ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 3)

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 3)

ನನಗೆ ಬಿ ಪಿ ಎಲ್ಲಾ ಚೆಕ್ ಮಾಡಿದ ಮೇಲೆ ಒಂದು ಬೆಡ್ ಮೇಲೆ ಕುಳಿತಿದ್ದೆ. ಇಪ್ಪತ್ತಾರು ಇಪ್ಪತ್ತೆಂಟು ವಯಸ್ಸಿನ ಒಬ್ಬ ಡಾಕ್ಟರೋ ಅಥವಾ ನರ್ಸೋ ಗೊತ್ತಾಗಲಿಲ್ಲ. ಕಲರ್ ಡ್ರೆಸ್ ಹಾಕಿದ್ದರು ಕತ್ತಲ್ಲಿ/ ಕೈಯಲ್ಲಿ ಸ್ಟೆತಾಸ್ಕೋಪ್ ಇರಲಿಲ್ಲ. ಅವರ ಜೊತೆಗೆ ಒಂದಿಬ್ಬರು ಮೂವರು ಭಾವಿ ವೈದ್ಯರು ನನ್ನ ಬಳಿ ಬಂದರು. ಅದರಲ್ಲೊಬ್ಬ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು...

 ಏನಾಯ್ತಪ್ಪ...?

ಮಾಸ್ಕ್ ಕೆಳಗೆ ಸರಿಸಿ ಮೇಡಂ ಜೇನು ಹುಳ ಕಚ್ಚಿದೆ ಮೇಡಂ ಎಂದೆ....

ಹ್ಹಾ.... ಇಷ್ಟೊತ್ತಲ್ಲಿ ಜೇನು ಹುಳ ಹೇಗೆ ಕಚ್ಚಿತು...?

ಈಗ ಕಚ್ಚಿದ್ದಲ್ಲ .. ಏಳೂವರೆ-ಎಂಟುಗಂಟೆಗೆ ಕಚ್ಚಿದೆ... ಬೈಕಲ್ಲಿ ಬರುವಾಗ ಆಕಸ್ಮಿಕವಾಗಿ ಬಾಯಿಗೆ ಅಡ್ಡ ಬಂದು ಕಚ್ಚಿತು ಎಂದೆ...

Glouse ಹಾಕಿದ ಕೈಯಲ್ಲಿ ತುಟಿಯ ಮುಟ್ಟಿನೋಡಿ ಜೇನು ಕಚ್ಚಿರುವ ಜಾಗದಲ್ಲಿ ಒಂದು sting ಇರತ್ತೆ ಅದು ತೆಗೆಯಬೇಕು ಎಂದು ಹುಡುಕಾಡುತ್ತಿದ್ದರು...

ಮೇಡಂ ಮುಳ್ಳಿಲ್ಲ... ತೆಗೆದಿದ್ದೇನೆ .. ಈ swelling ಗೆ ಏನಾದರೂ ಕೊಡಿ.. Sweling ಕಡಿಮೆ ಮಾಡಿ ಅಂದೆ...

ಪಕ್ಕದಲ್ಲೆ ನಿಂತಿದ್ದ ಆ ನರ್ಸೋ ಡಾಕ್ಟರೋ "ನಿಮಗೆ ಮದುವೆ ಆಗಿತಾ?? ಅಂದಳು...

'ಹ್ಞೂಂ ಮೇಡಂ..' ಎಂದು ಗೋಣು ಹಾಕಿದೆ...

