ಹೀಗೇ ಕಳೆದವು 250 ದಿನಗಳು...
ಒಂದೊಂದೇ ಹೆಜ್ಜೆ ಇಡುತ್ತಾ,
ಒಂದೊಂದು ಗಂಟೆಯನ್ನು ಕಳೆಯುತ್ತಾ,
ಒಂದೊಂದು ಕಿಲೋಮೀಟರ್ ಸವೆಸುತ್ತಾ,
ಒಂದೊಂದು ಊಟವನ್ನು ಸವಿಯುತ್ತಾ,
ಒಂದೊಂದು ದಿನವನ್ನು ದೂಡುತ್ತಾ,
ಒಂದೊಂದು ಪರಿಸರವನ್ನು ನೋಡುತ್ತಾ,
ಒಂದೊಂದು ಪ್ರದೇಶವನ್ನು ದಾಟುತ್ತಾ,
ಒಬ್ಬೊಬ್ಬರನ್ನು ಭೇಟಿಯಾಗುತ್ತಾ,
ಒಬ್ಬೊಬ್ಬರನ್ನು ಮಾತನಾಡಿಸುತ್ತಾ,
ಒಬ್ಬೊಬ್ಬರ ಹೃದಯವನ್ನು ಇಣುಕುತ್ತಾ,
ಒಬ್ಬೊಬ್ಬರ ಭಾವನೆಗಳನ್ನು ಗ್ರಹಿಸುತ್ತಾ,
ಒಬ್ಬೊಬ್ಬರಿಂದಲೂ ಕಲಿಯುತ್ತಾ,
ಒಂದಷ್ಟು ನೋವು,
ಒಂದಷ್ಟು ನಲಿವು,
ಒಂದಷ್ಟು ಭರವಸೆ,
ಒಂದಷ್ಟು ನಿರಾಸೆ,
ಒಂದಷ್ಟು ಖುಷಿ,
ಒಂದಷ್ಟು ಆತಂಕ...
ಹೀಗೇ ಕಳೆದವು 250 ದಿನಗಳು...
ಹೀಗೇ ದಾಟಿದವು 7500 ಕಿಲೋಮೀಟರುಗಳು....
ನಿದ್ದೆಯ ಕ್ಷಣಗಳಿಗಾಗಿ ಹಂಬಲಿಸುತ್ತಾ,
ಊಟದ ರುಚಿಗಾಗಿ ಕಾತರಿಸುತ್ತಾ,
ನೀರಿಗಾಗಿ ಹಾತೊರೆಯುತ್ತಾ,
ಗುರಿ ತಲುಪಲು ಚಡಪಡಿಸುತ್ತಾ,
ಪ್ರೀತಿ ಗೌರವ ಅಭಿಮಾನ ಪಡೆಯುತ್ತಾ,
ಆತಿಥ್ಯ ಸ್ವೀಕರಿಸುತ್ತಾ,
ವಿರಹ ವೇದನೆ ಅನುಭವಿಸುತ್ತಾ,
ಹಾಗೋ ಹೀಗೋ ಸಾಗುತ್ತಿದೆ ಒಂದು ಕಾಲ್ನಡಿಗೆಯ ಪಯಣ.....
ಇನ್ನೂ ಇನ್ನೂ ಸಾಕಷ್ಟು ಕ್ಷಣಗಳು, ದಿನಗಳು,
ಪ್ರದೇಶಗಳು, ಕಿಲೋಮೀಟರುಗಳು, ದಾಟಬೇಕಿದೆ...
ಗಡಿಗಳನ್ನು ದಾಟುತ್ತಾ,
ಒಡೆದ ಮನಸ್ಸುಗಳನ್ನು ಬೆಸೆಯುತ್ತಾ,
ಕಲಿಯುತ್ತಾ,
ನಿಜ ಮನುಷ್ಯರನ್ನು ಹುಡುಕುತ್ತಾ,
ಸೋಲು ಗೆಲುವುಗಳ ಆತಂಕವಿಲ್ಲದೆ,
ಈ ಕ್ಷಣಗಳನ್ನು ಸವಿಯುತ್ತಾ,
ಹಾಗೋ ಹೀಗೋ ಕಳೆದವು,
250 ದಿನಗಳು,
7500 ಕಿಲೋಮೀಟರುಗಳು,
ಅದಕ್ಕಾಗಿ ನಿಮಗೆಲ್ಲಾ ಹೃದಯದಾಳದಿಂದ ವಂದಿಸುತ್ತಾ,
ಧನ್ಯತಾ ಭಾವದಿಂದ ನಮಸ್ಕರಿಸುತ್ತಾ.....
***
ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ " ಜ್ಞಾನ ಭಿಕ್ಷಾ ಪಾದಯಾತ್ರೆ " ನವೆಂಬರ್ 1 2020 ರಿಂದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ ಪ್ರಾರಂಭ. ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಕಾಲ್ನಡಿಗೆಯಲ್ಲಿ ಸಂಪರ್ಕಿಸುವ ಸಂಕಲ್ಪ. ಚಾಮರಾಜನಗರದ ಕೊನೆಯ ಹಳ್ಳಿಯವರೆಗೆ.......
- ಜ್ಞಾನ ಭಿಕ್ಷಾ ಪಾದಯಾತ್ರೆಯ 249 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಹೋಬಳಿಯಿಂದ ಸುಮಾರು 24 ಕಿಲೋಮೀಟರ್ ದೂರದ ಚಿಕ್ಕಮಗಳೂರು ನಗರ ತಲುಪಿ ಅಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರದಲ್ಲಿ ಪಾದಯಾತ್ರೆಯ ಸಮಯದಲ್ಲಿ ಕಂಡು ಬಂದ ಸುಂದರ ದೃಶ್ಯ