ಹುಲಿ ವೇಷ - ಕತೆಗಳು

ಹುಲಿ ವೇಷ - ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೧೬೦.೦೦. ಮುದ್ರಣ: ೨೦೧೯

ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಎನ್ನುವುದು ವಿಠಲ್ ಶೆಣೈ ಅವರ ಬರಹದ ವಿಶೇಷತೆ. ಸರಳವಾದ ವಾಕ್ಯಗಳು, ನಮಗೆ ಗೊತ್ತಿರುವ ಸುಲಭ ಪದಗಳು, ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುವಂಥಹ ಕಥಾ ಹಂದರ ಇವು ಈ ಕಥೆಗಳಿಗೆ ವಿಶೇಷ ಮೆರುಗನ್ನು ನೀಡಿವೆ. 

ವಿಠಲ್ ಶೆಣೈ ಅವರು ‘ನನ್ನುಡಿ'ಯಲ್ಲಿ ಹುಲಿವೇಷದ ಕುರಿತು ಹೀಗೆ ಬರೆಯುತ್ತಾರೆ ‘ಮಂಗಳೂರಿನಲ್ಲಿ ೭೦ ಮತ್ತು ೮೦ ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿವೇಷದ ವಾದ್ಯ ಕೇಳಿದರೆ ಮೈ ಜುಂ ಆಗುತ್ತದೆ. ನವರಾತ್ರಿಯ ಕೊನೆಯ ಆ ನಾಲ್ಕು-ಐದು ದಿನಗಳಲ್ಲಿ ಅಲ್ಲಲ್ಲಿ ಹುಲಿವೇಷದ ನೃತ್ಯ ನೋಡಿ, ಅದರ ಜೊತೆ ರಸ್ತೆಯಲ್ಲಿ ಒಂದಿಷ್ಟು ಅಡ್ಡಾಡಿ, ನಂತರ ಕೊನೆಯ ದಿನ ಶಾರದಾ ಮಾತೆಯ ಶೋಭಾ ಯಾತ್ರೆಯ ಜೊತೆ ಕೊನೆಗೊಳ್ಳುವ ಆ ದಿನಗಳು, ಮುಂದಿನ ವರ್ಷ ಮತ್ತೆ ನೋಡುವಂಥವು. ಇಂತಹ ಅನುಭವಗಳನ್ನು ಕೊಟ್ಟ ಹುಲಿವೇಷದ ದಂಡನ್ನು ಆಧಾರವಾಗಿಟ್ಟು ಕತೆ ಬರೆಯುವ ಹುಮ್ಮಸ್ಸಾಯಿತು, ಆ ಕತೆಯ ಜೊತೆ ಇನ್ನೂ ಆರು ಕತೆಗಳನ್ನು ಜೊತೆಗೂಡಿಸಿ ಈ ಕಥಾ ಸಂಕಲನ ಹೊರತಂದಿದ್ದೇನೆ. ಕೆಲವು ಕತೆಗಳು ಪ್ರತಿಲಿಪಿ ಆನ್ಲೈನ್ ತಾಣದಲ್ಲಿ ಪ್ರಕಟವಾಗಿ ಮನ್ನಣೆ ಗಳಿಸಿವೆ.’