"ಹಂಗಾದರೆ ನೀನು ಯಾವುದೋ ಮಾತ್ರೆ ತಗೊಂಡಿದ್ದೀಯಪ್ಪ.. ಅದರ ರಿಯಾಕ್ಷನ್ ಇದು... ಹೌದಾ ಅಲ್ಲವಾ ಸರಿಯಾಗಿ ಹೇಳಬೇಕು... ಏನೇನೋ ಮಾತ್ರೆ ತಗಳಾದು ರಿಯಾಕ್ಷನ್ ಮಾಡಿಕೊಂಡು ಬರೋದು... ತಗ.. ಈ ಮಾತ್ರೆ ತಗಂಡ್ ಹೋಗು ಬೆಳಕು ಹರಿಯುವಷ್ಟೊತ್ತಿಗೆ ಸರಿಯಾಗತ್ತೆ" ಎಂದು ಒಂದು ಚೀಟಿಯನ್ನು ನನ್ನ ಕೈಗಿತ್ತಳು. ನನ್ನ ಪ್ರಾಬಲಮ್ ಗೂ ಅವರು ಅಸಂಬದ್ದ ಮಾತಾಡಿದ್ದಕ್ಕೂ ಆಯಮ್ಮ ಏನೋ ಮದುವೆ -ಮುಂಜಿ, ಮಾತ್ರೆ-ಗೀತ್ರೆ ಏನೇನೋ ಹೇಳಿದ್ದು ನನ್ನನ್ನು ಕೆರಳಿಸಿತು.

ಬಾವು ಬಂದ ತುಟಿಗಳನ್ನು ನಾನು ತೆರೆದು ಮಾತಾಡಿದರೆ ಪದಗಳ ಉಚ್ಚಾರಣೆಯನ್ನು ಸರಿಯಾಗಿ ಮಾಡಲಾಗುತ್ತಿಲ್ಲ. ಆದರೂ ಬಾಯ್ದೆರೆದು "ರೀ ಮೇಡಂ... ನಾನು ಏನೋ ಪ್ರಾಬಲಮ್ ಹೇಳಿದರೆ ನೀವು ಏನೋ ಹೇಳಿ ಯಾವುದಕ್ಕೋ ಮಾತ್ರೆ ತಗೋಳಿ ಅಂತೀರಲ್ರೀ...? ಇದು ಜೇನು ಹುಳವೇ ಕಚ್ಚಿದೆ... ಈ swelling ಗೆ ಟ್ರೀಟ್ಮೆಂಟ್ ಕೊಡ್ರಿ" ಎಂದು ಜೋರಾಗಿಯೇ ಮಾತಾಡಿದೆ.

ನಾನು ಮಾತಾಡಿದ force ಗೆ ಕೆಲವರು ನಾನು ಹೇಳುವುದು ನಂಬಿದಂತೆ ಕಾಣಿಸಿತಾದರೂ ಆ ನರ್ಸೋ ಡಾಕ್ಟರೋ ಆಯಮ್ಮ ಮಾತ್ರ ನಾನು ಯಾವುದೋ ಮಾತ್ರೆಯನ್ನೇ ತಗೊಂಡಿದ್ದೀನಿ.. ಅಂತಲೇ ವಾದಿಸುತ್ತಿದ್ದಳು. ಮೇಡಂ ಜಾಸ್ತಿ ಮಾತಾಡಬೇಡಿ ನನಗೆ swelling ಗೆ ಟ್ರೀಟ್ಮೆಂಟ್ ಕೋಡಿ ಅಂತ ಕೇಳಿದ್ದಕ್ಕೆ "ಡಾಕ್ಟರ್‌, ನರ್ಸ್ ನಾವಿಲ್ಲಿದ್ದೀವಿ..‌ ನಮಗೆ ಗೊತ್ತು ಯಾವುದಕ್ಕೆ ಯಾವ ಟ್ರೀಟ್ಮೆಂಟ್ ಕೊಡಬೇಕು ಅಂತಾ..." ಎಂದು ಗೊಣಗುತ್ತಿದ್ದಳು...

