ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 2)

ಇದರಲ್ಲಿ ಯಾವ ಮನುಷ್ಯರು, ಯಾವ ದೇವರು ಏನು 'ಮಾಡಲಾಗದು' ಎನ್ನುವ ಪದ ಉಚ್ಚರಣೆ ಮಾಡುವ ಹೊತ್ತಿಗೆ ಒಂದು ಹೇಜ್ಜೇನು ಹುಳು ಎಲ್ಲಿತ್ತೊ?? ಎಲ್ಲಿಗೆ ಹೋಗುತ್ತಿತ್ತೋ ಒಂದು 'ಮಾಡಲಾಗದು' ಪದದ 'ಮಾ' ಉಚ್ಚರಣೆಗೆ ಸರಿಯಾಗಿ ನನ್ನ ತುಟಿಯ ಮಧ್ಯೆ ಸಿಕ್ಕಿತ್ತು. ಆಕಸ್ಮಿಕವಾಗಿ ಮಾತನಾಡುವಾಗ ಬಾಯಿಗೆ ಬಂದ ಆ ಹುಳುವನ್ನು ನಾನೇ ಕಚ್ಚಿ ನುಂಗುವಂತೆ ಬಾಯಿಯನ್ನು ಲಬಕ್ಕನೇ ಮುಚ್ಚಿದ್ದರಿಂದ ಪಾಪ ಆ ಹುಳುವಾದರೂ ಏನುಮಾಡಬೇಕು? ನನ್ನ ಬಾಯಿಯ ಘರ್ಷಣೆಗೆ ಸಿಕ್ಕ ಜೇನುಹುಳು ಕೆಳತುಟಿಯ ಒಳಭಾಗಕ್ಕೆ ಕಚ್ಚಿಯೇ ಬಿಟ್ಟಿತು. ಅದರ ವಿಷದ ಮುಳ್ಳೊಂದನ್ನು ಚಟಾರನೇ ಚುಚ್ಚಿತು. ಜೇನುಹುಳುಗಳು ತನ್ನ ಹಿಂಬದಿಯಿಂದ ವಿಷದ ಕೊಂಡಿಯನ್ನು ಚುಚಿದಾಗ ಒಂದು ರೀತಿಯ ರಾಸಾಯನಿಕ ಸ್ರವಿಸುವುದರಿಂದ ಅದು ಒಂದು ತರ ವಾಸನೆ ಬರುತ್ತದೆ. ಆದರೆ ತತ್ಕ್ಷಣ ಬಂದೊದಗಿದ ಅಘಾತಕ್ಕೆ ಥೂ... ಥೂ... ಎನ್ನುತ್ತಾ ಒಮ್ಮೆಲೆ ಬ್ರೇಕ್ ಹಾಕಿದೆ.
ಯಾಕ್ರಿ ಏನಾಯಿತು? ಏನಾಯಿತ್ರಿ..? ಎಂದು ಕುಮುದಾ ಗಾಬರಿಯಾಗಿ ಕೇಳಿದಳು. ಯಾವುದೋ ಜೇನುಹುಳ ಕಚ್ಚಿತು.. ಎಂದು ಬೈಕಿನ ಮಿರರ್ ನೋಡುತ್ತಾ ಆ ಮುಳ್ಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದೆ. ಕುಮುದಾ: ಜೇನುಹುಳನಾ? ನೋಡ್ರೀ... ಜೇನುಹುಳನೋ ಬೇರೆ ಹುಳನೋ?
ಜೇನುಹುಳನೇ ಕಣೇ... ಜೇಬಲ್ಲಿದ್ದ ಮೊಬೈಲ್ ತೆಗೆದು ಮೊಬೈಲ್ ಟಾರ್ಚ್ on ಮಾಡಿ ನಾಲಿಗೆಯಿಂದ ಒಳ ತುಟಿ ಸವರಿಕೊಂಡು ನೋಡಿದರೆ ಅಲ್ಲೊಂದು ತರಚು ತರಚಾದ ವಸ್ತು ಅಡ್ಡಬಂತು. ನೋವು ಆಗಿರುವ ಸ್ಥಳವನ್ನು ಸೂಚಿಸುತ್ತಿತ್ತು. ಮುಳ್ಳನ್ನು ಕುಮುದಾ ಉಗುರುಗಳಿಂದ ಕಿತ್ತು ತೆಗೆದಳು.
ನನಗೆ ಜೇನುಹುಳುಗಳು ಕಚ್ಚಿದ್ದು ಹೊಸತೇನಾಗಿರಲ್ಲಿಲ್ಲ... ಇದಕ್ಕೂ ಮುನ್ನ ಆಗೊಂದು ಈಗೊಂದರಂತೆ ಹೆಚ್ಚು ಕಡಿಮೆ ಸಾವಿರಾರು ಹುಳುಗಳು ಕಚ್ಚಿದ್ದಾವೆ. ಆದರೆ ಹೆಜ್ಜೇನು ಹುಳುವಿನಿಂದ ಕಚ್ಚಿಸಿಕೊಂಡ ಅನುಭವ ನನಗೆ ಇರಲಿಲ್ಲ. ಆ ದಿನವೆಲ್ಲಾ ಉಪವಾಸ ಇದ್ದ ಪರಿಣಾಮವೋ ಅಥವಾ ನಾನು ಜೇನು ಕಚ್ಚಿಸಿಕೊಳ್ಳದೇ ಅನೇಕ ವರ್ಷಗಳಾಗಿದ್ದು ಜೇನಿನ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ನನ್ನಲ್ಲಿ ಕಡಿಮೆ ಆಗಿತ್ತೋ ಗೊತ್ತಿಲ್ಲ. ಕ್ಷಣಾರ್ಧದಲ್ಲಿ ತುಟಿಯೆಲ್ಲಾ ತುರಿಸತೊಡಗಿತು. ಮೊದಲೇ ಹೊಟ್ಟೆ ಹಸಿವಿನಿಂದ ಕಂಗೆಟ್ಟ ಹೊಟ್ಟೆಯಲ್ಲಿ ಸಂಕಟದ ತೀವ್ರತೆ ಹೆಚ್ಚಾಗಿ ಸಿಹಿತಿಂದಾಗ ದವಡೆಯ ಗೋಡೆಗಳು ರವೆ ರವೆಯ ತರಹ ಒರಟು ಒರಟಾದಂತೆ ದದ್ಧರಿಸಿದಂತಾಯಿತು. ಒಂದು ಕ್ಷಣ ಸುಸ್ತಾಗಿ ನರಳಿದಂತೆ ಆಯಿತು. ಯಾವ ದೇವಸ್ಥಾನವು ಬೇಡ ಇಲ್ಲೇ ರೋಡಲ್ಲಿ ನಮಸ್ಕಾರ ಮಾಡುತ್ತೀನಿ ನಡೆಯಿರಿ ಎಂದು ಕುಮುದಾ ಹೇಳಿದಳು.
ಮನೆಗೆ ಹೋಗಲು ಬೈಕ್ ಹತ್ತಿದ ಮೇಲೆ ಇಲ್ಲೇ ಯಾವುದಾದರೂ ಮೆಡಿಕಲ್ ಶಾಪ್ ಲ್ಲಿ ಮಾತ್ರೆ ಇಂಜೆಕ್ಷನ್ ಏನಾದರೂ ಇದ್ದಾವೇನೋ ಕೇಳಿ ಎಂದಳು... "ಹೇ ನಡೀ... ಜೇನು ಹುಳಕ್ಕೆ ಯಾವ ಮಾತ್ರೆ?? ಯಾವ ಇಂಜೆಕ್ಷನ್ ?? ಇಂತಹವು ಅದೆಷ್ಟೋ ಹುಳುಗಳು ಕಚ್ಚಿಸಿಕೊಂಡಿದ್ದೇನೆ. ಇಂಜೆಕ್ಷನ್ ಬೇಡ ಏನು ಬೇಡ ಸರಿ ಆಗತ್ತೆ ನಡೀ... "ಅಂತೇಳಿ ಇವಳ ಮಾತು ಕೇಳದೇ ಮೆಡಿಕಲ್ ಶಾಪ್ ಗೆ ಹೋಗದೇ ನೇರವಾಗಿ ಮನೆಗೆ ಬಂದೆವು. ಮನೆಗೆ ಬಂದ ಮೇಲೆ ದಿನಾಪೂರ ಬಿಸಿಲ ಬೆವರಿಗೆ ಮೈಯೆಲ್ಲಾ ಅಂಟಾಗಿ ಕಸಿವಿಸಿಯಾಗಿ ಸ್ನಾನವನ್ನೂ ಮಾಡಿದೆ. ಮೊದಲೇ ಬೇಸಿಗೆ... ಟ್ಯಾಪ್ ಲ್ಲಿ ಬರುತ್ತಿದ್ದ ನೀರು ಉಗುರುಬೆಚ್ಚಗಿಂತ ತುಸು ಹೆಚ್ಚೇ ಬಿಸಿಯಾಗಿತ್ತು. ಜೇನಿನ ವಿಷ ತುಂಬಿದ ತುಟಿಗಳು ತುರಿಸುತ್ತಿದ್ದುದರಿಂದ ಬಿಸಿ ನೀರನ್ನು ಬಾಯೊಳಗೂ ಹಾಕಿ ಎರಡ್ಮೂರು ಬಾರಿ ಮುಕ್ಕುಳಿಸಿದೆ. ತಡಮಾಡದೇ ಹಸಿದ ಹೊಟ್ಟೆಗೆ ಪಾರ್ಸೆಲ್ ತಂದ ಊಟವನ್ನು ಬಾಯಿಗೆ ಹಾಕಿಕೊಂಡೆವು. ಊಟ ಮಾಡಿ ಮುಗಿಸುವ ಅಷ್ಟೊತ್ತಿಗೆ ಕೆಳತುಟಿ ಇದ್ದ 'ನಾರ್ಮಲ್' ಗಿಂತಲೂ 'ಮೂರ್ನಾಲ್ಕು ಪಟ್ಟು'ದೊಡ್ಡದಾಗಿ ವಿಕಾರವಾಗಿ ಹೋಯಿತು.
ಹಾಗೆ ಹಾಸಿಗೆಯಲ್ಲಿ ಬಿದ್ದುಕೊಂಡು ಹತ್ತಿಪ್ಪತ್ತು ನಿಮಿಷ ಮಾತಾಡುತ್ತಾ ದಿನದ ಸುಸ್ತಿಗೆ ಒಂದರ್ಧ ಗಂಟೆ ಒಂದು ಜೊಂಪು ನಿದ್ದೆ ಹತ್ತಿತು.. ಬಹುಶಃ ಬಿಸಿ ನೀರು ಬಾಯೊಳಗೆ ಹಾಕಿದ್ದಕ್ಕೂ, ಊಟವೂ ಸ್ವಲ್ಪಮಟ್ಟಿಗೆ ಬಿಸಿ ಇದ್ದುದರಿಂದಲೂ ಏನೋ ತುಟಿಗಳಿಗೆ ಬಿಸಿ ಮಾಡಿದ್ದರಿಂದ ತುಟಿಯ ನರಗಳು ಚುರುಕು ಆಗಿ ಸುಮ್ಮನೇ ಇದ್ದ ಸುಪ್ತ ನರಗಳೆಲ್ಲಾ active ಆಗಿ ಜೇನಿನ ವಿಷ ವ್ಯಾಪಿಸಿ ಬಾವು ಎರಡೂ ಕೆನ್ನೆಗಳಿಗೂ, ಮೇಲ್ದುಟಿಗೂ ಹಬ್ಬಿತು. ಕೆಳತುಟಿಯಂತೂ ನಿರಂತರವಾಗಿ ಬಾವುತ್ತಲೇ ಬಂದು ಏನೋ ನೋವು ಅಧಿಕ ಎನಿಸಿ ಎಚ್ಚರವಾಯಿತು. ಎದ್ದೋಗಿ ಮಿರರ್ ನೋಡಲು ಆಗದೇ ಸೆಲ್ಪಿ ತೆಗೆದುಕೊಂಡು ನೋಡಿದರೆ ನನ್ನ ಮುಖವನ್ನು ನಾನೇ ನೋಡಿ ಹೆದರಿಕೊಳ್ಳುವಷ್ಟು ವಿಕಾರವಾಗಿ ಆಯಿತು. ನನ್ನ ಕುರೂಪವನ್ನು ನೋಡಿ ಹೆದರಿದ ಕುಮುದಾ ಮೆಡಿಕಲ್ ಶಾಪ್ ಅಲ್ಲಿ ಹೋಗಿ ಏನಾದರೂ ಔಷದೀ ತಗೊಂಡು ಬರ್ರಿ ಅಂದರೂ ಬರಲಿಲ್ಲ. ನಡೀರೀ ಈಗಲಾದರೂ ಆಸ್ಪತ್ರೆಗೆ ಹೋಗೋಣ... ಎಷ್ಟೊಂದು ದಪ್ಪ ಆಯಿತಲ್ಲಾ?? ಸುಮ್ಮನೇ neglect ಮಾಡೋದು ಬೇಡ ಆಸ್ಪತ್ರೆಗೆ ಹೋಗೋಣ ಎಂದು ಹೇಳಿದಳು.
ಏನು ಆಗಲ್ವೇ... ಜೇನು ಹುಳುಗಳು ಕಚ್ಚಿಸಿಕೊಂಡು ನನಗೆ ಅಭ್ಯಾಸ ಇದೆ. ಇನ್ನೂ ಒಂದೆರಡು ಗಂಟೆಗಳಲ್ಲಿ ಸರಿ ಆಗತ್ತೆ ಎಂದು ಹೇಳಿದೆ. ನನ್ನ ಪ್ರತಿಕ್ರಿಯೆಗೆ ಸಮಾಧಾನಗೊಳ್ಳದ ಕುಮುದಾ ಆಸ್ಪತ್ರೆಗೆ ಹೋಗಲೇಬೇಕೆಂದು ಹಠ ಹಿಡಿದಳು. ಎಲ್ಲರೂ ಹೋಗೋಣ ಎಂದು ಸಿದ್ದವಾದೆವು. ಅದಾಗಲೇ ರಾತ್ರಿ 11-30 ಆಗಿದ್ದರಿಂದ ಮಗಳು ಬೇರೆ ಮಲಗಿದ್ದುದರಿಂದ ನಾನೊಬ್ಬನೇ ಹೋಗಿ ಬರುವೆ ಎಂದು ಒಂದು ಲುಂಗಿ ಜೇಬಿಲ್ಲದ ಟೀಷರ್ಟ್ ನಲ್ಲೇ ಮುಖಕ್ಕೆ ಒಂದು ಮಾಸ್ಕ್ ಹಾಕಿಕೊಂಡು ಹೊರಟು ಜಿಲ್ಲಾ ಆಸ್ಪತ್ರೆಯ OPD EMERGENCY ಕಡೆ ಹೋದೆ. ಚೀಟಿ ನೋಂದಣಿ ಅಂತಲೇ ಹನ್ನೆರಡು ಗಂಟೆ ಆಗಿ ಹೋಯಿತು. ಕರೋನಾಕ್ಕೆ ಸಂಬಂಧಿಸಿದ ಗಂಟಲು issue ಗಳಾಗಿದ್ದರೆ ಮೊದಲು ಅವರು ಕರೋನಾ ಟೆಸ್ಟ್ ಮಾಡಿಸಬೇಕಾಗಿತ್ತು. ನನ್ನದು ತುಟಿಯು ಮಾತ್ರ ಊದಿಕೊಂಡಿದ್ದರಿಂದ ನಾನು ಕರೋನಾ ಗುಣಲಕ್ಷಣಗಳ ಸಾಲಿಗೆ ಸೇರಿಸದೇ ನನಗೆ ಡಾಕ್ಟರ್ ಬಂದು ನೋಡುವರು ಎಂದು ನನ್ನನ್ನು ಕುಳಿತು ಕಾಯಲು ಹೇಳಿದರು.
ಅಲ್ಲಿದ್ದ ನರ್ಸ್ ಡಾಕ್ಟರ್ ಗಳೆಲ್ಲಾ ಮೆಡಿಕಲ್ ವಿದ್ಯಾರ್ಥಿಗಳೇ.... ನರ್ಸ್ಗಳೂ ಕೂಡ ಟ್ರೈನಿಂಗ್ practitioner ಆಗಿದ್ದರು. ಸೀನಿಯರ್ ಗವರ್ನಮೆಂಟ್ ಡಾಕ್ಟರ್ ಗಳು ಇರಬೇಕಾಗಿತ್ತಾದರೂ ಹಾಜರಿಯಲ್ಲಿ ಮಾತ್ರ ಹಾಜರಿದ್ದು ಮಧ್ಯರಾತ್ರಿ ಹನ್ನೆರಡು ಒಂದು ಗಂಟೆಯಲ್ಲಿ ಅವರೆಂದು, ಯಾರಿಗೆ ಸಿಗಬೇಕು? ಜ್ಯೂನಿಯರ್ ಡಾಕ್ಟರ್ ನರ್ಸ್ ಗಳಲ್ಲೇ ಸೀನಿಯರ್ ತರ ಕೆಲವರು Act ಮಾಡುತ್ತಿದ್ದರು.
(ಇನ್ನೂ ಇದೆ)
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