ಹಾಸ್ಯ ಬರಹ
ಸಾಹಿತಿಯೊಬ್ಬ ಡಾಕ್ಟರ್ ಬಳಿ ಹೋಗಿ : If wealth is lost, nothing is lost, If health is lost, some thing is lost, If character is lost everything is lost ಅಂತಾ ನೀವೊಂದಿನ ಭಾಷಣದಲ್ಲಿ ಮಾತಾಡಿದ್ದು ನೆನಪಿದೆ. ಈಗ ನಾನು ವ್ಯಾಪಾರದಲ್ಲಿ ಲಾಸ್ ಆಗಿದೀನಿ.ನನ್ನ ಹತ್ರ ವೆಲ್ತ್ ಇಲ್ಲ. ನನ್ನ ಹೆಲ್ತ್ ತುಂಬಾ ಹದಗೆಟ್ಟಿದೆ. ನಿಮ್ಮ ಭಾಷಣದ ಉಪದೇಶವನ್ನು ನಾನು ತುಂಬಾ ಅರ್ಥಗರ್ಭಿತವಾದದ್ದು ಎಂದು ತಿಳಿದಿದ್ದೇನೆ. ನೀವು ಸ್ಟೇಜ್ ಮೇಲೆ ಒಂದು, ಕೆಳಗೆ ಒಂದು ಮಾತಾಡುವವರಲ್ಲಾ, ಅಂತಾ ನನಗೆ ಚೆನ್ನಾಗಿ ಗೊತ್ತು. ನೀವು ರಾಜಕಾರಣಿ ಅಲ್ಲಾ ಅಂತಾ ಗೊತ್ತು. ನೀವು ನುಡಿದಂತೆ ನಡೆಯುವವರು. ಡಾಕ್ಟರ್ ಪ್ರೊಫೆಷನ್ ತುಂಬಾ ನೋಬಲ್ ಪ್ರೊಫೆಷನ್ ಅಂತಾ ಎಲ್ಲರೂ ತಿಳಿದಿದ್ದಾರೆ. ವೈದ್ಯೋ ನಾರಾಯಣೋ ಹರಿಃ, ಆದ್ದರಿಂದ ನಿಮ್ಮ ಮಾತುಳಿಸಿಕೊಳ್ಳಲು, ನನಗೆ ಒಬ್ಬನಿಗಾದರೂ, ಫ್ರೀಯಾಗಿ ಟ್ರೀಟ್ ಮೆಂಟ್ ಮಾಡಿ. ನಿಮಗೆ ಪುಣ್ಯ ಬರುತ್ತದೆ.
ಡಾಕ್ಟರ್: ಆ ಗಾದೆ ನಾನು ಹುಟ್ಟಿ ಹಾಕಿಲ್ಲಪ್ಪಾ, ಅದು ಇಂಗ್ಲೀಷ್ ನವರ ಗಾದೆ. ಆದನ್ನ ಅವರು ಶುಭಾಷಿತದ ರೂಪದಲ್ಲಿ ಹೇಳಿದ್ದಾರೆ. ನಾನು ಸಮಯಕ್ಕೆ ಸರಿಯಾಗಿ ಭಾಷಣದಲ್ಲಿ, ಇಂಗ್ಲೀಷ್ ನವರು ಹೀಗೆ ಹೇಳಿದ್ದಾರೆ ಅಂತಾ ಮೆನ್ ಷನ್ ಮಾಡಿದೆ, ಅಷ್ಟೇ. ಮನುಷ್ಯ ಹಣಕ್ಕಾಗಿ ಕೆಟ್ಟದಾರಿ ಹಿಡಿಯಬಾರದು ಅಂತಾ ಮಾತ್ರ ಅದರ ಅರ್ಥ ಅಷ್ಟೇ, ಆದರೆ ನಾನೇ ಅದನ್ನು ಸ್ಟ್ರಿಕ್ಟಾಗಿ ಪಾಲಿಸುತ್ತೇನೆ ಎಂದು ಸ್ಟೇಜ್ ಮೇಲೆ ಶಪಥ ಮಾಡಿದೆನೇ, ಹೇಳು ನೀನೇ. ಯಾವ ಗಾದೆಯಾಗಲೀ, ಲೋಕೋಕ್ತಿಯಾಗಲೀ, ಪ್ರಾವರ್ಬ್ ಆಗಲೀ 100 ಪರ್ಸೆಂಟ್ ಅಪ್ಲೈ ಆಗಲ್ಲಪ್ಪಾ.ಎಲ್ಲದಕ್ಕೂ ಅಪವಾದಗಳು ಇರುತ್ತವೆ. ಈ ಡೈರೆಕ್ಷನ್ ನಲ್ಲಾಗಲೀ, ಆ ಡೈರೆಕ್ಷನ್ ನಲ್ಲಾಗಲೀ, ಸ್ವಲ್ಪ ಬಿಟ್ಟೇಬಿಡುತ್ತದೆ. ಯಾವ ವೈದ್ಯ ಪದ್ದತಿಯೂ ಪರಿಪೂರ್ಣವಲ್ಲಾ, ಅಂತಾ ನಾನು ಒಂದು ಪೇಪರ್ನಲ್ಲಿ ಓದಿದ್ದು ಜ್ಞಾಪಕ ಬರ್ತಿದೆ.ವೈದ್ಯೋ ನಾರಾಯಣೋ ಹರಿಃ ಆದರೂ, ಡಾಕ್ಟರ್ಗೆ ಗೊತ್ತಿರೋದು 75 % ಮಾತ್ರ.ಇನ್ನು 25% ಗೊತ್ತಿರೋದು ದೇವರಿಗೆ ಮಾತ್ರ. ನಮ್ಮ ದೇಹ ರಚನೆ ತುಂಬಾ ಕ್ಲಿಷ್ಟಕರವಾದದ್ದು, ಮಿದುಳಂತೂ ಇನ್ನೂ ಅಚ್ಚರಿಯೇ ಸರಿ. ಯಾವ ವಿದ್ಯೆಯೂ ಪರಿಪೂರ್ಣವಲ್ಲ. ನಾನು ಭಾಷಣ ಕೊಟ್ಟ ತಪ್ಪಿಗೆ ಎಲ್ಲರಿಗೂ ಫ್ರೀ ಟ್ರೀಟ್ ಮೆಂಟ್ ಮಾಡಿದರೆ ನನ್ನ ಸಂಸಾರವನ್ನು ಹೇಗೆ ಸಾಗಿಸೋದು, ಎಲ್ಲರಿಗೂ ಫ್ರೀ ಟ್ರೀಟ್ ಮೆಂಟ್ ಮಾಡ್ತಾ ಇದ್ರೆ, ನಾನು ಬೀದೀಗ್ ಬರ್ತೀನಿ.ಆಗ ನಾನು ಕಳ್ಳತನ ಮಾಡಿದರೆ, ನನ್ನ ಕ್ಯಾರಕ್ಟರ್ ಹಾಳಾಗುತ್ತೆ. ಆಗ ನಾನು ನನ್ನ ಮಾತಿನ ಪ್ರಕಾರಾನೇ ಕ್ಯಾರಕ್ಟರ್ ಕಳೆದುಕೊಂಡರೆ, ನಾನೇ ಎಲ್ಲಾ ಕಳೆದುಕೊಂಡಂತಾಗುತ್ತದೆ. ಆದ್ದರಿಂದ ನಾನು ನನ್ ಮಾತನ್ನೇ ವಾಪಸ್ ತೆಗೆದುಕೊಳ್ಳಬೇಕಾಗುತ್ತದೆ. ಅದು ಸರೀನಾ, ನೀನೇ ಹೇಳು. ಆಡಿದ ಮಾತಿಗೆ ವಿರುದ್ಧ ಹೋದಂತಾಗುವುದಿಲ್ಲವೇ.ಈಗ ತಾನೇ ನೀನೇ ಹೇಳಿದೆ “ವೈದ್ಯೋ ನಾರಯಣೋ ಹರಿಃ” ಅಂತಾ. ಅದಕ್ಕೆ ನನ್ನ ನಾರಾಯಣನನ್ನಾಗಿ ಮಾಡಿಬಿಡಪ್ಪಾ.
