ಹೀಗಿದ್ದರು ನಮ್ಮ ಕಲಾಂ ಸರ್ !

ಹೀಗಿದ್ದರು ನಮ್ಮ ಕಲಾಂ ಸರ್ !

ವೃತ್ತಿಯಲ್ಲಿ ವಿಜ್ಞಾನಿಯಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಾಗ ಬಹುತೇಕ ಜನರಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಭಾರತ ದೇಶದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿಗಳಿಗೆ ಬಹಳ ಅಧಿಕಾರಗಳು ಇರುವುದಿಲ್ಲ. ಈ ಹಿಂದೆ ಆಗಿ ಹೋದ ರಾಷ್ಟ್ರಪತಿಗಳು ಅನೇಕರು ಕೇವಲ ಆಡಳಿತಾರೂಢ ಸರಕಾರಗಳ ಕೈಗೊಂಬೆ ಅಥವಾ ರಬ್ಬರ್ ಸ್ಟ್ಯಾಂಪ್ ಆಗಿಯೇ ಕೆಲಸ ಮಾಡಿದ್ದರು. ಹಲವಾರು ಮಂದಿ ಅನೇಕ ವಿವಾದಿತ ನಿರ್ಣಯಗಳನ್ನು ಕೈಗೊಂಡು (ಉದಾ: ತುರ್ತು ಪರಿಸ್ಥಿತಿಗೆ ಅನುಮತಿ) ಜನರ ನೋವಿಗೆ ಕಾರಣರಾಗಿದ್ದರು. ಈ ಕಾರಣದಿಂದ ಡಾ. ಕಲಾಂ ಅವರು ಭಾರತದ ರಾಷ್ಟ್ರಪತಿಗಳಾಗುವಾಗ ಜನರ ನಿರೀಕ್ಷೆಗಳು ಕಡಿಮೆ ಇದ್ದವು. 

ಆದರೆ ಡಾ. ಕಲಾಂ ಅವರು ರಾಷ್ಟ್ರಪತಿ ಭವನವನ್ನು ಪ್ರವೇಶಿಸಿದ ಬಳಿಕ ಅದನ್ನು ಜನರಿಗಾಗಿ ಮುಕ್ತವಾಗಿರಿಸಿದರು. ಆಯ್ದ ದಿನಗಳಂದು ಜನ ಸಾಮಾನ್ಯರೂ ರಾಷ್ಟ್ರಪತಿ ಭವನ, ಅದರ ಮುಂದಿರುವ ಸುಂದರ ಮುಘಲ್ ಗಾರ್ಡನ್ ಮೊದಲಾದುವುಗಳನ್ನು ನೋಡುವಂತಾಯಿತು. ಒಂದು ರೀತಿಯಲ್ಲಿ ಕಲಾಂ ಜನ ಸಾಮಾನ್ಯರ ರಾಷ್ಟ್ರಪತಿ ಎಂದೇ ಹೆಸರು ಪಡೆದರು. ಒಂದು ಸೂಟ್ ಕೇಸಿನಲ್ಲಿ ತಮ್ಮ ವಸ್ತುಗಳನ್ನು ತೆಗೆದುಕೊಂಡ ಬಂದ ಕಲಾಂ ಅವರು ರಾಷ್ಟ್ರಪತಿ ಭವನದಿಂದ ನಿರ್ಗಮಿಸುವಾಗಲೂ ಅದೇ ಒಂದು ಸೂಟ್ ಕೇಸಿನೊಂದಿಗೆ ಹೊರಗೆ ಬಂದರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಯಾವ ಸಂಬಂಧಿಕರಿಗೂ ವಿಶೇಷ ಅನುಕೂಲತೆಗಳನ್ನು ಮಾಡಿಕೊಡಲಿಲ್ಲ. ತಮ್ಮ ಕುಟುಂಬಸ್ಥರು ದಿಲ್ಲಿಗೆ ಬಂದಾಗ ಅವರ ಸ್ವಂತ ವೆಚ್ಚದಲ್ಲಿ ಅವರನ್ನು ತಿರುಗಾಡಿಸಿದರು. ೩-೪ ದಿನಗಳಿಗಿಂತ ಅಧಿಕ ಸಮಯ ರಾಷ್ಟ್ರಪತಿ ಭವನದಲ್ಲಿ ಉಳಿಯಲು ಬಿಡಲಿಲ್ಲ. 

