ಹೂವು - ನೋವು (ಮಿನಿ ಕಥೆ)

ಹೂವು - ನೋವು (ಮಿನಿ ಕಥೆ)

ಅವಳೊಬ್ಬಳು ಗೃಹಿಣಿ. ಪತಿ ದೊಡ್ಡ ಹುದ್ದೆಯಲ್ಲಿದ್ದರು. ಮಗಳು ಕಾಲೇಜೊಂದರಲ್ಲಿ ಪದವಿ ಓದುತಿದ್ದಳು. ಪತಿ ಕಾರಿನಲ್ಲಿ ಕೆಲಸಕ್ಕೆ ತೆರಳಿದ ಮೇಲೆ ಮಗಳು ತನ್ನ ಸ್ಕೂಟರಿನಲ್ಲಿ  ಕಾಲೇಜಿಗೆ ಹೋಗುತಿದ್ದಳು. ನಂತರ ಅವಳು ಒಂಟಿಯಾಗುತಿದ್ದಳು. ತನ್ನ ಒಂಟಿತನವನ್ನು ನೀಗಲೆಂದು ಅವಳು ಮನೆಯ ಮುಂದೆ ಹೂವಿನ ಗಿಡಗಳನ್ನು ಬೆಳೆಸೋಣವೆಂದು ಆಲೋಚಿಸಿದಳು.  ಒಂದು ದಿನ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲ್ಲಿ ಇಟ್ಟುಕೊಂಡು ಮಾರುತಿದ್ದವನಿಂದ ನಾಲ್ಕೈದು ಹೂವಿನ ಕುಂಡಗಳನ್ನು ಖರೀದಿಸಿದಳು. ಯಾರೋ ಮನೆ ಕಟ್ಟಲು ಪೌಂಡೇಶನ್ ತೆಗೆಸುತಿದ್ದಲ್ಲಿಗೆ ಹೋಗಿ ಕೇಳಿ ಹಸಿಮಣ್ಣು ತಂದು ತುಂಬಿದಳು. ಮುಖ್ಯರಸ್ತೆಯ ಬದಿಯಲ್ಲಿ ಪಾಲಿತೀನ್ ಚೀಲದಲ್ಲಿ ಮಣ್ಣು ತುಂಬಿಸಿ ಬೆಳೆದು ಮಾರುತಿದ್ದ ನಾಲ್ಕೈದು ಹೂವಿನ ಸಸಿ ಖರೀದಿಸಿ ಜೋಪಾನವಾಗಿ ತಂದು ಕುಂಡಗಳಲ್ಲಿ ನೆಟ್ಟಳು. ಆ ಹೂವಿನ ಗಿಡಗಳಿಗೆ ಗೊಬ್ಬರ ತಂದು ಹಾಕಿ ಅವು ಸ್ವಲ್ಪವೂ ಬಾಡದಂತೆ ದಿನವೂ ನೀರು ಎರೆದು ಸಲಹಿದಳು.

ಒಂದು ದಿನ ನೆಟ್ಟಿದ್ದ ಕೆಂಪು ಗುಲಾಬಿಯ ಗಿಡವೊಂದು ಮೊಗ್ಗು ಬಿಟ್ಟದನ್ನು ಕಂಡು ಅವಳಿಗೆ ಅತೀವ ಸಂತೋಷವಾಯಿತು. ಅದು ಹೂವಾಗುವುದನ್ನೇ ಕಾಯತೊಡಗಿದಳು. ಒಂದು ದಿನ ಬೆಳಿಗ್ಗೆಯೇ ಎದ್ದು ಬಾಗಿಲು ತೆಗೆದವಳಿಗೆ ಕುಂಡದಲ್ಲಿದ್ದ ಗುಲಾಬಿ ಗಿಡದ ಮೊಗ್ಗು ಅರಳಿ ಸುಂದರ ಹೂವಾಗಿದ್ದು ಕಾಣಿಸಿ ಮನಸ್ಸಿಗೆ ಯಾವುದೋ ಅವರ್ಣನೀಯ ಸಂತೋಷವಾಯಿತು. ಅದೇ ಸಂತೋಷದಲ್ಲಿ ದಿನ ಕಳೆದಳು.
 
