ಹಿಜ್ರಾಗಳು ಎಂದರೆ ಯಾರು?
ಟ್ರಾಪಿಕ್ ಸಿಗ್ನಲ್ ಗಳಲ್ಲಿ ರೈಲುಗಳಲ್ಲಿ ಮಾಮ ಮಾಮ ಎಂದು ಅಡ್ದ ಗಟ್ಟಿ ಹಣವಸೂಲಿ ಮಾಡುವವರನ್ನು ನಾವು ಕಾಣುತ್ತೇವೆ. ಹಣ ಕೊಟ್ಟರೆ ಪರವಾಗಿಲ್ಲ ಇಲ್ಲ ಅಂದ್ರೆ ಬೈದು ಹೋಗುವುದಂತು ಗ್ಯಾರಂಟಿ ಆದ್ರೆ ಕೆಲವರು ಹಣ ಕೇಳ್ತಾರೆ ಇಲ್ಲ ಅಂದ್ರೆ ಸುಮ್ನೆ ಹೋಗ್ತಾರೆ ಹೀಗೆ ಹಲವಾರು ಜನ ಇರ್ತಾರೆ ಇವರನ್ನ ಹಿಜ್ರಾ ಎಂದು ಕರೆಯುವುದು ರೂಡಿ. ಇತ್ತೀಚೆಗೆ ಇವರ ಸಹಾಯಕ್ಕೆ ನಿಂತ ಸಂಸ್ಥೆಯೊಟ್ಟಿಗೆ ವೆಬ್ ಸೈಟ್ ಕೆಲ್ಸ ಮಾಡುವ ಆರು ತಿಂಗಳ ಕೆಲ್ಸ ಮಾಡುತ್ತಿರಬೇಕಾದ್ರೆ ಹಿಜ್ರಾಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಮತ್ತು ಹಿಜ್ರಾಗಳ ಚರಿತ್ರೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಹಿಜ್ರಾಗಳು ದಕ್ಷಿಣ ಏಷ್ಯಾದಲ್ಲಿ ಅತೀ ಹೆಚ್ಚು ಎದ್ದು ಕಾಣುವ ಲೈಂಗಿಕತೆ ಶೋತರು (ಲೈಂಗಿಕ/ಲಿಂಗ ಅಭಿವ್ಯಕ್ತಿಂದಾಗಿ ಶೋಷಣೆಗೆ ಒಳಪಟ್ಟವರು) ಇವರು ಹುಟ್ಟುವಾಗ ಗಂಡಾಗಿ ಹುಟ್ಟಿ ಹೆಣ್ಣಿನಂತಿರಲು ಬಯಸಿ ಲಿಂಗ ಬದಲಾಸಿಕೊಂಡು (ಪುರುಷ ಲೈಂಗಿಕ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿಕೊಳ್ಳುವುದು, ಸಾಂಪ್ರದಾಕವಾಗಿ ಈ ಪ್ರಕ್ರಿಯೆಯನ್ನು ನಿರ್ವಾಣ ಎಂದು ಕರೆಯಲಾಗುತ್ತದೆ) ಹಿಜ್ರಾಗಳ ಸಮುದಾಯಕ್ಕೆ ಸೇರುತ್ತಾರೆ.
ವಿವಿಧ ಹೆಸರುಗಳು: ಮುಖ್ಯವಾಗಿ ಫಿಲಿಫೈನ್ಸ್ನಲ್ಲಿ ಇವರನ್ನು ಬಕ್ಲಾಸ್ ಎಂದು, ಆಫ್ರಿಕಾದಲ್ಲಿ ಸಿರ್ರೆಸ್ ಎಂದು, ಭಾರತದಲ್ಲಿ ಹಿಜ್ರಾಸ್, ಜೋಗಪ್ಪ, ಜೋಗ್ತಾ ಎಂದು, ಆಂಧ್ರದಲ್ಲಿ ಶಿವಶಕ್ತಿ, ತಮಿಳುನಾಡಿನಲ್ಲಿ ಅರವಾಣೀಸ್ ಎಂದು ಕರೆಯಲಾಗುತ್ತದೆ. ಸಮಾಜದಲ್ಲಿ ತಾರತಮ್ಯ ಮತ್ತು ಕಳಂಕದಿಂದ ಕಾಣಿತಿರುವುದಕ್ಕೆ ಸಾಕ್ಷಿಯಾಗಿ ಇವರನ್ನು ಖೋಜಾ, ನಪುಂಸಕ, ಹಿಜಿಡಾ, ಶಿಖಂಡಿ, ಕೊಚ್ಚಿ, ಖೊಜ್ಜ, ಕಂಚುಕಿ ಎಂದು ಹಿಜ್ರಾಗಳಿಗೆ ಅವಮಾನಕರ ಶಬ್ದಗಳನ್ನು ಬಳಸಿ ಹಿಯಾಳಿಸಲಾಗುತ್ತದೆ. ಸಾಮಾನ್ಯವಾಗಿ ಇಂಗ್ಲೀಷ್ನಲ್ಲಿ ಯುನಕ್ ಎಂದು ಕರೆಯಲ್ಪಡುತ್ತಾರೆ, ಆದರೆ ಈ ಶಬ್ದವೂ ಕೂಡ ಹಿಜ್ರಾಗಳಿಗೆ ಅವಮಾನದ ಸಂಕೇತವಾಗಿದೆ. ಹಿಂದಿಯ ಶಬ್ದ ಹಿಜ್ರಾ (ಪರ್ಯಾಯವಾಗಿ ಹಿಜಿರಾ, ಹಿಜ್ಡಾ, ಹಿಜಡಾ, ಹಿಜರಾ, ಹಿಜ್ರಾಹ್)ವನ್ನು ದೇವನಾಗರಿ ಭಾಷೆಯಲ್ಲಿ ಬರೆಯಲಾಗಿದೆ.