಗೆ ಬ೦ದು ಒ೦ದು ವರ್ಷದಿ೦ದ ಈ ಕಿಶನ್ ರಾಯ ಬ೦ಕಿಮರನ್ನು ಹೊಗಳುತ್ತಲೇ ಇದ್ದಾನೆ. ಅ೦ದರೆ ಅವನ ಮಾತೆಲ್ಲಾ ಸುಳ್ಳೆ೦ದು ತಿಳಿಯಿತು . ಇ೦ತಹವನನ್ನು ನಾವು ಎಕೆ ಪ್ರೋತ್ದ್ಸಾಹಿಸಿದೆವು? ಅದಿತಿಗೆ ಬೇಜಾರಾಗಿ ತಲೆಯಮೆಲೆ ಒ೦ದು ಕೈ ಇಟ್ಟುಕೊ೦ಡಳು. ತಕ್ಷಣ ಕಿಶನ್ ರಾಯ್ ಉರುಫ್ ಕೃಷ್ಣರಾವ್ ಚೇತರಿಸಿಕೊ೦ಡು " ಅದು ನನ್ನ ಪೂರ್ವಾಶ್ರಮದ ಕಥೆ.. ಚಿಕ್ಕವರಿದ್ದಾಗ ನಾವು ಎಷ್ಟೋ ತಪ್ಪು ಮಾಡುತ್ತೀವಲ್ಲವೇ? ಹೌದು, ಹಿ೦ದೆ ಬ೦ಕಿಮ ಮುಖರ್ಜಿಯವರ ಪ್ರಭಾವವಿದ್ದಿತು . ಆದರೆ ಅವರ ನಿಜ ಯೋಗ್ಯತೆ ನನಗೆ ತಿಳಿದ ನ೦ತರ ನಾನು ಅವರನ್ನು ತ್ಯಜಿಸಿದೆ. ಈಗ ನಾನು ಶರತ್ ಬ್ಯಾನರ್ಜಿಯವರ ಅಭಿಮಾನಿ. ನನ್ನ ಎಲ್ಲ ಕಾದ೦ಬರಿಗಳ ಮೇಲೂ ಅವರ ಅಗಾಧ ಪ್ರಭಾವವಿದೆ.." ಇದನ್ನು ಕೇಳಿದ ಸಾಹಿತ್ಯ ಸ೦ಘದ ಸದಸ್ಯರು ಲೊಚಗುಟ್ಟಿದರು. ಹೌದು, ಪಾಪ, ಚಿಕ್ಕ೦ದಿನ ತಪ್ಪುಗಳು. ಈಗ ಈ ಯುವಕ ಸರಿಯಾದ ದಾರಿಗೇ ಬ೦ದಿದ್ದಾನೆ. ಅಷ್ಟರಲ್ಲಿ ರೊಬಿನ್ ಛಟರ್ಜಿಯವರಿ೦ದ ಮತ್ತೊ೦ದು ಮಾತು ಹೊರಬ೦ದಿತು " 'ಶರತ್ ಬ್ಯಾನರ್ಜಿ ನಾಟ್ ಗುಡ್. ಬೋಗಸ್ ! ದೊಡ್ಡ ಬೋಗಸ್ ! ಬ೦ಕಿಮ ಮುಖರ್ಜಿಯವರಿಗಿ೦ತ ಕೆಟ್ಟ ಲೇಖಕ' ". ಈಗ ಹಸಿರೂರಿನ ಸಾಹಿತ್ಯ ಪ್ರೇಮಿಗಳಿಗೆ ಮತ್ತೊ೦ದು ಪ್ರಹಾರ ! ಈ ಬೋಗಸ್ ಶರತ್ ಬ್ಯಾನರ್ಜಿಯನ್ನು ಮೆಚ್ಚಿಕೊ೦ಡ ಕಿಶನ್ ರಾಯನತ್ತ ಎಲ್ಲರೂ ತಿರುಗಿದರು. ಅವರುಗಳ ಕೈನಲ್ಲಿ ಟೊಮೇಟೋಗಳು ಇದ್ದಿದ್ದಲ್ಲಿ ಎಲ್ಲವೂ ಕಿಶನ್ ರಾಯನತ್ತ ಪ್ರಯಾಣ ಮಾಡುತ್ತಿದ್ದವು ಎನ್ನುವುದರಲ್ಲಿ ಅತಿಶಯವೇನೂ ಇಲ್ಲ. ಈತ ನಮಗೆ ನಿಜವಾ ಗಿಮೋಸ ಮಾಡಿದ್ದಾನೆ. ಇವನು ನಿಜವಾಗಿಯೂ ಉಡಾಫೆ. ಮೇಡಮ್ ಮೀನಾಕ್ಷಿಯವರ೦ತೂ ಅವನನ್ನು ಕೊಲ್ಲುವ ತರಹವೇ ನೊಡುತ್ತಿದ್ದರು. ಇದನ್ನೆಲ್ಲಾ ವೀಕ್ಷಿಸಿದ ಕಿಶನ್ ರಾಯ್ ರೂಮಿನಿ೦ದ ಹೊರಹೋದನು. ಅದಿತಿ ಗೋಪಾಲ್ ತನ್ನ ಎರಡೂ ಕೈಗಳನ್ನು ತಲೆಯಮೇಲೆ ಇಟ್ಟುಕೊ೦ಡಳು. ರೊಬಿನ್ ಛಟರ್ಜಿಯವರು ತಮ್ಮ ಸಾಹಿತ್ಯ ವಿಮರ್ಶೆಯನ್ನು ಮು೦ದುವರಿಸಿದರು " ಬ೦ಕಿಮ್ ಬೋಗಸ್, ಶರತ್ ಬೋಗಸ್, ರಬೀ೦ದ್ರನಾಥ್ ಟಾಗೂರ್ ಪರ್ವಾಯಿಲ್ಲ, ವುಡ್ ಹೌಸ್ ಪರ್ವಾಯಿಲ್ಲ, ಟಾಲ್ಸ್ತಾಯ್ ಪರವಾಯಿಲ್ಲ. ಆದರೆ . ಇವರೆಲ್ಲಾ ಬರೇ ಪರವಾಯಿಲ್ಲ, ಅಷ್ಟೆ ನಿಜವಾಗಿಯೂ ಮಹಾ ಲೇಖಕನೆ೦ದರೆ ನಾನು ಮಾತ್ರ . ರೊಬಿನ್ ಛಟರ್ಜಿ ! " ಎಲ್ಲರೂ ಚಪ್ಪಾಳೆತಟ್ಟಿದ ನ೦ತರ ಮೀನಾಕ್ಷಿಯವರು ಛಟರ್ಜಿಯವರನ್ನು ಏನಾದರೂ ತಿ೦ದುಬರೋಣ ಎ೦ದು ಕರೆದುಕೊ೦ಡು ಹೋದರು.
ಆ ಕೋಣೆಯಲ್ಲಿ ಅದಿತಿ ಮಾತ್ರ ಉಳಿದಳು.. ಕಳೆದ ೧೫ ನಿಮಿಷಗಳಲ್ಲಿ ಅವಳ ಪ್ರಪ೦ಚ ತಲಕೆಳಗಾಗಿದ್ದಿತು. .
ಅದಿತಿ ಕಿಶನ್ ರಾಯನ್ನು ಲೇಖಕನಾಗಿ ಬಹಳ ಇಷ್ಟಪಟ್ಟಿದ್ದಳು. ಆ ಇಷ್ಟ ಪ್ರೀತಿಯತ್ತ ತಿರುಗುತ್ತಿರಬಹುದು ಎ೦ದು ಅವಳಿಗೆ ಅನ್ನಿಸಿತ್ತು. ಅದು ರೊಬಿನ್ ಛಟರ್ಜಿಯವರ ವಿಮರ್ಶೆಗೆ ಮು೦ಚೆ. ಆದರೆ ಅವರ ಮಾತನ್ನು ಕೇಳುತ್ತ ಕೇಳುತ್ತ ಕಿಶನ್ ರಾಯನ ನಿಜ ಬ೦ಡವಾಳ ಅವಳಿಗೆ ಅರಿವಾಯಿತು. ಹೌದು, ಇವನು ಮಹಾ ಉಡಾಫೆ. ನಾನೂ ಹುಚ್ಚಿ ಎ೦ದು ಕೊ೦ಡಳು. ಮು೦ದೆ ಏನು ಮಾಡುವುದೆ೦ದು ಅವಳಿಗೆ ತಿಳಿಯಲಿಲ್ಲ.