ಸಂಜೆ ಕಾಲೇಜಿನಿಂದ ಬಂದ ಮಗಳು ಅದನ್ನು ನೋಡಿರಬಹುದು ಏನಾದರೂ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು ಎಂದು ಕಾದಳು. ಆದರೆ ಮಗಳು ‘ಏನಮ್ಮಾ.. ತುಂಬಾ ಖುಷಿಯಾಗಿದೀಯಾ.. ಅಪ್ಪ ಏನಾದ್ರೂ ಹೊಸ ಸೀರೆ ತಂದುಕೊಟ್ರಾ..’ಎಂದು ಕೇಳಿದಾಗ ಮನಸ್ಸಿಗಾಗಿದ್ದ ಸಂತೋಷ ಅರ್ಧ ಇಳಿದಂತಾಯಿತು. ಇಂದಿನ ಮಕ್ಕಳು ಅವರದೇ ಗುಂಗಿನಲ್ಲಿರುತ್ತಾರೆ.. ಮಗಳು ಬಹುಶಃ ಹೂವನ್ನು ಗಮನಿಸಲಾರಳು ಎಂದು ಸಮಾಧಾನಪಟ್ಟುಕೊಂಡಳು.
 
ಮಗಳ ನಂತರ ಬಂದ ಪತಿರಾಯ ಇವಳ ಸಂತಸದ ಮುಖಚಹರೆ ಗಮನಿಸಿ ‘ಏನು ಅಮ್ಮಾವ್ರು.. ತುಂಬಾ ಖುಷೀನಲ್ಲಿರೋ ಆಗಿದೆ.. ಟೀವಿನಲ್ಲಿ ಯಾವುದಾದ್ರೂ ಒಳ್ಳೇ ಸೀರಿಯಲ್ ನೋಡಿರಬೇಕು..’ ಅಂದಾಗ ಅವಳಿಗೆ ಹೂವನ್ನು ಇವರೂ ನೋಡಿಲ್ಲವಲ್ಲ ಎಂದು ಬೇಸರವಾಯಿತು. ಅಷ್ಟರಲ್ಲಿ ಮಹಡಿಯಿಂದ ಕೆಳಗಿಳಿದ ಮಗಳು ‘ನಾನೂ ಅದೇ ಪ್ರಶ್ನೆ ಕೇಳಿದೆ ಅಪ್ಪಾ.. ಅಮ್ಮನ ಮುಖದಲ್ಲಿ ಈವತ್ತು ತುಂಬಾ ಖುಷಿ ಇದೆ..’ ಅಂದಳು.
 
ಅವಳು ಬಹುಶಃ ಇವರು ಇಬ್ಬರೂ ಹೂವನ್ನು ನೋಡಿಲ್ಲ ಎಂದುಕೊಂಡು ‘ಬನ್ನಿ.. ನಿಮಗಿಬ್ಬರಿಗೂ ನನಗೆ ಇಷ್ಟು  ಸಂತೋಷ ಯಾಕಾಗಿದೆ ಅಂತ ತೋರಿಸ್ತೀನಿ..’ ಎಂದು ಹೇಳಿ ಹೊರಗೆ ಕರೆದುಕೊಂಡು ಬಂದು ಕುಂಡದಲ್ಲಿ ಸೂರ್ಯನ ಸಂಜೆರಂಗನ್ನು ಪ್ರತಿಫಲಿಸುತ್ತಲಿದೆಯೇನೋ ಎನ್ನುವಂತೆ ನಳನಳಿಸುತಿದ್ದ  ಕೆಂಪು ಗುಲಾಬಿ ಹೂವನ್ನು ತೋರಿಸಿದಳು. ಮಗಳು ‘ ಅಯ್ಯೋ ಇಷ್ಟೇನಾ.. ಗಿಡ ಒಂದು ಹೂವು ಬಿಟ್ಟಿದ್ದಕ್ಕೆ ಇಷ್ಟೊಂದು ಖುಷಿಯಾಗುತ್ತಾ.. ನೀನು ತುಂಬಾ ಎಮೋಷನಲ್ ಕಣಮ್ಮಾ..’ ಎಂದು ಒಳಗೆ ಹೋದಳು. ಪತಿರಾಯ ಹೂವಿನ ಕಡೆಗೊಮ್ಮೆ ನೋಡಿ ‘ನಿನಗೆ ಇಷ್ಟು ಖುಷಿಯಾಗುತ್ತೆ ಅಂತ ಗೊತ್ತಾಗಿದ್ರೆ ಇಂತಹ ನೂರು ಹೂವು ತಂದು ಕೊಡುತಿದ್ದೆ.. ಮಾರ್ಕೆಟ್ನಲ್ಲಿ  ದಂಡಿಯಾಗಿ ಬಿದ್ದಿದಾವೆ..’ ಅಂದಾಗ ಅವಳಿಗೆ ಏನೆಂದು ಉತ್ತರಿಸಬೇಕೆಂದು ತಿಳಿಯದೆ ಸುಮ್ಮನೆ ಕೃತಕ ನಗೆ ನಕ್ಕಳು. ಹೃದಯಲ್ಲಿ ಮಾತ್ರ ಸಣ್ಣ ನೋವೊಂದು ಕಾಡುತಿತ್ತು.
 

