ಹೀಗೊಂದು ರೂಪಕ ‘ನೀಲ ಕಡಲ ಬಾನು‘

ಹೀಗೊಂದು ರೂಪಕ ‘ನೀಲ ಕಡಲ ಬಾನು‘

ಬರಹ

ಇದೊಂದು ರೂಪಕ. ಅಥವಾ ಕಥನ ನಾಟಕ ಅಂತಲೂ ಅನ್ನಬಹುದು. ಜಯಲಕ್ಷ್ಮೀಯವರ ‘ನೀಲ ಕಡಲ ಬಾನು’ ಕವನ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಅವರ ಕೋರಿಕೆಯ ಮೇರೆಗೆ ನಾನಿದನ್ನು ಬರೆದದ್ದು.. ದೀಪಾ ರವಿಶಂಕರ್ ತಮ್ಮ ‘ಅನೇಕ’ ತಂಡದ ಕಲಾವಿದರೊಂದಿಗೆ ಅಭಿನಯಿಸಿದ್ದರು. ಸಂಪದ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳುವಂತೆ ಜಯಲಕ್ಷ್ಮೀಯವರು ಒತ್ತಾಯಿಸಿದ್ದಕ್ಕೆ ಇಂದು ನಿಮ್ಮೆದುರಿಗಿಡುತ್ತಿದ್ದೇನೆ... ಅವರ ಕವನ ಸಂಕಲನದಿಂದಲೆ ಕೆಲವು ಕವಿತೆಗಳ ತುಣುಕುಗಳನ್ನು ಆಯ್ದುಕೊಂಡು ಹೆಣೆದ ರೂಪಕವಿದು.

 

 

ಅರೆ... ಏನಿವತ್ತು ಇಷ್ಟೋಂದು ಲೆಟರ್ಸು!! ಇಡೀ ಕಾಲನಿ ಪೋಸ್ಟ್‌ನೆಲ್ಲ ನಮ್ಮನೇಲೆ ಡಂಪ್ ಮಾಡಿ ಹೋದ್ನಾ ಈ ಪೋಸ್ಟ್‌ಮನ್!!? ಬಂದ್ರೆ ಹೀಗೆ ಒಟ್ಟೊಟ್ಟಾಗಿ ಬರ್ತವೆ ಇಲ್ಲಾ ಅಂದ್ರೆ ರೆಗ್ಯೂಲರ್ ಆಗಿ ಬರೊ ಮ್ಯಾಗ್ಜಿನ್ಸ್ ಸಹ ಬರೊಲ್ಲ! ಹಂ. (ಒಂದೊಂದಾಗಿ ನೋಡುತ್ತಾ ಹೋಗಿ ಕೊನೆಗೊಂದು ಲೆಟರ್‍ನ ನೋಡುತ್ತಾ ಸ್ಥಬ್ದಳಾಗುತ್ತಾಳೆ).. ಇಷ್ಟು ದಿನದ ಮೇಲಾದ್ರು ನೆನಪಾದ್ನಲ್ಲ ನಾನು.. (ಮೊಬೈಲ್ ರಿಂಗ್ ಆಗುತ್ತದೆ. ಅದನ್ನು ನೋಡಿದ ಅವಳ ಮುಖದಲ್ಲಿ ಆಶ್ಚರ್ಯ ಮಿಶ್ರಿತ ಆನಂದ. ರಿಸೀವ್ ಮಾಡ್ತಾಳೆ.) ಹೇಗಿದ್ದೀಯಾ? ಮ್,ನಾನ್ ಚೆನ್ನಾಗಿದೀನಿ ಮಕ್ಕಳೂ ಚೆನ್ನಾಗಿದಾರೆ... ಈಗಷ್ಟೆ ನಿನ್ನ ಪತ್ರ ಕೈಗೆತ್ಕೊಂಡೆ ಅಷ್ಟ್ರಲ್ಲಿ ನಿನ್ ಫೋನ್...ತುಂಬಾ ಬ್ಯೂಸಿನಾ?ಏನಂದೆ? ಹಾಂ.. ಹಾಂ... ಹೌದಾ!? ಅರೆ ವ್ಹಾ! ಕಾಂಗ್ರಾಟ್ಸ್ ! ತುಂಬಾ ಖುಷಿಯಾಗ್ತಿದೆ.. ಮತ್ತೆ ಫೋನ್ ಮಾಡ್ತಿಯಲ್ವಾ?ಮ್..ಕಾಯ್ತಿರ್ತೀನಿ..ಬಾಯ್..

(ಕ್ಷಣಕಾಲ ಫೋನಿನಲ್ಲಿಯ ದನಿಯ ಗುಂಗಿನಲ್ಲಿದ್ದವಳು ಎಚ್ಚತ್ತು ಪತ್ರ ಬಿಡಿಸಿ ಓದಲು ತೊಡಗುತಿದ್ದಂತೆ ಕರೆಂಟು ಹೋಗುತ್ತದೆ "ಛೆ..! ಎಂದು ಮೊಂಬತ್ತಿಯನ್ನು ಉರಿಸುತ್ತಾಳೆ. ಕೈಯಲ್ಲಿದ್ದ ಪತ್ರ ನೋಡುತ್ತಾ) ...