ಹಿಜ್ರಾ, ಹಿಜ್ಡಾ ಎಂದು ಉಚ್ಚರಿಸಲ್ಪಡುವ ಈ ಶಬ್ದವು ಮುಸ್ಲಿಂಮರ ಮುಖಾಂತರ ಭಾರತಕ್ಕೆ ಬಂತೆಂಬುದು ಐತಿಹ್ಯವಿದೆ. ಅದಕ್ಕೂ ಹಿಂದೆ ಹಿಜ್ರಾಗಳನ್ನು ಕಿನ್ನಾರ್ ಎಂದು ಕರೆಯಲಾಗುತ್ತಿತ್ತು. ಇದು ಗೌರವ ಸೂಚಕವಾದ ಶಬ್ದವಾಗಿತ್ತು. ಆದರೆ ಹಿಜ್ರಾ ಎನ್ನುವ ಶಬ್ದಕ್ಕೆ ಹಿಂದಿಯಲ್ಲಿ ಚಕ್ಕಾ ಎನ್ನುವ ಅವಮಾನಕರ ಅರ್ಥವಿದೆ. ಭಾರತದ ಉಪಖಂಡದಲ್ಲಿ ವಿವಿಧ ಸಾಂಸ್ಕೃತಿಕ ವಿಭಿನ್ನತೆ ಮತ್ತು ಭಾಷಾ ವಿಭಿನ್ನತೆಂದಾಗಿ ಬೇರೆ ಬೇರೆ ಕಡೆ ಲಿಂಗ, ಲಿಂಗತ್ವವನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ಅರವಣ್ಣಿ, ಅರವಾಣಿ ಅಥವಾ ಅರುವಾಣಿ ಎಂದು ಕರೆಯಲಾಗುತ್ತದೆ. ಕೇರಳದ ಕೊಚ್ಚಿನ್ನಲ್ಲಿ ಮೆನಕ, ನೇಪಾಳದಲ್ಲಿ ಮೇತಿ ಎಂದು ಕರೆಯಲಾಗುತ್ತದೆ. ಉರ್ದುವಿನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಖುಸ್ರ ಎಂದು ಕರೆಯಲಾಗುತ್ತದೆ, ಜಂಖ, ಜಿನಾನ ಎಂದು ಸಹ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಯಲ್ಲಮ್ಮನ ಪೂಜಿಸುವ ಗಂಡು ಪೂಜಾರಿಗಳು ಹೆಣ್ಣಿನ ಬಟ್ಟೆ ಧರಿಸಿ ಜೋಗಪ್ಪ ಎಂದು ಕರೆದುಕೊಳ್ಳುತ್ತಾರೆ. ಇವರು ಕೂಡ ಹಿಜ್ರಾಗಳ ರೀತಿಯಲ್ಲೇ ನಾಮಕರಣ, ಮದುವೆ ಸಮಾರಂಭಗಳಲ್ಲಿ ನೃತ್ಯ ಮತ್ತು ಹಾಡುಗಳ ಪ್ರದರ್ಶನವನ್ನು ಮಾಡುತ್ತಾರೆ.
ಇತಿಹಾಸ: ಹಿಜ್ರಾಗಳು ಅಸ್ಥಿತ್ವ ಜಗತ್ತಿನ ಅತ್ಯಂತ ಪುರಾತನ ನಾಗರೀಕತೆಗಳಲಿ, ಸಂಸ್ಕೃತಿಗಳಲ್ಲಿ, ಪುರಾಣಗಳಲ್ಲಿ, ಪಾರಂಪರೀಕ ಸಂಪ್ರದಾಯಗಳಲ್ಲಿ ಹಾಗೂ ಶಿಲ್ಪಕಲೆಗಳಲ್ಲಿ, ನಾವು ಕಾಣಬಹುದು. ಉಪಖಂಡದ ಹಿಂದಿನ ದಾಖಲೆಗಳಲ್ಲಿ ಮೂರನೆ ಲಿಂಗದ ಉಲ್ಲೇಖವಿದೆ. ಮಹಾಭಾರತದಲ್ಲಿ ಅರ್ಜುನ ಮತ್ತು ನಾಗಕನ್ಯೆಗೆ ಜನಿಸಿದ ಅರವಾಣ ಎನ್ನುವ ಪುತ್ರನನ್ನು ಕುರುಕ್ಷೇತ್ರ ಯುದ್ಧವನ್ನು ಗೆಲ್ಲಲು ಕಾಳಿಗೆ ಬಲಿ ಕೊಡಲು ನಿರ್ಧರಿಸಲಾಗುತ್ತದೆ, ನಿಬಂಧನೆಯೆಂದರೆ ಅರವಾಣ ಕೊನೆಯ ರಾತ್ರಿ ಒಬ್ಬ ಹೆಣ್ಣಿನ ಜೊತೆಗೆ ಕಾಲಕಳೆಯ ಬೇಕು, ಸಾಯಲು ಸಿದ್ದವಾಗಿರುವ ಅರವಾಣನನ್ನು ಯಾರೂ ಮದುವೆಯಾಗಲು