Comments

Submitted by makara Sun, 04/28/2013 - 08:58

ತಿಮ್ಮಪ್ಪನವರೆ, ಕಥೆ ಚಿಕ್ಕದಾದರೂ ಚೊಕ್ಕವಾಗಿದೆ. ಈ ಕಥೆಯನ್ನು ಓದಿದ ಬಳಿಕ ನಿಮ್ಮ ಇನ್ನಷ್ಟು ಕಥೆಗಳತ್ತ ಹೊರಳಿ ನೋಡುವಂತಾಗಿದೆ.
Submitted by tthimmappa Sun, 04/28/2013 - 12:39

In reply to by makara

ಶ್ರೀಧರ‌ ಬ೦ಡ್ರಿಯವರಿಗೆ ನಮಸ್ಕಾರಗಳು ಮತ್ತು ಮಿನಿ ಕಥೆಯನ್ನು ಮೆಚ್ಚಿ ನನ್ನ‌ ಇತರ‌ ಕಥೆಗಳತ್ತ‌ ಹೊರಳಿ ನೋಡುವ೦ತಾಗಿದೆ ಎ೦ದಿರುವುದು ನನಗೆ ನಿಜಕ್ಕೂ ಸ೦ತಸ‌ ತ೦ದಿದೆ. ತಮಗೆ ನನ್ನ‌ ಅನ೦ತ‌ ಧನ್ಯವಾದಗಳು
Submitted by partha1059 Sun, 04/28/2013 - 10:21

ತಿಮ್ಮಪ್ಪನನವೆ ಬಾಷೆ ಸರಳ, ಆದರೆ ಕತೆಯ ಹಿಂದಿರುವ 'ವಿಷಯ' ವಾದರೊ ಇಂದಿನ ಪೂರ್ಣ ಪ್ರಪಂಚದ ಕತೆಯನ್ನ ಒಳಗೊಂಡಿದೆ ಅನ್ನಿಸುತ್ತೆ. ಗಿಡವನ್ನು ನೆಟ್ಟು ಪ್ರತಿದಿನ ಅದಕ್ಕೆ ನೀರು ಎರೆದು ಕಡೆಗೊಮ್ಮೆ ಒಂದು ಹೂ ಬಿಟ್ಟಾಗ ಮನುಜನಿಗೆ ಸಿಗುವ ಸಂತಸ ಅವನೊಬ್ಬನೆ ಅನುಭವಿಸಬಲ್ಲ, ಅದನ್ನು ಸೀರೆಗಾಗಲಿ, ಹಣಕ್ಕಾಗಲಿ ಹೋಲಿಸಲಾಗದು. ನಿಜಕ್ಕು ಗ್ರೇಟ್ !! ಸರಳ ವಿಷಯಗಳು ಸದಾ ಗ್ರೇಟ್ ಆಗಿರುತ್ತವೆ !
Submitted by tthimmappa Sun, 04/28/2013 - 12:47

In reply to by partha1059

ಹಿರಿಯ‌ ಕಥೆಗಾರರಾದ‌ ಪಾರ್ಥಸಾರಥಿ ಸಾರ್ ರವರಿಗೆ ನಮಸ್ಕಾರ‌...................ಗಳು. ಸರಳ ವಿಷಯಗಳು ಸದಾ ಗ್ರೇಟ್ ಆಗಿರುತ್ತವೆ ! ತಮ್ಮ‌ ಪ್ರತಿಕ್ರಿಯೆ ತು೦ಬಾ ಸ೦ತೋಷ‌ ನೀಡಿದೆ. ಹೃತ್ಪೂರ್ವಕ‌ ಧನ್ಯವಾದಗಳು ಸಾರ್..
Submitted by swara kamath Sun, 04/28/2013 - 14:58

ತಿಮ್ಮಪ್ಪ ನವರೆ ನಮಸ್ಕಾರಗಳು. ಈ ಕತೆ ನಾನು ನಿವೃತ್ತ ಜೀವನ ಸವೆಸಲು ಮನೆಯ ಹಿತ್ತಲಲ್ಲಿ ಬೆಳೆದ ತರಕಾರಿಯನ್ನು ಇತರರು ನೋಡಿ ಮಾತಾಡಿದ ಕ್ಷಣಗಳ ನೆನಪಾಯಿತು ಒಳ್ಳೆಯ ಹಾಗು ಮನಸ್ಸಿಗೆ ನಾಟುವಂತಹ ಮಿನಿ ಕಥೆ......ವಂದನೆಗಳು............ರಮೇಶ ಕಾಮತ್
Submitted by tthimmappa Sun, 04/28/2013 - 18:42

In reply to by swara kamath

ಹಿರಿಯರಾದ ರಮೇಶ‌ ಕಾಮತ್ ರವರಿಗೆ ನಮಸ್ಕಾರ‌............................. ...., ನಿಮ್ಮ ಅನುಭವದಂತೆ ಎಷ್ಟೋ ಬಾರಿ ನಮಗೆ ಸಂತೋಷ ನೀಡುವ ನಮ್ಮ ಕೆಲಸಗಳು ಇತರರಿಗೆ ನಿಕೃಷ್ಟವಾಗಿ ಕಾಣಿಸುತ್ತವೆ. ಮಿನಿಕಥೆಯನ್ನು ಮೆಚ್ಚಿರುವುದಕ್ಕೆ ತಮಗೆ ನನ್ನ ಅನಂತ ಧನ್ಯವಾದಗಳು...
Submitted by H A Patil Sun, 04/28/2013 - 21:08

ತಿಮ್ಮಪ್ಪ ರವರಿಗೆ ವಂದನೆಗಳು ' ಹೂವು ನೋವು ' ಕಥೆ ಸೊಗಸಾಗಿ ಮೂಡಿ ಬಂದಿದೆ, ಕಥೆಯ ಅಂತ್ಯ ತುಂಬಾ ಮಾರ್ಮಿಕವಾಗಿದೆ. ಕಥಾ ನಾಯಕಿಯನ್ನು ಅರಿಯಲು ಅವಳೊಂದಿಗೆ ಸುಧೀರ್ಘ ದಾಂಪತ್ಯ ನಡೆಸಿದ ಗಂಡನಿಗೆ ಮತ್ತು ತಾಯಿಯೊಟ್ಟಿಗೆ ಒಡನಾಡಿದ ಮಗಳಿಗೆ ಅರ್ಥವಾಗದುದು ಆಕೆಯ ಬದುಕಿನ ಒಂದು ವ್ಯಂಗ್ಯವೆ ಇಲ್ಲಾ ದುರಂತವೆ ? ಬದುಕಿನಲ್ಲಿ ಏಕಾಂಗಿಯಾಗುಳಿವ ಆಕೆಯ ಸ್ಥಿತಿಗೆ ನನ್ನ ಮರುಕವಿದೆ, ಒಳ್ಳೆಯ ಕಥೆ ನೀಡಿದ್ದಕ್ಕೆ ಧನ್ಯವಾದಗಳು..
Submitted by tthimmappa Sun, 04/28/2013 - 23:19

In reply to by H A Patil

ಹಿರಿಯ ಕಥೆಗಾರರೂ ಭಾವುಕ‌ ಕವಿಗಳೂ ಆದ‌ ನನ್ನ‌ ನೆಚ್ಚಿನ‌ ಹನುಮ೦ತ‌ ಪಾಟೀಲ‌ ಸಾರ್ ರವರಿಗೆ ನಮಸ್ಕಾರ‌, ಕೆಲವೊಮ್ಮೆ ಮುನುಷ್ಯನನ್ನು ಅವನಿಗೆ ಹತ್ತಿರವಾದವರೇ ಅರ್ಥ ಮಾಡಿಕೊಳ್ಫದಿರುವುದು ಬದುಕಿನ‌ ವಿಪರ್ಯಾಸಗಳಲ್ಲಿ ಒ೦ದು ಎ೦ಬುದು ನನ್ನ‌ ಅನಿಸಿಕೆ.. ತಮ್ಮ‌ ಮೆಚ್ಚುಗೆಯಿ೦ದ‌ ಸ೦ತಸವಾಗಿದೆ.. ಅನ೦ತ‌ ಧನ್ಯವಾದಗಳು ಸಾರ್..
Submitted by neela devi kn Mon, 04/29/2013 - 08:50

ತಿಮ್ಮಪ್ಪ ನವರಲ್ಲಿ ನಮಸ್ಕಾರಗಳು, ತಮ್ಮ ಕತೆಯ‌ ಒ0ದು ಬಾಗ‌ ನಾನೇ ಇರಬೇಕು ಯಾಕೆ0ದರೆ ಮನೆಯಲ್ಲಿ ಒ0ದು ಪುಟ್ಟ ಹೂ ಬಿಟ್ಟಗೂ ತು0ಬಾ ಸ0ತೋಷ‌ ಪಡುತ್ತೇನೆ ಕೀಳಲು ಮನ‌ ಬರುವುದಿಲ್ಲ. ತಮ್ಮ ಈ ಪುಟ್ಟ ಕತೆ ಮನದಾಳಕ್ಕೆ ಇಳಿಯುತ್ತದೆ ...... ನೀಳಾ