ಹೀಗೊಂದು ಚಿಂತನೆ
ಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯುದ್ಧ ಮುಗಿದ ನಂತರ ಯುಧಿಷ್ಟಿರನಿಗೆ ಆದಂತೆ. ಇರಲಿ.. ಹೆಚ್ಚಿಗೆ ಹರಟೆ ಹೊಡೆಯದೇ ನೇರವಾಗಿ ಮಾತಿಗೆ ಬರುತ್ತೇನೆ.
ಪ್ರಶ್ನೆ:
ಜೀವ (ಅಥವಾ ಆತ್ಮ??) ಎಂದರೆ ಏನು? ಜೀವಿಗೆ ಒಂದೇ ಜೀವವೇ? ಅನೇಕ ಜೀವಗಳು ಸೇರಿ ಉನ್ನತ ಜೀವಿವೇ?
ಒಳನೋಟ:
ಉದಾಹರಣೆಗೆ ಮನುಷ್ಯನನ್ನೇ ತೆಗೆದುಕೊಳ್ಳೋಣ. ಮನುಷ್ಯ ಜೀವಿಸುತ್ತಿದ್ದಾನೆ ಎಂದರೆ ಅವನ ಮುಖ್ಯವಾದ ಎಲ್ಲಾ ಅಂಗಗಳೂ ಕೆಲಸ ಮಾಡುತ್ತಿವೆ ಎಂದರ್ಥ. ಅಂಗಗಳ ಕೆಲಸಕ್ಕೆ ಜೀವಕೋಶಗಳು ಬದುಕಿರಬೇಕು ಅಲ್ಲವೇ? ಜೀವಕೋಶಗಳು ಬದುಕಿವೆ ಎಂದರೆ ಜೀವಾಣುಗಳು ಬದುಕಿರಬೇಕು ತಾನೆ? ಅಷ್ಟಕ್ಕೂ ಜೀವಾಣುಗಳಿಗೆ ಕಾರಣವಾಗುವ ಇಂಗಾಲದ ಅಣು - ಅದರ ಎಲೆಕ್ಟ್ರೊನ್ ಬದುಕಿವೆಯೇ? ಇಲ್ಲ ಎಂದಾದರೆ ಬದುಕಿರದ ವಸ್ತುಗಳು ಸೇರಿ ಬದುಕನ್ನು ಹುಟ್ಟಿಸುತ್ತಿವೆಯೇ?ಎಲ್ಲಿಂದ?ಹೇಗೆ?
ಉಪಪ್ರಶ್ನೆ:
ಮನುಷ್ಯನಿಗೆ ಯೋಚನಾ ಶಕ್ತಿ ಇದೆ ಎಂದಾದರೆ ಅಂಗ-ಜೀವಕೊಶ-ಜೀವಾಣುವಿಗೂ ತನ್ನದೇ ಆದ ಯೋಚನಾ ಶಕ್ತಿ ಇರಬೇಕಲ್ಲವೇ?ಪ್ರತಿಯೊಂದು ಜೀವಾಣುವೂ ಆದಷ್ಟು ಕಾಲ ಬದುಕಬೇಕು-ಇನ್ನಷ್ಟು ತನ್ನಂತೆಯೇ ಇರುವ ಜೀವಾಣುವನ್ನು ಹುಟ್ಟಿಸಬೇಕು ಎನ್ನುವ ಯೊಚನೆಯಂತೂ ಮಾಡಿಯೇ ಮಾಡುತ್ತಿರಬೇಕಲ್ಲವೇ? ಇದಕ್ಕೂ ಸಾಧಾರಣ ಮನುಷ್ಯನ ಯೋಚನೆಗಳಿಗೂ ವ್ಯತ್ಯಾಸ ಇದೆಯೇ?
ಹೊರನೋಟ:
ಅನೇಕ ಪ್ರಾಣಿ-ಪಕ್ಷಿ-ಮರ-ಗಿಡ ಮುಂತಾದ ಜೀವಸಂಕುಲಗಳು ಸೇರಿ ಭೂಮಿ. ಅನೇಕ ಇಂತಹ ಗ್ರಹಗಳು ಸೇರಿ ಸೂರ್ಯಮಂಡಲ, ಅನೇಕ ಸೂರ್ಯಮಂಡಲಗಳು ಸೇರಿ ತಾರಾಸಮೂಹ, ಅನೇಕ ಸಮೂಹಗಳು ಸೇರಿ ಬ್ರಹ್ಮಾಂಡ. ಒಳನೋಟದ ದಾರಿಯಲ್ಲೇ ಹೋದರೆ, ತಾರಾಸಮೂಹ-ಬ್ರಹ್ಮಾಂಡಗಳೂ ಬದುಕಿವೆಯೇ? ಅವಕ್ಕೂ ಸ್ವತಂತ್ರ ಯೋಚನೆ ಇದೆಯೇ?
ಇದೆಲ್ಲಾ ಒಂದೇ ಉನ್ನತ ಜೀವಿಯೇ. ಇದೇ ಬ್ರಹ್ಮಜ್ಞಾನವೇ??
ಇಲ್ಲ ಎಂದಾದರೆ ಜೀವನ(ಬದುಕಿರುವವು ಎಂಬರ್ಥದಲ್ಲಿ) ಎನ್ನುವುದು ಎಲ್ಲಿಗೆ ನಿಲ್ಲುತ್ತದೆ?
ಬಹಳ ಪ್ರಶ್ನೆಗಳಾದವು ಅನ್ನಿಸುತ್ತದೆ. ಅಥವಾ ಈ ಪ್ರಶ್ನೆಗಳೇ ಉತ್ತರವೇ??
ನಿಮ್ಮ ಅಭಿಪ್ರಾಯಗಳೇನು?
ಸದ್ಯಕ್ಕೆ ಇಲ್ಲಿಗೆ ಕೊರೆತ ಮುಗಿಸುತ್ತಿದ್ದೇನೆ. ಈ ಎಲ್ಲಾ ಹುಳಗಳೂ ಎಲ್ಲರ ತಲೆಯಲ್ಲೂ ಓಡಾಡಲಿ. :)