ಹುಚ್ಹ್ ಬಸ್ಸು...

ಹುಚ್ಹ್ ಬಸ್ಸು...

ಬರಹ


ಕೆಂಪ್ ಬಸ್ಸ್ ಕೇಳಿರ್ತಿರಿ, ಎಕ್ಸ್ಪ್ರೆಸ್ ,ರಾಜಹಂಸ ,ಮತ್ತ ಈ ಡಬ್ಬಣ ಬಿದ್ದರೂ ಸಪ್ಪಳ ಆಗಲಾರದಂಥ ವೋಲ್ವೋ ಬಸ್ಸ್ ಬಗ್ಗೆನೂ ರಗಡ ಸರ್ತಿ ಕೇಳಿರ್ತಿರಿ.ಕೆಳೋದೇನ್ ಬಂತು, ಅವರೊಳಗ ಕೂತು ಮಣಾರ್ ಊರುಗಳಿಗೆ ಹೋಗಿರ್ತಿರಿ.ಆದರೇ ಈ ಹುಚ್ಹ್ ಬಸ್ಸಿನ ಪ್ರಯಾಣ ಅಂತು ನೀವು ಸರ್ವಥಾ ಮಾಡಿರ್ಲಿಕ್ಕಿಲ್ಲ.ಈ "ವಿಹಂಗ ರಾಜ"ನ ಸವಾರಿ ಮಾಡೋ ನಷೀಬ್ ನಮ್ಮೂರಿನ ಮಂದಿಗಷ್ಟ ಸಿಕ್ಯದ.


ಮೊದ್ಲು ಒಂದು disclaimer,ಇದರಾಗ ಕೂಡೋ ಮಂದಿ ಬಹುತೇಕ ಹುಚ್ಚರಿರಬಹುದು ಅಂತ ಬಸ್ಸಿಗೆ ಹಂಗ ಹೆಸರ ಬಿದ್ದದ ಅಂತ ಧಡಕ್ಕನೆ ತಪ್ಪ್ ಕಲ್ಪನಾ ಮಾಡಬ್ಯಾಡ್ರಿ.ಆದರ ನಿಮಗ ಈ ಥರದ ಕಲ್ಪನಾ ಮುಂದ ಓದೋಕಾಲಕ್ಕ ಅವಾಗ ಇವಾಗ ಕವ್ರು-ಕವ್ರಾಗಿ ಬಂದ್ರು ನಾ ಜವಾಬ್ದಾರ ಅಲ್ಲಾ.


ನಮ್ಮ ಹಳ್ಳಿ ಮಂದಿ ಭಾಳಷ್ಟು ಕೆಲ್ಸಗಳು ಈ ಜಡ ವಸ್ತುಗಳ ಆಗು-ಹೋಗುಗಳ ಮ್ಯಾಲೇ ನಿಂತಿರ್ತಾವ.ಸಂಜಿ ನಳಾ ಬರೋಕಿಂತ ಮೊದ್ಲ ಹೆರಳ ಹಕ್ಕೋಬೇಕು ಅಂತ ಹೆಣ್ಣಮಕ್ಕಳು, ಗುಡಿ ಝಾಘಂಟಿ ಶಬ್ದ ಆದರು ಸ್ನಾನಾ ಮಾಡಲಾರದೆ ಬೈಸಿಕೊಳ್ಳೋ ಹುಡುಗ್ರು ,ಮುಲ್ಲಾನ ಮೈಕು ಕುಗೊಕಿಂತ ಮೊದ್ಲ ದೇವರ ದೀಪಾ ಹಚ್ಚ್ಬೇಕಂತ ಹಿರೇರು, ಹೀಂಗ ಎಲ್ಲಾ ಚೇತನರಿಗೆ ಕುಂಜಿ ಕೊಡೋ ಈ ಜಡವಸ್ತುಗಳ ಪೈಕಿ ನಮ್ಮ್ ಹುಚ್ಹ್ ಬಸ್ಸಿಗಷ್ಟ ಊರಾಗ ಅಗ್ರ ಪೂಜಿ.ಯಾಕಂದ್ರ ಈ ಬಸ್ಸು ಒಂದು ನಮೂನಿ ಹುಚ್ಚ್ರ ಕೈಯಾಗಿನ ಕಲ್ಲ ಇದ್ಧಂಗ ಇರ್ತಿತ್ತು ,ಅದಕ್ಕ ಒಂದು ಟೈಮ್ ಟೇಬಲ್ ಅಂತ ಇತ್ತು ಖರೆ , ಆದರೆ ಅದರದೆ ಆದ ಟೈಮ್ ಟೇಬಲ್ ಇತ್ತು.ಬಸ್ಸ್ ಯಾವಾಗ ಬಿಡ್ತೋ ಅದೇ ಆವಾಗಿನ ಟೈಮ್ ಟೇಬಲ್ .ಬಸ್ಸ್ ಹುಚ್ಹ್ ಅಂತ ಕರ್ಸಿಗೋಳಿಕ್ಕೆ ಇದು ಒಂದು ಮನಗಂಡ ಕಾರಣ.


ಇದು ಶೆಟ್ಲ ಬಸ್ಸ್ ಆಗಿದ್ದರಿಂದ ಸಂಭ್ರಮಕ್ಕ ರಾತ್ರಿ ವಸ್ತಿ ಅಂತು ನಮ್ಮ ಊರಾಗ ಆಗಬೇಕಿತ್ತು.ಆದ್ರ ಯಾವ ರಾತ್ರಿ ವಸ್ತಿ ಅಂತ ನಮ್ಮ ಊರಿನ ಕಟ್ಟಿ ನರಸಪ್ಪುಗು ಗೊತ್ತಿರ್ತಿದ್ದಿಲ್ಲ.ವಾರದೊಳಗ ಒನ್ದ್ ಎರಡು-ಮೂರ್ ಸರ್ತಿ ಬಸ್ಸ್ ಏನರೆ ದಿಕ್ಕ್ ತಪ್ಪಿ ಊರಿಗೆ ಬಂದ್ರೆ ಮಂದಿಗೆ ಶ್ರಾವಣಕ್ಕ ತವ್ರು ಮನಿಗೆ ಹೆಣ್ಣ ಮಗಳ ಬಂದಷ್ಟೇ ಖುಷಿ ಆಗ್ತಿತ್ತು.ಆದರೂ, ಈ ಹುಚ್ಹ್ ಬಸ್ಸಿನ ನಂಬಿಕೆ ಮ್ಯಾಲೆ ,ಚೀಕಲಪರ್ವಿ ಇಂದ ಮಾನ್ವಿಗೆ ಕರೆಕ್ಟ ಟೈಮಿಗೆ ಸಾಲಿಗೆ ಹೋಗ್ತಿವಿ ಅಂತ ಭಂಡ ಧೈರ್ಯ ಇರೊ ಜಗಮಂಡ ಹುಡುಗ್ರು,ಕಚೇರಿಗು ಹೋದ್ರೆ ಹೋಗ್ತಿವಿ ಅಂತ ಹಿರೇರು,ಟಪಾಲ್ ಹಾಕೋ ಪೋಸ್ಟಿನ ಮಂದಿ ಇರತಿದ್ರಿರೀಪಾ.


ಗಂಡಸ್ರು ಹುಚ್ಹ ಬಸ್ಸಿಗೆ ಮಾನ್ವಿಗೆ ಹೋಗ್ತಾರಂದ್ರೆ ಮನ್ಯಾಗಿನ ಹೆಂಗಸರ್ಗೆ ಇವ್ರು ಹೊಗೊತನಕ ಒಂಥರಾ ಅಳಕ್ ಇರ್ತಿತ್ತು.ಈಗಿನ್ನ ಛಾ ಕುಡುದು ಇವ್ರು ಮನಿ ಬಿಟ್ಟಿದ್ರು ಬಸ್ಸ್ ತಪ್ಪದು ಖಾತ್ರಿ ಅಂತ ಛಾ ಕಾಸೋ ಬ್ಹೋಗಣಿ ವಲಿ ಮ್ಯಾಲಿಂದ ತಳಗ ಇಳಿಸ್ತಿದ್ದ್ದಿಲ್ಲ.ಯಜಮಾನ್ರು ಬಸ್ಸ್ ತಪ್ಪಿಸಿಕೊಂಡು ಮನಿಗೆ ಬಂದು ಮತ್ತ ಛಾ ಕೇಳ್ತಾರಂತ ಇವ್ರಿಗೆ ಮೊದ್ಲೇ ಒಂದು ಸಿಕ್ಸ್ತ್ ಸೆನ್ಸ್ ಆಗ್ತಿತ್ತು.ಹಂಗೆನರ ದೇವರ ಮನಸ್ಸಿಗೆ ಬಂದು ಬಸ್ಸ್ ಸಿಕ್ಕರಂತೂ ಅಲ್ಲೇ ಬಸ್ ಸ್ಟ್ಯಾಂಡ್ನಾಗಿರೋ ಮನಶರ ಜೊತಿಗೆ ಬಸ್ಸ್ ಸಿಕ್ಯದ ಅಂತ ಮನಿಗೆ ಹೇಳಿ ಕಳಿಸ್ತಿದ್ದರು.ಇನ್ನ ಹೇಳ್ಳಿಕ್ಕೆ ಬರೋ ಮನಷ್ಯರಿಗೂ ಅಷ್ಟೇ ಉಮೇದಿ... ಇದ ಖುಷಿಲೆ ಒಂದಿಷ್ಟ್ ಗುಟುಗು ಛಾ ಸಿಗ್ತದ ಅಂತ.
ಹುಚ್ಹ್ ಬಸ್ಸ್ ಬೆಳಿಗ್ಗೆ "ಸರಿಯಾಗಿ" ಆರ್ ಘಂಟಿಗೆ ಬಿಡ್ತಿತ್ತು.ಸರಿಯಾಗಿ ಅಂದ್ರ ನಮ್ಮೂರು ಕೋಳಿ ಕೂಗಿದ್ಕೂಡಲೇ ಡ್ರೈವರ್ ಬಸ್ ಚಾಲೂ ಮಾಡಿ ಬಿಡ್ತಿದ್ದ.ಹಿಂಗಾಗಿ ಯಾವ ಕೋಳಿ ಕೂಗಿ ಯಾವಾಗ ಬಸ್ಸ್ ಬಿಡ್ತದ ಅಂಬೋದು ಒಂದು ಯಕ್ಷ ಪ್ರಶ್ನೆ.ಊರಾಗ ಇರೊ ನಾಕಾರು ಕೊಳಿ ನಡುವ ಯಾವ್ದು ಯಾವ ಮುಲ್ಯಾಗಿಂದ ಕುಗ್ತದೊ ಅಂತ ಮಂದಿ ಭುಗುಲಿಗೆ ದುಡು ದುಡು ಒಡತಿದ್ದರು.ಭುರ್ ಭುರ್ ಅಂತ ಬಸ್ಸಿನ ಸಪ್ಪಳ ಆದರಂತೂ ಎದಿ ಧಸಕ್ಕ ಅಂದು ಇವತ್ತ್ನು ಬಸ್ಸ್ ತಪ್ತ್ಯು ಅಂತ ಹಿಡಿ ಶಾಪ ಹಾಕ್ತಿದ್ದರು.


ಪಾಪ ಆ ಉತಾವಳಿ ಬಸ್ಸ್ ಆದರು ಏನ್ ಮಾಡಿತ್ತು , ಅದಕ್ಕರೆ ನುರಾ ಎಂಟ ಕೆಲ್ಸ. ಬರೀ ಮನಶ್ಯರ್ ಒಂದೇ ಅಲ್ಲ ,ಕುರಿ,ಕೋಳಿ,ಗಿಳಿ,ಎಮ್ಮಿ ಕರಾ,ಆಕಳ ಕರಾ,ಮತ್ತ ಬಸ್ಸ್ನಾಗ ಅವಾಗ ಇವಾಗ ಬಂದುಹೋಗೋ ಪಾತರಗಿತ್ತಿ,ಪತಂಗಾ,ನಗರ ಹಾವು , ಹೀಂಗ ಒಂದ ಎರಡ ಎಲ್ಲಾರ್ನು ಸಂಭಾಳಿಸಿಕೊಂಡು,ಟಿಕಿಟ ತೊಗೊಲ್ಲಿಕ್ಕೆ ಬೇಕ್ ಅಂತ ಮಂದಿಗೆ ತಾಕೀತ್ ಮಾಡಿ,ಬೀಡಿ ಸೇದವ್ರ ಜೊತಿಗೆ ಜಗಳಾಡಿ,ಬಸ್ಸಿನ ಜಂತಿಮ್ಯಾಲೆ ಕುತಿರ್ತಿದ್ದ ಏರ್ ಕಂಡಿಶನ್ ಮಂದಿಗೆ ಟಿಕಿಟ್ ಕೊಟ್ಟು ,ಚೀಕಲ್ಪರವೀಂದ ಮಾನ್ವಿಗೆ ಬರೀ ಹನ್ನೆರಡ ಕಿಲೋಮೀಟರು ಇದ್ದರೂ ಮಂದಿನ್ನ ಒಂದಡ ತಟೈಸ್ಲಿಕ್ಕೆ ಒಂದೆರಡ ತಾಸರ ಬೇಕಾಗ್ತಿತ್ತು.ಆಗಿನ್ನು ನಮ್ಮೂರಿಗೆ ನ್ಯಾಯವಾಗಿ ಬೇಕಾಗಿದ್ದ ಹಳ್ಲಾನೂ ಸ್ಯ್ಯಾಂಗ್-ಶೇನ್ ಆಗಿದ್ದಿಲ್ಲಾ ಹಿಂಗಾಗಿ ಒಂದ್ ಸ್ವಲ್ಪ ಮಳಿ ಬಂದ್ರು ಹಳ್ಳದಾಗ ನೀರು ತುಂಬಿ ,ನೀರು ಇಳಿಯೋಮಟ ಬಸ್ಸ್ ಉತ್ಸವಮುರ್ತಿಗತೆ ಅಲ್ಲೇ ಕೂತುಬಿಡ್ತಿತ್ತು.


ಅಲ್ಲಾ ,ನೈಸರ್ಗಿಕವಾಗಿ ಇರೋ ಹಳ್ಳ ಕೊಳ್ಳಗಳು ಯಾರನ ಮಂಜೂರ್ ಮಾಡಿದ್ದ್ಮ್ಯಲೇ ಹರದಾಡ್ಲಿಕ್ಕೆ ಯಾವಾಗಿಂದ ಶುರುಮಾಡಿದ್ವು ಅಂತ ನೀವು ಅನುಮಾನ ಮಾಡಬ್ಯಾಡ್ರಿ , ನಮ್ಮ ಊರಿನ ಮಂದಿ ಪ್ರಕಾರ ಹಳ್ಲಾ ಮಂಜೂರ್ ಆಗ್ಯಾವ ಅಂದ್ರ ಆ ಹಳ್ಳಕ್ಕ ಬ್ರಿಡ್ಜ್ ಮಂಜೂರ್ ಆಗ್ಯಾವ ಅಂತ ಅಷ್ಟೇ ಅರ್ಥ.ಇದು ಗೊತ್ತಿರ್ಲಾರ್ದೆ ಬ್ಯಾರೇಕಡೆ ಮಂದೇನರೆ, ನಮ್ಮೂರನವರು " ತಸಿಲ್ದಾರ್ರ ಮೂರ್ ಹಳ್ಳ ,ಒಂದು ನದಿ ಮಂಜೂರು ಮಾಡ್ಯಾನ" ಅಂತ ಮಾತಾಡೋದ ಕೆಳಿಸಿಗೊಂಡ್ರೇ ,ಅ ತಶಿಲ್ದಾರ್ಗನ ಹಣ್ಣು-ಕಾಯಿ ಮಾಡಿಸಿಕೊಂಡು ಬಂದು ಬಿಡ್ತಾರ ಅಷ್ಟ.


ನಮ್ಮೂರಾಗ ಸಂಜಿಮುಂದ ಸಾಲಿ ಬಿಟ್ಟ್ ಮ್ಯಾಲೇ, ಅದರ ಕಟ್ಟಿಗೆ ಕೂತು ಬಸ್ಸ್ ಕಾಯೋದಂತು ಒಂದು ಸಂಭ್ರಮದ ವಾತಾವರಣ.ನಮ್ಮ ಮನಿ ರೈತ್ರು ಅಲ್ಲೇ ಹತ್ರ ಇದ್ದ ತಮ್ಮ ಮನೀಂದ ಒಂದು ಕವದಿ ತಂದು ಕೂಡ್ಲಿಕ್ಕೆ ನಮಗ ಅನುವು ಮಾಡಿಕೊಡ್ತಿದ್ರು.ಹಂಗ ನಮನ್ನ ಕಳಿಸಲಿಕ್ಕೆ ಬರೋ ಮಂದಿ , ನಮ್ಮ ರೈತ್ರು ಎಲ್ಲಾ ಕೂಡಿ ಒಂದು ಪಂಚಾಯಿತಿ ಕಟ್ಟಿಗತೆ ವಾತಾವರಣ ನಿರ್ಮಾಣ ಆಗಿಬಿಡ್ತಿತ್ತು.ನಮ್ಮೂರ್ ಸುದ್ದಿ ಮಗುದು,ಬಗಲಾಗಿನ ರಂಗಧಾಳ,ಮದ್ಲಾಪುರ್,ಪನ್ನುರ್ ಹೀಂಗ ಎಲ್ಲಾ ಉರಿನ ಸುದ್ದಿ ಮುಗುದ್ರು ಬಸ್ಸಿನ ಸುದ್ದಿ ಇರ್ತಿದ್ದಿಲ್ಲಾ. ಬಸ್ಸ್ ಕಯೋತನಕ ನಮ್ಮ ಜೋಡಿ ಇದ್ದ ಮಣಶ್ಯರ ಜೀವ ಅಡಕೊತನಾಗ  ಸಿಕ್ಕ ಅಡಿಕಿ ಆಗಿರ್ತ್ತಿತ್ತು.ಅವ್ರು ತಮ್ಮ್ ಹಿಂದಿನ ಜೀವನದ ವ್ರತ್ತಾಂತ ಬೇಕಂದ್ರೂ ಹೇಳ್ತಿದ್ರು, ಆದ್ರೆ ನಾವು ಕೇಳೋ ಒಂದೇ ಒಂದು ಸರಳವಾದ, "ಬಸ್ಸ್ ಯಾವಾಗ ಬರ್ತದ ?" ಪ್ರಶ್ನೆಗೆ  ಅವ್ರಿಂದ ಬರೋ ಉತ್ತರ ಒಂದೇ "ಎಂಗೈತೆನ್ರಿ ದಣಿ ?" ಅದು ತಮ್ಮ ಎರಡು ಕೈಗಳಿಂದ ತಾರಮಯ್ಯಾ ಮಾಡಿಕೊತ.... 




ತಾಡಾಗಿ ಅದ್ರು ಬಸ್ಸೇನರ ಬಂದು ಒಂದೇರಡು ನಿಮಿಷ ನಮ್ಮೂರಾಗ ನಿಂತು ಹೊಗೊಮಟ ಮಂದಿ ಯಾವೊದೋ ಒಂದು ದಿವ್ಯ ಸನ್ನಿಧಿಯ ಪ್ರಭಾವಕ್ಕ ಒಳಗಾದೌರಿಚರ ಇರ್ತಿದ್ರು ,ಬಸ್ಸ್ಸಿನ ದರ್ಶನ ಆದ್ಮ್ಯಲೇ ಒಂದು ಧನ್ಯತಾ ಭಾವ ಅನುಭವಿಸಿಗೊತ ಆ ಬಸ್ಸಿನ ಧುಳದೊಳಗ ಮನಿ ಸೇರ್ತಿದ್ರು.ಗಲ್ಲ-ಗಲ್ಲ ಒಂದು ಬಡ್ಕೊತ್ತಿದ್ದಿಲ್ಲಾ ಅಷ್ಟ. 