" ಯಾಕೆ ನೀನು ನೆನಪಾದಾಗಲೆಲ್ಲ ಹೃದಯ ಬಿರಿಯೋದಿಲ್ಲ?... ಯಾಕೆ ಕಣ್ಣಲ್ಲಿ ನೀರೇ ಬರೋದಿಲ್ಲ? ಯಾಕೆ ನನಗೆ ನಿನ್ಮೇಲೆ ದ್ವೇಷ ಹುಟ್ಟೋದಿಲ್ಲ? ಯಾಕೆ ನನಗೆ ನನ್ಮೇಲೆನೇ ದ್ವೇಷ ಹುಟ್ಟೋದಿಲ್ಲ?... ಯಾಕೆ? ಯಾಕೆ? ಯಾಕೋ? (ನಗುತ್ತಾಳೆ) ಯಾಕ್ ಗೊತ್ತಾ? ನೀನೆ ಒಂದು ದಿನ ಹೇಳಿದ್ದ ಹಾಗೆ ನಾವಿಬ್ಬರೂ ಒಂದೇ. ಅಥವಾ ನಾವಿಬ್ಬರೂ ಒಂದೇ ಥರ. ನನ್ನ ಮೇಲೆ ನನಗೇ ಸಿಟ್ಟು ಬಾರದಂತೆ ನಿನ್ನ ಮೇಲೆ ಹೇಗೊ ಸಿಟ್ಟು ಮಾಡ್ಕೋಳ್ಲಿ? ನನಗೆ ನನ್ನ ಮೇಲೆಯೇ ದ್ವೇಷ ಮೂಡದಂತೆ ನಿನ್ನನ್ನ ಹೇಗೊ ದ್ವೇಷಿಸಲಿ? ನಾವಿಬ್ಬರೂ ಒಂದೇ ಅಲ್ವೇ? ಆ ದಿನ ನೀನೇ ಹೇಳಿದ್ದೆ, ನೆನಪಿದೆಯಾ? "The thing that is between us is fascination. And the fascination resides in our being alike. The fascination resides in finding that we are alike" ... and Fascinatingly ಕಣೊ, we found that we are alike..

ಆ ದಿನ ಚೆನ್ನಾಗಿ ನೆನಪಿದೆ ನನಗೆ. ಅವತ್ತೂ ಹೀಗೆ ಕರಂಟು ಹೋಗಿ ಬಂದು ಮಾಡ್ತಿತ್ತು... ನಾವಿಬ್ರು ಭಾರಿ ಘನಂಧಾರಿಗಳು ಅಂದ್ರೆ ನಾನು ಮತ್ತು ಅವನು, ಸಮಾಜದ ವ್ಯವಸ್ಥೆಯ ಬಗ್ಗೆ ಪರವಾಗಿ, ವಿರುದ್ಧವಾಗಿ ಮಾತಾಡ್ತಾ ಕೂತಿದ್ವಿ. ಮಾತಾಡ್ತಾ ಕೂತಿದ್ವಾ?! ಊಂಹುಂ ಕಿತ್ತಾಡ್ತಾ ಇದ್ವಿ!! (ನಗು) ಪಕ್ಕನೆ ಬಂದು ಹೋಗೊ ಕರೆಂಟು ಕ್ಷಣ ಕಾಲ ಇಬ್ಬರನ್ನೂ ಗಲಿಬಿಲಿಗೊಳಿಸ್ತಿತ್ತಾದ್ರೂ ಮರು ಕ್ಷಣ ಮತ್ತೆ ವಾದಕ್ಕೆ ಬೀಳ್ತಿದ್ವಿ. ಸೋಲೊಪ್ಕೊಳ್ಳೊದು ಅಂದ್ರೆ ನಮ್ಮಿಬ್ಬರಿಗೂ ಆಗದ ಮಾತು. ಅರೆ! ಸೋಲೊಪ್ಕೊಂಡೋರ ಮೂಗು ಮೊಂಡಾಗ್‌ಬಿಟ್ರೆ!! ಗತಿ ಏನು? ಆಹಾ ಅದೆಲ್ಲ ಆಗದ ಹೋಗದ ಮಾತು. ನೋಡಿದೋರು ನಾವಿಬ್ರು ಜಗಳ ಆಡ್ತಿದಿವೇನೋ ಅನ್ಕೋಬೇಕು ಹಾಗಿರ್ತಿತ್ತು ನಮ್ಮ ಚರ್ಚಾ ಸ್ಪರ್ಧೆ! ಆದ್ರೂ... ನಾನೆ ಕೆಲವೊಮ್ಮೆ ಸೋಲೊಪ್ಕೊಂಡೋಳ ಹಾಗೆ ಸುಮ್ನಾಗ್ತಿದ್ದೆ. ಆಗ ಅವನ ಮುಖದಲ್ಲಿಯ ಹೆಮ್ಮೆ ಇರ್ತಿತ್ತಲ್ಲ ಅದನ್ನ ನೋಡೋದೆ ಒಂದು ಚಂದ ಅನಿಸ್ತಿತ್ತು.. ನಾನೇನಂದೆ? ಕರೆಂಟು ಬಂದು ಹೋಗೊ ಆ ಕ್ಷಣ ಕಾಲ ನಮ್ಮಿಬ್ರನ್ನೂ ಗಲಿಬಿಲಿಗೊಳಿಸ್ತಿತ್ತು ಅಂತ ಅಲ್ವಾ?... ಯಾಕೆ ಹಾಗೆ? ಗೊತ್ತಿಲ್ಲ, ಆಗ ಎಲ್ಲವೂ ಅಸ್ಪಷ್ಟ. ಆದ್ರೆ ಅವನ ಇರಿವು ನನಗೆ ಹಿತ ಅನಿಸ್ತಿತ್ತು, ಹೀಗೇ ಜೀವನ ಪರ್ಯಂತ ಏನಾದ್ರು ಚರ್ಚೆ ಮಾಡ್ತಾ ಜೊತೆಯಾಗಿ ಕಾಲ ಕಳೆಯುವಂತಿದ್ರೆ ಎಷ್ಟು ಚಂದ ಅಲ್ವಾ ಅನಿಸ್ತಿತ್ತು...

ನೀನಿದ್ದಾಗ

ನನ್ನ ಜೊತೆ ನವುರು

ನವಿರಾದ ಅಲೆಗಳು

ಎದೆಯಲಿ ಹರಡಿದಂತೆ

ಒಡಲ ಕಡಲಿಗೆ

(ಕೈಯಲ್ಲಿರೊ ಪತ್ರವನ್ನುದ್ದೇಶಿಸಿ)

ನೀನು ನನ್ನ ಜೊತೆ ಇದ್ದಾಗಲೆಲ್ಲ ನಾನು ಯಾವತ್ತೂ ನಿನ್ನ ಬಳಿಯೇ ಇರಬೇಕೆಂಬ ಉತ್ಕಟತೆ ಹುಚ್ಚೆದ್ದು ಕುಣಿಯುತ್ತಿತ್ತೋ ಚಿನ್ನು. ನಿನ್ನನ್ನು ಪ್ರೀತಿಸುತ್ತಿದ್ದೆ ನಾನು. ಕಡಲನ್ನರಸಿ ಹೊರಟ ನದಿಯಂತೆ, ನದಿಯನ್ನರಸಿ ಹೊರಟ ತೊರೆಯಂತೆ, ನಿನ್ನಿರುವಿಕೆಯ ಅಂಜಾನಿ ಮಂಝಿಲ್... ನ ಕಡೆ ಹೊರಟು ಬಿಡುತ್ತಿದ್ದೆ ನಾನು. ಆವತ್ತು ನೀನು ನನ್ನ ಬಳಿಯೇ ಇದ್ದೆ. ಆದರೂ ಅದೆಷ್ಟು ದೂರ ಇದ್ದೆ ನೀನು. ಯಾವ Inferiority complex ನಿನ್ನನ್ನು ಕಾಡುತ್ತಿತ್ತೋ ನನಗೆ ಗೊತ್ತೇ ಆಗತಿರಲಿಲ್ಲ. ಆದರೂ ಸಮಯ ಸಿಕ್ಕಿದಾಗಲೆಲ್ಲ ಓಡೋಡಿ ಬರುತ್ತಿದ್ದೆ ನೀನು, ನಾನಿದ್ದಲ್ಲಿಗೆ. ನಾನು ಹರಟುತ್ತಿದ್ದೆ. ನೀನು ನಗುತ್ತಿದ್ದೆ. ನಿನ್ನನ್ನು ನೋಡಿ ನಾನು ನಗುತ್ತಿದ್ದೆ. ಇಬ್ಬರೂ ನಗುತ್ತಿದ್ದೆವಲ್ಲ.

ಯಾವುದೇ ವಿಷಯದ ಚರ್ಚೆಗಿಳಿದ್ರೆ ಎನ್ಸೈಕ್ಲೋಪಿಡಿಯಾ ನೀನು. ಪುಟ್ಟ ಪುಟ್ಟ ವಿವರಗಳನ್ನೂ ಬಿಡದೆ ಮಾತಾಡೊ ನೀನು ಉಳಿದಂತೆ ತುಂಬಾ ಮೌನಿ ಅನಿಸಿಬಿಡ್ತಿದ್ದಿ. ಅನಿಸೋದೇನು ಬಂತು ಮೌನವಾಗೇ ಇರ್ತಿದ್ದಿ.. ನಿನಗೇನೊ ಹೇಳೋಕಿರ್ತಿತ್ತು. ಆದ್ರೆ ನೀನೊ ದೀಕ್ಷೆ ತೊಗೊಂಡೋರ ಹಾಗೆ ಮೌನಾಚರಣೆಯಲ್ಲಿರ್ತಿದ್ದಿ.. ನಾನಾಗೇ ಕೇಳುವ ಆರು ಪ್ರಶ್ನೆಗಳಿಗೆ ಚುಟುಕಾಗಿ ಒಂದು ಉತ್ತರ ಕೊಡುತ್ತಿದ್ದಿ.. ನನ್ನಲ್ಲಿ ಮಾತಿನ ಸೆಲೆಯೊಡ್ಡಿ ನೀನು ಮಾತ್ರ ಸುಮ್ಮನಾಗಿಬಿಡುತ್ತಿದ್ದೆ ಜಾಣ ನೀನು. ಆದರೆ.. ಆದರೆ ಆ ನಿನ್ನ ಕಣ್ಣುಗಳಿವೆಯಲ್ಲ, ಅವು ನಿನ್ನ ಮನಸ್ಸನ್ನೆಲ್ಲ ಬರಿದುಮಾಡಿಬಿಡುತ್ತಿದ್ದವು..

ಒಪ್ಪುತ್ತೇನೆ..

ಮಿತಭಾಷಿ ನೀನು..

ಆದರೆ

ಒಡಲಲ್ಲಿ ಪುಟ್ಟ

ಗುಟ್ಟೂ ಇಟ್ಟುಕೊಳ್ಳದಷ್ಟು

ವಾಚಾಳಿ ಕಣೋ

ನಿನ್ನ ಕಣ್ಣು!!

ನಿನಗೇ ತಿಳಿಯದಂತೆ ಅವು ಮಾತಾಡುತ್ತಿದ್ದವು ಕಣೋ.. ಪಟ ಪಟನೇ ಮಾತಾಡುತ್ತಿದ್ದವು... ನಿನ್ನ ಕಣ್ಣ ಭಾಷೆ ನನಗರ್ಥ ಆದ ದಿನದಿಂದ ನಿನ್ನನ್ನ ದಿಟ್ಟಿಸಿ ನೋಡೊ ಧೈರ್ಯ ಬರ್ತಾನೇ ಇರ್ಲಿಲ್ಲ ನನಗೆ.. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋಕೇ ಆಗ್ತಿರಲಿಲ್ಲ. ಒಂದ್ವೇಳೆ ನೋಡಿಬಿಟ್ರೆ ಸಂಪೂರ್ಣವಾಗಿ ಅದರಲ್ಲಿ ಕಳೆದು ಹೋಗ್ತೀನಿ ಅನ್ನೊ ಢವಢವ, ಜೊತೆಗೆ ಸ್ತ್ರೀ ಸಹಜ ಲಜ್ಜೆ... ನೀನು ಆಚೆ ಈಚೆ ನೋಡೋವಾಗ ನಿನ್ನನ್ನ ಕಣ್ಣಲ್ಲಿ ತುಂಬ್ಕೊಳ್ತಿದ್ದೆ... ನಿನಗೇ ಗೊತ್ತಾಗದಂತೆ... ಮುಂದೊಮ್ಮೆ ಇಬ್ಬರ ಅಂತರಂಗವೂ ಬಯಲಾದ ಒಂದಿಷ್ಟು ದಿನಗಳ ಮೇಲೆ ಶುರುವಾಗಿತ್ತು ಹಾಗ್ಯಾಕೆ? ಹೀಗ್ಯಾಕೆ? ಅನ್ನೊ ಇಷ್ಟಾನಿಷ್ಟಗಳ ಮಾತು. ನೀನು ಸಿಗರೇಟ್ ಸೇದೋದು ನನಗಿಷ್ಟ ಆಗ್ತಿರ್ಲಿಲ್ಲ.

ಸುಡುತ್ತದಂತೆ ನಿಧಾನವಾಗಿ

ಸಿಗರೇಟು ತನ್ನ ಸುಟ್ಟವರನ್ನು

ಬೇಡ ಬಿಟ್ಬಿಡು ಅಂತ ನಾ ಹೇಳಿದ್ರೆ

ಅದೇನು ಮಹಾ

‘ತಾನು ಪ್ರೀತಿಸಿದವರನ್ನೇ

ಸುಟ್ಟು ಬಿಡುವುದಿಲ್ಲವೆ ಮಾನವ

ಆಸಿಡ್ ಸುರಿದು!?

ಅನ್ನೋದು ನಿನ್ನ ವಾದ. ಎಲ್ಲದಕ್ಕೂ ನಿನ್ನದೇ ತರ್ಕ ಸಿದ್ಧವಾಗಿರ್ತಿತ್ತು. "ಬೇಜಾರ್ ಮಾಡ್ಕೋಬೇಡ ಕಣೆ ದಿನಕ್ಕೆ ಒಂದೇ ಒಂದು ಪ್ಯಾಕೆಟ್ ಸಿಗರೇಟ್ ಸೇದೋದು ನಾನು, ಅದ್ರಿಂದ ಏನೂ ಅಪಾಯ ಇಲ್ಲ ಅಂತಾನೋ, ಇಲ್ಲಾ, "ಬಿಟ್ಬಿಡ್ತೀನಿ ಮಾರಾಯ್ತಿ ಅದಷ್ಟು ಸುಲಭಾನಾ? ಒಂದಿಷ್ಟು ದಿನ ಟೈಮ್ ಬೇಕು, ಖಂಡಿತ ಬಿಡ್ತೀನಿ ಆಯ್ತಾ? ಹ್ಯಾಪ್ಪಿನಾ?" ಅಂತಾನೊ ಹೇಳಿ ನನ್ನ ಸುಮ್ನಾಗಿಸ್ತಿದ್ದೆ.