ಇವರು ಕಥೆಗಳ ಪಾತ್ರಗಳು ಕಾಲ್ಪನಿಕ ಎಂದು ಹೇಳಿಕೊಂಡರೂ, ಎಲ್ಲೋ ಒಂದು ಕಡೆ ನಮ್ಮದೇ ಊರಿನ, ನಮ್ಮದೇ ಚಿರಪರಿಚಿತ ಜನರು ಕಥೆಯಾಗಿದ್ದಾರೆ ಅನ್ನಿಸಿ ಬಿಡುತ್ತದೆ. ಅಷ್ಟೊಂದು ಕತೆಗಳು ಆತ್ಮೀಯವಾಗಿವೆ. ಮೊದಲ ಕತೆ ‘ಅದೇ ಧ್ವನಿ' ಅನಿರೀಕ್ಷಿತವಾಗಿ ಯಶಸ್ಸಿನ ಮೆಟ್ಟಲೇರಿದ ಗಾಯಕ ಮನೋಜ್ ಗಂಟಲ ಶಸ್ತ್ರ ಚಿಕಿತ್ಸೆಯಾದಾಗ ಬದಲಿ ಧ್ವನಿಯಾಗಿ ಸಂಗೀತ ನಿರ್ದೇಶಕರಾದ ಅಮರ್-ಕುಶಲ್ ಓರ್ವ ಗ್ರಾಮೀಣ ಯುವಕನನ್ನು ಆಯ್ಕೆ ಮಾಡುತ್ತಾರೆ. ಅವನೇ ರಾಚಪ್ಪ. ರಾಚಪ್ಪ ಮನೋಜ್ ಧ್ವನಿಯಲ್ಲೇ ಹಾಡುತ್ತಿದ್ದ. ಆಪರೇಶನ್ ಯಶಸ್ವಿಯಾದರೂ ತನ್ನ ಹಿಂದಿನ ಧ್ವನಿಯನ್ನು ಪಡೆಯಲಾರದೇ ಮನೋಜ್ ಚಡಪಡಿಸುತ್ತಾನೆ. ರಾಚಪ್ಪ ಮನೋಜ್ ಧ್ವನಿಯಲ್ಲಿ ಹಾಡುತ್ತಾ ಹಾಡುತ್ತಾ ತನ್ನತನವನ್ನೇ ಕಳೆದುಕೊಂಡು ಬಿಡುತ್ತಾನೆ. ಈ ಹೊಯ್ದಾಟಗಳ ಅಂತ್ಯ ಹೇಗಾಯಿತು ಎನ್ನುವುದೇ ಸಸ್ಪೆನ್ಸ್. 

ಈ ಕಥಾ ಸಂಕಲನದ ಪ್ರಮುಖ ಕಥೆ ‘ಹುಲಿವೇಷ' ಮಂಗಳೂರಿನಲ್ಲಿ ನವರಾತ್ರಿಯ ಸಮಯದಲ್ಲಿ ನಡೆಯುವ ಶಾರದೋತ್ಸವದ ಕಥಾ ಹಂದರವನ್ನು ಹೊಂದಿದೆ. ಆ ವರ್ಷ ಭಾನು ಶೆಟ್ಟಿಯ ಹುಲಿವೇಷದ ದಂಡಿಗೆ ೭೫ನೇ ವಾರ್ಷಿಕೋತ್ಸವದ ಸಂಭ್ರಮ. ಅದೇ ಸಮಯ ಕರ್ನಾಟಕದ ವಿಧಾನ ಸಭಾ ಚುನಾವಣೆಯ ಅನಿರೀಕ್ಷಿತ ಫಲಿತಾಂಶ. ಭಾನು