ಇಷ್ಟಂತೂ ಚೀಕಲ್ಪರವೀಂದ ಮಾನ್ವಿಗೆ ಹೊಗೌರ ಸುದ್ದಿ ಆಯಿತು.ಇನ್ನ ರಿಟರ್ನ್ ಜರನಿ  ಬಗ್ಗೆ ಹೇಳ್ದೆ ಹೋದರೆ ಅರಹೊಟ್ಟಿ ಆಗ್ತದ.ಮಾನ್ವಿಕಡಿಂದ ಈ ನಮ್ಮ ಮನಸುಖರಾಯನ ಬಸ್ಸು ಸಂಜಿ ಎಂಟು ಘಂಟಿ ಮ್ಯಾಲೆ ಯಾವಾಗಾದ್ರೂ ಬಿಡ್ತಿತ್ತು.ಭಾಳಷ್ಟ ಸರ್ತೆ ಜುಲಿಮಿಲೆ ,ಕೆಲವಂದು ಸರ್ತಿ ಕಂಟ್ರೋಲರ್ ಜತಿಗೆ ಗುದ್ದ್ಯಾಡಿದ ಮ್ಯಾಲೆ ಬಿಟ್ರು ಬಿಡ್ತಿತ್ತು.ಹೀಂಗ ಬದಡಾದವ್ರು ಬರ್ರಿ ನಾವಷ್ಟ ಇರ್ತಿದ್ದಿಲ್ಲಾ ,ಕಾತರಕಿ,ಹಣಿಗಿ,ಕರಡಿಗುಡ್ಡ,ಸಿರವಾರ ಹೀಂಗ ಬ್ಯಾರೇ ಬ್ಯಾರೇ ರೂಟಿನ ಮಂದಿನೂ ಇರ್ತಿದ್ದ್ರು ,ಬಸ್ಸ ಮಾತ್ರ ಒಂದ , ಅದ ನಮ್ಮ ಹುಚ್ಹ್ ಬಸ್ಸು. ಹೀಂಗ ಎಲ್ಲಾ ರುಟಿನವರ ಜತಿಗೆ ಜಗಳ ಆದ್ಮ್ಯಾಲೆ ನಮ್ಮ ಪಾಳಿ ನಸೀಬ್ ಇದ್ದ್ರಷ್ಟ ಬರ್ತಿತ್ತು ,ಇಲ್ಲಾ ನಮ್ಮ ರುಟಿನಾಗ ಕುಡುಕುರು ಜಾಸ್ತಿ ಇದ್ರಂತು ಖಾತ್ರಿ ಬರ್ತಿತ್ತು.ಕುಡುಕರು ಅದ ಯಾ ಪರಿ ಕಬಾಸ್ತಿದ್ದ್ರಂದ್ರೆ ಕಂಟ್ರೋಲರ್ ತಾನ ಮುದ್ದಾಂ ಡಿಪೋ ತನಕಾ ಹೋಗಿ ಬಸ್ಸ್ ಹಿಡಕೊಂಡು ಬರ್ತಿದ್ದ. ಯಾ ರುಟಿನಾಗ ಕುಡುಕುರು ಜಾಸ್ತಿ ಇರ್ತಿದ್ದ್ರೋ ಅವರ ಊರಿಗೆ ಬಸ್ಸ್ ಬಾಜಪ್ತಾ ಹೋಗ್ತಿತ್ತು ಅಂತ ನಾ ಏನ್ ಬ್ಯಾರೇ ಹೇಳಬೇಕಾಗಿಲ್ಲಾ.ಅದರಾಗಂತೂ ಬುಧುವಾರ ಮಾನ್ವಿ ಸಂತಿ, ಹಿಂಗಾಗಿ ಎಲ್ಲಾ ರುಟಿನ್ಯಾಗನು ಕುಡುಕುರು ,ಆವತ್ತಿನ ಸುದ್ದಿ ಬಗ್ಗೆ ಬರಿಯೋದ್ಕಿಂತ ಸುಮ್ನೆ ಇದ್ದ ನಿಮ್ಮ ಉಪಗಾರ ಕಟಿಗ್ಯೋತಿನಿ.




ಮಾನ್ವಿ ಮತ್ತ ಚೀಕಲಪರ್ವಿ ನಡುವ ಒಂದೆರಡು ಕಿಲೋಮೀಟರ್ ಅಡ್ಡ ಹಾದಿಗೆ ಮದ್ಲಾಪುರ್ ಅಂತ ಒಂದು ಊರು ಹುಡಿಕ್ಯೋತ ನಮ್ಮ ಬಸ್ಸ್ ,ಅಭಿಮನ್ಯು ಚಕ್ರವ್ಯೂಹ ಭೇದಿಸಿಕೊಂಡು ಹೋದಂಗ ಹೋಗ್ತಿತ್ತು.ಆದರ ಪುಣ್ಯಾಕ್ಕ ಆ ಊರಾಗಿನ ಹನಮಪ್ಪ ಮತ್ತ್ ಹೆಂಗರಮಾಡಿ ಬಸ್ಸಿನ್ನ ನಮ್ಮ ಉರಿನ ರೂಟಿಗೆ ಹಚ್ಚಿ ಪುಣ್ಯಾ ಕಟ್ಗ್ಯೋತಿದ್ದಾ.ನಮಗರೇ ಆ ಉರಿನ ಬಗ್ಗೆ ಏನೂ ಪರಿಚಯ ಇರ್ಲಿಲ್ಲಂದ್ರು ಆ ಉರಗಿನ ಬಯಲು ಹಣಮಪ್ಪಾ ಮತ್ತ ಆ ಊರು ಬಂದಾಗಷ್ಟ ನಾವು ಆತಗ ನೈವೆದ್ಯಾ ಕೊಡ್ತಿವಿ ಅಂತ ಅನ್ಕೊಂಡಿದ್ದ ಹರಿಕಿ ನೆನಪು ಆಗ್ತಿತ್ತು.ವರ್ಷಕ್ಕೋ ಅರ್ ತಿಂಗಳಿಗೊಮ್ಮೆ ಭೆಟ್ಟಿಯಾದ ಸರ್ತೆ ಹಣಮಪ್ಪ ನಮ್ಮ್ಯಲೇ ಯಾಕೋ ಸಿಟ್ಟ್ ಆಗ್ಯಾನ ಅಂತ ಅನಿಸ್ತಿತ್ತು. 




ಚೀಕಲಪರ್ವಿ ನಮ್ಮುರಾದ್ರು ನಾವು ಅವಾಗ್-ಇವಾಗ್ ಹಬ್ಬ-ಅರಾಧನಿದೆಸಿಲೆ ಅಲ್ಲಿಗೆ ಹೋಗ್ತಿದ್ವಿ.ನಾವು ಹೋಗಬೇಕಾದ್ರೆ ಮೊದ್ಲು ಮಾನ್ವಿಗೆ ಬಂದು ಒಂದು ದಿನಾ ನಮ್ಮ ಬಳಗದ ಸಂಪೂರ್ತಿಯವ್ರ ಮನ್ಯಾಗೋ ಅಥವಾ ದೂಮುಂಜಿ ಅವ್ರ ಮನ್ಯಾಗಿದ್ದು ಸಂಜಿ ಕಡಿ ನಮ್ಮ ಉರಿನ ಕಡಿ ಮಾರಿ ಮಾಡ್ತಿದ್ವಿ.ಅವ್ರು ನಮಗ ಊರಿಗೆ ಕಳಸೋವಾಗ "ಹೋಗಿ ಬರ್ರಿ , ಮತ್ತ ನಿಮ್ಮೂರಿನ ಬಸ್ಸಿನ ಬಗ್ಗೆ ಎನ್ ಹೇಳ್ಬೇಕು , ಎಷ್ಟು ಅಪರಾತ್ರಿ ಆದರು ಮತ್ತ ಹೊಳ್ಳಿ ಮನಿಗೆ ಬರ್ರಿ ,ಕುಸು-ಕುನ್ನಿಗಳನ್ನ ಕರಕೊಂಡು ಭಾಳೋತ್ತು ಬಸ್ಸ್ ಕಾಯ್ಬ್ಯಾಡ್ರಿ ಅಂತ ನಮ್ಮ ಅಮ್ಮಗ ಹೇಳಿ ಕಳ್ಸ್ತಿದ್ದರು " , ನಾವು ಹುಡುಗ್ರಂತು ನಮ್ಮ ಉರಿನ ಬಸ್ಸ್ ಸಿಕ್ಕೆ ಸಿಗ್ತದ, ನಾಳೆ ಬೆಳಗಾಗದ್ರಾಗ ನಾವು ನಮ್ಮೂರ್ ನದ್ಯಾಗ ಇರ್ತಿವಿ ಅಂತ ನಮ್ಮ ಅತ್ತಿಗೆ ಹೇಳಿ ಬಸ್ಸ್ ಕಾಯಲಿಕ್ಕೆ ಹೋಗ್ತಿದ್ವಿ.


(ನಿದ್ದಿಯಿಂದ ಎದ್ದು ಕಣ್ಣ್ ತಗದಾಗ ಭಾಳಷ್ಟು ಸರ್ತಿ ನಾವು ಮತ್ತೆ ನಮ್ಮ ಅತ್ತಿ ಮನ್ಯಾಗ ಇರ್ತಿದ್ವಿ ,ಅವರಂತೂ ನಮ್ಮನ್ನ ಕಳಿಸಿದ ಮ್ಯಾಲೇ ಸಣ್ಣಗ ಉರಿ ಹಚ್ಚಿ ಇಟ್ಟಿರ್ತಿದ್ರು , ನಾವ್ ವಾಪಸ್ಸ್ ಬಂದ್ರೆ ತಪ್ಪೆಲಿ ಅನ್ನ ಆಗ್ತಿತ್ತು ಇಲಾಂದ್ರೆ ನಾಳಿಗೆ ಅವ್ರ ಮನ್ಯಾಗ್ ಒಂದು ಸ್ವಲ್ಪ ಇದ್ಲಿ  ಆಗ್ತಿದ್ವು.)


ಇನ್ನ ಮನೀ ಇಂದ ರಿಕ್ಷಾದವಾ ನಮಗ ಕುಡಿಸಿಕೊಂಡು ಬಸ್ಸ ಸ್ಟ್ಯಾಂಡ್ ಕಡೆ ಹೋಗೋವಾಗ, "ಡಣ್ಯರ,ಹೇಳಿ ಕೇಳಿ ಚೀಕಲಪರ್ವಿ ಬಸ್ಸ್ ,ಸಿಕ್ಕರ ಚೊಲೋ ಆತು, ಇಲ್ಲಾಂದ್ರ ನಾನ ವಾಪಸ್ಸ್ ನಿಮಗ ಮನಿಗೆ ಬಿಟ್ಟ ಬರ್ತೀನಿ" ಅಂತಿದ್ದ , ನಮ್ಮ ಅವ್ವರೆ "ನೀನ್ನ ತಲಿ ಜೆಜ್ಜಾ , ಹಂಗ ಅನಬ್ಯಾಡಪ ಮಾರಾಯ " ಅಂತ ಅಗ್ದಿ ಮುಂದ ಅಗೋ ಸೂಚನಾ ಸಿಕ್ಕೌರಂಗ ಅರ್ಧಾ ಉತ್ಸಾಹ ಅವಾಗ್ಲೇ ಕಳಕೊಂಡು ಬಿಡ್ತ್ತಿದ್ಲು.ಮೂರ್-ನಾಲ್ಕ್ ತಾಸಿನಕಿಂತ ಮ್ಯಾಲೇ ಬಸ್ಸ್ ಕಾಯ್ದು, ಶ್ರೀ ಕೃಷ್ಣ ಪರಮಾತ್ಮ ಹುಟ್ಟಿದ ಟೈಮ್ ಸತ್ಯಕ್ ಮೀರಿದ್ ಮ್ಯಾಲೇ ಸಹನಾ ಕಟ್ಟಿ ಓಡಿಲಿಕ್ಕೆ ಶುರು ಆದ್ಮ್ಯಲೇ ಒಂಚೂರ್-ಚೂರ್ ಸಿಟ್ಟ್ ನಮ್ಮ ಅಪ್ಪಾಜಿ ಮ್ಯಾಲೇ ತೋರಿಸಿಗ್ಯೋತ್ತ "ಯಾವಾಗ ಬರ್ತಿದ್ರಿ ನಿಮ್ಮೂರ ಬಸ್ಸ್ ? , ನಿಮನ್ನ ಲಗ್ನಾ ಆದ್ಮ್ಯೇಲೆ ಅರ್ಧಾ ಜೀವನ ಅಂತು ನಿಮ್ಮೂರ ಬಸ್ಸ್ ಕಾಯೋದ್ರಾಗೆ ಕಳಿತು " ಅಂತ ಶುರು ಮಾಡಿದಕಿ , ನಮ್ಮ ಅಪ್ಪಾ ಅಮ್ಮನ ಲಗ್ನಾ ಮಾಡಿಸಿದ ನಮ್ಮನಿ ಎಲ್ಲಾ ಹಿರೇರನ್ನ ನಂಬರ್ ಮ್ಯಾಲೇ ತೊಗೊತಿದ್ಲು .ನಮ್ಮಪ್ಪಾಜಿ ಅಂತು ಉರಿಯೋ ಬೆಂಕಿಗೆ ಥಣ್ಣಗ ತುಪ್ಪಾ ಸುರಕೋತ ,"ಬರ್ತದ್ರಿ ಬಸ್ಸ್ ,ತಪ್ಪಿಸಿಕೊಂಡು ಅದೆಲ್ಲಿಗೆ ಹೋಗ್ತದ ನಮ್ಮನ ಬಿಟ್ಟು" ಅಂತ ಅಮ್ಮನ್ನ ರೇಗಿಸಿಗೊತ ಬಸ್ಸ್ ಬರೋ ಹಾದಿ ನೋಡ್ತಿದ್ರು.


ಬಸ್ಸ್ ಬಂದ್ಮ್ಯಲಂತೂ ಮೊದ್ಲು ಒಂದ್ ಹತ್ತ್ ನಿಮಿಷ ಅದರ್ ಅವಸ್ತಿ ನೋಡಂಗ್ ಇರ್ತಿದ್ದಿಲ್ಲಾ.ಮಂದಿ ಕೈಯಾಗ್ ಸಿಕ್ಕ ತಮ್ಮ್ ಬಟ್ಟಿ ಗಂಟು,ಟಾವಲ್,ನಶಿ ತಿಕ್ಕೊ ಡಬ್ಬಿ, ಕಡಿಕೆ ಏನ್ ಸಿಗ್ಲಿಲ್ಲಾನ್ದ್ರು ತಮ್ಮ್ ಕುಸೂ,ಕುನ್ನಿನು ಸಹಿತ ,ತೇರಿಗೆ ಬಾಳೇಣ್ಣ್ ಒಗದೌರಂಗ ,ಬಸ್ಸಿನ್ ಖಿಡಿಕ್ಯಾಗ ಸೀಟಿನ ಸಲವಾಗಿ ಒಗಿತಿದ್ರು.ಬಸ್ಸ್ ಹತ್ತಿದ್ ಮ್ಯಾಲಂತೂ , ಆ ಕೂಸ್ಗಳ ಓದರಾಟ,ಚೀರಾಟ ನೋಡಿದ್ರ ಯಾವದರ ಸರ್ಕಾರಿ ಆಸ್ಪತ್ರಿ ಹೇರಿಗಿ ವಾರ್ಡ್ಕಡೆ ಹೋದಂಗ ಇರ್ತ್ತಿತ್ತು.


ನಾವ್ ಸಣ್ಣವರಿದ್ದಾಗ ನಮ್ಮ ಜೀವನದ ಕೆಲ ಅಮೂಲ್ಯ ಕ್ಷಣಗಳನ್ನ ಇಂಥಾ "ಸುವಿಹಾರಿ" ಬಸ್ಸ ಕಾಯಲಿಕ್ಕೆ ಮೀಸಲಿಟ್ಟಿದ್ವಿ ಅಂದ್ರ ತಪ್ಪಾಗ್ಲಿಕ್ಕಿಲ್ಲಾ, ಹಂಗೆನರೆ ಬಸ್ಸ್ ಭಡಾನೆ ಸಿಕ್ಕರಂತೂ ಏನೋ ಭಣ-ಭಣ,ಟೈಮಿಗೆ ಸರಿಯಾಗಿ ಬಂದ ಬಸ್ಸ್ ಮ್ಯಾಲೇ ಒಂದಿಷ್ಟು ಹುಸಿ ಸಿಟ್ಟು, ಕೆಲವೊಮ್ಮೆ ತಡಕೊಳಾರ್ದಷ್ಟ ಆಘಾತ, ಜಗತ್ತೇ ಗೆದ್ದವ್ರಿಚರ ಖುಷಿ, ಹೀಂಗ ಎಲ್ಲಾ ನಮೂನಿ ಅನುಭವ ನಮಗ ಈ ಹುಚ್ಹ್ ಬಸ್ಸ್ ಕೊಟ್ಟದ.ಎಲ್ಲದರಕಿಂತ ಹೆಚ್ಚಾಗಿ ನಮಗ ಅ ಬಸ್ಸಿನಾಗ ಹೊಗೋದ ಒಂದು ಸಿಹಿ ಅನುಭವಾ ,ಯಾಕಂದ್ರ ಬಸ್ಸ್ ಹೆಂಗೆ ಇರ್ಲಿ ,ನಮ್ಮೂರಿಗೆ ಕರ್ಕೊಂಡು ಹೋಗ್ತದ ಅನ್ತಂದಮ್ಯಲೇ ಅದು ಸಿಹಿ ಅನುಭವಾನ ಮತ್ತ .ಈಗಂತೂ ಊರಾಗ ಹತ್ತಿಪ್ಪತ್ತು ಆಟೋ, ಬಹುತೇಕ ಎಲ್ಲಾರ ಮನ್ಯಾಗ ಒಂದು ಪಟಪಟಿ ,ಶಾಣೆ-ಶಾಣೆ ಬಸ್ಸು,ಮತ್ತ ನಮ್ಮೂರಿನ ನದಿ ದಂಡಿ ಒಡಲ ಸೀಳಿ ಉಸುಗು ಸಾಗಿಸೋ ಲಾರಿಗಳ ಭರಾಟಿಯೊಳಗ ಈ ಹುಚ್ಹ ಬಸ್ಸ್ ಯಾವಾಗ ನಮ್ಮ ಕೈಯ್ಯಾಗಿಂದ ಶಾಶ್ವತವಾಗಿ ತಪ್ಪಿತೋ ನಮಗ ಗೊತ್ತಾಗ್ಲಿಲ್ಲಾ.ಆದ್ರೂ ಯಾರನ ಊರಾಗ ಬಾಯಿತಪ್ಪಿ ಹುಚ್ಚಬಸ್ಸಿಗೆ ಬಂದೆ ಅಂದ್ರ ನೆನಪುಗಳು ಹಂಗ ವತ್ತಿ ಬರ್ತಾವ....