ಆವತ್ತು, ನಿನ್ನೆದೆಗೆ ಒರಗಿ ನನ್ನ ಮನದ ಮಿಡಿತವನ್ನು ನಿನಗೆ ಕೇಳಿಸುವ ಆಸೆಯಾಗಿತ್ತು ನನಗೆ. ಹೇಗೆ ಹೇಳೊದು ಅಂತ ಶಬ್ದಗಳಿಗಾಗಿ ನಾನು ತಡಬಡಾಯಿಸ್ತಿರುವಾಗ್ಲೆ, ನೀನು ವಿಷಯವನ್ನೇ ಬದಲಾಯಿಸಿಬಿಟ್ಟೆ. ಆ ಕ್ಷಣ ನನಗೆ ನಿನ್ನ ಮೇಲೆ ಅದೆಷ್ಟು ಸಿಟ್ಟು ಬಂದಿತ್ತು ಗೊತ್ತಾ? ನನಗೆ ಬೇಕಾಗಿದ್ದುದು ನಿನ್ನ ಪೈಥಾಗೋರಸ್ ಅಲ್ಲ ಕಣೊ ಎಂದು ಕೂಗಿ ಕೂಗಿ ಹೇಳಬೇಕೆಂದುಕೊಂಡೆ. ಅಷ್ಟರಲ್ಲಿ ನಾಟಕಗಳ ಬಗ್ಗೆ ಮಾತಾಡಿಬಿಟ್ಟೆ ನೀನು. ನಿನ್ನ ಹೊಸ Production ಬಗ್ಗೆ. ನನ್ನ ಆ ಅಸಹಾಯಕ ಸಿಟ್ಟಿನ ಮಧ್ಯದಲ್ಲೂ, ಆ ನನ್ನ ಅಗತ್ಯದ ಹಂಬಲದ, ಒಡೆದುಹೋದ ಚಿತ್ರಮಯ ಕನಸಿನ ಚೂರುಗಳನ್ನು ಎತ್ತಿಕೊಳ್ಳುವ ಆ ಕ್ಷಣದಲ್ಲೂ ಒಂದು ಸುಖವನ್ನನುಭವಿಸಿದ್ದೆ ನಾನು. ಯಾಕ್ ಗೊತ್ತಾ? ನೀನು ಮಾತಾಡ್ತಿದ್ದೆ. ಬತ್ತಿ ಹೋದ ನಿನ್ನ ಮನದಲ್ಲಾಗ ಮಾತಿನ ಕಾರಂಜಿ ಪುಟಿದೇಳುತ್ತಿತ್ತು. ಆಗ ನಾನು ಮೌನದ ಸುಖವನ್ನ ಅನುಭವಿಸುತ್ತಿದ್ದೆ ಕಣೊ. ನೀನು ಮಾತಾದಾಗಲೆಲ್ಲ ನಾನು ಮೌನವಾಗುತ್ತಿದ್ದೆ. ಆದರೆ ನಾನು ಮೌನವಾದಾಗಲೆಲ್ಲ, ನೀನು ಮಾತಾಗಲಿಲ್ಲ... ಆಗ ಅದನ್ನೂ ನಿನ್ನ ಕೊಡುಗೆ ಎಂದುಕೊಂಡೆ. ಆ ಕ್ಷಣದಲ್ಲೂ ಪುಳಕಗೊಳ್ಳುತ್ತಿದ್ದೆ.

ಎನ್ನ ಭಾವನೆ

ಎನ್ನ ಮಾತು

ನಿನ್ನುಸಿರಿನಂತೆ

ಇರಬೇಕೆನ್ನುವ ಹಂಬಲ

ಉಸಿರೆಳೆದಷ್ಟು

ಸಾಕೆನಿಸದ ಕಂಪು

ಎದೆಯ ಮೂಲೆಯಲ್ಲಿ

ಒಸರುವ ಆರ್ದ್ರತೆ

ಆ ಆರ್ದ್ರತೆ ಒಮ್ಮೆಲೆ ಯಾಕೆ ಇಲ್ಲವಾಯಿತೋ ಹುಡುಗ?...

ಹಾಂ.. ನಾಟಕದ ಬಗ್ಗೆ ಮಾತಾಡೋಕೆ ಪ್ರಾರಂಭಿಸಿದ್ದಿ. ನಿನ್ನ ಹೊಸ Production ಬಗ್ಗೆ. ಎಷ್ಟು ಚೆಂದದ ನಾಟಕವಲ್ಲವಾ ಅದು? ‘ಆಷಾಢದ ಒಂದು ದಿನ’... ನೀನು ಮೈಮರೆತು ಕಾಳಿದಾಸ- ಮಲ್ಲಿಕಾರ ಬಗ್ಗೆ ಮಾತಾಡುವಾಗ, ಥೇಟ್ ಕಾಳಿದಾಸನಂತೆ ಕಾಣುತ್ತಿದ್ದಿ ನನಗೆ. ನಾನು ಆ ಕ್ಷಣ ಮಲ್ಲಿಕೆಯಾಗಲು ಅದೆಷ್ಟು ಹವಣಿಸಿದ್ದೆ ಗೊತ್ತೇನೊ?

ಉಜ್ಜಯನಿಗೆ ಹೊರಟುನಿಂತ ಕಾಳಿದಾಸನ ಬಗ್ಗೆ ಮಾತಾಡುವಾಗ ಗದ್ಗದಿತನಾಗಿದ್ದೆ ನೀನು. ಆದರೆ ಆ ದಿನ ದೂರದೂರಿಗೆ, ಮತ್ತೆಂದೂ ಮರಳಿ ಬರದಂತೆ ಹೊರಟಿದ್ದ ನನ್ನನ್ನು ಕೊನೆಯ ಬಾರಿ ಭೇಟಿ ಆಗುವಾಗ ಮಾತ್ರ ನಿನ್ನ ಮುಖದಲ್ಲಿ ವಿಷಾದದ ಸಣ್ಣ ಛಾಯೆಯನ್ನೂ ಕಾಣದ ನಾನು, ಅದೆಷ್ಟು ಮರುಗಿದ್ದೆ ಗೊತ್ತಾ?

