ಹಿತ - ಅಹಿತ
ಹಿತವಾದುದು ಎಂದರೆ ಎಲ್ಲರಿಗೂ ಅಪ್ಯಾಯಮಾನ. ಸಿಹಿಯಾದ ತಿನಿಸು, ರುಚಿಯಾದ ಖಾದ್ಯ, ಸುಂದರವಾದ ಮನೆ, ನಯನ ಮನೋಹರವಾದ ದೃಶ್ಯ, ಇಂಪಾದ ಮಾತು, ಆಕರ್ಷಣೀಯವಾದ ಉಡುಪು, ಪ್ರೀತಿಯ ಆತಿಥ್ಯ ಇಂಥಹವುಗಳೆಲ್ಲ ಮತ್ತೆ ಮತ್ತೆ ಬೇಕೆನಿಸುತ್ತವೆ. ಕಾರಣ ಇವು ನಮಗೆ ಹಿತವನ್ನುಂಟುಮಾಡುತ್ತವೆ. ಇವುಗಳಿಂದ ಮನಸ್ಸು ಪುಳಕಿತವಾಗುತ್ತದೆ. ಪುಳಕ ನೀಡದ, ಮನಸ್ಸಿಗೆ ಬೇಡ ಅನ್ನಿಸಿದ ವಿಚಾರ ಅಥವಾ ವಿಷಯಗಳು ಅಹಿತಕರವಾಗುತ್ತವೆ.
ಕವಿ ಎಸ್.ಜೆ. ನರಸಿಂಹಾಚಾರ್ಯರು ಗೋವಿನ ಬಾಳು ಎಂಬ ಸುಂದರ ಕವನದಲ್ಲಿ “ನೀನಾರಿಗಾದೆಯೊ ಎಲೆ ಮಾನವಾ?" ಎಂದು ಪ್ರಶ್ನಿಸುತ್ತಾರೆ. ಮಾನವ ಎಲ್ಲರಿಗೂ ಹಿತಕರನಾಗುವುದಿಲ್ಲ. ಲೋಕ ಹಿತಕರವಾದ ಯಾವುದೇ ಕೃತಜ್ಞ ಕೆಲಸಗಳು ಆತನಿಂದಾಗುವುದಿಲ್ಲ. ಆದುದರಿಂದ ಮಾನವ ಹೆಚ್ಚು ಅಹಿತನು. ಪ್ರಾಣಿ ಪಕ್ಷಿ ಗಿಡ ಮರಗಳು ಅವನಿಗಿಂತ ಹೆಚ್ಚು ಲೋಕ ಹಿತಕಾರಕ. ಅಧಿಕತಮ ಮನುಜನದು ಸ್ವಹಿತದ ಪ್ರವೃತ್ತಿ. ಪರಹಿತವನ್ನು ಬಯಸಿ ಬದುಕುವ ಕಲೆ ಆತನಿಗೆ ತಿಳಿದಿದ್ದರೂ ಅವನ ಮನಸ್ಸು ಉದಾರವಾಗದು. ತನ್ನ ಹಿತದ ಹೊರತು ತನ್ನವರ ಹಿತವನ್ನೂ ಆತ ಸಹಿಸುವುದಿಲ್ಲ. ಬೆಳೆಯುವವರನ್ನು ಚಿವುಟುವ ತನ್ನ ಅಹಿತಕಾರೀ ಪ್ರವೃತ್ತಿಯನ್ನು ಯಾರೂ ಸಹಿಸುವುದಿಲ್ಲ ಎಂಬ ತಿಳುವಳಿಕೆಯಿದ್ದರೂ ಆತನ ಮನೋಭಾವ ಸ್ವಾರ್ಥದ ಕಗ್ಗತ್ತಲೆಯಿಂದ ಹೊರ ಬಾರದು. ಅಂತಹವರಲ್ಲಿ ಪರಹಿತದ ಚಿಂತನೆ ಕನಸಿನ ಗೋಪುರ.
“ಬದುಕು ಮತ್ತು ಬದುಕಲು ಬಿಡು” ಎಂಬ ಹಿರಿಯರ ಮಾತಿನಲ್ಲಿ ಸ್ವ ಮತ್ತು ಪರಹಿತದ ಧ್ವನಿಯಿದೆ. ಗಡಿನಾಡ ಕನ್ನಡ ಕವಿ ದಿವಂಗತ ಕಿಂಞಣ್ಣ ರೈಯವರು ಬರೆದ "ಸಂತೆಗೆ ಹೋದನು ಭೀಮಣ್ಣ...." ಎಂಬ ಕವಿತೆಯಲ್ಲಿ ಕೊನೆಗೆ ಹೇಳುವ ಸಾಲು ಬಹಳ ಮಾರ್ಮಿಕವಾಗಿದೆ. “ನೀ ನನಗಿದ್ದರೆ ನಾ ನಿನಗೆ, ನೆನಪಿರಲೀ ನುಡಿ ನಮ್ಮೊಳಗೆ” ನೀ ನನಗಿರುವುದು ಮತ್ತು ನಾನಿನಗಿರುವುದು ನೈಜ ಹಿತಕರ ಬದುಕು. ಆದರೆ ನಮಗೆ ಎಲ್ಲರೂ ಹಿತರಾಗಲಿ, ನಾನು ಯಾರಿಗೂ ಹಿತರಾಗುವುದಿಲ್ಲ ಎಂದರೆ ಹೇಗೆ?
ಶ್ರೇಷ್ಠ ಕವಿ ಎನ್. ಎಸ್ ಲಕ್ಷ್ಮೀ ನಾರಾಯಣ ಭಟ್ಟರು ತನ್ನ ಕವನವೊಂದರಲ್ಲಿ, “ಹಿತ ಅಹಿತ ಹೀಗೆ ಒಲವೆರಡು ಎನಗುಂಟು ಎನ್ನುತ್ತಾ ಹಿತವನ್ನು ದೇವರು ಎಂದರೆ, ಅಹಿತವನ್ನು ಸೈತಾನ ಎಂದರು. ಮಾನವ ಮಾಧವನಾಗಲು ಮನಸಿನೊಳಗೆ ಹಿತಕರವಾದ ಚಿಂತನೆ, ಕಾಯಕದಲ್ಲಿ ಲೋಕ ಹಿತದ ಧ್ಯೇಯ, ಮಾತಿನಲ್ಲಿ ಪರರನ್ನು ಮುದಗೊಳಿಸುವ ಹಿತ ಧಾಟಿ ಇರಬೇಕು. ಭಾಷೆಯೊಳಗೆ ಸಾಹಿತ್ಯ ಇದೆ. ಸಾಹಿತ್ಯವು ‘ಸ’ ಹಿತವಾಗಿರಬೇಕೆಂಬ ಉದ್ದೇಶವೂ ಪರಹಿತಕ್ಕೆ ಪ್ರಾಮುಖ್ಯತೆ ನೀಡಿದೆ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