ಹಿನ್ನೀರ ದಂಡೆಯ ಸೀತಾಳೆದಂಡೆ

ಹಿನ್ನೀರ ದಂಡೆಯ ಸೀತಾಳೆದಂಡೆ

ಪುಸ್ತಕದ ಲೇಖಕ/ಕವಿಯ ಹೆಸರು
ಮಂಗಳ ಟಿ ಎಸ್ ತುಮರಿ
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೫

ಮಂಗಳ ಟಿ ಎಸ್ ತುಮರಿ ಅವರ ಸಣ್ಣ ಕಥೆಗಳ ಸಂಗ್ರಹ ‘ಹಿನ್ನೀರ ದಂಡೆಯ ಸಿತಾಳೆದಂಡೆ’ ಎನ್ನುವ ಕೃತಿ ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಕಂಡು ಬಂದ ಓದುಗರಿಬ್ಬರ ಅನಿಸಿಕೆಗಳು ಹೀಗಿವೆ…

“ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷ್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ.” ಎಂದಿದ್ದಾರೆ ಡಾ. ರತ್ನಾಕರ ಸಿ.ಕುನುಗೋಡು, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ ಇವರು.

ಹರೀಶಿಯ ವೈದ್ಯರೂ, ಲೇಖಕರೂ ಆಗಿರುವ ಡಾ.ಅಜೀತ್ ಹರೀಶಿ ಇವರು “ಮೂಲತಃ ಶರಾವತಿ ಹಿನ್ನೀರಿನ ತುಮರಿಯವರಾದ ಮಂಗಳ ಶಿಕ್ಷಕಿ, ಲೇಖಕಿ ಹಾಗೂ ಕೀರ್ತನಕಾರರು. ಇವರ ನಾಟಕ ‘ಆರೋಹಿ' ಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು. ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು; ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ.

ಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಚಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ- ಮಂಗಳಾ ಅವರ ಕಥೆ ನೇಯ್ಗೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಪೂರ್ತಿಯಾಗಬಲ್ಲಳು. ಈ ಕಥಾಸಂಕಲನದ ಮೂಲಕ ಮಂಗಳಾ ಹಚ್ಚಿರುವ ಕತೆಹಣತೆ ಆರದಂತೆ ಕಾಯಲು ಅವರ ಪಾತ್ರಗಳೇ ಸಾಕು!” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಲೇಖಕಿ ಮಂಗಳಾ ಇವರು ತಮ್ಮ ಮಾತಿನಲ್ಲಿ “ವ್ಯಕ್ತಿಯನ್ನು ಬದುಕು ಎಷ್ಟೇ ದೂರ ಕರೆದೊಯ್ದರೂ ಹುಟ್ಟಿದ, ಬೆಳೆದುಬಂದ ಹಾದಿಯ ನೆನಪಿನ ಹಂಗಿನಿಂದ ತಪ್ಪಿಸಿಕೊಳ್ಳಲಾಗದು. ನಾವು ಬದುಕಿರುವಷ್ಟು ದಿನವೂ ಅದೂ ಜೀವಂತವೇ. ಶರಾವತಿ ಹಿನ್ನೀರಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಹರಿಯುತ್ತಾ ಬೆಂಗಳೂರು ಸೇರಿ ದಶಕಗಳೇ ಸಂದರೂ, 'ಯಾವುದು ನಿಮ್ಮೂರು?' ಎಂದರೆ ಬಾಯಿಗೆ ಬರುವ ಮೊದಲ ಹೆಸರು ನನ್ನ ಹುಟ್ಟೂರು ತುಮರಿ. ಅಷ್ಟರ ಮಟ್ಟಿಗೆ ಶರಾವತಿ ಹಿನ್ನೀರಿನ ದ್ವೀಪದ ಬುಡದ ಆ ಊರು ನನ್ನೊಳಗನ್ನು ಆವರಿಸಿದೆ. ಆದ್ದರಿಂದ ಕಂಡ ಉಂಡ ಮತ್ತು ಸೃಷ್ಟಿಸ ಹೊರಡುವ ಪ್ರತಿಯೊಂದಕ್ಕೂ ಹೊಸಕಣ್ಣು ಕೊಡುವುದು ನನ್ನ ಮೆಚ್ಚಿನ ಶರಾವತಿ ನದಿಯ ಹಿನ್ನೀರಿನ ದಂಡೆ. ಕಾರಣದಿಂದಾಗಿಯೇ ನನ್ನ ಚೊಚ್ಚಲ ಕಥಾಸಂಕಲನವಿದು 'ಹಿನ್ನೀರ ದಂಡೆಯ ಸೀತಾಳೆ ದಂಡೆ.'