ಒಪ್ಪುವುದಿಲ್ಲ. ಆಗ ಶ್ರೀಕೃಷ್ಣ ಮೋಹಿನಿ ಅವತಾರದಲ್ಲಿ ಬಂದು ಅರವಾಣನನ್ನು ಮದುವೆಯಾಗುತ್ತಾನೆ. ಈ ಹಿನ್ನೆಲೆಂದ ತಮಿಳುನಾಡಿನ ಹಿಜ್ರಾಗಳು ಅರವಾಣನನ್ನು ತಮ್ಮ ಪೂರ್ವಿಕ ಎಂದು ತಿಳಿದು ತಮ್ಮನ್ನು ಅರವಾಣಿಗಳೆಂದು ಕರೆದುಕೊಂಡರು, ಈಗಲೂ ಅದು ಚಾಲ್ತಿಯಲ್ಲಿದೆ.ಅಲ್ಲದೆ ಮಹಾಭಾರತದಲ್ಲಿ ಪಾಂಡವರು ಒಂದು ವರ್ಷದ ಅಜ್ಞಾತ ವಾಸದ ಸಂಧರ್ಭದಲ್ಲಿ ಅರ್ಜುನ ಬೃಹನ್ನಳೆಯ ವೇಷದಲ್ಲಿ ಉತ್ತರೆಗೆ ನೃತ್ಯವನ್ನು ಕಲಿಸುತ್ತಿದ್ದ ಮತ್ತು ರಥದ ಸಾರಥಿಯಾಗಿದ್ದ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ, ಪ್ರಪಂಚದ ಎಲ್ಲೆಡೆ ಬೇರೆ ಭೇರೆ ಹೆಸರುಗಳಲ್ಲಿ, ಬೇರೆ ಭೇರೆ ವ್ಯಕ್ತಿತ್ವಗಳಲ್ಲಿ ಇವರು ಇದ್ದದ್ದರ ಬಗ್ಗೆ ನಮ್ಮಗೆ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಇವರಿಗೆ ಗೌರವ ಹಾಗು ಸಾಮಾಜಿಕ ಸ್ಥಾನಮಾನಗಳಿದ್ದವು. ಸಂತೋಷದ ಸಮಾರಂಭಗಳಿಗೆ ಇವರನ್ನು ಆಹ್ವಾನಿಸಿ ಬಧಾ (ಸಕ್ಕರೆ, ಸಿಹಿ ತಿಂಡಿಗಳು, ಬಟ್ಟೆ ಅಥವಾ ಸೀರೆಯ ಕಾಣಿಕೆ) ನೃತ್ಯ ಹಾಗೂ ಆಶೀರ್ವಾದ ಮಾಡಿಸಿಕೊಂಡು ಅವರಿಗೆ ಕಾಣಿಕೆಯನ್ನು (ಬಧಾ)ಕೊಡುವ ಪದ್ಧತಿ ಭಾರತದ ಅನೇಕ ಪ್ರದೇಶಗಳಲ್ಲಿ ಈಗಲೂ ಇದೆ. ಕ್ರೈಸ್ತ ಮತವನ್ನು ಮೊದಲ ಬಾರಿಗೆ ಇಥಿಯೋಪಿಯಗೆ ಕೊಂಡೊಯ್ದದ್ದು ಓರ್ವ ಹಿಜ್ರಾ ಎಂಬ ಐತಿಹ್ಯವಿದೆ, ಈ ಹಿಜ್ರಾಳಿಗೆ ಏಸು ಕ್ರಿಸ್ತನು ತುಂಬಾ ಪ್ರೋತ್ಸಾಹಿಸಿದ್ದುದ್ದರ ಉಲ್ಲೇಖ ಬ್ಯೆಬನಲ್ಲಿದೆ. ಮೊಗಲರ ಕಾಲದಲ್ಲಿ ಇಸ್ಲಾಮಿಕ್ ಸಮಾಜವು ಆಳುವವರ ಜೊತೆ ಕೈಜೋಡಿಸಿದ್ದರಿಂದ ಹಿಜ್ರಾಗಳನ್ನು ರಾಣೆಯರ ಸಖಿಯರನ್ನಾಗಿ ಹಾಗೂ ಅವರ ರಕ್ಷಣೆಗಾಗಿ ನೇಮಿಸುತ್ತಿದ್ದರು. ಹಿಜ್ರಾಗಳನ್ನು ತಮ್ಮ ಹೆಣ್ಣುಮಕ್ಕಳ ರಕ್ಷಣೆಗೆ ಇಟ್ಟುಕೊಳ್ಳುತ್ತಿತ್ತು. ೧೯೫೦ ನಂತರ ಕ್ರಮೇಣ ಈ ಪದ್ದತಿ ಇಲ್ಲವಾತು. ಬ್ರಿಟೀಷ್ ಕಾಲ ಘಟ್ಟದಲ್ಲಿ ಅಧಿಕಾರಿಗಳು ಹಿಜ್ರಾಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನ ಪಟ್ಟರು. ಅವರು ಸಾರ್ವಜನಿಕ ಮರ್ಯಾದೆ ಮತ್ತು ಗೌರವಕ್ಕಾಗಿ ಕಾನೂನುಭಂಗ ಮಾಡಿದರು. ಅದರ ಫಲವೇ ಭಾರತೀಯ ದಂಡ ಸಂಹಿತೆಯ ೩೭೭ ನೇ ವಿಧಿ ಜಾರಿ.
ಹಿಜ್ರಾಗಳು ಮತ್ತು ಧಾರ್ಮಿಕ ಆಚರಣೆ: ಹಿಜ್ರಾಗಳು ಹಿಂದು ಧರ್ಮದ ಪ್ರಕಾರ ಅದೊಂದು ಪ್ರತ್ಯೇಕ ಪಂಗದ, ಅವರು ಸಹಜವಾಗಿ ಮಾತಾ ಬಹುಚರ (ಕೋಳಿ ಹುಂಜದ ಮೇಲೆ ಕುಳಿತ ಮಾತೆ) ತಾಯ ಆರಾಧಕರು ಮತ್ತು ಶಿವನ ಆರಾಧಕರು ಕೂಡ. ತಮಿಳುನಾಡಿನಲ್ಲಿ ಪ್ರತೀ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಹಿಜ್ರಾಗಳು(ಅರವಾಣಿಗಳು) ೧೮ ದಿನದ ಧಾರ್ಮಿಕ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಉಲ್ಲಂಡರ್ ಪೇಟ್ ತಾಲ್ಲೂಕಿನ ಕೂವಗಂ ಎಂಬ ಗ್ರಾಮದಲ್ಲಿ ಅರವಾಣಿಗಳ ದೇವಾಲಯವಿದೆ. ಅಲ್ಲಿ ಅವರು ಕೂತಾಂಡವರನ್ನು ಪೂಜಿಸುತ್ತಾರೆ, ಹಬ್ಬದ ಸಂಧರ್ಭದಲ್ಲಿ ಮಹಾಭಾರತದಲ್ಲಿ ಶ್ರೀಕೃಷ ಹೆಣ್ಣಿನ ವೇಷ ಧರಿಸಿ ಅರ್ಜುನನ ಮಗ ಅರವಾಣ ಕಾಳಿಗೆ ಬಲಿಗೆ ಹೋಗು ಹೋಗುವ ಮುನ್ನ ನಡೆಯುವ ಪುರಾಣ ಸಂಬಂಧಿ ಕಥೆಯನ್ನು ಅಭಿನುಸುತ್ತಾರೆ, ಅರವಾಣನ ಸಾವಿಗಾಗಿ ಪರಿತಪಿಸುತ್ತಾ ಸಾಂಪ್ರಧಾಕ ನೃತ್ಯ ಮಾಡುತ್ತಾ ಮತ್ತು ತಮ್ಮ ಕೈಯಲ್ಲಿರುವ ಬಳೆಗಳನ್ನು ಹೊಡೆದು ಹಾಕುತ್ತಾರೆ. 'ಮಿಸ್ ಕೂವಗಂ' ಎಂಬ ಹಿಜ್ರಾ ಸುಂದರಿ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ ಜೊತೆಗೆ ಅನೇಕ ಆರೋಗ್ಯ ಮತ್ತು ಹೆಚ್ಐವಿ/ಏಡ್ಸ್ ಸೆಮಿನಾರ್ಗಳನ್ನು ಏರ್ಪಡಿಸಲಾಗುತ್ತದೆ. ಈ ಹಬ್ಬಕ್ಕೆ ದೇಶದ ಎಲ್ಲಾ ಭಾಗಗಳಿಂದ ಜನ ಇಲ್ಲಿಗೆ ಬರುತ್ತಾರೆ.
ಸಂಪ್ರದಾಯ ಮತ್ತು ಸಾಮುದಾಕ ಜೀವನ : ಬಹಳಷ್ಟು ಹಿಜ್ರಾಗಳು ಗುಂಪುಗಳಲ್ಲಿ ಬದುಕುತ್ತಾರೆ. ಹಿಜ್ರಾಗಳು ಅವರ ಸಮುದಾಯದ ನಿಯಮಗಳನ್ನು ಅನುಸರಿಸಬೇಕು. ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಇರುವ ಯಾರೇ ಆಗಲಿ ಸಾಂಪ್ರದಾಕವಾಗಿ ಹಿಜ್ರಾ ಆಗಲು ಬಯಸಿದರೆ, ಒಂದು ವರ್ಷದ ಕಾಲ ಸಾಟ್ಲಾದಲ್ಲಿ (ಸಾಟ್ಲ ಅಂದರೆ ಹೆಣ್ಣಿನ ಉಡುಪು) ಇದ್ದು ಹಿಜ್ರಾ ಸಮುದಾಯದ ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಹಿಜ್ರಾ ಆಗಿರಲು ಅಥವಾ ಆ ರೀತಿಯ ಜೀವನ ನಡೆಸಲು ಕಷ್ಟವಾದರೆ ಬಿಟ್ಟು ಹೋಗಲು ಈ ಒಂದು ವರ್ಷ ಸಮಯವಿರುತ್ತದೆ, ಇದು ಒತ್ತಾಯವಲ್ಲ, ಕಡ್ಡಾಯವಲ್ಲ. ಆಗ ಅವರಿಗೆ ನಿರ್ವಾಣ (ಸಾಂಪ್ರದಾಕವಾಗಿ ಪುರುಷ ಲೈಂಗಿಕ ಅಂಗಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿಕೊಳ್ಳು ಪ್ರಕ್ರಿಯೆ) ಆಗಲು ಬಿಡುವುದಿಲ್ಲ. ಹಿಜ್ರಾ ಸಮುದಾಯ ತಾ ಮಗಳ ಸಂಬಂಧದ ಮೇಲೆ ಆಧಾರವಾಗಿ ನಿಂತಿದೆ. ಹಿರಿಯ ಹಿಜ್ರಾ ಒಬ್ಬರು ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಇರುವ ಕಿರಿಯ ವ್ಯಕ್ತಿಯನ್ನು ಸಾಂಪ್ರದಾಕವಾಗಿ ಲೈಂಗಿಕ ಅಂಗವನ್ನು ಶಸ್ತ್ರ ಚಿಕಿತ್ಸೆಯ (ನಿರ್ವಾಣ)ಮೂಲಕ ತೆಗೆದುಹಾಕಿಸುವ ಮೂಲಕ ಅವರನ್ನು ಮಗಳಾಗಿ ಸ್ವೀಕರಿಸುತ್ತಾರೆ. ಹಿಜ್ರಾ ಸಮುದಾಯದಲ್ಲಿ ಚೇಲಾ (ಚೇಲಾ=ಮಗಳು) ಅವರ ಗುರುಗಳ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕು ಹಾಗೂ ಗುರುಗಳು ಚೇಲಾಗ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕು. ಇದೊಂದು ಪರ್ಯಾಯ ಕುಟುಂಬದಂತೆ ಕೆಲಸ ಮಾಡುತ್ತದೆ. ಏಕೆಂದರೆ ಹಲವಾರು ಹಿಜ್ರಾಗಳಿಗೆ ತಮ್ಮ ತಂದೆ ತಾ ಹಾಗೂ ಸ್ನೇಹಿತರಿಂದ ಯಾವುದೇ ರೀತಿಯಾದ ಬೆಂಬಲ ಸಿಗುವುದಿಲ್ಲ. ಅವರ ಈ ಸಾಮುದಾಕ ಬದುಕಿನಿಂದ ಹಿಜ್ರಾಗಳಿಗೆ ಮುಖ್ಯವಾಹಿನಿಯ ತಾರತಮ್ಯ ಮತ್ತು ಕಳಂಕವನ್ನು ಎದುರಿಸಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ.