ಅದೆಷ್ಟು ಬದಲಾಗಿಬಿಟ್ಟಿದ್ದಿ ಆ ಮೂರು ತಿಂಗಳೊಳಗೆ. ಮಲ್ಲಿಕೆಯ ಬಾಳಿನಲ್ಲಿದ್ದ ವಿಲೋಮನ ಬಗ್ಗೆ ನಿನಗೆ ವಿಪರೀತ ಸಿಟ್ಟು ಬರುತ್ತಿತ್ತು ಅಲ್ವಾ? ಆದರೆ ನನ್ನ ಬಾಳಿನ ವಿಲೋಮ ಮಾತ್ರ ನಿನಗೆ ಪ್ರಿಯನಾಗಿಬಿಟ್ಟಿದ್ದ. ಆತನ ಬಗ್ಗೆ ಮಾತ್ರ ನಿನಗೆ ಅನುಕಂಪ. ಈ ಮಲ್ಲಿಕೆಯ ವ್ಯಕ್ತಿತ್ವವನ್ನೇ ನಿವಾಳಿಸಿ ಎಸೆದುಬಿಟ್ಟೆಯಲ್ಲೋ.. ನ್ಯಾಯವೇನೊ ಚಿನ್ನು ಇದು?? ಈ ಜಗತ್ತಿನ Double standards ಬಗ್ಗೆ ಅಸಹ್ಯಿಸಿಕೊಳ್ಳುತ್ತಿದ್ದವನು ನೀನೇನಾ? ಯಾವ ತಪ್ಪು ಮಾಡಿಬಿಟ್ಟಿದ್ದೆ ನಾನು? ಅಂತಹ ಯಾವ ತಪ್ಪು ಮಾಡಿದ್ದೆ ನಾನು ಅಂತ ಆ ಪರಿ ಶಿಕ್ಷೆ ಕೊಟ್ಟೆ ನನಗೆ? ಆ ಮೂರು ತಿಂಗಳಲ್ಲಿ ಅಂಥ ಯಾವ ಮಹಾಪರಾಧ ಆಗಿತ್ತು ನನ್ನಿಂದ? ಮೊದಮೊದಲು ನನ್ನ ಯಾವ ಪ್ರಶ್ನೆಗಳು ನಿನಗೆ ತುಂಬ ಪ್ರಿಯ ಅನಿಸುತ್ತಿದ್ದವೋ, ಅವೇ ಪ್ರಶ್ನೆಗಳು, ನಿನ್ನನ್ನು ಯಾಕೆ ಬಾಣದಂತೆ ಚುಚ್ಚತೊಡಗಿದವು? ನನ್ನ ಪ್ರಶ್ನೆಗಳಲ್ಲಿ ಕೇವಲ ನನ್ನ ಕಾಳಜಿ ಮಾತ್ರ ಇತ್ತು ಎಂಬುದನ್ನು ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ನೀನು? ಒಮ್ಮೆಲೇ ಮಾತಾಡೋಕೆ ಶುರು ಮಾಡಿಬಿಟ್ಟಿದ್ದಿ. ಕಾರಣವಿಲ್ಲದೇ ಜಗಳಾಡುತ್ತಿದ್ದಿ. ಎಂಥ ಮಾತುಗಳನ್ನೆಲ್ಲ ಹೇಳುತ್ತಿದ್ದಿ ಗೊತ್ತೆ? ಆ ಮಾತುಗಳು ಎಷ್ಟು ಕಠೋರವಾಗಿದ್ದವು ಗೊತ್ತೇನೊ? ಶೂಲದಂತೆ ಈ ಎದೆಯನ್ನು ಚುಚ್ಚಿಬಿಡುತ್ತಿದ್ದವು ಕಣೊ. ನಿನಗೆ ನೋವಾಗದಿರಲೆಂದು ನಾನು ಪಡುತ್ತಿದ್ದ ಪ್ರಯತ್ನಗಳೆಷ್ಟು ಎಂಬುದರ ಅರಿವು ನಿನಗಿರಲಿಲ್ಲವೋ, ಅಥವಾ ನಿನಗದರ ಪರಿವೆಯೇ ಇರಲಿಲ್ಲವೋ, ಏನೂ ತಿಳಿಯದಂತಾಗಿತ್ತು. ಜ್ವಾಲಾಮುಖಿಯಾಗಿಬಿಟ್ಟಿದ್ದೆ ನೀನು. ಆದರೂ. . .

ನಿನ್ನ ಸಿಡುಕಿಗೆ

ನನ್ನ ಮೇಲಿನ

ಪ್ರೀತಿಯನ್ನು

ಸುಡುವ ತಾಕತ್ತಿಲ್ಲವಲ್ಲವೋ. .

ಯಾವ ಗೊಂದಲವಿತ್ತು ನಿನ್ನ ಮನದಲ್ಲಿ? ಯಾವ ತಾಕಲಾಟ? ಯಾವ ಪ್ರಶ್ನೆ? ಯಾಕೆ ಈ ಸಿಡುಕು? ಎಲ್ಲಿ ಹೋದವು ಆ ದಿನಗಳು..?

