ಹಸಿವು

ಹಸಿವು

ಆಕೆಯ ಉದರದ ಆಳದಲಿ ಹಸಿವು
ಜಾಡಿಸಿ ಒದ್ದು ಗದ್ದಲವೆಬ್ಬಿಸಿತ್ತು,

ಚಿಂದಿಯಾದ ಚೀಲದ ಅರೆಯೊಳಗೆ
ಬಿಡಿ ಕಾಸೂ ಉಳಿದಿಲ್ಲ ;
ಹರಿದ ಕುಪ್ಪಸದ ಒಳಗೆ ಅಡಗಿದ್ದ
ಕೆಂಪು ಪರ್ಸಿನ ತಳ ಹರಿದಿದೆ;

ಅಲ್ಲೆಲ್ಲೋ ಭಾಷಣದ ಸದ್ದು
"ಬಡತನ ನಿರ್ಮೂಲನೇ ನಮ್ಮ ಗುರಿ"
ದೇಶ ಉದ್ದಾರವಾಗಬೇಕು

ಇನ್ನೆಲ್ಲೋ ಬರಹಗಳ ಮಹಾಪೂರ 
"ದೇಶಕ್ಕೆ (ಬಂಡ)ವಾಳ ಶಾಹಿಗಳು ಬೇಕು"
ದೇಶ ಬೆಳೆಯಬೇಕು

ಹಸಿವು ತಣಿದೀತೆ ?

ಬಿಕ್ಷೆಗೆ ಕೈ ಮುಂದೆ ಸರಿಯಿತು,
"ಮೈ ಕೈ ಗಟ್ಟಿ ಇಟ್ಟುಕೊಂಡಿರುವಾಗ
ಭಿಕ್ಷೆ ಬೇಡುವೆಯ" ---ಬುದ್ದಿವಂತ ಜನರ ಚೀ ತೂ 

ಕೂಲಿ ಕೆಲಸಕ್ಕೆ ಅಲೆದು ಅಲೆದು, 
ಪಾದವೇ ಹರಿದುಹೊಯ್ತು, 
"ದಿಕ್ಕು ದೆಸೆ ಇಲ್ಲದಾಕೆಗೆ ಕೆಲಸವಾರು ಕೊಡುವರು 
ಬೇವರ್ಸಿ ನೀನು" 

ಹಸಿವು ತಣಿದೀತೆ ?

ಕಳ್ಳತನಕ್ಕೆ ಕೈ ಹಾಕಿ, 
ತಿರಸ್ಕ್ರುತಗೊಂಡು, ಗುದ್ದು ಪಡೆದು 
ಮೈ ಕೈ ನೋವು ಜಾಸ್ತಿ ಆಯಿತು

ಆದರೂ ಹಸಿವು ತಣಿದೀತೆ ?

ಕಲೆ ಇರದ ಕಪ್ಪು ಮುಖ 
ಎದೆ ಮೇಲಿನ ಉಬ್ಬು ತಗ್ಗುಗಳು 
ದಾರಿ ಬದಿಯವನ ಕಣ್ಣಲ್ಲಿ ಪ್ರತಿಫಲಿಸಿತು,
ಹೃದಯ, ಮೈ ಮನ ಬೇಡವೆಂದರೂ 
ಹೊಟ್ಟೆ ಕೇಳಿತೇ ?

ಬೆತ್ತಲೆಯಾಯ್ತು !!!!! ಮನ ;

ಅಂದಿಗೆ ಹೊಟ್ಟೆ ತುಂಬಿತ್ತು,

ಎರಡು ಹಸಿವುಗಳ ಸಮ್ಮಿಲನ,,,,,

ಟಿ. ವಿ. ಅಂಗಡಿಯ ಬದಿಯ ಗಾಜಿನಲಿ,
ತನ್ನದೇ ಮುಖ, 
"ವೇ******ಕೆಯ ಸ್ಟಿಂಗ್ ಆಪರೇಶನ್,,,
ಬೃಹತ್ ಜಾಲ ಪತ್ತೆ " 

ಟಿ. ವಿ ಯವರು ಮಾಡಿದ್ದು ಅವರ ಹೊಟ್ಟೆಗಾಗಿ,
ಪತ್ರಿಕೆಯವರು ಬರೆದದ್ದು ಅವರ ಹೊಟ್ಟೆಗಾಗಿ,

ಆದರೆ!! ಅವರು ಕಿತ್ತು ತಿಂದದ್ದು ವೇ*ಯಾ ಅನ್ನವನ್ನು,,,,, 

"ಕೊನೆಗಾಣದ ಭಾವಗಳಿವು"

(ಆಕೆಯ ನೈಜ ಜೀವನದ ಸಾಲುಗಳು)