ಸಂಸ್ಕೃತಿ: ಉತ್ತರ ಭಾರತದಲ್ಲಿ ಹಿಜ್ರಾಗಳಿಗೆ ಮಹತ್ತರವಾದ ಸಾಂಸ್ಕೃತಿಕ ಪಾತ್ರವಿದೆ. ಇವರನ್ನು ಮಕ್ಕಳು ಹುಟ್ಟಿದಾಗ, ಮದುವೆ ಮತ್ತು ಅಂಗಡಿಗಳ ಮುಹೂರ್ತ ಸಮಾರಂಭಗಳಲ್ಲಿ ಬಧಾ(ಸಕ್ಕರೆ, ಸಿಹಿ ತಿಂಡಿಗಳು, ಬಟ್ಟೆ ಅಥವಾ ಸೀರೆಯ ಕಾಣಿಕೆ) ಕೊಡಲಾಗುದೆ. ಕೆಲವು ಹಿಜ್ರಾಗಳು ದೇವಾಲಯಗಳಲ್ಲಿ ಸಾಂಪ್ರಧಾಕವಾಗಿ ಪೂಜೆ ಮಾಡುವವರಾಗಿರುತ್ತಾರೆ. ಕೆಲವು ಹಿಜ್ರಾಗಳು ಬಸ್ತಿ (ಭಿಕ್ಷೆ) ಕೇಳಲು ಹೋಗುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಹಿಜ್ರಾಗಳಿಗೆ ಇಂತಹ ಯಾವುದೇ ಸಾಂಸ್ಕೃತಿಕ ಮಹತ್ವ ಇಲ್ಲದಿರುವುದರಿಂದ ಬದುಕಲು ಇವರು ಭಿಕ್ಷೆ ಬೇಡುತ್ತಾರೆ ಆಥವಾ ಲೈಂಗಿಕ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಹಿಜ್ರಾಗಳು ಹಮಾಮ್ (ಹಮಾಮ್=ಸ್ನಾನದ ಮನೆ)ಗಳನ್ನು ನೆಡೆಸುತ್ತಾರೆ. ಭಾರತದಲ್ಲೇ ಇದು ಹೊಸದು.
ಸಮುದಾಯ ರಚನೆ: ಭಾರತದಲ್ಲಿ ಹಿಜ್ರಾ ಸಮುದಾಯಗಳು ಏಳು ಘರಾನಗಳಲ್ಲಿ (ಮನೆ) ವ್ಯವಸ್ಥೆಗೊಂಡಿದೆ ಅವುಗಳೆಂದರೆ ೧.ಲಸ್ಕರ್(ಹೈದರಾಬಾದ್) ೨.ಲಾಲಂಘರ್ ೩.ಬೆಂಡಿಬಜಾರ್ ೪.ಡೋಂಗ್ರಿವಾಲ ೫.ಪೂನವಾಲ, ೬.ಚಕ್ಳವಾಲ ೭.ಬುಲಾಕ್ವಾಲ. ಪ್ರತಿಯೊಂದು ಘರಾನಾಗೆ ಒಬ್ಬರು ನಾಯಕ್ (ಪ್ರಧಾನ ನಾಯಕ/ಗುರು) ಇರುತ್ತಾರೆ. ಹಲವಾರು ಹಿಜ್ರಾಗಳು ಅವರ ಗುರುಗಳನ್ನು ಮಮ್ಮಿ ಎಂದು ಕರೆಯುತ್ತಾರೆ. ಹೀಗಾಗಿ ಯಾವುದೇ ಹಿಜ್ರಾ ಎಲ್ಲೇ ಇದ್ದರು ಅವರಿಗೆ ಒಬ್ಬ ಗುರು ಇದ್ದು ಈ ಮೇಲಿನ ಏಳರಲ್ಲಿ ಯಾವುದಾದರೊಂದು ಘಾರಾನಾಗೆ ಸೇರುತ್ತಾರೆ.
