ಹಾಲಿನ ಹುಡಿಯ ಬರ್ಫಿ

ಹಾಲಿನ ಹುಡಿಯ ಬರ್ಫಿ

ಬೇಕಿರುವ ಸಾಮಗ್ರಿ

ಹಾಲಿನ ಹುಡಿ ೨ ಕಪ್, ನೀರು ಎರಡು ಕಪ್, ಲಿಂಬೆ ಹುಳಿ ರಸ ಕಾಲು ಕಪ್, ಸಕ್ಕರೆ ೧ ಕಪ್, ತುಪ್ಪ. 

 

ತಯಾರಿಸುವ ವಿಧಾನ

ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲಿರಿಸಿ. ಹಾಲು ಕುದಿಯಲು ಪ್ರಾರಂಭವಾಗುವಾಗ ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ನಿಂಬೆಹುಳಿ ರಸವನ್ನು (ಒಮ್ಮೆಲೇ ಹಾಕಬೇಡಿ) ಹಾಕಿ. ಹಾಲು ಒಡೆದು ಪಾಕ ಇನ್ನಷ್ಟು ಗಟ್ಟಿಯಾಗುತ್ತದೆ. ಆ ಕುದಿಯುತ್ತಿರುವ ಪಾಕದಲ್ಲಿರುವ ನೀರಿನ ಅಂಶ ಸಂಪೂರ್ಣವಾಗಿ ಆವಿಯಾದ ಬಳಿಕ ಸಿಗುವ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಆ ಮಿಶ್ರಣಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ. ಈ ಮಿಶ್ರಣವು ತಳ ಹಿಡಿಯದಂತೆ ಆಗಾಗ ಉರಿಯನ್ನು ಹೆಚ್ಚು ಕಮ್ಮಿ ಮಾಡುತ್ತಾ ಕಲಸುತ್ತಾ ಇರಿ. ಪಾಕದ ಬಣ್ಣವು ನಿಧಾನವಾಗಿ ಬದಲಾಗುತ್ತಾ ಬರುತ್ತದೆ. 

ನಂತರ ಉರಿಯನ್ನು ಆರಿಸಿ ಬಾಣಲೆಯನ್ನು ಕೆಳಗಿಳಿಸಬೇಕು. ತುಪ್ಪವನ್ನು ಸವರಿದ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಆ ಮಿಶ್ರಣವನ್ನು ವರ್ಗಾಯಿಸಿ. ತಣ್ಣಗಾದ ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಬರ್ಫಿಂತೆ ತುಂಡು ಮಾಡಿ ಅಥವಾ ಉಂಡೆ, ಶಂಖದ ಆಕೃತಿಯನ್ನು ರಚನೆ ಮಾಡಿ ಮಕ್ಕಳಿಗೆ ಕೊಡಿ.

-ವಾಣಿಶ್ರೀ ವಿನೋದ್, ಪೇರ್ಲಗುರಿ, ಮಂಗಳೂರು