ಸಾಹಿತಿ: ನಾನೇನ್ ದೇವ್ರಾ, ನಿಮ್ಮನ್ನ ನಾರಾಯಣ ಮಾಡಕ್ಕೇ.....ಆಮೇಲೆ ನಿಜ ಹರಿ ನನ್ನನ್ನ ಒದ್ದು ಶಿಕ್ಷೆ ಕೊಡ್ತಾನೆ.ಜಯವಿಜಯರಿಗೆ ನೀವು ಮೂರು ಜನ್ಮ ತಾಳಿ ಅಂತಾ ಶಾಪ ಕೊಡ್ಲಿಲ್ವಾ
ಡಾಕ್ಟರ್: ಈಗ ನೋಡಪ್ಪಾ, ನೀನೇ ನಿನ್ನ ಮಾತನ್ನ ತೆಗೆದು ಹಾಕ್ತಿದ್ದೀಯಾ. ನಿನ್ನ ಹಾಗೇ ನಾನೂ ನಿನಗೆ ಫ್ರೀ ಟ್ರೀಟ್ ಮೆಂಟ್ ಕೊಡಲಾಗುವುದಿಲ್ಲ.ಆಮೇಲೆ ಎಲ್ಲರೂ ಆದನ್ನೇ ಕೇಳ್ತಾರೆ, ಭಾಷಣದಲ್ಲಿ ಹೇಳಿದ್ರಲ್ಲಾ ಅಂತಾ. ನಾನು ನನ್ನ ಶಾಪ್ ಮುಚ್ಚಿಕೊಂಡು, ಈಗ ನೀನಾಗಿದೀಯಲ್ಲಾ, ಅದೇ ತರಹ ಭಿಕ್ಷೆ ಬೇಡಬೇಕಾಗುತ್ತೆ.ದುಡ್ಡು ಕಳಕೊಂಡ್ರೆ ದುಃಖ ಪಡಬೇಡಿ ಅಂತಾ, ಹೇಳಿದೆನೇ ಹೊರತು, ಕಾಯಕ ಮಾಡಬೇಡಿ, ಕೂತ್ಕೊಂಡ್ ತಿನ್ನಿ ಅಂತಾ ಹೇಳಿದೆನೇ. “ಉದ್ಯೋಗಂ ಪುರುಷ ಲಕ್ಷಣಂ”, ಕೂತು ತಿನ್ನೋನಿಗೆ ಕುಡಿಕೆ ಹಣ ಇದ್ರೂ ಸಾಲಲ್ಲ. ಕಾಯಕವೇ ಕೈಲಾಸ ಅಂತಾ ಬಸವಣ್ಣನವರು ಹೇಳಿಲ್ಲವೇ.ಭಿಕ್ಷೆ ಬೇಡುವುದೇ ಕೈಲಾಸ ಅಂತಾ ಅವರೇನಾದ್ರೂ ಉಲ್ಟಾ ಹೇಳಿದಾರಾ, ತಪ್ಪು ಪ್ರಿಂಟಾಗಿ ಅಂಥದ್ದನ್ನೆಲ್ಲಾ ಏನಾದ್ರೂ ಓದ್ಕೊಂಡ್ ಬಂದಿದ್ದೀಯಾ, ಇಲ್ಲಾ ಕುಡಿದು ಬಂದಿದ್ದೀಯಾ ಅಥವಾ ಮೆಂಟಲ್ ಆಸ್ಪತ್ರೆಯಿಂದ ಓಡಿ ಬಂದಿದೀಯಾ?