ಸಾಮಾಜಿಕ ಸ್ಥಾನಮಾನ ಮತ್ತು ಜೀವನ ಪರಿಸ್ಥಿತಿ: ಬಹುತೇಕ ಹಿಜ್ರಾಗಳು ಕೆಳಹಂತದ ಸಾಮಾಜಿಕ ಸ್ಥಾನಮಾನದ ಹಿನ್ನೆಲೆಂದ ಬಂದಂತವರು. ಅವರು ಅಗೌರವ ತರುವಂತವರು ಎಂಬ ಪ್ರತೀತಿ ಇದೆ. ಬಹಳಷ್ಟು ಜನ ಸಮಾರಂಭಗಳಲ್ಲಿ ಭಾಗವಹಿಸಿ,ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ಮೂಲಕ ಆದಾಯ ಗಳಿಸಿ ಜೀವನ ನಿರ್ವಹಣೆ ಮಾಡುತ್ತಾರೆ. ಆಧುನಿಕ ಜಗತ್ತಿನಲ್ಲಿ ಅವರು ಮಾಡುವ ವೃತ್ತಿಯೇ ಅವರನ್ನು ಸಾರ್ವಜನಿಕ ಸ್ಥಳದಲ್ಲಿ, ಪೊಲೀಸ್ ಠಾಣೆಗಳಲ್ಲಿ, ಬಂಧಿಖಾನೆಗಳಲ್ಲಿ ಮತ್ತು ತಮ್ಮ ಮನೆಗಳಲ್ಲಿ ಅಮಾನವೀಯ ದೌರ್ಜನ್ಯಕ್ಕೆ ಒಳಪಡಿಸಿದೆ. ಅವರು ಆರೋಗ್ಯ, ವಸತಿ, ಶಿಕ್ಷಣ, ನೌಕರಿ, ವಲಸೆ, ಕಾನೂನು ಮತ್ತು ಇತರೆ ನೌಕರಶಾಹಿಗಳು ಇವರಿಗೆ ಸೇವೆಯನ್ನು ಒದಗಿಸುವ ಸಂಧರ್ಭದಲ್ಲಿ ಗಂಡು ಅಥವಾ ಹೆಣ್ಣಿನ ಯಾವ ಲಿಂಗದ ಆಧಾರದ ಮೇಲೆ ಕೊಡಬೇಕು ಎನ್ನುವ ಕುರಿತು ಸ್ಪಷ್ಟತೆ ಇಲ್ಲ, ಅನೇಕ ಸಂಧರ್ಭದಲ್ಲಿ ಹಿಜ್ರಾ ಒಬ್ಬರು ಗಂಟೆಗಟ್ಟಲೆ ತುರ್ತು ನಿಗಾ ಘಟಕದ ಹೊರಗಡೆ ಪ್ರವೇಶಕ್ಕಾಗಿ ಕಾದಿರುವಾಗ ವೈದ್ಯಕೀಯ ಸಿಬ್ಬಂದಿಗಳು ಅವರನ್ನು ಹೆಣ್ಣಿನ ಅಥವಾ ಗಂಡಿನ ವಾರ್ಡ್ಗೆ ಸೇರಿಸಿಕೊಳ್ಳಬೇಕಾ ಎಂದು ಚರ್ಚಿಸುವುದರಲ್ಲೇ ಕಾಲಹರಣ ಮಾಡುತ್ತಿರುತ್ತಾರೆ.
ರಾಜಕೀಯ ಮತ್ತು ಹೋರಾಟ: ಹಿಜ್ರಾಗಳು ರಾಜಕೀಯವಾಗಿ ಸಕ್ರಿಯವಾಗಿದ್ದಾರೆ, ಭಾರತದ ರಾಜಕೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಶಬನಂ ಮೌಸಿ ಸ್ವತಂತ್ರ ಅಭ್ಯರ್ಥಿಯಾಗಿ ೧೯೯೯ರಲ್ಲಿ ಮಧ್ಯಪ್ರದೇಶದಲ್ಲಿ ಸ್ಪರ್ಧಿಸಿ ಎಂಎಲ್ಎಯಾಗಿ "ಧಾನಸಭೆಗೆ ಆಯ್ಕೆಯಾದರು. ಕಟ್ನಿಂದ ಮತ್ತೊಬ್ಬ ಹಿಜ್ರಾ ಕಾಮ್ಲ ಜಾನ್ ಆಯ್ಕೆಯಾಗಿದ್ದರು, ಮತ್ತೊಬ್ಬ ಹಿಜ್ರಾ ಮಿನಾಬಾಯಿ ಸೆಹೊರಾ ನಗರ ಮುನಿಸಿಪಾಲಿಟಿಗೆ ಅಧ್ಯಕ್ಷರಾದರು, ಇದು ಮಧ್ಯಪ್ರದೇಶದ ಅತ್ಯಂತ ಹಳೆಯದಾದ ಪೌರಾಡಳಿತ ಸಂಸ್ಥೆ. ೨೦೦೫ರಲ್ಲಿ ೨೪ ವರ್ಷ ವಯಸ್ಸಿನ ಸೋನಿಯಾ ಅಜ್ಮೆರಿ ೪೦೦೦೦ ಜನ ಹಿಜ್ರಾಗಳ ಪ್ರತಿನಿಧಿಯಾಗಿ ಗುಜಾರಾತ್ನ ವಿಧಾನಸಭೆಗೆ ಆಯ್ಕೆಯಾದರು. ೨೦೦೦ರಲ್ಲಿ ಆಶಾದೇವಿ ಮಹಿಳಾ ಮೀಸಲಾತಿ ಕೋಟಾದಡಿ ಗೋರಕ್ಪುರದ ಮೇಯರ್ ಆಗಿ ಆಯ್ಕೆಯಾದರು, ನಂತರ ನ್ಯಾಯಾಲಯ ಅವರನ್ನು ಗಂಡಸು ಎಂದು ತೀರ್ಪು ಕೊಟ್ಟಿದ್ದರಿಂದ ಅವರು ತಮ್ಮ ಸ್ಥಾನವನ್ನು ಕಳೆದು ಕೊಳ್ಳಬೇಕಾತು. ಆನಂತರ ಅವರು ತಮ್ಮ ಶಾಸಕಿ ಸ್ಥಾನವನ್ನು ಪುನಃ ಪಡೆದುಕೊಂಡರು.
