ಹಾಗೇ ಸುಮ್ಮನೆ

ಹಾಗೇ ಸುಮ್ಮನೆ

ಬರಹ

ಮುಂಗಾರುಮಳೆಯ ನಿರ್ದೇಶಕ  ಯೋಗರಾಜ್ ಭಟ್ ರವರು, ಆ ಚಿತ್ರವನ್ನು ತಯಾರಿಸುವ ಹಂತದಲ್ಲಿ, ತಮಗಾದ ಅನುಭವಗಳನ್ನು, ತಾವು ಪಟ್ಟ ಕಷ್ಟಗಳನ್ನು, ಹಾಗೂ ತಮಗೆ ನೆರವಾದವರನ್ನು ನೆನೆದು, ಅನುಭವ ಲೇಖನರೂಪ ಬರೆದಿದ್ದರು. ಸುಧಾ ಪತ್ರಿಕೆಯವರು , ಅದನ್ನು ಕಂತುಗಳಲ್ಲಿ ಪ್ರಕಟಿಸಿದರು. ಆದರೆ ಅದು ಒಂದು ಪುಸ್ತಕ ರೂಪದಲ್ಲಿ ಇದ್ದರೆ, ಇನ್ನೂ ಅನೇಕ ಸಾಹಿತ್ಯಾಭಿರುಚಿಯುಳ್ಳ ಓದುಗರನ್ನು ತಲುಪುತ್ತದೆ, ಎಂಬ ಉದ್ದೇಶದಿಂದ, "ಮಳೆ ಪ್ರಕಾಶನ" ದವರು, ಅದನ್ನು ಕೇವಲ 60ರೂಪಾಯಿಗಳಿಗೆ ಇತ್ತೀಚೆಗೆ ಪ್ರಕಟಿಸಿದ್ದಾರೆ. ಆಸಕ್ತರು, ಮಳೆ ಪ್ರಕಾಶನಕ್ಕೆ ಕರೆಮಾಡಿ ಪುಸ್ತಕವನ್ನು ಕೊಂಡುಕೊಳ್ಳಬಹುದು(080-65347511). ಅವರ ಬರವಣಿಗೆಯ ಶೈಲಿ ಸಾಮಾನ್ಯ ಓದುಗನ ಮನವನ್ನೂ ತಟ್ಟುವಂತಿದ್ದು, ನಿರೂಪಣಾಶೈಲಿ ಉತ್ತಮವಾಗಿದೆ.  ನಮ್ಮ ನೆಚ್ಚಿನ ಸಾಹಿತಿ ದಿವಂಗತ ತೇಜಸ್ವಿಯವರ "ಕರ್ವಾಲೊ" ಕಾದಂಬರಿಯಲ್ಲಿ ಬರುವ ಪಾತ್ರ "ಮಂದಣ್ಣನಿಗೆ" ಅವರು ಈ ಪುಸ್ತಕವನ್ನು ಅರ್ಪಿಸಿದ್ದಾರೆ. ನಾವು ಬೇಡವೆಂದು ಮೂಗು ಮುರಿದರೂ,  ಸಿನೆಮಾ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಸಿನೆಮಾ ತಯಾರಿಕೆಯ ಹಂತದಲ್ಲಿ ಪಡುವ ಪಾಡು, ಅದನ್ನು ನೋಡುವ ಚಿತ್ರಪ್ರೇಮಿಗಳಿಗೆ ಗೊತ್ತೇ ಇರುವುದಿಲ್ಲ. ಸಿನೆಮಾ ತಯಾರಿಕೆಯ ಸಿದ್ದತೆಗಳು, ಸವಾಲುಗಳು, ಹಾಗೂ ತಮಾಷೆಗಳು, ಹೀಗೆ ಎಲ್ಲ ಹೂರಣವನ್ನು ಒಳಗೊಂಡಿದೆ ಈ ಪುಸ್ತಕ. ಪ್ರಾಯಶ:, ಕನ್ನಡದಲ್ಲಿ, ಚಲನಚಿತ್ರ ತಯಾರಿಕೆಯ ಬಗ್ಗೆ ಬರೆದಿರುವ ಪುಸ್ತಕವೆಂದರೆ, ಈ ಪುಸ್ತಕವೇ ಪ್ರಥಮ ಎಂದು ನನಗೆ ಅನಿಸುತ್ತಿದೆ. ಹಾಗಾಗಿದ್ದ ಪಕ್ಷದಲ್ಲಿ, ಮುಂದೆಯೂ, ಹೀಗೆ ಅವರಿಂದ , ಸಿನೆಮಾ ಬಗ್ಗೆ ಪುಸ್ತಕಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ.