ಹೀಗೂ ಉಂಟೇ! ದಾನವೇ ದೊಡ್ಡದು
ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ.
ಪ್ಯಾರಿಸಿನ ಪ್ರಯೋಗಾಲಯದಲ್ಲಿ 1902ರಲ್ಲಿ ರೇಡಿಯಮ್ ಸಂಶೋಧಿಸಿದ ಪಿಯರ್ರೆ ಮತ್ತು ಮೇರಿ ಕ್ಯೂರಿ ರೇಡಿಯಮ್ ಮಾಡುವ ವಿಧಾನಕ್ಕೆ ಪೇಟೆಂಟ್ ಪಡೆಯಲು ನಿರಾಕರಿಸಿದರು. ರೇಡಿಯಮ್ ಜಗತ್ತಿಗೆ ಸೇರಿದ ಸೊತ್ತು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಯಾರಿಗೂ ಅಧಿಕಾರವಿಲ್ಲವೆಂದೂ ಅವರು ಘೋಷಿಸಿದರು.
"ದ ಓಲ್ಡ್ ಮ್ಯಾನ್ ಆಂಡ್ ದ ಸೀ” ಎಂಬ ತನ್ನ ಕಾದಂಬರಿಗೆ ಗಳಿಸಿದ ನೊಬೆಲ್ ಪ್ರಶಸ್ತಿಯ ಹಣವನ್ನು ಅರ್ನೆಸ್ಟ್ ಹೆಮಿಂಗ್ವೇ ಪೂರ್ವ ಕ್ಯೂಬಾದ ಶ್ರೈನ್ ಆಫ್ ದಿ ವರ್ಜಿನ್ಗೆ ದಾನವಾಗಿತ್ತ.
ಜಾನ್ ಡಿ. ರಾಕ್ಫೆಲ್ಲರ್ 1855ರಲ್ಲಿ, ತನ್ನ ಹದಿನಾರನೆಯ ವಯಸ್ಸಿನಲ್ಲಿ, ಮೊತ್ತಮೊದಲ ದಾನ ನೀಡಿದ. ಅದಾಗಿ ಎಂಬತ್ತೆರಡು ವರುಷಗಳ ನಂತರ ಆತ ತೀರಿಕೊಳ್ಳುವ ವರೆಗೆ ಅವನು 53,13,26,842 ಡಾಲರ್ ಹಣವನ್ನು ದಾನವಿತ್ತಿದ್ದ.
ಜರ್ಮನ್ ಭೌತವಿಜ್ನಾನಿ ವಿಲ್-ಹೆಲ್ಮ್ ಕೊನ್ರಡ್ ರೊಂಟ್ಜೆನ್ 1895ರಲ್ಲಿ ಎಕ್ಸ್-ರೇ ಸಂಶೋಧಿಸಿ, ವೈಜ್ನಾನಿಕ ಕ್ರಾಂತಿಗೆ ನಾಂದಿ ಹಾಡಿದ. ತನ್ನ ಸಂಶೋಧನೆಗೆ ಸಂಬಂಧಿಸಿದಂತೆ ಯಾವುದೇ ಪೇಟೆಂಟಿಗೆ ಅರ್ಜಿ ಸಲ್ಲಿಸಲು ಅಥವಾ ಅದರಿಂದ ಹಣದ ಲಾಭ ಗಳಿಸಲು ಅವನು ನಿರಾಕರಿಸಿದ. ಇಂತಹ ಮಹಾನುಭಾವ ನೊಬೆಲ್ ಪ್ರಶಸ್ತಿ ಗಳಿಸಿದರೂ, ಸಾಯುವ ಕಾಲದಲ್ಲಿ ಅವನು ತೀರಾ ಬಡತನದಲ್ಲಿದ್ದ.
ಥೋಮಸ್ ಆಲ್ವಾ ಎಡಿಸನ್ಗೆ 1905ರಲ್ಲಿ ತನ್ನ ಕಂಪೆನಿ ಮಾರಾಟ ಮಾಡಿದ ಒಂದು ಬ್ಯಾಟರಿಯಲ್ಲಿ ದೋಷವಿದೆ ಎಂದು ತಿಳಿಯಿತು. ಅಂತಹ ಬ್ಯಾಟರಿ ಖರೀದಿಸಿದ ಎಲ್ಲರಿಗೂ ಅದರ ಹಣ ಹಿಂತಿರುಗಿಸುವುದಾಗಿ ಅವನು ಘೋಷಿಸಿದ. ಅದರಂತೆ ತನ್ನ ಸ್ವಂತ ಹಣದಿಂದಲೇ ಅವನು ಒಂದು ಮಿಲಿಯನ್ ಡಾಲರ್ ಹಣ ಹಿಂತಿರುಗಿಸಿದ.