ಸಾಹಿತಿ :ಏನ್ ಸ್ವಾಮಿ, ನಾನ್ ಹುಚ್ಚ ಕಾಣ್ದಂಗ್ ಕಾಣ್ತಿದೀನಾ ನಿಮ್ಗೆ….?
ಡಾಕ್ಟರ್: ಮತ್ತಿನ್ನೇನೂ, ನಿಮ್ಮಂತಾ ಸಾಹಿತಿಗಳು ಬರೆದದ್ದನ್ನು, ನಾವು ಓದಿ ಅದನ್ನ ನಮ್ಮ ಭಾಷಣದಲ್ಲಿ ಬಳಸಿದರೇ ಅದೇ ತಪ್ಪಾಯಿತಲ್ಲಾ!
ಸಾಹಿತಿ : ಸುತ್ತೂ ಬಳಸಿ ನನಗೇ ತಿರುಗುಬಾಣ ಬಿಡ್ತಿದ್ದೀರಾ, ಆದರೆ ನೀವು ಹೇಳಿದ ಆದರ್ಶ ನಾನು ನನ್ನ ಗ್ರಂಥಗಳಲ್ಲಿ ಹೇಳಿಲ್ಲವಲ್ಲಾ. ಹಾಗಾದರೆ ಸಾಹಿತಿಗಳು ಹೇಳಿದ್ದೆಲ್ಲಾ ನಂಬಿಬಿಡ್ತೀರಾ? ನಾನು ನನ್ನ ಮುಂದಿನ ಗ್ರಂಥಗಲ್ಲಿ ಈ ಡಾಕ್ಟರ್ ತುಂಬಾ ಆದರ್ಶ ವ್ಯಕ್ತಿ, ಅವರಿಗೆ ವೆಲ್ತ್ ಬೇಡ್ವಂತೇ, ಎಲ್ಲಾ ದಾನ ಮಾಡ್ಬಿಡ್ತಾರಂತೇ,ಅಂತಾ ಬರೆದರೆ, ನೀವು ಎಲ್ಲಾ ದಾನ ಮಾಡ್ಬಿಡ್ತೀರಾ?
ಡಾಕ್ಟರ್: ಅದನ್ನೇನಪ್ಪಾ, ನಾನೂ ಹೇಳ್ತಿರೋದು.ನಾನ್ ಸ್ಟೇಜ್ ಮೇಲೆ ಹೇಳ್ದಂಗೆಲ್ಲಾ, ಅದೂ ಬೇರೆಯವರು ಹೇಳಿದ್ದನ್ನಾ ರಿಪೀಟ್ ಮಾಡಿದರೇ, ಅದರ ಪ್ರಕಾರ ನಾನು ನಡಕೊಳ್ಳಕ್ಕಾಗುತ್ತಾ, ಪುಸ್ತಕದಲ್ಲಿ ಬರೆದಿದ್ದೆಲ್ಲಾ ಪ್ರತಿಷ್ಠಾನಕ್ಕೆ ತರಕ್ಕಾಗುತ್ತಾ , ಪುಸ್ತಕದಲ್ಲಿ ಬರೆದಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ಹಾಗೆ ಅರ್ಥ ಮಾಡ್ಕೋಬೇಕು. ಅದನ್ನ ಇಂಚಿಂಚೂ ಎಳೆದರೆ ಹುಚ್ಚ ಅಂತಾರೆ.
ಸಾಹಿತಿ : ನೋಡಿ ನೋಡಿ ಮತ್ತೆ ನನ್ನ ಮೆಂಟಲ್ ಅಂತಾ ಇದೀರಾ ಹಾಗಾದರೆ ನೀವು ಹೇಳೋದೊಂದು ಮಾಡೋದೊಂದು ಅಂತಾ ಆಯ್ತು.