ಶೆಟ್ಟಿಯು ತನ್ನ ಅಜ್ಜನ ಕಾಲದಿಂದ ನಡೆಯುತ್ತಾ ಬಂದ ಹುಲಿವೇಷದ ಸಂಪ್ರದಾಯವನ್ನು ಮುಂದುವರೆಸುತ್ತಾ ಬಂದಿರುತ್ತಾನೆ. ಅವನ ತಂದೆ ಭೈರ ಶೆಟ್ಟಿ ಹಣದಾಸೆಗಾಗಿ ಭೂಗತಲೋಕದ ಸಂಪರ್ಕ ಮಾಡುತ್ತಾನೆ. ಈ ವ್ಯವಹಾರವು ಮುಂದೊಂದು ದಿನ ಹುಲಿವೇಷಕ್ಕಾಗಿ ಬಣ್ಣ ಬಳಿಸಿಕೊಳ್ಳುತ್ತಿದ್ದ ಭೈರ ಶೆಟ್ಟಿಯ ಹತ್ಯೆಯಲ್ಲಿ ಅಂತ್ಯವಾಗುತ್ತದೆ. ಆ ಸಮಯ ಭಾನು ಶೆಟ್ಟಿ ಸಣ್ಣ ಹುಡುಗ. ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಭಾನು ಶೆಟ್ಟಿಗಿತ್ತು. ಕೆಲವು ಕಡೆ ಹೀಗೂ ನಡೆದೀತಾ ಅನಿಸುವಷ್ಟು ಕಥೆ ದಾರಿ ತಪ್ಪಿದಂತೆ ಅನಿಸಿದರೂ, ವಿಧಾನ ಸಭಾ ಚುನಾವಣೆಯ ಫಲಿತಾಂಶ ಮತ್ತು ಹುಲಿವೇಷಗಳು ಸಮಾನಾಂತರ ರೇಖೆಗಳಲ್ಲಿ ಚಲಿಸಲಾರಂಬಿಸುತ್ತವೆ. ಭಾನು ಶೆಟ್ಟರ ತಂಡಕ್ಕೆ ಬರುವ ಹೊಸ ಹುಡುಗರು, ಹುಲಿವೇಷಕ್ಕೆ ಪೈಂಟಿಂಗ್ ಮಾಡುವ ಕ್ರಮಗಳು, ನಲಿಕೆಯ ರೀತಿ ಮುಂತಾದ ಸಣ್ಣಪುಟ್ಟ ಸಂಗತಿಗಳು ಕಥೆಗೆ ರೋಚಕತೆ ತಂದು ಕೊಡುತ್ತವೆ. ಸ್ವಲ್ಪ ದೀರ್ಘವಾದ ಕಥೆಯೆಂದು ಕಂಡು ಬಂದರೂ ಎಲ್ಲೂ ಬೋರ್ ಹೊಡೆಯುವುದಿಲ್ಲ. ಎರಡು ಸಂಗತಿಗಳು ಏಕಕಾಲದಲ್ಲಿ ಚಲಿಸುತ್ತಲೇ ಇದ್ದು, ಕೊನೆಗೆ ಹೇಗೆ ಅಂತ್ಯ ಕಾಣ ಬಹುದು ಎಂಬುದು ಕುತೂಹಲ ಕೆರಳಿಸುತ್ತಾ ಹೋಗುತ್ತದೆ. 

