ಹೆಗ್ಗಣಗಳು ಹಾವುಗಳು ಕುರಿಗಳು

ಹೆಗ್ಗಣಗಳು ಹಾವುಗಳು ಕುರಿಗಳು

ಬರಹ

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಬೇಕೆಂಬುದೇ ಮಹದಾಸೆ.ಸರಕಾರದಿಂದ ಸುತ್ತೋಲೆ ಬಂದಿತ್ತು
"ಎಲ್ಲಾ ಹೆಗ್ಗಣಗಳನ್ನೂ ಈಗಿಂದೀಗಲೆ ನಿರ್ಮೂಲನ ಮಾಡುವ ಅಧಿಕಾರ ನಿಮಗೆ ವಹಿಸಲಾಗಿದೆ" ಸರಿ ಆತನ ದಂಡಯಾತ್ರೆ ಶುರುವಾಯ್ತು
ಮೊದಲು ಚಿಕ್ಕ ಪುಟ್ಟ ಕಛೇರಿಗಳಲ್ಲಿ ಕಾಣಸಿಗುತ್ತಿದ್ದ ಎಲ್ಲಾ ಇಲಿಗಳನ್ನು ಹಿಡಿದು ಹಾಕಿದ.ನಂತರ ದೊಡ್ಡ ಕಚೇರಿಗಲಲ್ಲಿ ಶಿಳ್ಳೇ ಹೊಡೆಯುತ್ತಿದ್ದ ಇಲಿಗಳನ್ನು
ಬಲೆಗೆ ಹಾಕಿಕೊಂಡ. ಪೇಪರ್‌ನಲ್ಲಿ ಈತನ ಬಗ್ಗೆ ಬಹು ಮೆಚ್ಚುಗೆಯ ಮಾತುಗಳು ಕಾಣಲಾರಂಭಿಸಿದವು. ಎಲ್ಲೆಲ್ಲೂ ಅವನದೇ ಮಾತು.ಬಹಳ ಬೇಗ ಪ್ರಸಿದ್ದಿಯಾದ
ಆತ ಮತ್ತಷ್ಟು ಹುರುಪುಗೊಂಡ.
ಹೆಗ್ಗಣಗಳ ಬೇಟೆಗೆ ಸಂಚು ಹಾಕಲಾರಂಭಿಸಿದ.
ಸಾಧ್ಯವಿದ್ದ ಕಡೆ ಎಲ್ಲಾ ಅಡಗು ಕ್ಯಾಮೆರಾ ಅಳವಡಿಸಿದ.
ಒಮ್ಮೆ ಒಂದು ಕಛೇರಿಯಲ್ಲಿ ಹೆಗ್ಗಣವೊಂದನ್ನು ಸ್ವತ: ಅಲ್ಲಿನ ಮೇಲಾಧಿಕಾರಿಯೊಬ್ಬರೇ ತಮ್ಮ ಬ್ಯಾಗಿನಿಂದ ತೆಗೆದು ಟೇಬಲ್ ಕೆಳಗೆ ಹಾಕುತ್ತಿದ್ದುದು ಕಂಡು ದಂಗಾದ.
ಮೊದಲು ಆ ಹೆಗ್ಗಣವನ್ನು ಹಿಡಿಯಲು ಯಾತ್ರೆ ಶುರು ಮಾಡಿದ . ಮೇಲಾಧಿಕಾರಿ ಹೆಗ್ಗಣದ ಸಮೇತ ಸಿಕ್ಕಿಹಾಕಿಕೊಂಡ.
ಹೀಗೆ ಹಲವಾರು ಹೆಗ್ಗಣಗಳ ಸಂಸಾರ ಬೆಳೆಯಲೆಂದೇ ತಮ್ಮ ಕಛೇರಿಯ ಎಲ್ಲಾ ಸಮಯವನ್ನು ಬಳಸಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ ನಂತರ ಒಂದೊಂದು ಕಛೇರಿಯನ್ನೂ
ಜಾಲಾಡಿ ಹೆಗ್ಗಣಗಳನ್ನೂ ಅವುಗಳ ಜೊತೆ ನೌಕರರನ್ನೂ ಪತ್ತೆ ಹಚ್ಚಲಾರಂಭಿಸಿದ
ಇಂತಹ ಸಮಯದಲ್ಲೇ ಮಂತ್ರಿಯೊಬ್ಬರಿಂದ ಬುಲಾವ್ ಬಂತು
"ಬರೀ ಇಲಿಗಳನ್ನು ಹಿಡಿಯಿರಿ ಸಾಕು ..ಹೆಗ್ಗಣಗಳ ತಂಟೆ ನಿಮಗೇಕೆ . "ಎಂದರು
"ತಾನು ಬಂದಿರುವುದೇ ಹೆಗ್ಗಣಗಳ ನಿರ್ಮೂಲನೆಗಾಗಿ " ಎಂದು ಸಮರ್ಥಿಸಿಕೊಂಡ
"ಹೆಗ್ಗಣಗಳ ನಿರ್ಮೂಲನೆ ಸಾಧ್ಯಾನೆ ಇಲ್ಲಾರಿ. ಇಲಿಗಳಿರೋವರೆಗೆ ಹೆಗ್ಗಣಗಳಿರುತ್ತವೆ. ಹೆಗ್ಗಣಗಳಿದ್ದರೆ ತಾನೆ ಹಾವುಗಳಿಗೆ ಹಬ್ಬ?" ಮಂತಿ ತನ್ನ ಕನ್ನಡಕದಿಂದ ಕಣ್ಣರಳಿಸಿದ
"ಸಾರ್ ಆ ಜವಾಬ್ದಾರಿ ನಾನು ತಗೋತೀನಿ" ಆತ್ಮ ವಿಶ್ವಾಸದಿಂದ ನುಡಿದ
"ಇಲ್ಲವಯ್ಯ ಆಗೊಲ್ಲ ನಿಂಗೆ ಜವಾಬುದಾರಿ ಕೊಡೋಕೆ ಇಲ್ಲಿ ಯಾರೂ ಕಾದು ನಿಂತಿಲ್ಲ . ಬೇಕಿದ್ದರೆ ನೀವು ಹೆಗ್ಗಣಗಳ ರಾಜನೆನಿಸಿಕೊಳ್ಳಿ. ಈಗಾಗಲೇ ಇಲಿಗಳನ್ನು ಹಿಡಿಗು ಬಹಳ
ಪ್ರಸಿದ್ದರಾಗಿದ್ದೀರಾ" ಎಂದು ಅವನೆಡೆ ಸೂಟ್‌ಕೇಸ್ ಒಂದನ್ನು ಎಸೆದರು
ಅದಕ್ಕಾಗಿಯೇ ಕಾದುನಿಂತಿದ್ದವನಂತೆ ಅವನು ಸೂಟ್‌ಕೇಸ್ ತೆಗೆದುಕೊಂಡ. ಮಂತ್ರಿಯ ಮನೆಯಲ್ಲಿ ತುಂಬಾ ಹೆಗ್ಗಣಗಳು ಓಡಾಡುತ್ತಿದ್ದವು ಜೊತೆಗೆ ಇಲಿಗಳು ಅವುಗಳನ್ನೆಲ್ಲಾ
ನುಂಗುವ ಹಾವಾಗಿ ಮಂತ್ರಿ ಕಂಡ.
" ನಾನು ಯಾವಾಗ ಹೆಗ್ಗಣಗಳ ರಾಜ ಆಗೋದು ಸಾರ್?" ಸೂಟಕೇಸ್ ತೆಗೆಯುತ್ತಾ ಕೇಳಿದ
"ಈಗಲೇ ......... ಮುಂದಿನ ಹೆಗ್ಗಣಗಳ ಎಲೆಕ್ಷನ್‌ನಲ್ಲಿ ನೀವೂ ನಿಲ್ಲಿ. ಟಿಕೆಟ್ ನಮ್ಮ ಹಾವುಗಳ ಪಾರ್ಟಿಯಿಂದ ಕೊಡಿಸ್ತೇನೆ"

ವಾರವೊಂದು ಕಳೇದಿತ್ತು
ಆ ಹೆಗ್ಗಣ ನಿರ್ಮೂಲನಾಧಿಕಾರಿ ಹೆಗ್ಗಣಗಳ ಜೊತೆ ಮೆರವಣಿಗೆ ಹೊರಟಿದ್ದ ವೋಟು ಕೇಳಲು. ಎಲ್ಲೆಲ್ಲೂ ಹೆಗ್ಗಣಗಳು ಹಾವುಗಳು ಇಲಿಗಳು
ಇಕ್ಕೆಲಗಳಲ್ಲಿ ಆ ಹೆಗ್ಗಣಗಳ ಜಾತ್ರೆಯನ್ನು ಕುರಿಗಳು ಅಚ್ಚರಿಯ ಕಣ್ಣಿಂದ ನೋಡುತ್ತಿದ್ದವು.

-----------------------------------------------------------------------------------