ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸ್ಸು
"ಮಾನವ ಜನ್ಮ ಬಲು ಚಿಕ್ಕದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ" ಎಂಬ ದಾಸರ ಸಾಲುಗಳನ್ನು ಕೇಳಿದಾಗ ಓದಿದಾಗ ನೆನಪಾಗುವುದು ಇಂದಿನ ಯುವ ಸಮೂಹದ ಬೆಳವಣಿಗೆ. ಯುವಸಮೂಹದಲ್ಲೂ ಪ್ರತ್ಯೇಕವಾಗಿ ಟೀನೇಜ್ ವಯಸ್ಕರ ಬಗ್ಗೆ. ಹೌದು ಇತ್ತ ಬಾಲ್ಯವೂ ಅಲ್ಲದ ಅತ್ತ ಪ್ರಾಪ್ತ ವಯಸ್ಕರೂ ಅಲ್ಲದ ದೈಹಿಕ ಬೆಳವಣಿಗೆಯೊಂದಿಗೆ ಮಾನಸಿಕವಾಗಿ ಪ್ರಬುದ್ಧರಾಗುವ ಸಮಯ ಈ ಟೀನೇಜ್.
ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಕೊರೋನ ನಂತರ, ಶಿಕ್ಷಣ ರಂಗ ಆನ್ಲೈನ್ ಮೂಲವನ್ನು ಅವಲಂಬಿಸಿರುವ ಕಾಲಘಟ್ಟದಲ್ಲಿ ಟೀನೇಜ್ ಸಮೂಹವು ವ್ಯತಿರಿಕ್ತ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ಉದ್ಯಮದಂತೆ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಗಳು, ಮಾರ್ಕುಗಳೇ ಮುಖ್ಯವೆಂದು ಒತ್ತಡ ಹೇರುವ ಹೆತ್ತವರು, ಹೆಚ್ಚಿನ ಭೋದನಾ ಜ್ಞಾನವಿಲ್ಲದ ಶಿಕ್ಷಕರನ್ನು ನಿಯೋಜಿಸಿಕೊಳ್ಳುವ ಆಡಳಿತ ಮಂಡಳಿಗಳು, ಸೂಕ್ತ ಸಂಪನ್ಮೂಲ ವ್ಯಕ್ತಿಗಳಿಂದ ಸಿಗದ ಮಾರ್ಗದರ್ಶನ, ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಇವೆಲ್ಲವೂ ಈಗಿನ ಬದಲಾವಣೆಗಳಿಗೆ ಕಾರಣವಾಗಿವೆ..
ಏನು ಬದಲಾವಣೆಯಾಗಿದೆ? ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ.. ಅವರಿಗೇನೂ ಸಮಸ್ಯೆಯಿಲ್ಲ.. ಇದ್ರಲ್ಲಿ ತಲೆಕೆಡಿಸಿಕೊಳ್ಳೋದೇನಿದೆ? ಎಂಬಿತ್ಯಾದಿ ಆಲೋಚನೆಗಳು ನಮ್ಮ ಮನಸಲ್ಲಿ ಬಂದರೂ ನಮಗೇ ತಿಳಿಯದ ಇನ್ನೂ ಹಲವಾರು ವಿಚಾರಗಳಿಗೆ, ಜಾಲಗಳಿಗೆ ಟೀನೇಜ್ ಸಮೂಹ ಬಲಿಯಾಗುತ್ತಿದೆ. ಬಾಯಿಯಲ್ಲಿ cool lip ಎಂಬ ಮಾದಕ ತಂಬಾಕು ಇಟ್ಟುಕೊಂಡು ಕ್ಲಾಸ್ ಕೇಳುವ ವಿದ್ಯಾರ್ಥಿಗಳು, ಹದಿಹರೆಯದ ಮೋಹದ ಬಲೆಯಲ್ಲಿ ಸಿಲುಕಿ ಒದ್ದಾಡುವ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮ್ ಎಂಬ ಸೋಶಿಯಲ್ ಮೀಡಿಯಾಗಳಲ್ಲಿ ದಿನಗಳೆಯುವ ವಿದ್ಯಾರ್ಥಿಗಳು ಇನ್ನೂ ಏನೇನೋ...
ಆಘಾತಕಾರಿ ವಿಷಯವೇನು ಗೊತ್ತೇ.. ಇವೆಲ್ಲವೂ ಕಂಡುಬಂದಿದ್ದು ವಿದ್ಯಾರ್ಥಿಗಳಲ್ಲಿಯಲ್ಲ, ಬದಲಾಗಿ ವಿದ್ಯಾರ್ಥಿನಿಯರಲ್ಲಿ... ನಿಜ ಈಗೀಗ ವಿದ್ಯಾರ್ಥಿನಿಯರು ಅದರಲ್ಲೂ ಹೈಸ್ಕೂಲ್ ವಿದ್ಯಾರ್ಥಿನಿಯರು ಹಲವಾರು ಜಾಲಕ್ಕೆ ಬಲಿಪಶುಗಳಾಗುತ್ತಿದ್ದಾರೆ.. ಇದು ತಥಾಕಥಿತ ವಿಷಯವಲ್ಲ ನಮ್ಮ ಹತ್ತಿರದ ಪರಿಸರದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ವಾಸ್ತವ ಸಂಗತಿ.. ಸೋಶಿಯಲ್ ಮೀಡಿಯಾ ದ ಮೂಲಕ ದೂರದ ಯುವಕರು ಪರಿಚಯವಾಗಿ ಹಲವಾರು ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅನಾರೋಗ್ಯದ ನೆಪ ಹೇಳಿ ಶಾಲೆಗೆ ಚಕ್ಕರ್ ಹೊಡೆದು ಮನೆಗೂ ತಿಳಿಸದೇ ಸುತ್ತಾಡುವುದು ಸಾಮಾನ್ಯವಾಗಿದೆ. ಇನ್ನೊಂದು ಭೀತ ಗೊಳಿಸುವ ಅಂಶವೆಂದರೆ ಕೇರಳದಿಂದ ಬೆಳ್ತಂಗಡಿಗೆ whitner ರೂಪದಲ್ಲಿ ನಶೆಯನ್ನು ರಫ್ತು ಮಾಡುವ ಜಾಲವೊಂದಿದೆ ಎಂಬ ವಿಚಾರ. ಇದು ಸತ್ಯಕ್ಕೆ ದೂರವಾದ ಮಾತಲ್ಲ. ಇವರ ಮೈನ್ ಟಾರ್ಗೆಟ್ ಹೈಸ್ಕೂಲ್ ಸ್ಟೂಡೆಂಟ್ಸ್... ಇದು ಶಿಕ್ಷಣ ಸಂಸ್ಥೆಗಳಿಗೆ ಇನ್ನೂ ತಿಳಿದಿಲ್ಲ ಎಂಬುದು ವಿಪರ್ಯಾಸ.