ಹಾಗೇ ಉಳಿದ ಕಥೆಗಳಾದ ತಕ್ಷಕನ ದೋಷ, ಅವಳು, ಅವನು ಮತ್ತು ಕೋಣೆ, ಬಂಗಾರದ ಬಳೆ, ನಿ.ಹೀ.ಸಂ. ಕೀರ್ತಿ ಟ್ರಾವೆಲ್ಸ್ ಎಲ್ಲವೂ ಚೆನ್ನಾಗಿವೆ. ನಿ.ಹೀ.ಸಂ. ಅಂದರೆ ನಿದ್ರಾ ಹೀನರ ಸಂಘ ಕಥೆ ಸ್ವಲ್ಪ ಕಲ್ಪನೆಗೆ ಮಿಗಿಲಾಗಿದ್ದರೂ ಹೀಗೆ ಆದರೂ ಆಗಬಹುದಲ್ವೇ ಎಂದು ನಾವೂ ನಿದ್ರೆ ಕೆಡಿಸಿಕೊಳ್ಳಬಹುದು. 

ನನಗೆ ವೈಯಕ್ತಿಕವಾಗಿ ಇಷ್ಟವಾದ ಕಥೆಯೆಂದರೆ ಅವಳು, ಅವನು ಮತ್ತು ಕೋಣೆ. ಸರಳವಾದ ಕಥೆ. ಕತ್ತಲಿನ ಕೋಣೆಯೊಳಗೆ ಸಿಕ್ಕಿ ಬೀಳುವ ಅವನು ಮತ್ತು ಸ್ವಲ್ಪ ಸಮಯದ ನಂತರ ಅದೇ ಕೋಣೆಯೊಳಗೆ ಮೊದಲೇ ಇದ್ದ ಅವಳು. ಸಣ್ಣದಾದ ಕೋಣೆ, ನೆಲದಲ್ಲಿ ನೀರು ಹಾಗೂ ಹೊರಗಡೆಯಿಂದ ಕೇಳಿ ಬರುತ್ತಿರುವ ಸದ್ದು. ಮೊದಲಿಗೆ ಕಟ್ಟಿ ಹಾಕಿದ್ದ ಕೈ ಕಾಲುಗಳು ನಿಧಾನವಾಗಿ ಬಿಡಿಸಲಾಗಿ, ಕೇವಲ ಒಂದು ಹಗ್ಗದಿಂದ ಬಂಧಿಸಲಾಗಿತ್ತು. ಆದರೆ ಕೋಣೆಯೊಳಗೆ ತಿರುಗಾಡಲು ಸಮಸ್ಯೆಯಿರಲಿಲ್ಲ. ಆ ಕೋಣೆಯೊಳಗೆ ಎಷ್ಟೇ ಸಮಸ್ಯೆಗಳಿದ್ದರೂ ಅವರಿಗೆ ನಿದ್ರೆ ಚೆನ್ನಾಗಿ ಬರುತ್ತಿತ್ತು. ಅವನು ಮತ್ತು ಅವಳ ನಡುವಿನ ಮಾತುಕತೆ, ‘ನಾವು ಆತ್ಮವಾಗಿದ್ದೇವಾ? ನಮ್ಮನ್ನು ನರಕಕ್ಕೆ ಹಾಕುತ್ತಾರಾ? ಅಥವಾ ಸ್ವರ್ಗಕ್ಕಾ? ನಾನು ನರಕ ನೀನು ಸ್ವರ್ಗವಾದರೆ ಏನು ಮಾಡುವುದು’ ಎಂಬ ಮನಸ್ಸಿನ ಹೊಯ್ದಾಟಗಳಿಂದ ಕಥೆ ಮತ್ತಷ್ಟು ರೋಚಕವಾಗುತ್ತಾ ಹೋಗುತ್ತದೆ. ಮುಂದೇನಾಯಿತು ? ಎಂದು ತಿಳಿಯಲು ನೀವು ಈ ಕಥೆಯನ್ನು ಓದಲೇ ಬೇಕು. ಇದೊಂದು ಅಪರೂಪದ ಶೈಲಿಯ ವಿನೂತನ ಕಥೆ.

ವಿಠಲ್ ಶೆಣೈ ಅವರು ನುರಿತ ಕಥೆಗಾರರಂತೆ ಕಥೆ ಹೆಣೆದಿದ್ದಾರೆ. ಬಹುತೇಕ ಕಥೆಗಾರರು ತಮ್ಮ ಕಥೆಗಳಲ್ಲಿ ಭಯಂಕರ, ಕ್ಲಿಷ್ಟಕರವಾದ ಪದಗಳನ್ನು ಬಳಸಿ ಓದುಗರ ಮೇಲೆ ಸವಾರಿ ಮಾಡುತ್ತಾರೆ. ಆದರೆ ವಿಠಲ್ ಶೆಣೈ ಅವರು ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಕೆಲವು ಆಡು ಭಾಷೆಗಳನ್ನು (ತುಳು ಭಾಷೆ), ಜನರ ವರ್ತನೆಗಳನ್ನು (ಕಂಡಕ್ಟರ್ ಪೆನ್ ಕಿವಿಗೆ ಸಿಕ್ಕಿಸುವುದು ಇತ್ಯಾದಿ) , ಪರಿಚಿತ ಸ್ಠಳ (ಬನಶಂಕರಿ, ಪಂಪ್ ವೆಲ್, ಹುಣಸೂರು ಇತ್ಯಾದಿ) ಬಳಸಿಕೊಂಡಿರುವುದು ಈ ಕಥಾ ಸಂಕಲನದ ಪ್ಲಸ್ ಪಾಯಿಂಟ್. ಓದಲು ಆಸಕ್ತಿ ಇಲ್ಲದವರೂ ಒಮ್ಮೆ ಈ ಪುಸ್ತಕ ಹಿಡಿದರೆ ಮುಗಿಸುವವರೆಗೆ ಏಳಲಾರರು ಎಂದು ಅನಿಸುತ್ತದೆ.

ಸುಮಾರು ೨೦೫ ಪುಟಗಳ ಈ ಪುಸ್ತಕವನ್ನು ವಿಠಲ್ ಶೆಣೈ ತಮ್ಮ ಪರಿವಾರದ ಸದಸ್ಯರಾದ ಪತ್ನಿ-ಮಕ್ಕಳಿಗೆ, ತಾಯಿ-ತಂದೆಯವರಿಗೆ, ಮೊದಲ ಆವೃತ್ತಿಯನ್ನು ಓದಿ ಪ್ರೋತ್ಸಾಹಿಸಿದ ನನ್ನ ಬಂಧು-ಮಿತ್ರರಿಗೆ ಅರ್ಪಿಸಿದ್ದಾರೆ.