ಆಗ ನನ್ನ ಬೇಡಿಕೆಯಾದರೂ ಏನಿತ್ತು ಗೊತ್ತೆ? ಅಲ್ಲ ಅಲ್ಲ.. ಬೇಡಿಕೆ ಅಲ್ಲ. ನನ್ನ ಕೋರಿಕೆ. .

ಸಿಡುಕಬೇಡ ಚಿನ್ನೂ..

ನೋವಾಗುತ್ತೆ

ಆವತ್ತು ಏನು ಕೇಳಿದ್ದೆ ನಾನು? ಮೂರು ದಿನದಿಂದ ನಿನ್ನ ಫೋನಿಗಾಗಿ ಕಾಯ್ದು ಕಾಯ್ದು, ಭಯಪಟ್ಟು, ತಾಳಲಾಗದೇ ನಾನೇ ನಿನಗೆ ಫೋನ್ ಮಾಡಿ ಕೇಳಿದೆ "ಹೇ... ಎಲ್ಲಿದ್ದೀಯೋ?" ಅಷ್ಟೆ. ಅದೇ ದೊಡ್ಡ ಅಪರಾಧವಾಗಿಬಿಡ್ತೆ? ಯಾಕೆ ಈ ಅಧಿಕಪ್ರಸಂಗದ ಪ್ರಶ್ನೆ? ಯಾಕೆ ನೀನು ನನಗೆ space ಕೊಡೋದಿಲ್ಲ? ಅಂದುಬಿಟ್ಟೆ ನೀನು.

ಹೇ....

ಯಾಕೋ ಹೀಗೆ ಕಾಡುತ್ತೀ?

space ಬೇಕು ಅಂತ

ಹಠ ಮಾಡುತ್ತಿ?...

ಓ.... ಗೊತ್ತಾಯ್ತು ಬಿಡು

ಒಂಟಿ ವಿರಹಿ ನದಿ ನಾನು

ನೀನೋ ಸಮುದ್ರ

ಆವತ್ತು ಮನಸ್ಸು ಮುರಿದುಹೋಯ್ತು ನೋಡು. ಸಂಬಂಧಗಳನ್ನು ಹರಿದು ಮುಂದಕ್ಕೆ ಸಾಗಿಬಿಡುವುದು ಇಷ್ಟು ಸುಲಭವೆಂದು ನನಗೆ ತಿಳಿದಿರಲಿಲ್ಲ. ನಿನ್ನ ಸ್ಥಿತಪ್ರಜ್ನತೆಯ ಹುಡುಕಾಟಕ್ಕೆ ಮೊದಲ ಬಲಿಪಶು ನಾನೇ ಆಗಬೇಕಿತ್ತೆ? ಆ ದಿನ ನನಗೆ ತಿಳಿಯಿತು. ನಾನು ನಿನ್ನ ಬಾಳಿನಲ್ಲಿ ಅನಧಿಕೃತ ಪ್ರವೇಶ ಮಾಡುತ್ತಿರಲಿಲ್ಲ. ನನ್ನದೇ ಬಾಳಿನಲ್ಲಿ ಅನಧಿಕೃತ ಪ್ರವೇಶ ಮಾಡುತ್ತಿದ್ದೆ ನಾನು.

ಮೊದಲಾದರೆ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ನನ್ನ ಬಳಿಯೇ ಕೇಳುತ್ತಿದ್ದಿ.. ನಮ್ಮಿಬ್ಬರ ಸಂಬಂಧ ಎಂಥದ್ದು? ನೀನು ನನಗ್ಯಾರು? ನಾನು ನಿನಗೇನು?.. ಆ ದಿನ ನಾನು ನಿನಗೆ ಕೇಳಿದ್ದೆ ಈ ಸಂಬಂಧಕ್ಕೊಂದು ಹೆಸರು ಬೇಕೇ? ಎಂದು. ನೀನು ಹೌದು ಎಂದಿದ್ದೆ.

ಬೇಕೆನ್ನುತ್ತೀಯಲ್ಲ

ಸಂಬಂಧಕ್ಕೊಂದು ಹೆಸರು!

ಇರಬೇಕು ಸಂಬಂಧಕ್ಕೊಂದು

ಹೆಸರೆಂದರೆ ನೀ

ನನ್ನದೇನೂ ಅಭ್ಯಂತರವಿಲ್ಲ

ಒಂದೇ ಕೋರಿಕೆ

ಬೇಡ ಆ ಹೆಸರಿಗೆ

ಮುಖವಾಡ

ಅಂತೂ ಆ ಹೆಸರಿನ ಮುಖವಾಡವನ್ನು ಕಿತ್ತೊಗೆದು ಹೊರಟುಹೋದೆ ನೀನು. ನನ್ನೆದುರಿಗೇ ಇರುತ್ತಿದ್ದರೂ ಬಹುದೂರ ಇರುತ್ತಿದ್ದೆ ನೀನು. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೊಡಲೂ ನಾಚುತ್ತಿದ್ದ ನಾನು, ಈಗ ನಿರ್ಲಜ್ಜಳಂತೆ ನಿನ್ನ ಕಣ್ಣುಗಳಲ್ಲಿ ನನ್ನ ಪಳಿಯುಳಿಕೆಗಳ ಶೋಧನೆಯನ್ನು ಮಾಡುತ್ತಿದ್ದೆ. ಅಲ್ಲಿ ನನಗೆ ನಾನು ಸಿಗಲೇ ಇಲ್ಲ. ಸಿಕ್ಕಿದ್ದು ಬರೀ ಗಾಯ

