ಹೀಗೊಂದು ಜ್ವರದ ಕಥೆ

ಹೀಗೊಂದು ಜ್ವರದ ಕಥೆ

ಒಂದು ಜ್ವರದ ಕಥೆ...

ಅವನ ಹೆಸರು ರಮೇಶ.ಕಾಲೇಜು ಓದುತ್ತಿದ್ದ ಹುಡುಗ. ಒಬ್ಬನೆ ಮಗನಾದ್ದರಿಂದ ತಂದೆತಾಯಿ ಬಹಳ ಪ್ರೀತಿಯಿಂದಲೆ ಅವನನ್ನು ಬೆಳೆಸಿದ್ದರು.ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶ ಇದ್ದಕ್ಕಿದ್ದ ಹಾಗೆ ಮಂಕಾಗಿ ಬಿಡುತ್ತಾನೆ.ಮಗನ ಹಠಾತ್ ಬದಲಾವಣೆಯಿಂದ ತಂದೆತಾಯಿ ಆತಂಕಕ್ಕೆ ಒಳಗಾಗುತ್ತಾರೆ.ಸುದ್ದಿ ತಿಳಿದ ಪಕ್ಕದ ಮನೆಯವರೊಬ್ಬರು ರಮೇಶನನ್ನು ಮನರೋಗ ತಜ್ಞರ ಬಳಿ ಕರೆದುಕೊಂಡು ಹೋಗುವಂತೆ ಸಲಹೆ ಕೊಡುತ್ತಾರೆ.ಅದರಂತೆ ಪಾಲಕರು ರಮೇಶನನ್ನು ಮನರೋಗ ತಜ್ಞರ ಬಳಿ ಕರೆತರುತ್ತಾರೆ.ಮನರೋಗ ತಜ್ಞರು ರಮೇಶನ ತಂದೆತಾಯಿಗೆ ಹೊರಗಿರುವಂತೆ ಹೇಳಿ ರಮೇಶನನ್ನು ಒಂದು ತಾಸು ಕೌನ್ಸೆಲಿಂಗ್ ನಡೆಸಿ ಅವನ ರೋಗವನ್ನು ಪತ್ತೆ ಹಚ್ಚುತ್ತಾರೆ.ರಮೇಶನ ತಂದೆತಾಯಿಯನ್ನು ಒಳಕರೆದು,'ನೋಡಿ ನಿಮ್ಮ ಮಗನಿಗೆ ವಿಚಿತ್ರವಾದ ಒಂದು ಕಾಯಿಲೆ ಬಂದಿದೆ.ಹಕ್ಕಿಜ್ವರ ಕೋಳಿಜ್ವರ,ಹಂದಿಜ್ವರದಂತೆ ಇದು ಕೂಡ ಒಂದು ರೀತಿಯ ಜ್ವರ.ಆರಂಭದಲ್ಲಿ ಇದು ಅಮೆರಿಕಾದಂತಹ ಮುಂದುವರೆದ ದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತಿತ್ತು. ಆದರೆ ಈ ಜಾಗತೀಕರಣದಿಂದಾಗಿ ತಿನ್ನಲು ಅನ್ನಕ್ಕೆ ಪರದಾಡುವ ದೇಶಗಳಲ್ಲು ಇದರ ಹಾವಳಿ ಜಾಸ್ತಿಯಾಗಿದೆ.ಭಾರತದಲ್ಲಿ ಇದು ಕಾಲೇಜು ಓದುವ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಕಾರಣ ಸಹವಾಸದೋಷ' ಎಂದು ವಿವರಣೆ ನೀಡಿದರು.ಇದನ್ನು ಕೇಳುತ್ತಲೆ ರಮೇಶನ ತಂದೆತಾಯಿ ಬೆವರಲು ಆರಂಭಿಸುತ್ತಾರೆ.ನಡುಗಿದ ಧ್ವನಿಯಲ್ಲಿ ಇದಕ್ಕೆ ಮದ್ದಿಲ್ಲವೇ..? ಡಾಕ್ಟರ್ ಎಂದು ಕೇಳುತ್ತಾರೆ.ಡಾಕ್ಟರ್ ತಕ್ಷಣ ಪ್ರತಿಕ್ರಿಯಿಸಿ,'ಖಂಡಿತ ಇದೆ.ನಾನು ಹೇಳಿದಂತೆ ಮಾಡಿ, ಮೊದಲು ವಾರದ ಹಿಂದೆ ಹಾಳಾಗಿ ಹೋಗಿರುವ ರಮೇಶನ ಸ್ಮಾರ್ಟ್ ಫೋನ್ ರಿಪೇರಿ ಮಾಡಿಸಿ..ತಕ್ಷಣ ಅದಕ್ಕೆ 3ಜಿ ಡಾಟಾ ಹಾಕಿಸಿ.. ಆಮೇಲೆ ದಿನಕ್ಕೆ ಮೂರು ಬಾರಿ ಈ ವಾಟ್ಸಪ್ ಸಿರಪ್ ಕುಡಿಯಲಿ..ಜೊತೆಗೆ ಈ ಫೇಸ್ಬುಕ್ ಗುಳಿಕೆಯನ್ನು ನುಂಗಿಸುತ್ತ ಇರಿ... ಯಾವುದೇ ವೈರಸ್ ಅಟ್ಯಾಕ್ ಆಗದಂತೆ ಒಂದು ಆಂಟಿ ವೈರಸ್ ಇಂಜೆಕ್ಷನ್ ಕೊಟ್ಟಿರ್ತಿನಿ.ಯಾವುದಕ್ಕು ಡಾಟಾ ಖಾಲಿಯಾಗದಂತೆ ನೋಡಿಕೊಳ್ಳಿ ಅದೇ ಈ ರೋಗಕ್ಕೆ ಗ್ಲೂಕೋಸ್...ಪಥ್ಯ ಏನು ಮಾಡೋದು ಬೇಡ.ಸೈಬರ್ ಕಡೆ ಹೋಗೋಕೆ ಬಿಡಬೇಡಿ ಅಷ್ಟೆ..ಯಾಕಂದ್ರೆ ಬೇರೊಂದು ರೋಗ ತಗಲುವ ಸಾಧ್ಯತೆ ಇರುತ್ತದೆ ಎಂದರು.ರಮೇಶನ ತಂದೆತಾಯಿ,'ಸರಿ ಡಾಕ್ಟರ್ ಹಾಗೆ ಮಾಡುತ್ತೇವೆ... ಅಂದಹಾಗೆ ಇದು ಯಾವ ಜ್ವರ ಅಂತ ಹೇಳೇ ಇಲ್ವಲ್ಲ ಡಾಕ್ಟರ್' ಅಂದ್ರು.ಅದಕ್ಕೆ ಡಾಕ್ಟರ್,' ಹೋ...!ಹೌದಲ್ವೇ..ಇದು 'ಇಂಟರ್ನೆಟ್ ಜ್ವರ' ...!ಅಂತ ಹೇಳಿ ನಕ್ಕರು.

-@ಯೆಸ್ಕೆ