ಜರ್ಮನಿಯ ರಾಜಧಾನಿ ಬರ್ಲಿನಿನಲ್ಲಿ ಉಪವಾಸವಿದ್ದ ಬಡವರಿಗೆ ಆಹಾರ ಒದಗಿಸಲು ಧನ ಸಹಾಯ ಮಾಡಲಿಕ್ಕಾಗಿ, ಆಲ್ಬರ್ಟ್ ಐನ್ಸ್ಟೀನ್ 1930ರಲ್ಲಿ ತನ್ನ ಹಸ್ತಾಕ್ಷರವನ್ನೇ ಮಾರಾಟ ಮಾಡಿದ - ಹಸ್ತಾಕ್ಷರವನ್ನು ಒಂದು ಡಾಲರ್ ಬೆಲೆಗೆ ಮತ್ತು ಹಸ್ತಾಕ್ಷರ ಮಾಡಿದ ಫೋಟೋವನ್ನು ಐದು ಡಾಲರ್ ಬೆಲೆಗೆ ಮಾರಿದ.
ಸ್ವೀಡನಿನ ಮಹಾದಾನಿ ಹೆನ್ರಿ ಡುನಾಂಟ್ “ರೆಡ್ ಕ್ರಾಸ್” ಸಂಸ್ಥೆ ಸ್ಥಾಪಿಸಲಿಕ್ಕಾಗಿ ತನ್ನೆಲ್ಲ ಹಣವನ್ನೂ ಸಮಯವನ್ನೂ ಖರ್ಚು ಮಾಡಿದ್ದರಿಂದಾಗಿ ಅವನ ವ್ಯವಹಾರದಲ್ಲಿ ಭಾರೀ ನಷ್ಟವಾಗಿ ದಿವಾಳಿಯಾದ. ಆತ 1901ರ ನೊಬೆಲ್ ಪ್ರಶಸ್ತಿಯ ಜಂಟಿ ವಿಜೇತನಾಗಿದ್ದರೂ, ಪ್ರಶಸ್ತಿಯ ಹಣವನ್ನು ತನ್ನ ಕುಟುಂಬಕ್ಕೆ ನೀಡಲಿಲ್ಲ; ಬದಲಾಗಿ ದಾನ ಮಾಡಿದ.
ಅಮೇರಿಕಾದ ಬೃಹತ್ ಉಕ್ಕಿನ ಕಾರ್ಖಾನೆಗಳ ಮಾಲೀಕ ಆಂಡ್ರೂ ಕಾರ್ನಿಗಿ 19ನೇ ಶತಮಾನದಲ್ಲಿ ಗ್ರಂಥಾಲಯಗಳು, ಸಂಶೋಧನಾ ಯೋಜನೆಗಳು ಮತ್ತು ಜಾಗತಿಕ ಶಾಂತಿಯ ಉದ್ದೇಶಗಳಿಗಾಗಿ 330 ಮಿಲಿಯ ಡಾಲರ್ ದಾನ ನೀಡಿದ.
ವಾಷಿಂಗ್ಟನ್ ಸೈನ್ಯದಲ್ಲಿದ್ದು, ಅಮೇರಿಕಾದ ಕ್ರಾಂತಿಯಲ್ಲಿ ಹೋರಾಡಿದ ಪೊಲಿಷ್ ದೇಶಭಕ್ತ ಟಾಡೆಸ್ ಕೊಷಿಯಸ್ಕೊ ತನ್ನ ಉಯಿಲಿನಲ್ಲಿ ಹೀಗೆ ಬರೆದಿದ್ದ: "ನನಗೆ ಕೊಡುಗೆಯಾಗಿ ಸಿಕ್ಕಿದ ಜಮೀನನ್ನೆಲ್ಲ ಮಾರಾಟ ಮಾಡಿ, ಅದರ ಹಣವನ್ನು ಕರಿಯ-ಜೀತದಾಳುಗಳನ್ನು ಜೀತದಿಂದ ಬಿಡುಗಡೆಗೊಳಿಸಿ, ಅವರಿಗೆ ಸ್ವಾತಂತ್ರ್ಯ ನೀಡಲು ಬಳಸತಕ್ಕದ್ದು.”