ಮನದ ಮೈ

ತುಂಬ ಗಾಯ

ಅವಮಾನದ ಆಳ ಗಾಯ

ಅನುಮಾನದ ಅಗಲ ಗಾಯ

ಕಟು ಮಾತಿನ ಕೆಟ್ಟ ಗಾಯ

ಪ್ರೀತಿ ಪ್ರೇಮಗಳ ಹಸೀ ಗಾಯ

ಬಹಳ ದಿನ ಬೇಕಾಯ್ತು ನನಗೆ ಚೇತರಿಸಿಕೊಳ್ಳಲು. ನೀನು ನನ್ನಿಂದ ನಿಷ್ಕಾರಣವಾಗಿ ದೂರವಾದ ಅದೆಷ್ಟೊ ದಿನಗಳ ನಂತರ ಅದ್ಯಾಕೊ ವಿಚಿತ್ರ ಶಾಂತಿಯೊಂದು ದೊರಕಿದಂತಿತ್ತು ನನಗೆ. ಹೌದು.. ವಿಚಿತ್ರ ಶಾಂತಿ. ಅನೂಹ್ಯ ಅನುಭವ. ಬರ್ನಾರ್ಡ್ ಶಾ ಹೇಳಿದಂತೆ, "It was a curious sensation: the sort of pain that goes mercifully beyond our powers of feeling. When your heart is broken, your boats are burned: nothing matters any more. It is the end of happiness and the beginning of peace.". Yes, It was a new beginning for me.

ನಾನಲ್ಲಿಂದ ಹೊರಟು ಬಂದೆ. ನೀನು ಬಂದಿದ್ದೆ ನನ್ನನ್ನು ಬೀಳ್ಕೊಡಲು. ನಿನ್ನ ಕರ್ತವ್ಯವೆಂಬಂತೆ. ನಿನ್ನ ಹೆಜ್ಜೆ ಸಪ್ಪಳವನ್ನು ಕೇಳಿ, ಒಂದು ಕ್ಷಣ, ನಿರರ್ಥಕವಾದ ಒಂದು ಆಸೆ ಮೂಡಿತ್ತು. ಆದರೆ...

ಕನಸುಗಳ

ಬಸಿರು ಹೊತ್ತ ಮನಸು

ಸುಖಪ್ರಸವಕ್ಕಾಗಿ

ಕಾಯುವ ಕ್ಷಣಗಳಲ್ಲೇ

ಗರ್ಭಪಾತ

ನೋಡನೋಡುತ್ತ, ಅದೆಷ್ಟು ವರ್ಷಗಳೇ ಕಳೆದು ಹೋದವು. ಇಂದಿಗೂ ನೀನು ನನ್ನಿಂದ ದೂರವಾದದ್ದರ ಕಾರಣ ನನಗೆ ಗೊತ್ತಿಲ್ಲ. ಆ ಕಾರಣ ಹುಡುಕುವ ತಳಮಳವೂ ಈಗ ಉಳಿದಿಲ್ಲ. ನಿರಾಳವಾಗಿದ್ದೇನೆ. ಈಗ Woman ಆಗಿದ್ದೇನೆ. A Strong willed Woman. ನೀನು ಕೂಡ ಬದಲಾಗಿದ್ದೀಯಾ. ತಿಂಗಳಿಗೊಮ್ಮೆ ಪತ್ರ ಬರೀತೀಯಾ. ವರ್ಷಕ್ಕೊಮ್ಮೆ ಫೋನ್ ಮಾಡ್ತೀಯಾ. We have moved on. So has our life... or so I presume.

ಆದರೆ ಮನಸ್ಸಿನಲ್ಲಿ ಉಳಿದುಹೋದ ಒಂದು ಗುಟ್ಟನ್ನು ಹೇಳಲೆ? ನಿನ್ನ ಫೋನ್ ಬಂದಾಗಲೆಲ್ಲ, ನಿನ್ನ ಪತ್ರ ಬಂದಾಗಲೆಲ್ಲ, ಅಲ್ಲೆಲ್ಲೋ ದೂರದಲ್ಲಿ ನೀಲಿ ಕಡಲು, ಬಾನಿನ ಕೈ ಹಿಡಿದಂತೆ ತೋಚುತ್ತದೆ. ಮತ್ತೆ ಒಂದು ಕ್ಷಣ, ನಿರರ್ಥಕ ಆಸೆಯೊಂದು ಮೂಡುತ್ತದೆ. ಮರೆಯಾಗುತ್ತದೆ. ಮೂಡುತ್ತದೆ. . ಮರೆಯಾಗುತ್ತದೆ. ಬದುಕು ಹೀಗೇ ಸಾಗುತ್ತದೆ..

(ಮೇಣದ ಬತ್ತಿಯನ್ನು ಆರಿಸಿ, ನಿಧಾನಕ್ಕೆ ಎದ್ದು ಒಳಗೆ ನಡೆಯುತ್ತಾಳೆ).