ಡಾ ಕಲಾಂ ಅವರ ಬಗ್ಗೆ ಅವರ ಆಪ್ತ ಕಾರ್ಯದರ್ಶಿಯಾಗಿದ್ದ (೧೯೯೫ - ೨೦೧೫) ಆರ್ ಕೆ ಪ್ರಸಾದ್ ಅವರು ಒಂದು ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು ‘Kalam : The Untold Story’. ಈ ಕೃತಿಯಲ್ಲಿ ಕಲಾಂ ಬಗ್ಗೆ ನಮಗೆ ತಿಳಿಯದ ಹಲವಾರು ಸ್ವಾರಸ್ಯಕರವಾದ ಸಂಗತಿಗಳಿವೆ. ಆರ್ ಕೆ ಪ್ರಸಾದ್ ಅವರು ಡಾ ಕಲಾಂ ಅವರ ಅಧಿಕಾರಾವಧಿ ಮುಗಿದ ಬಳಿಕವೂ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಕಲಾಂ ಅವರು ನಿಧನರಾಗುವ ಸಮಯದಲ್ಲೂ ಅವರ ಜೊತೆ ಇದ್ದವರು. ಸುಮಾರು ೨ ದಶಕಗಳ ಕಾಲ ಅವರು ಕಲಾಂ ಜೊತೆಗಿದ್ದರು. ಅವರು ಈ ಕೃತಿಯಲ್ಲಿ ಬರೆದ ಒಂದು ಸ್ವಾರಸ್ಯಕರವಾದ ಘಟನೆಯನ್ನು ನಿಮ್ಮ ಮುಂದೆ ತೆರೆದಿಡಲಿರುವೆ.

ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಡಾ ಕಲಾಂ ಅವರ ಕುಟುಂಬಸ್ಥರನ್ನು ನೋಡಿಕೊಳ್ಳುವ ಹೊಣೆ ಪ್ರಸಾದ್ ಅವರದ್ದಾಗಿತ್ತು. ಡಾ ಕಲಾಂ ಅವರು ಯಾವತ್ತೂ ತಮ್ಮ ಅಧಿಕಾರಾವಧಿಯನ್ನು ದುರುಪಯೋಗ ಪಡಿಸಿಕೊಂಡವರಲ್ಲ. ತಮ್ಮವರಿಗಾಗಿ ಯಾವತ್ತೂ ಸರಕಾರದ ಹಣ, ಸವಲತ್ತು ಬಳಸಿಕೊಂಡವರಲ್ಲ. ಹಾಗಂತ ಕಲಾಂ ಅವರಿಗೆ ಕುಟುಂಬದವರ ಜೊತೆ ಸಂಪರ್ಕವಿರಲಿಲ್ಲ ಎಂದೇನಲ್ಲ. ಅವರು ನಿಯಮಿತವಾಗಿ ತಮ್ಮ ಕುಟುಂಬಸ್ಥರ ಜೊತೆ ಮಾತನಾಡುತ್ತಿದ್ದರು. ಅಪರೂಪದಲ್ಲಿ ಅಪರೂಪ ಎಂಬಂತೆ ಅವರೂ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುತ್ತಿದ್ದರು. ಪ್ರಸಾದ್ ಅವರಿಗೂ ಕಲಾಂ ಅವರ ಅಣ್ಣನ ಮಗಳ ಜೊತೆ ಸಂಪರ್ಕವಿತ್ತು. ಇವರ ಜೊತೆಗಲ್ಲದೇ ಪ್ರಸಾದ್ ಅವರಿಗೆ ಕಲಾಂ ಅವರ ಕುಟುಂಬದ ಇತರ ಸದಸ್ಯರ ಜೊತೆ ಅಷ್ಟೇನೂ ಒಡನಾಟವಿರಲಿಲ್ಲ. 

ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸಲು ಡಾ ಕಲಾಂ ಕುಟುಂಬದ ಹದಿನೈದು ಮಂದಿ ಸದಸ್ಯರು ದಿಲ್ಲಿಗೆ ಬರಲಿದ್ದರು. ಅವರು ತಮಿಳುನಾಡಿನಿಂದ ಗ್ರ್ಯಾಂಡ್ ಟ್ರಂಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಗಮಿಸಿದ್ದರು. ಅವರನ್ನು ಸ್ವಾಗತಿಸಿ ರೈಲು ನಿಲ್ದಾಣದಿಂದ ಕರೆತರುವ ಜವಾಬ್ದಾರಿಯನ್ನು ಪ್ರಸಾದ್ ಅವರಿಗೇ ವಹಿಸಲಾಗಿತ್ತು. ಈ ಸದಸ್ಯರಿಗಾಗಿ ಮಿನಿ ವ್ಯಾನ್ ಒಂದನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಡಾ. ಕಲಾಂ ಕುಟುಂಬ ಸದಸ್ಯರು ಬರುತ್ತಾರೆ ಎನ್ನುವ ಸುದ್ದಿಯನ್ನು ಸ್ಟೇಷನ್ ಮಾಸ್ಟರ್ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಈ ಮೊದಲೇ ತಿಳಿಸಲಾಗಿತ್ತು. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳನ್ನು ಹೊತ್ತ ರೈಲು ಒಂದನೇ ಫ್ಲಾಟ್ ಫಾರಂಗೆ ಬರುವುದು ವಾಡಿಕೆ. ಬರುತ್ತಿರುವವರು ನಿಯೋಜಿತ ರಾಷ್ಟ್ರಪತಿಗಳಾದ ಡಾ ಕಲಾಂ ಅವರ ಹತ್ತಿರದ ಸಂಬಂಧಿಗಳೇ ಆದರೂ ಅಲ್ಲಿದ್ದ ಯಾರೊಬ್ಬರಿಗೂ ಅವರ ಮುಖತ ಪರಿಚಯವಿರಲಿಲ್ಲ. ಈ ವಿಷಯ ತಿಳಿದ ಹಲವಾರು ಪತ್ರಕರ್ತರೂ ರೈಲು ನಿಲ್ದಾಣದಲ್ಲಿ ಸೇರಿದ್ದರು. ಮಾಧ್ಯಮದವರ ಬಳಿ ಏನೂ ಮಾತನಾಡಬಾರದು ಎಂದು ಕಲಾಂ ಅವರು ಮೊದಲೇ ತಮ್ಮ ಸಂಬಂಧಿಕರಿಗೆ ಹೇಳಿದ್ದರು. ಈ ಕಾರಣದಿಂದ ಪತ್ರಿಕಾ ಛಾಯಾಗ್ರಾಹಕರು ಅವರ ಫೋಟೋಗಳನ್ನಷ್ಟೇ ತೆಗೆದುಕೊಂಡರು.

ರೈಲು ನಿಲ್ದಾಣದಿಂದ ಡಾ ಕಲಾಂ ಕುಟುಂಬಸ್ಥರನ್ನೆಲ್ಲಾ ಸರಕಾರಿ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಡಾ ಕಲಾಂ ಅವರು ತಮ್ಮ ಕುಟುಂಬದ ಸದಸ್ಯರ ಜೊತೆ ಒಂದು ಗಂಟೆ ಕಳೆದರು. ಮರುದಿನ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಡಾ ಕಲಾಂ ಕುಟುಂಬಸ್ಥರಿಗೆ ರಾಷ್ಟ್ರಪತಿ ಭವನದ ಹಾಲ್ ನಲ್ಲಿ ಒಂದು ಮೂಲೆಯಲ್ಲಿ ಸ್ಥಳ ನಿಗದಿ ಮಾಡಲಾಗಿತ್ತು. ಪ್ರಮಾಣ ವಚನ ಮುಗಿದ ಬಳಿಕ ಕಲಾಂ ಅವರು ತಮ್ಮ ಸಂಬಂಧಿಕರಿಗೆ ರಾಷ್ಟ್ರಪತಿ ಭವನದ ಕೆಲವು ಕೋಣೆಗಳನ್ನು ಹಾಗೂ ಪ್ರದೇಶಗಳನ್ನು ತೋರಿಸಿದರು. ಮದ್ಯಾಹ್ನದ ಊಟದ ಬಳಿಕ ಅವರನ್ನು ಬೀಳ್ಕೊಟ್ಟರು. ಅವರು ಅದೇ ದಿನ ರಾತ್ರಿಯ ರೈಲಿಗೆ ತಮಿಳ್ನಾಡಿಗೆ ಮರಳಲು ರೈಲು ನಿಲ್ದಾಣಕ್ಕೆ ಹೋದರೆ ಅದರ ಟಿಕೇಟುಗಳು ವೈಟಿಂಗ್ ಲಿಸ್ಟ್ ನಲ್ಲಿದ್ದವು. ಆದರೆ ಪ್ರಸಾದ್ ಅವರು ರೈಲು ಅಧಿಕಾರಿಗಳ ಜೊತೆ ಮಾತನಾಡಿ, ಪ್ರಯಾಣಿಸುವ ಯಾತ್ರಿಗಳು ನೂತನ ರಾಷ್ಟ್ರಪತಿಗಳ ಕುಟುಂಬಸ್ಥರು ಎಂದು ಮನವರಿಕೆ ಮಾಡಿ ಒಂದೇ ಬೋಗಿಯಲ್ಲಿ ಟಿಕೇಟ್ ಗಳನ್ನು ಮಾಡಿಕೊಟ್ಟರು. ಈ ಕುಟುಂಬಸ್ಥರ ಎಲ್ಲಾ ಪ್ರಯಾಣದ ವೆಚ್ಚವನ್ನು ಡಾ ಕಲಾಂ ಅವರೇ ಭರಿಸಿದರು. ಹೀಗಿದ್ದರು ನೋಡಿ ನಮ್ಮ ಕಲಾಂ ಸರ್ !

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