ಹಾಸ್ಯದ ಹೆಸರಲ್ಲಿ ಸಭ್ಯತೆಯನ್ನು ಮೀರದಂತೆ ನಿಯಂತ್ರಣ ಅವಶ್ಯ

ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟಿಕೊಂಡಿರುವ ಹೊಸ ಕಾಲದ ಹಾಸ್ಯಪಟುಗಳು ಬಳಸುತ್ತಿರುವ ಭಾಷೆ, ಹಾಸ್ಯದ ಹೆಸರಿನಲ್ಲಿ ಮಾಡುತ್ತಿರುವ ತುಚ್ಛ ನಿಂದನೆಗಳು ಈಗ ಭಾರೀ ಪ್ರಮಾಣದಲ್ಲಿ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿವೆ. ಮೊನ್ನೆಯಷ್ಟೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ದ್ರೋಹಿ ಎಂದು ಅವಾಂತರ ಸೃಷ್ಟಿಸಿದ್ದ ವಿವಾದಾತ್ಮಕ ವಿದೂಷಕ ಕುನಾಲ್ ಕಾಮ್ರಾ ಇದೀಗ ಭಾರತಕ್ಕೆ ಉದ್ದಿಮೆ ವಲಯದಲ್ಲಿ ಹೊಸ ಗುರುತು ನೀಡಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ಹಾಗೂ ಮಹೀಂದ್ರಾ ಸಮೂಹದ ಆನಂದ್ ಮಹೀಂದ್ರಾ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾನೆ. ಶಿಂಧೆ ಕುರಿತು ಆಡಿದ್ದ ಮಾತಿನಿಂದಾಗಿ ಕುನಾಲ್ ಶೋ ನಡೆದ ಸ್ಟುಡಿಯೋವನ್ನೇ ಧ್ವಂಸಗೊಳಿಸಲಾಗಿತ್ತು. ಕಾನೂನು ಕ್ರಮವೂ ಆರಂಭವಾಗಿತ್ತು. ಇಷ್ಟಾದರೂ ಆತ ಎಚ್ಚೆತ್ತುಕೊಂಡಿಲ್ಲ. ಅಪಹಾಸ್ಯ ನಿರಂತರವಾಗಿ ಮುಂದುವರಿಸಿದ್ದಾರೆ. ಕಾನೂನಿನ ಬಲಿಷ್ಟ ಬಾಹುಗಳ ಶಕ್ತಿ ಅಪಹಾಸ್ಯ ಮಾಡುವವರಿಗೆ ಗೊತ್ತಾಗಬೇಕಿದೆ ಎಂಬುದಂತೂ ಸತ್ಯ.
ತಿಳಿ ಹಾಸ್ಯ ಮೊದಲಿನಿಂದಲೂ ಜನಪ್ರಿಯವಾಗಿಯೇ ಇದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ಸ್, ಲೈಕ್ಸ್ ಪಡೆಯುವ ಹಾಗೂ ಬೆಂಬಲಿಗರನ್ನು ಗಳಿಸುವ ಉಮೇದಿನಲ್ಲಿ ಈಗಿನ ವಿದೂಷಕರು ಸಭ್ಯತೆಯ ಎಲ್ಲೆಯನ್ನು ಮೀರಿ ಮಾತನಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯ ದೇಹ ರಚನೆ, ಲೈಂಗಿಕತೆ, ವೇಷ ಭೂಷಣವೂ ಇವರ ಬಂಡವಾಳ. ಇಂತಹ ಮಾತುಗಳಿಗೆ ಅವರು ಎಷ್ಟು ಹೊಣೆಗಾರರೋ, ಅವರ ಹಾಸ್ಯವನ್ನು ಕಂಡು ಗಹಗಹಿಸಿ ನಕ್ಕಿ ಹುರಿದುಂಬಿಸುವವರೂ ಅಷ್ಟೇ ಹೊಣೆಗಾರರು. ಕೆಲ ದಿನಗಳ ಹಿಂದೆ ಪ್ರಖ್ಯಾತ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಎಂಬಾತ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಪೋಲೀಸ್ ಠಾಣೆ, ಕೋರ್ಟ್ ಗೆ ಅಲೆಯಬೇಕಾದ ಪರಿಸ್ಥಿತಿ ಬಂದಿತ್ತು.
ಹಾಸ್ಯ ಎಂಬುದು ಸಭ್ಯತೆಯ ಒಳಗೆಯೇ ಇರಬೇಕು. ಅದನ್ನು ಮೀರಿ ಹೋಗಬಾರದು. ದೇಶಕ್ಕೆ ಮಾದರಿಯಾದ ವ್ಯಕ್ತಿಗಳ ಅವಹೇಳನವನ್ನು ಯಾರೂ ಸಹಿಸಲಾರರು. ಹಾಗೆ ಮಾಡಿದರೆ ಮಹಾತ್ಮರು, ಹುತಾತ್ಮರನ್ನೂ ಈ ವಿದೂಷಕರು ತಮ್ಮ ಸ್ವಾರ್ಥಕ್ಕಾಗಿ ನಗೆಪಾಟಲಿಗೆ ಈಡು ಮಾಡಿಬಿಡುತ್ತಾರೆ. ಹಾಸ್ಯ ಎಲ್ಲರಿಗೂ ಬೇಕು. ಆದರೆ ಹಾಸ್ಯದ ಹೆಸರಿನಲ್ಲಿ ಅಪಹಾಸ್ಯ, ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ. ಹಾಸ್ಯಗಾರರು ತಮ್ಮ ಮಿತಿ ಮೀರದಂತೆ ನಡೆದುಕೊಳ್ಳಬೇಕು. ಈ ಬಗ್ಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೯-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