ಡಾಕ್ಟರ್:ಎಲ್ಲರಿಗೂ ಇರುತ್ತೆ ಹುಚ್ಚು, ಆದರೆ ಅದು ಸಾಹಿತಿಗಳಿಗೆ ಸ್ವಲ್ಪ ಹೆಚ್ಚು ಅಂತಾ ನನಗೆ ಚೆನ್ನಾಗಿ ಗೊತ್ತು. ಹೌದಪ್ಪಾ, ನಾನು ಹೇಳೋದ್ ಒಂದು ಮಾಡೋದೊಂದು, ಅಂತಾ ಗೊತ್ತಾಯ್ತಲ್ಲಾ, ಇನ್ ಇಲ್ಲಿಂದ ಗಾಡಿ ಬಿಡು.ನಾನು ಬೇರೇ ಪೇಷೆಂಟ್ ಗಳ್ನಾ ನೋಡ್ಬೇಕು.ನಿಮಗೆ ಸಾಹಿತಿಗಳಿಗೆ ಕೆಲಸ ಇಲ್ಲಾ ಅಂತಾ ಏನೇನೋ ಬರಕೊಂಡ್ ಕೂತ್ಕೊಂತೀರಾ. ನಮಗೆ ಮುಖ್ಯ ಕೆಲಸಗಳಿರ್ತಾವೆ.
ಸಾಹಿತಿ : ಇಲ್ಲಾ ಡಾಕ್ಟರೇ, ನಾನು ನಿಮ್ಮನ್ನೇ ನಂಬಿ ಬಂದಿದ್ದೀನೀ......
ಡಾಕ್ಟರ್:ಸಾಲಾನಾದ್ರೂ ಬೇಕಾದ್ರೆ, ಸ್ವಲ್ಪ ಕೊಡ್ತೀನಿ, ಆಯ್ತಾ?
ಸಾಹಿತಿ : ಆಯ್ತು ಡಾಕ್ಟರ್, ತುಂಬಾ ಉಪಕಾರವಾಯ್ತು. ಅದಕ್ಕೇ ಡಾಕ್ಟರೇ, ನಾನು ಹೇಳಿದ್ದು, ನಿಮಗೆ ಒಳ್ಳೆ ಮನಸಿದೆ ಅಂತಾ.
ಡಾಕ್ಟರ್:ಆಯ್ತಪ್ಪಾ ಆಯ್ತಪ್ಪಾ, ಏನ್ ಪ್ರಾಬ್ಲಮ್ಮು?
ಸಾಹಿತಿ : ನನಗೆ ಲಾಸ್ ಆಗಿದ್ಯಲ್ಲಾ, ಅದೆಲ್ಲಾ ಹೇಗೆ ಕವರ್ ಅಪ್ ಮಾಡ್ಕೋಬೇಕು, ಸ್ವಲ್ಪ ಐಡಿಯಾ ಕೊಡಿ ಡಾಕ್ಟರೇ.
ಡಾಕ್ಟರ್: ಅಯ್ಯೋ ನೀನು ತಲೆ ಕೆಟ್ಟ ಆಸಾಮಿ. ನಾನು ಚಾರ್ಟೆಡ್ ಅಕೌಂಟೆಂಟ್ ಅಲ್ಲಪ್ಪಾ, ವ್ಯಾಪಾರೀನೂ ಅಲ್ಲ.ನಿನ್ನ ವ್ಯಾಪಾರ ನನಗೇನ್ ಗೊತ್ತೂ, ಯಾರಲ್ಲೀ......... ಇವನನ್ನ ಹೊರಗೆ ಕಳಿಸಿ....ತಲೆ ತಿಂತಿದಾನೇ.....
ಹೊರಗೆ ಒಡಿಸಿದರು.