ಮನೆಯಲ್ಲಿ ತಂದೆ ಕಥೆಗಾರರಾಗಿದ್ದರಿಂದ ಕನ್ನಡ ಪುಸ್ತಕಗಳು ಕೈಹಿಡಿದು ತಂದು ನಿಲ್ಲಿಸಿದ್ದು ಕಥಾಲೋಕಕ್ಕೆ. ಬಾಲ್ಯದಿಂದಲೂ ನೋಡಿದ ಯಕ್ಷಗಾನಗಳು, ಕೇಳುತ್ತಿದ್ದ ಭಾರತವಾಚನಗಳು ಕಥೆಯ ಜಗತ್ತಿನಲ್ಲಿ ಇನ್ನಷ್ಟು ಸ್ವಚ್ಛಂದವಾಗಿ ವಿಹರಿಸುವಂತೆ ಮಾಡಿದವು. ಆದರೂ ಬರೆಯುವ ಕನಸು ಆರಂಭವಾದದ್ದು ಇತ್ತೀಚೆಗೆ.

ನನ್ನ ಮೊದಲ ಕೃತಿಯಾದ 'ಆರೋಹಿ'ಯ (ನಾಟಕ) ಯಶಸ್ಸು ಇದಕ್ಕೆ ಕಾರಣ. ಇದು ನನ್ನ ಎರಡನೆಯ ಕೃತಿಯಾದರೂ ಮೊದಲ ಸ್ವತಂತ್ರ ಕಥಾಸಂಕಲನ. ನಾನೂ ಕಥೆ ಬರೆಯಬೇಕು ಎಂದು ಸಂಕಲ್ಪಿಸಿ ಅಡಿ ಇಡುತ್ತಲೇ ನನಗೆ ದೊರೆತ ದಿವ್ಯತಾಣ ಕಥೆಕೂಟ. ಅದೊಂದು ಅದ್ಭುತ ಕಥಾಲೋಕದ ಪಯಣವನ್ನು ನಿರಂತರವಾಗಿಸುವ ಲೋಕ. ಎಲ್ಲರ ಕಥೆಗಳನ್ನು ಓದಿ, ಪರಸ್ಪರ ಪ್ರತಿಕ್ರಿಯಿಸುವ ಕೂಟದ ಎಲ್ಲಾ ಸದಸ್ಯರನ್ನು ನೆನೆಯುವೆ. ಮುಖ್ಯವಾಗಿ ಕೂಟದ ಅಡ್ಡಿನ್ ಗೋಪಾಲಕೃಷ್ಣ ಕುಂಟಿನಿ, ಜೋಗಿ ಸುಬ್ರಾಯ ಚೊಕ್ಕಾಡಿ, ಹಾಗೂ ಜಗದೀಶ ಶರ್ಮ ಮತ್ತು ಇತರ ಸದಸ್ಯರುಗಳಿಗೆ ಅಭಿವಂದನೆಗಳು.

ನಿಜ ಅರ್ಥದಲ್ಲಿ ನನಗೆ ಗುರುವೇ ಆಗಿರುವ ತಾ.ಶ್ರೀ. ಗುರುರಾಜ್ ಅವರ ಮಾರ್ಗದರ್ಶನ ಮರೆತೇನಂದರೂ ಮರೆಯಬಾರದಂತಹುದು. ಅವರು ಮುನ್ನುಡಿ ಬರೆದು ಹರಸಿದ್ದಾರೆ. ಮನದಾಳದ ನಮನಗಳು. ನನ್ನೊಳಗೆ ಹರಿಯುವ ಚೈತನ್ಯ ಅದು ಅಪ್ಪನದು, ಅಮ್ಮನದು. ಅವರ ಋಣ ತೀರಿಸಿ ಮುಗಿಯದು. ಕಾಪಿಟ್ಟುಕೊಂಡು ಬರೆಯುತ್ತಲೇ ಸಾಗಬೇಕಷ್ಟೇ.” ಎಂದಿದ್ದಾರೆ.