ಆಧುನಿಕ ಹಿಜ್ರಾಗಳು ಗಂಭೀರವಾದ ಆರೋಗ್ಯ ಮತ್ತು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಉದಾ: ೧೯೯೩-೯೪ರಲ್ಲಿ ಸ್ಥಾಪನೆಯಾದ ಆಲ್ ಇಂಡಿಯಾ ಯುನಕ್ ವೆಲ್ಫೇರ್ ಅಸೋಯೇಷನ್ ಹೆಚ್ಐವಿ/ಏಡ್ಸ್ ಜಾಗೃತಿ ಕಾರ್ಯಕ್ರಮದ ಗುಂಪಾಗಿ ಕೂಡ ಕಾರ್ಯನಿರ್ವಹಿಸುತ್ತಿದೆ, ಸಮುದಾಯದೊಳಗೆ ಇರುವ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಆ ತರದ ಮತ್ತೊಂದು ಗುಂಪು ದಾ ವೆಲ್ಫೇರ್ ಸೊಸೈಟಿ, ಇದು ೧೯೯೯ರಲ್ಲಿ ಮುಂಬೈನಲ್ಲಿ ಹಿಜ್ರಾಗಳಿಗಾಗಿ ಹಿಜ್ರಾಗಳೇ ಸ್ಥಾಪಿಸಿದ. ಈ ಗುಂಪು ಅಂದಾಜಿಸಿದ ಪ್ರಕಾರ ಮುಂಬೈನಲ್ಲಿ ವಾಸಿಸುವ ಹಿಜ್ರಾಗಳಲ್ಲಿ ಅರ್ಧಕರ್ಧ ಜನ ಹೆಚ್ಐವಿ ಸೋಂಕಿತರು. ಮತ್ತೊಂದು ಗುಂಪೆಂದರೆ ಹಿಜ್ರಾ ಕಲ್ಯಾಣ್ ಸಭಾ ಅಲ್ಲದೆ ಮುಂಬೈಯಲ್ಲಿ 'ಆಲ್ ಮಹಾರಾಷ್ಟ್ರ ಹಿಜ್ರಾ ಸಮಾಜ್ ಸೇನಾ ಸಂಘ'ವನ್ನು ಸ್ಥಾಪಿಸಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ.
ಮುಂದುವರೆದು ೧೯೯೯ರಲ್ಲಿ ಕರ್ನಾಟಕದಲ್ಲಿ ಕೇವಲ ಹಿಜ್ರಾಗಳಿಗೆ ಮಾತ್ರವಲ್ಲದೆ ಎಲ್ಲಾ ವರ್ಗದ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ರಕ್ಷಣೆಗಾಗಿ ಸಂಗಮ ಸಂಸ್ಥೆಯನ್ನು ಸ್ಥಾಪಿಸಲಾತು. ಸಂಗಮ ಲೈಂಗಿಕತೆ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಸಂಘಟನೆಯಾಗಿದ್ದು, ವೈಯುಕ್ತಿಕವಾಗಿ ಲೈಂಗಿಕ ಆಯ್ಕೆಯ ಕಾರಣ ತುಳಿತಕ್ಕೆ/ದೌರ್ಜನ್ಯಕ್ಕೆ ಒಳಗಾದವರಿಗಾಗಿ ಕೆಲಸ ಮಾಡುತ್ತಿದೆ. ಸಂಗಮದ ಮುಖ್ಯ ಉದ್ದೇಶ ಮಾಹಿತಿ ಮತ್ತು ಸಂಪನ್ಮೂಲಗಳ ಲಭ್ಯಗಳಿಲ್ಲದ ಕಾರಣ ಇಂಗ್ಲೀಷ್ ಬಾರದ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಲೈಂಗಿಕ ವೃತ್ತಿಂದ ತಮ್ಮ ಜೀವನವನ್ನು ಸಾಗಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ನೆರವಾಗುವುದು ಮತ್ತು ತಮ್ಮ ಜೀವನವನ್ನು ತಾವೇ ಒಪ್ಪಿಕೊಂಡು ಗೌರವಿಸಿ ಘನತೆಂದ ಬಾಳಲು ಸಶಕ್ತರನ್ನಾಗಿ ಮಾಡುವುದಾಗಿದೆ. ಲೈಂಗಿಕತೆ, ಲೈಂಗಿಕ ಆಯ್ಕೆ ಮತ್ತು ಲಿಂಗತ್ವ ಗುರುತಿಸುವಿಕೆಯನ್ನು ಮುಖ್ಯ ವಾಹಿನಿಗೆ ತಂದು ಅದನ್ನು ಲಿಂಗತ್ವ, ಮಾನವ ಹಕ್ಕುಗಳ ಅಭಿವೃದ್ದಿ ಮತ್ತು ಮತ್ತಿತರೆ ಸಮಾಜಿಕ ಚಳುವಳಿಗಳೊಂದಿಗೆ ಸೇರಿಸುವ ಪ್ರಯತ್ನದ ಜೊತೆಗೆ ಸಂಗಮ ಲೈಂಗಿಕತೆ ಅಲ್ಪಸಂಖ್ಯಾತರನ್ನು ಮತ್ತು ಲೈಂಗಿಕ ಕಾರ್ಮಿಕರನ್ನು ಹಾಗೂ ಹೆಚ್ಐವಿ/ಏಡ್ಸ್ನೊಂದಿಗೆ ಬದುಕುತ್ತಿರುವವವರ ವಿರದ್ದವಿರುವ ಪ್ರಸ್ತುತ ಕಾನೂನುಗಳನ್ನು ಬದಲಿಸುವುದಕ್ಕಾಗಿ ಆಂದೋಲನವನ್ನು ನಡೆಸುತ್ತಿದೆ. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರ ಕುಟುಂಬದ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅವರ ಸಂಗಾತಿಗಳೊಂದಿಗೂ ಕೆಲಸ ಮಾಡುವುದಾಗಿದೆ. ನಂತರ ಸಂಗಮ ಸಂಸ್ಥೆಯು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯವೇ ತಮ್ಮ ಹಕ್ಕುಗಳಿಗೆ ಹೋರಾಡುವ ದಿಕ್ಕಿನಲ್ಲಿ ಸಮರ ಎನ್ನುವ ಸಮುದಾಯ ಸಂಘಟನೆಯನ್ನು ಹುಟ್ಟು ಹಾಕಿತು, ಸಮರ ಈಗ ತನ್ನ ಕಾಲ ಮೇಲೆ ತಾನೆ ನಿಂತು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದೆ. ನಂತರ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವೇ ಕರ್ನಾಟಕದ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತ ಸಂಘಟನೆಗಳನ್ನು ಒಂದೇ ವೇದಿಕೆಗೆ ತರಲು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯನ್ನು ಸ್ಥಾಪಿಸಿಕೊಂಡು ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ.