ನಮಗೆ ನಿಮಗೆ ತಿಳಿಯದ ಅದೆಷ್ಟೋ ವಿಷಯಗಳು ಸಮಾಜದಲ್ಲಿವೆ. ಈ ಎಲ್ಲಾ ಬೆಳಿವಣಿಗೆಗೆ ಮುಖ್ಯ ಕಾರಣ ಮೊಬೈಲ್.. ಮೊದಲಿಗೆ ಎಲ್ಲಾ ಶಾಲೆಗಳು ಆನ್ಲೈನ್ ಮಾಧ್ಯಮವನ್ನ ನಿಲ್ಲಿಸಿ ಸಂಪೂರ್ಣ ಆಫ್ ಲೈನ್ ಮಾಧ್ಯಮ ಜಾರಿಗೆ ತರಬೇಕು. ಅಂದರೆ ನೋಟ್ಸ್ ಗಳನ್ನೂ ಸಹ ಆಫ್ ಲೈನ್ ರೀತಿಯಲ್ಲೇ ಕೊಡಬೇಕು. ಮೊಬೈಲ್ ನೋಡಿ ಬರೆಯಿರಿ, ಗೂಗಲ್ ನಲ್ಲಿ ಸರ್ಚ್ ಮಾಡಿ ಎಂಬ ಸಲಹೆಗಳು ದಾರಿ ತಪ್ಪಿಸಲಿರುವ ಮೊದಲ ಹೆಜ್ಜೆ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.. ಇತ್ತೀಚಿಗೆ ಹಲವು ವಿದ್ಯಾರ್ಥಿಗಳು porn addiction ಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಜನೆಗೆ ಸಹಕಾರಿಯಾಗಲಿ ಎಂದು ಹೆತ್ತವರು ಕೊಡಿಸುವ ಮೊಬೈಲ್, ಸ್ವತಃ ಹೆತ್ತವರೇ ಮಕ್ಕಳಿಗೆ ನೀಡುವ ಸ್ಲೋ ಪಾಯಿಸನ್ ಇದ್ದಂತೆ.
ಮಕ್ಕಳು ಸದಾ ಯಾವುದಾದರೊಂದು ವಿಷಯಗಳಲ್ಲಿ ತಲ್ಲೀನರಾಗಿರುವಂತೆ ನೋಡಿಕೊಳ್ಳಿ.. ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿ ಅವರ ಭಾವನೆಗಳನ್ನು ತಿಳಿದುಕೊಳ್ಳಿ. ಹೊಸದನ್ನು ಕಲಿಯುವ ಹುಮ್ಮಸ್ಸಿನಲ್ಲಿರುವ ಟೀನೇಜ್ ಸಮೂಹಕ್ಕೆ ಮೊಬೈಲ್ ಬದಲಿಗೆ ವ್ಯಕ್ತಿತ್ವ ವಿಕಸನದ ಪುಸ್ತಕ ನೀಡಿ.. ಸಾಧ್ಯವಾದರೆ ನಿಮ್ಮ ಸಮ್ಮುಖದಲ್ಲೇ ಗುರುರಾಜ ಕರ್ಜಗಿ ಯವರ ಸಂವಾದಗಳನ್ನ ಕೇಳಿಸಿ.. ದಾರಿ ತಪ್ಪಿದರೆ ಸರಿದಾರಿಗೆ ತರಬಹುದು.. ತಪ್ಪು ದಾರಿನೇ ಹಿಡಿದರೆ ಏನೂ ಮಾಡಲಾಗುವುದಿಲ್ಲ.. ಉಜ್ವಲ ಭವಿಷ್ಯದ ಉತ್ತುಂಗಕ್ಕೆ ತಲುಪಬೇಕಾಗಿರುವ ನಮ್ಮ ಮುಂದಿನ ಪೀಳಿಗೆಯ ಬಗೆಗೆ ಜಾಗೃತಿ ಮೂಡಿಸುವುಸು ನಮ್ಮ ಕರ್ತವ್ಯವಾಗಿದೆ.
-ಮೌನರಾಗ, ಶಮೀರ್ ನಂದಿಬೆಟ್ಟ (ಸನಂ)
ಚಿತ್ರ ಕೃಪೆ: ಇಂಟರ್ನೆಟ್ ತಾಣ