ಹಾರೋಬೆಲೆ

ಹಾರೋಬೆಲೆ

ಬರಹ

ಇಟಾಲಿಯನ್ ಜೆಸ್ವಿತರಾದ ಸ್ವಾಮಿ ಚಿಮಾವೊ ಮಾರ್ಟಿನ್ರವರು ೩೧-೧೦-೧೯೬೨ ರಲ್ಲಿ ರೋಮ್ಗೆ ಕಳಿಸಿದ ವರದಿಯ ಪ್ರಕಾರ ಅವರು ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿಯಲ್ಲಿ ಕ್ಷೇತ್ರಕಾರ್ಯ ಕೈಗೊಂಡಿರುವಾಗ ಕ್ರಿಸ್ತಶಕ ೧೬೬೦ರಲ್ಲಿ ಕಾನಕಾನಹಳ್ಳಿಯಲ್ಲಿ ಧರ್ಮಪ್ರಚಾರ ಮಾಡಲು ಸ್ಥಳೀಯ ಉಪದೇಶಕನೊಬ್ಬನನ್ನು ಕಳಿಸಿದರಂತೆ. ಆ ಉಪದೇಶಕ ಮತ್ತು ಆ ಸ್ಥಳಗಳ ಪರಿಚಯವಿದ್ದ ಮತ್ತೊಬ್ಬ ಕ್ರೈಸ್ತ ಎರಡು ದಿನಗಳ ಪ್ರಯಾಣ ಮಾಡಿ ಉಯ್ಯಂಬಳ್ಳಿ ಎಂಬ ಊರಿಗೆ ಬರುತ್ತಾರೆ. ಅಲ್ಲಿ ಪಟ್ಟಿ ಜನಾಂಗದ ಯುವಕ, ಅವನ ತಾಯಿ ಮತ್ತು ತಮ್ಮ ಮೊತ್ತಮೊದಲಿಗೆ ಕ್ರೈಸ್ತರಾಗುತ್ತಾರೆ. ಅವನ ಪ್ರೇರಣೆಯಿಂದ ಅವರ ಬಂಧು ಬಳಗದವರೆಲ್ಲ ಕ್ರೈಸ್ತ ಧರ್ಮದ ಕಡೆ ಬರುತ್ತಾರೆ. ಆ ಜನರು ಆ ಉಪದೇಶಕನನ್ನು ತಮ್ಮ ಸ್ವಂತ ಊರಾದ ಹಾರೋಬೆಲೆಗೆ ಕರೆದೊಯ್ಯುತ್ತಾರೆ. ಊರನ್ನು ಸೇರಿದಾಗ ದೇವದೂತನು ಸ್ವರ್ಗದಿಂದ ಇಳಿದು ಬಂದನೋ ಎಂಬಂತೆ ಅವನನ್ನು ಪಟ್ಟಿಗಳೆಲ್ಲರೂ ಹಿರಿಯ ಕಿರಿಯರೆನ್ನದೆ ಸಂತೋಷದಿಂದ ಬರಮಾಡಿಕೊಂಡು ಕ್ರಿಸ್ತೋಪದೇಶವನ್ನು ಆಸಕ್ತಿಯಿಂದ ಪಡೆಯುತ್ತಾರೆ. ಎರಡು ವರ್ಷಗಳ ನಂತರ ಅಂದರೆ ಕ್ರಿಸ್ತಶಕ ೧೬೬೨ ಆಗಸ್ಟ್ ೧೯ರಂದು ಪವಿತ್ರ ಪೂಜೆಯಲ್ಲಿ ಕ್ರೈಸ್ತ ದೀಕ್ಷೆ ಪಡೆದು ಹಾರೋಬೆಲೆ ಕ್ರೈಸ್ತರು ಪುನೀತರಾಗುತ್ತಾರೆ.
ಚಿಮಾವೊ ನಂತರ ೧೬೬೬ರಲ್ಲಿ ಸ್ವಾಮಿ ಎಮ್ಮಾನುವೆಲ್ ಕೊರೆಯಾ, ೧೬೭೬ರಲ್ಲಿ ಅಲ್ಫೋನ್ಸೋ ಮೆಂಡಿಸ್, ೧೬೭೯-೮೩ರಲ್ಲಿ ಮನುವೆಲ್ ರಾಯ್ಸ್, ೧೬೮೬ರಲ್ಲಿ ಮೈಕೆಲ್ ಕೊರೆಯ, ೧೬೯೧ರಲ್ಲಿ ವಿನ್ಚೆಂಸೊ ಪೌಲೊ ಹಾರೊಬೆಲೆಯನ್ನು ಸಂಧಿಸುತ್ತಿದ್ದ ಬಗ್ಗೆ ದಾಖಲೆಯಿದೆ. ೧೭೨೪-೨೯ರಲ್ಲಿ ದೊಡ್ಡ ಬರಗಾಲವಿತ್ತೆಂದೂ ಆ ಸಮಯದಲ್ಲಿ ಒಚಿgಡಿe(ಮಾಗಡಿ?) ಅರಸನು ಹಾರೋಬೆಲೆಗೆ ಮುತ್ತಿಗೆ ಹಾಕಿದ್ದನೆಂದು ಸ್ವಾಮಿ ಪೀಟರ್ ಅಲ್ಮೊನ್ ದಾಖಲಿಸಿದ್ದಾರೆ.
ಯೇಸುಸಭೆಯ ಬಹಿಷ್ಕಾರ, ಬರಗಾಲ, ಲೂಟಿ, ಹಿಂಸೆಗಳಿಂದ ತತ್ತರಿಸಿದ ಹಾರೋಬೆಲೆ ಎಂಇಪಿ ಪಾದ್ರಿಗಳ ಆಗಮನಾನಂತರ ಮತ್ತೆ ಪಲ್ಲವಿಸತೊಡಗಿತು. ಸ್ವಾಮಿ ಶರ್ಬಾನೊರವರು ಹಾರೊಬೆಲೆಯನ್ನು ಪುನರುಜ್ಜೀವಿಸಿದರು. ಜೆಸ್ವಿತರ ಕಾಲದಲ್ಲಿ ಮರಿಯಾ ಜಯಂತಿ ದೇವಾಲಯ ಎಂದು ಕರೆಸಿಕೊಂಡಿದ್ದ ಈ ಊರ ಚರ್ಚು ಫ್ರೆಂಚ್ ಪಾದ್ರಿಗಳ ಕಾಲದಲ್ಲಿ ಜಪಮಾಲೆ ರಾಣಿಯ ದೇವಾಲಯ ಎನಿಸಿಕೊಂಡಿತು. ೧೮೫೯ರಲ್ಲಿ ಸ್ವಾಮಿ ಮೋನ್ತದ್ರಾರವರಿಂದ ನಿರ್ಮಾಣಗೊಂಡ ಚರ್ಚು ಇತ್ತೀಚೆಗೆ ಪುನರ್ನಿರ್ಮಾಣವಾಗಿದೆ.
ಹಾರೋಬೆಲೆ ಊರಿನಲ್ಲಿ ಪ್ರದರ್ಶಿತವಾಗುವ ಯೇಸುಸ್ವಾಮಿಯ ಪೂಜ್ಯ ಪಾಡುಗಳ ನಾಟಕವು ತುಂಬಾ ಪ್ರಸಿದ್ಧವಾಗಿದ್ದು ೨೦೦೫ರ ಏಪ್ರಿಲ್ನಲ್ಲಿ ತನ್ನ ನೂರನೇ ಪ್ರದರ್ಶನ ಕಂಡಿತು.