ಪ್ರಸ್ತುತ ಪರಿಸ್ಧಿತಿ : ಹಿಜ್ರಾಗಳು ಶತಮಾನಗಳಿಂದಲೂ ನಮ್ಮೊಂದಿಗೆ ಬದುಕುತ್ತಾ ಬಂದಿದ್ದರೂ, ಅನೇಕ ಅಡ್ಡಿ ಆತಂಕಗಳನ್ನು ಅನುಭವಿಸುತ್ತಿದ್ದಾರೆ. ಆಧುನೀಕರಣದಿಂದಾಗಿ ಹಿಜ್ರಾಗಳಿಗೆ ಸಾಂಪ್ರದಾಕ ಸಾಮಾಜಿಕ ನೆಲೆಗಳು ಕಡಿಮೆಯಾಗಿದೆ. ಅವರ ಇರುವಿಕೆ ಎದ್ದು ಕಾಣುತ್ತಿದ್ದರೂ ಅವರನ್ನು ಸಮಾಜದ ಅಂಚಿನಲ್ಲಿ ಬದುಕುವಂತೆ ದೂಡಿದೆ ಅಲ್ಲದೆ ಸಾರ್ವಜನಿಕ ಗೇಲಿ ಅವಮಾನಗಳಿಗೂ ಸಮಾಜ ಒಳಪಡಿಸುತ್ತದೆ. ಭಾರತದ ಸಂವಿಧಾನ, ಕಾನೂನು ಮತ್ತು ಸಮಾಜ ಹೆಣ್ಣು ಹಾಗೂ ಗಂಡು ಎಂಬ ಎರಡೇ ಲಿಂಗಗಳನ್ನು ಗುರುತಿಸುತ್ತದೆ. ಸಂವಿಧಾನದಲ್ಲಿ ಲಿಂಗ ಬದಲಾವಣೆಯನ್ನು ಗುರುತಿಸದಿದ್ದುದರ ಪರಿಣಾಮವಾಗಿ ಎಲ್ಲಾ ಅವಕಾಶಗಳಿಂದ ವಂಚಿತವಾಗಿದ್ದಾರೆ.
ದಕ್ಷಿಣ ಭಾರತದಲ್ಲಿ ಬಹಳಷ್ಟು ಹಿಜ್ರಾಗಳಿಗೆ ಬದುಕಲು ಭಿಕ್ಷೆ ಬೇಡುವುದು ಆಥವಾ ಲೈಂಗಿಕ ಕಾರರ್ಮಿಕರಾಗಿ ಕೆಲಸ ಮಾಡುವ ವೃತ್ತಿಯನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇದಲ್ಲದೆ ಹಿಜ್ರಾಗಳು ಹೆಚ್ಚಾಗಿ ಪೊಲೀಸರು,ಗೂಂಡಾಗಳು,ವೈದ್ಯಕೀಯ ಸಂಸ್ಥೆಗಳು, ಕುಟುಂಬ, ಸ್ನೇಹಿತರು ಹಾಗು ಸಮಾಜದಿಂದ ಬೇಧಭಾವಕ್ಕೊಳಗಾಗುತ್ತಿದ್ದಾರೆ.
ಸಾಮಾನ್ಯವಾಗಿ ಭಾರತದ ಉಪ ಖಂಡದಲ್ಲಿ ಹಿಜ್ರಾಗಳನ್ನು ಮೂರನೆ ಲಿಂಗ ಎಂದು ಗುರುತಿಸಲಾಗುತ್ತದೆ. ಬಹಳಷು ಜನ ದೈಹಿಕವಾಗಿ ಗಂಡು ಅಥವಾ ಅಂತರ್ ಲಿಂಗಿಗಳು, ಆದರೆ ಕೆಲವರು ಹೆಂಗಸರು, ಭಾಷೆ ದೃಷ್ಠಿ ಅವರನ್ನು ಅವರು ಹೆಣ್ಣು ಎಂದು ಕರೆದುಕೊಳ್ಳುತ್ತಾರೆ, ಸಾಮಾನ್ಯವಾಗಿ ಹೆಂಗಸರ ರೀತಿ ಬಟ್ಟೆ ಧರಿಸುತ್ತಾರೆ. ಸಂಖ್ಯೆಯ ದೃಷ್ಠಿ ಯಾವುದೇ ಜನಗಣತಿ ದಾಖಲೆ ಈಗ ಲಭ್ಯವಿಲ್ಲದಿರುವುದರಿಂದ ಅಂದಾಜು ಭಾರತದಲ್ಲಿ ೫,೦೦೦,೦೦೦ ರಷ್ಟು ಇರಬಹುದೆಂದು ಅಂದಾಜು ಮಾಡಲಾಗಿದೆ.