ಹಸಿ ಮತ್ತು ಬೇಯಿಸಿದ ತರಕಾರಿಗಳಲ್ಲಿ ಉತ್ತಮ ಯಾವುದು?

ಉತ್ತಮ ಆರೋಗ್ಯಕ್ಕಾಗಿ ಸೊಪ್ಪು, ತರಕಾರಿಗಳನ್ನು ತಿನ್ನಬೇಕು ಎನ್ನುವ ಮಾತು ಸಾಮಾನ್ಯ. ಬಹಳಷ್ಟು ಮಂದಿ ಹಸಿಯಾದ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಿತಕರ ಎನ್ನುತ್ತಾರೆ. ಅದಕ್ಕಾಗಿ ಬಗೆ ಬಗೆಯ ಸಲಾಡ್ ಗಳನ್ನು ಮಾಡಿ ತಿನ್ನುತ್ತಾರೆ. ಕೆಲವರ ವಾದದ ಪ್ರಕಾರ ಕೆಲವು ತರಕಾರಿಗಳು ಬೇಯಿಸಿದಾಗಲೇ ಪೋಷಕಾಂಶಗಳನ್ನು ಹೊರಹಾಕುತ್ತವೆ. ಈ ಕಾರಣದಿಂದ ಅವುಗಳನ್ನು ಬೇಯಿಸಿಯೇ ತಿನ್ನಬೇಕು ಅನ್ನುತ್ತಾರೆ.
ಹಸಿ ತರಕಾರಿಗಳಿಗಿಂತ ಬೇಯಿಸಿದ ತರಕಾರಿಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿವೆ. ಜೊತೆಗೆ ಬೇಯಿಸಿದ ತರಕಾರಿಗಳು ರುಚಿಯಾಗಿರುತ್ತವೆ. ಕುದಿಸುವುದು, ಹಬೆಯಲ್ಲಿ ಬೇಯಿಸುವುದು ಮತ್ತು ಹುರಿಯುವುದು ತರಕಾರಿಗಳನ್ನು ಬೇಯಿಸುವ ಅತ್ಯುತ್ತಮ ವಿಧಾನವಾಗಿದೆ. ನಾವು ಅಡುಗೆ ಮಾಡುವ ವಿಧಾನವು ತರಕಾರಿಗಳ ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಬ್ರೋಕೋಲಿಯ ಕ್ಲೋರೋಫಿಲ್, ಸಕ್ಕರೆ, ಪ್ರೋಟೀನ್ ಮತ್ತು ವಿಟಮಿನ್ ಸಿ ಅಂಶವು ಬೇಯಿಸಿದಾಗ ಕಡಿಮೆಯಾಗುತ್ತದೆ. ಆದರೆ ಕುದಿಸುವುದರಿಂದ ಯಾವುದೇ ಬದಲಾಗುವುದಿಲ್ಲ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ. ಅಡುಗೆ ಮಾಡಿದ ನಂತರ ಪೋಷಕಾಂಶಗಳು ಹೆಚ್ಚಾಗುವ ಸೊಪ್ಪು ತರಕಾರಿಗಳು ಯಾವುವು ಎಂದು ನೋಡುವ…
ಪಾಲಕ್ ಸೊಪ್ಪು: ಈ ಸೊಪ್ಪು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವುಗಳನ್ನು ಬೇಯಿಸಿ ತಿಂದಾಗ ನಮಗೆ ಸಂಪೂರ್ಣ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಸಿಗುತ್ತದೆ. ಏಕೆಂದರೆ ಸೊಪ್ಪಿನಲ್ಲಿ ಆಕ್ಸಾಲಿಕ್ ಆಲ್ಮ ಹೆಚ್ಚಾಗಿರುತ್ತದೆ. ಆದ್ದರಿಂದ ಇದು ಹಸಿಯಾಗಿರುವಾಗ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವನ್ನು ನಿರ್ಬಂಧಿಸುತ್ತದೆ. ನಾವು ಪಾಲಕ್ ಸೊಪ್ಪನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಆಮ್ಲವು ಆವಿಯಾಗಿ ನಮಗೆ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ.
ಟೊಮೆಟೋ: ಬೇಯಿಸಿದ ಟೋಮೇಟೋಗಳಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ಜೊತೆಗೆ, ಬೇಯಿಸಿದ ಟೊಮೆಟೋಗಳು ಹಸಿ ಟೊಮೆಟೋಗಿಂತ ಹೆಚ್ಚು ಲೈಕೋಪಿನ್ ಅನ್ನು ಹೊಂದಿರುತ್ತವೆ. ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಅಡುಗೆಗಾಗಿ ಬೇಯಿಸಿದಾಗ ಇದರ ದಟ್ಟವಾದ ಜೀವಕೋಶಗಳು ಒಡೆಯುತ್ತವೆ. ಈ ಕಾರಣದಿಂದ ನಮಗೆ ಅಗತ್ಯವಾಗಿರುವ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ.
ಅಣಬೆ: ಆಂಟಿ-ಆಕ್ಸಿಡೆಂಟ್ ನಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ ಮತ್ತು ಕೆಲವು ಅಪಾಯಕಾರಿ ಕಾಯಿಲೆಗಳಿಂದ ದೂರವಿರಿಸಲು ಸಹಕಾರಿಯಾಗಿರುತ್ತವೆ. ಅಣಬೆಗಳು ಒಂದು ರೀತಿಯ ಶಿಲೀಂದ್ರಗಳಾಗಿದ್ದರೂ ಅವುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಬೇಯಿಸಿದ ಅಣಬೆಗಳು ಅಧಿಕ ಪ್ರಮಾಣದಲ್ಲಿ ಪೊಟ್ಯಾಷಿಯಂ, ನಿಯಾಸಿನ್ ಮತ್ತು ಸತುಗಳ ಅಂಶವನ್ನು ಹೊಂದಿರುತ್ತವೆ.
ಕ್ಯಾರೆಟ್: ಕ್ಯಾರೆಟ್ ನಲ್ಲಿರುವ ಬೀಟಾ-ಕ್ಯಾರೋಟಿನ್ ಅನ್ನು ಕ್ಯಾರೊಟಿನಾಯ್ಡ್ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಪೋಷಕಾಂಶಗಳು ನಮ್ಮ ಮೂಳೆಗಳ ಬೆಳವಣಿಗೆಗೆ, ದೃಷ್ಟಿ ಮತ್ತು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಕಾರಣವಾಗುತ್ತವೆ.
ಯಾವ ತರಕಾರಿಗಳು ಬೇಯಿಸಿದಾಗ ಉತ್ತಮ ಮತ್ತು ಯಾವುದು ಹಸಿ ಉತ್ತಮ ಎಂಬ ಅಂಶವನ್ನು ತಿಳಿದುಕೊಂಡಿದ್ದರೆ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