ಮೇಡಂ ನಾನು ಜೇನಿನ ವಿಷಯದಲ್ಲಿ ಒಂಥರಾ ಡಾಕ್ಟರೇಟ್ ಮಾಡಿದ್ದೀನಿ ಆದರೆ ಸರ್ಟಿಫಿಕೇಟ್ ಇಲ್ಲ... ಪಕ್ಕದಲ್ಲಿದ್ದ ನನ್ನ ಮೊಬೈಲ್ ತೆಗೆದು ನನ್ನ YouTube ಚಾನೆಲ್ ನಲ್ಲಿ ನನ್ನದೇ ವೀಡಿಯೋ 'ಜೇನು ಕಚ್ಚಿಸಿಕೊಳ್ಳದೇ ಕೀಳುವುದು ಹೇಗೆ'? ಎಂಬ ಮೂರ್ನಾಲ್ಕು ನಿಮಿಷದ ವೀಡಿಯೋ ಅವರ ಮುಂದೆ ಹಿಡಿದೆ... ಎರಡುನಿಮಿಷ ಇದನ್ನು ನೋಡಿ ಆಮೇಲೆ ಮಾತಾಡಿ ಎಂದು ಹೇಳಿದೆ. ರೋಚಕ ಮನೋಭಾವದಿಂದ ವೀಡಿಯೋ ನೋಡಿದ ಎಲ್ಲರೂ ಆಮೇಲೆ ಬಾರೀ ಧೈರ್ಯ... so wonderful ಏನೇನೋ ಮೆಚ್ಚುಗೆ ಹೇಳಿ ಜಾಸ್ತಿ ಲಿಪ್ movement ಮಾಡಬೇಡಿ... ಸರ್ ಎಂದು ಮರ್ಯಾದೆ ಕೊಡಲು ಶುರುಮಾಡಿದರು.

ಮೇಡಂ ನಾನು ಟೀಚರ್... ನನಗೆ ಜೇನುಗಳ ಬಗ್ಗೆ ಚೆನ್ನಾಗಿಯೇ ತಿಳಿದಿದೆ. ಆದರೆ ನನಗೆ ನಿಮ್ಮ ಹತ್ತಿರ ಈ swelling ಇಂದ ಸರಿಯಾಗಿ ಮಾತನಾಡಲಾಗುತ್ತಿಲ್ಲ. ನೀವು ನೋಡಿದರೆ ಏನೇನೋ ಬಾಯಿಗೆ ಬಂದಹಾಗೆ ಮಾತಾಡುತ್ತಿದ್ದೀರಿ... ಎಂದು ಹೇಳಿದ್ದಕ್ಕೆ ಇನ್ನೊಬ್ಬ ವಿದ್ಯಾರ್ಥಿನಿ ಗಂಟಲು swelling ಬಂದ್ರೆ ಉಸಿರಾಟಕ್ಕೆ ಪ್ರಾಬಲಮ್ ಆಗತ್ತೆ ಅಂತ ಕತ್ತಿನ ಸುತ್ತಲೂ ಮತ್ತು ಗಂಟಲೊಳಗೆ ಬ್ಯಾಟರಿ ಬಿಟ್ಟು ನೋಡಿದಳು.

ಅಲ್ಲಿಗೆ ಅವರಿಗೆ ನನ್ನ ಕೇಸ್ ಸರಿಯಾಗಿ ಅರ್ಥ ಆಯಿತು ಅನಿಸಿತು. ಅಲರ್ಜಿಗೆಂದು ಸಿಟ್ರೋಜನ್ ಮತ್ತು ಯಾವೋ ಎರಡು ಬರೆದಿದ್ದರು. ಅದನ್ನು ನಾಳೆ ಬೆಳಿಗ್ಗೆ ಮತ್ತು ಸಂಜೆ ತೆಗೆದುಕೊಳ್ಳಿ ಎಂದಿದ್ದರು. ಅದಕ್ಕೆ ಅವರೆಲ್ಲರಿಗೂ ಕರೆದು "ನೋಡಿ ಜೇನು ಹುಳು ಕಚ್ಚಿದರೆ 24 ಗಂಟೆಯೊಳಗೆ 90% ಅಷ್ಟು ಭಾವು ಕಡಿಮೆಯಾಗುತ್ತದೆ. ಕೆಲವು ಸ್ನಾಯುಗಳು ಹೆಚ್ಚು ಪದೇ ಪದೇ ಬಳಕೆಯಾಗುವಂತಹ ಮಾಂಸಖಂಡಗಳಾದರೇ ಮೂವತ್ತಾರು ಗಂಟೆಯವರೆಗೆ ಸ್ವಲ್ಪಮಟ್ಟಿಗೆ ಇರುತ್ತದೆ. sting ಚುಚ್ಚಿದ ಜಾಗ ಒಂದು point ಮಾತ್ರ ಕೆಂಪಗಾಗಿ ಉಳಿಯುತ್ತದೆ. ಆದರೆ ಇದಕ್ಕೆ ಎರಡು ಮೂರು ಬಾರಿ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ . ನಾನು ಚಿಕ್ಕ ವಯಸ್ಸಿನಿಂದಲೂ ಆಗೊಮ್ಮೆ ಈಗೊಮ್ಮೆ ಒಂದೊಂದು ಬಾರಿ ಮೂರು ನಾಲ್ಕು ಹುಳುಗಳಂತೆ ಸಾವಿರಾರು ಹುಳುಗಳನ್ನು ಕಚ್ಚಿಸಿಕೊಂಡಿದ್ದೇನೆ. This is my self experience words ಎಂದು ಹೇಳಿದ್ದಕ್ಕೆ ಎಲ್ಲರೂ ಹೌದು ಹೌದು ಎಂದು ತಲೆಯಾಡಿಸಿದ್ದರು. ಮನೆಗೆ ಹೊರಡಲು ಬೆರಳಿಗೆ ಕಾರಿನ ಕೀಲಿಯ ರಿಂಗ್ ಹಾಕಿಕೊಂಡಿದ್ದು ತೆಗೆದು ಕೈಯಲ್ಲಿ ಹಿಡಿದುಕೊಂಡು ಆ ಮಾತ್ರೆ ತೆಗೆದುಕೊಂಡಿದ್ದೀರಾ ಅಂತ ಹೇಳುತ್ತಿದ್ದ ಮೇಡಂ ಬಳಿ ಹೋಗಿ ಮಾಹಿತಿಗಾಗಿ ನನಗೆ ಬೇಕು ಏನು ಮೇಡಂ ಅದು ಮಾತ್ರೆ matter ? ಎಂಬ ಪ್ರಶ್ನೆಗೆ "ಸಾರ್ ... ಅದು...

ಹೇಳ್ರಿ ಮೇಡಂ.. ಪರವಾಗಿಲ್ಲ.. ಎಂದಿದ್ದಕ್ಕೆ ಕೆಲವು ಪೀಪಲ್ಸ್ ಯಾವುದಕ್ಕಾದರೂ ರಾತ್ರಿ ಮಾತ್ರೆ ತೆಗೆದುಕೊಳ್ತಾರೆ ಅಂದರು. ಅಂತಹ ಮಾತ್ರೆ ತೆಗೆದುಕೊಂಡರೆ mouth, lips swelling ಬರುತ್ತಾ ಮೇಡಂ?

ಹ್ಹಾ ಸರ್... ಆಗತ್ತೆ ... ಅವು side effect..

ಒಬ್ಬೊಬ್ಬರಿಗೆ ಒಂದೊಂದು ತರ ಆಗತ್ತೆ... ಆ ತರ ಆಗಿರುವುದನ್ನು ನಾನು ಕಂಡಿದ್ದೇನೆ ಎಂದರು... ಅವರವರ ಅನುಭವ ಅವರಿಗೆ... ಅನುಭವ ಪ್ರತಿಯೊಬ್ಬರಿಗೂ ವಿಭಿನ್ನ ಮತ್ತು ವಿಶೇಷ ಅನುಭವ.. .ಎಂದು ಹೇಳಿ... ಮಾಹಿತಿಗಾಗಿ ಧನ್ಯವಾದಗಳನ್ನು ತಿಳಿಸಿ ಕೈಮುಗಿದು ಆಸ್ಪತ್ರೆಯಿಂದ ನಿರ್ಗಮಿಸಿದೆ.

ಅಯ್ಯೋ ಈ ಔಷದೀ ಮಾಫಿಯಾ ಯಾರೂ ಕಾಣದೇ ಇರುವಷ್ಟು ಆಳ ಅಗಲ ಇರುವುದು ಸ್ಪಷ್ಟ.. ