ಹುರುಳಿ ಕಾಳಿನ ಸಾರು ಮತ್ತು ಖಾರ ಒಗ್ಗರಣೆ

ಹುರುಳಿ ಕಾಳಿನ ಸಾರು ಮತ್ತು ಖಾರ ಒಗ್ಗರಣೆ

ಬೇಕಿರುವ ಸಾಮಗ್ರಿ

ಹುರುಳಿ ಕಾಳು, ಉಪ್ಪು, ಖಾರದ ಪುಡಿ, ಹಸಿಮೆಣಸು, ಸಾರಿನ ಪುಡಿ, ಹುಣಸೇ ರಸ, ಬೆಲ್ಲ, ಹಸಿ ಶುಂಠಿ, ಕಾಳುಮೆಣಸು, ಇಂಗು, ಒಣಮೆಣಸು, ಜೀರಿಗೆ, ಸಾಸಿವೆ, ಅರಸಿನ ಹುಡಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ: ಎಣ್ಣೆ ಅಥವಾ ತುಪ್ಪ, ಒಣಮೆಣಸು, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ, ಅರಸಿನ, ಕರಿಬೇವು, ನೀರುಳ್ಳಿ, ಕಾಯಿ ಮೆಣಸು, ಬೆಲ್ಲ, ಉಪ್ಪು, ತೆಂಗಿನಕಾಯಿ ತುರಿ 

 

ತಯಾರಿಸುವ ವಿಧಾನ

ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕಣ್ಣು (ತೂತು) ಪಾತ್ರೆಯಲ್ಲಿ ಹಾಕಿದಾಗ ನೀರೆಲ್ಲ ಬಸಿದು ಹೋಗುತ್ತದೆ.(ಅಂಗಡಿಯಿಂದ ತಂದದ್ದರಲ್ಲಿ ಕಲ್ಲು ಇರುತ್ತದೆ, ನೋಡಿಕೊಳ್ಳಬೇಕು) ಪರಿಮಳ ಮತ್ತು ರುಚಿಗಾಗಿ ಸ್ವಲ್ಪ ಹುರಿಯಬೇಕು. ಕುಕ್ಕರಿನಲ್ಲಿ ಎರಡು ಕಪ್ ಕಾಳುಗಳಿಗೆ ಐದು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಖಾರಪುಡಿ ಹಾಕಿ ಬೇಯಲಿಟ್ಟು ಐದಾರು ವಿಸಲ್ ಕೂಗಿದಾಗ ಕೆಳಗಿಳಿಸಬೇಕು. ತಣಿದ ಮೇಲೆ ಪುನಃ ಕಣ್ಣು ಪಾತ್ರೆಯಲ್ಲಿ ಹಾಕಿ ನೀರನ್ನು ಬಸಿಯಬೇಕು. ಮನೆಮಂದಿಗೆ ಬೇಕಾದಷ್ಟು ಅಳತೆಯಿಲ್ಲದಿದ್ದಲ್ಲಿ ಒಂದು ಸೌಟು ಕಾಳನ್ನು ಸ್ವಲ್ಪ ಮಿಕ್ಸಿಯಲ್ಲಿ ತಿರುಗಿಸಿ ಸಾರು ಕುದಿಸುವಾಗ ಸೇರಿಸಬೇಕು. ಎರಡು ಹಸಿಮೆಣಸು, ಸಾರಿನಪುಡಿ ಇದ್ದರೆ ಎರಡು ಚಮಚ, ಹುಣಿಸೇರಸ, ಬೆಲ್ಲ, ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ಬೇಕಾದರೆ ಹಸಿಶುಂಠಿ, ಕಾಳುಮೆಣಸು ಜಜ್ಜಿ ಹಾಕಬಹುದು. ಇಂಗು, ಒಣಮೆಣಸು, ಜೀರಿಗೆ, ಸಾಸಿವೆ, ಚಿಟಿಕೆ ಅರಶಿನ ಹುಡಿ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಕೊಡಬೇಕು. (ಸಿಹಿ ಬೇಕಾದವರು ಬೆಲ್ಲ ಜಾಸ್ತಿ ಹಾಕಬಹುದು) ಈ ಸಾರು ಸಿಹಿ, ಹುಳಿ, ಉಪ್ಪು, ಖಾರ ಹದವಾಗಿದ್ದಲ್ಲಿ ತುಂಬಾ ರುಚಿ, ಹಾಗೆಯೇ ಕುಡಿಯಬಹುದು. ದೇಹಕ್ಕೂ ಒಳ್ಳೆಯದು. ಕೊತ್ತಂಬರಿ ಸೊಪ್ಪು ಇದ್ದರೆ ಸಣ್ಣಕೆ ತುಂಡು ಮಾಡಿ ಸೇರಿಸಬಹುದು. ಘಮಘಮ ಹುರುಳಿಕಟ್ಟಿನ ಸಾರು (ಹಳ್ಳಿ ಭಾಷೆಯಲ್ಲಿ ಕುಡು) ಬಾಯಿಯಲ್ಲಿ ನೀರು ಬರಿಸಬಹುದು.

ಖಾರ ಒಗ್ಗರಣೆ:

ಒಗ್ಗರಣೆಗೆ ಕಡಾಯಿಗೆ ಎಣ್ಣೆ ಅಥವಾ ತುಪ್ಪ, ಒಣಮೆಣಸು, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಸ್ವಲ್ಪ ಜೀರಿಗೆ, ಚಿಟಿಕೆ ಅರಶಿನ, ಕರಿಬೇವು ಹಾಕಿ ಹುರಿಯಬೇಕು. ಚಟಪಟ ಸಿಡಿಯುವಾಗ ಬೇಕಾದಲ್ಲಿ ಒಂದೆರಡು ನೀರುಳ್ಳಿ ಸಣ್ಣಗೆ ಕತ್ತರಿಸಿ, ಎರಡು ಕಾಯಿ ಮೆಣಸನ್ನು ತುಂಡುಗಳನ್ನು ಸೇರಿಸಿ ಮಿಶ್ರ ಮಾಡಿ, ಬಸಿದಿಟ್ಟ ಹುರುಳಿಕಾಳುಗಳನ್ನು ಸೇರಿಸಿ ಮಿಶ್ರ ಮಾಡಬೇಕು. ಉಪ್ಪು,ಸ್ವಲ್ಪ ಬೆಲ್ಲ (ಸಾರು ಅಥವಾ ಸಾಂಬಾರಿನ ಹುಡಿ) ಎರಡು ಚಮಚ ಸೇರಿಸಿ. ತೆಂಗಿನಕಾಯಿ ತುರಿ ಸೇರಿಸಬೇಕು. ಹುರುಳಿಕಾಳಿನ ಖಾರ ಒಗ್ಗರಣೆ ಬಹಳ ರುಚಿ, ಆರೋಗ್ಯಕ್ಕೂ ಒಳ್ಳೆಯದು.

-ರತ್ನಾ ಕೆ ಭಟ್, ತಲಂಜೇರಿ, ಪುತ್ತೂರು