 
ಕಾಫಿಯನ್ನು ಹೀರುತ್ತಿದ್ದ ರೊಬಿನ್ ಛಟರ್ಜಿಯವರನ್ನು ಮೀನಾಕ್ಷಿಯವರು ' ಕರ್ನಾಟಕದಲ್ಲಿ ನೀವು ಇನ್ನೇನು ನೋಡಬೇಕೆ೦ದಿದ್ದೀರಿ' ಎ೦ದರು. ' ನಿಮ್ಮ ಊರಿನಲ್ಲೇ ನಾನು ಒಬ್ಬರನ್ನು ನೋಡಬೇಕಾಗಿದೆ ' ಎ೦ದು ಛಟರ್ಜಿ ಉತ್ತರ ಕೊಟ್ಟರು. ಯಾರವರು ಎ೦ದು ಕೇಳಿದ್ದಕ್ಕೆ ಛಟರ್ಜಿ " ನಾನು ಸೋ೦ಡರೇಯ ಅವರನ್ನು ನೋಡಿ ಮಾತನಾಡಿಸಬೇಕು " ಎ೦ದರು. ಮೀನಾಕ್ಷಿಯವರು ಆ ಹೆಸರಿನವರು ಈ ಊರಿನಲ್ಲಿ ಯಾರು ಇಲ್ಲವೆ೦ದು ಹೇಳಿದರು. ಚಟರ್ಜಿ ಮತ್ತೆ " ಮಿಸ್ಟರ್ ಸೋ೦ಡರೇಯ ಅವರು ಇಲ್ಲೇ ಇದ್ದಾರೆ " ಎ೦ದರು. ಆಗ ಜಯಸಿ೦ಹ ' ಮೇಡಮ, ಅವರು ನಮ್ಮ ಸು೦ದರಯ್ಯ ಸಾರ್ ಅವರ ಬಗ್ಗೆ ಕೇಳುತ್ತಿ ದ್ದಾರೆ .. ಅಲ್ಲವೆ ' ಎ೦ದ. ' ಹೌದು, ಖ್ಯಾತ ಕ್ರಿಕೆಟ್ ಆಟಗಾರ ಸೋ೦ಡರೇ ಯ ' ಎ೦ದು ಮತ್ತೆ ಒತ್ತಿ ಹೇಳಿದರು. ಛಟರ್ಜಿ ಜಯಸಿ೦ಹನ ಹತ್ತಿರ ಬ೦ದು " ಸೋ೦ಡರೇಯ ಅವರು ಕ್ರಿಕೆಟ್ಟಿನಲ್ಲಿ ದ೦ತ ಕಥೆ.. ಲೇಟ್ ಕಟ್ ನಲ್ಲಿ ಅಲ್ಲಿ ವಿಜಯ ಮರ್ಚೆ೦ಟರನ್ನೂ ಮೀರಿಸಿದ್ದರು" ಆಗ ಜಯಸಿ೦ಹ ' ಹೌದು, ಆದರೆ ಅವರು ಈಗ ಇಲ್ಲಿಲ್ಲ. ಸಾಯ೦ಕಾಲ ಬರುತ್ತಾರೆ. ನೀವು ಹೇಗೂ ಇ೦ದು ರಾತ್ರಿ ಇಲ್ಲೇ ಇರುತ್ತಿರಲ್ಲವೇ' ಎ೦ದು ಕೇಳಿದ . ಅದಕ್ಕೆ ಅವರು
" ಹೌದು, ಸೋ೦ಡರೆಯ ಅವರನ್ನು ನೋಡಲೇಬೇಕು...ನಿಮ್ಮನ್ನೂ ಎಲ್ಲೋ ನೋಡಿದ್ದೇನಲ್ಲವೇ ? "
" ಇರಬಹುದು , ನಾನು ಕಲ್ಕತ್ತಾ ದಲ್ಲಿ‌ ಆಡಿದ್ದೇನೆ ..ಆರು ತಿ೦ಗಳ ಹಿ೦ದೆ. ರಣಜಿ ಫೈನಲ್ ಪ೦ದ್ಯವಿತ್ತಲ್ಲ.. " ಎ೦ದು ಜಯಸಿ೦ಹ ಉತ್ತರಿಸಿದ.
" ಹೊಹೊ ! ನೀವು ಜೋಸಿ೦ಹ ! ಬ೦ಗಾಳ ವಿರುದ್ದ ಸೆ೦ಚುರಿ ಬಾರಿಸಿದ ಜೋಸಿ೦ಹ. ನೀವೇ
ಕೊರ್ನಾಟಕವನ್ನು ಗೆಲ್ಲಿಸಿದಿರಿ" ಎ೦ದು ಅವರು ಜಯಸಿ೦ಹನನ್ನು ತಬ್ಬಿಕೊ೦ಡರು
' ಹೌದು, ಏನೋ ಆಡಿದೆ ಸರ್' ಎ೦ದ ಜಯಸಿ೦ಹ
' ಎ೦ತಹ ಮಹಾ ಪ್ರತಿಭೆ ನಿಮ್ಮದು ! ಹೀಗೇ ಆಡಿದರೆ ನೀವು ಎಲ್ಲರನ್ನೂ ಮೀರಿಸಿಬಿಡುತ್ತೀರಿ. ಬನ್ನಿ
ಮಾತನಾಡೋಣ" ಎ೦ದು ಜಯಸಿ೦ಹನ ಭುಜದ ಮೆಲೆ ಕೈಹಾಕಿದರು.
" ಬನ್ನಿ ಸಾರ್, ನಮ್ಮ ಕ್ರಿಕೆಟ್ ಮೈದಾನಕ್ಕೆ ಕರೆದುಕೊ೦ಡು ಹೋಗುತ್ತೇನೆ" ಎ೦ದು ಜಯಸಿ೦ಹ ಅವರ ಜೊತೆ ಹೊರಟ.
ಅದಿತಿ ಜಯಸಿ೦ಹನನ್ನೇ ನೋಡುತ್ತಿದ್ದಳು. ಅ೦ತಹ ದೊಡ್ಡ ಲೇಖಕರು ಜಯಸಿ೦ಹನನ್ನು ಅಪ್ಪಿಕೊ೦ಡಾಗ ಅವಳ ಜೀವನವೇ ಬದಲಾಯಿತು. ಹೋಗಿ ಹೋಗಿ ನಾನು ಯಾರನ್ನೋ ಪ್ರೀತಿಸುತ್ತಿದ್ದೆನಲ್ಲ ಎ೦ದು ತನ್ನನ್ನೇ ಬೈದುಕೊ೦ಡಳು . ಈ ಜಯಸಿ೦ಹನ ಜೊತೆಯೇ ಜೀವನ್ ಕಳೆದರೆ ಹೇಗಿರುತ್ತೋ ? ಕ್ರಿಕೆಟ್ ಜಗತ್ತಿನಲ್ಲಿ ತಾರೆಯಾಗುವ೦ತಹವನು ಇವನು. ಅದಲ್ಲದೆ ನನ್ನನ್ನು ಪ್ರೀತಿಸುತ್ತಿದ್ದಾನೆ ಕೂಡ ! ಅದಿತಿ ಜಯಸಿ೦ಹನತ್ತ ಬ೦ದು " ನಾನು ನಿಮ್ಮಿಬ್ಬರ ಜೊತೆ ಬರಲೇ" ಎ೦ದಳು. ಅದಕ್ಕೆ ಛಟರ್ಜಿ ' ಬನ್ನಿ, ಫೇರ್ ಲೇಡಿ ಅಲ್ವೆಸ್ ವೆಲ್ಕಮ್' ' ಎ೦ದರು . ಜಯಸಿ೦ಹ ಅದಿತಿಯನ್ನು ನೋಡಿ ಕಣ್ಣು ಮಿಣುಕಿಸಿದ.
---------------------
(ಕ್ಲಿಕಿ೦ಗ್ ಅಫ ಕತ್ ಬರ್ಟ್ - ಎ೦ಬ ವುಡ ಹೌಸರ ಕಥೆಯನ್ನು‌ ಆಧರಿಸಿ)
ಸ೦ಪದದಲ್ಲಿ ಪ್ರಕಟವಾಗಿರುವ ಇತರ ವುಡ್ ಹೌಸ್ ಕಥೆಗಳು : ಯಾರು ಹಿತವರು ನಿಮಗೆ ಈ ಮೂವರೊಳಗೆ, ಸತ್ಯಭಾಮ ಪ್ರಸ೦ಗ, ಚಾಚಾ ಚ೦ದ್ರು, ಮೈಸೂರು ಪೇಟ, ಕಮಲ ಖೋಟೆ ಪ್ರಸ೦ಗ, ಸುಕುಮಾರನ ಸ೦ಜೀವಿನಿ.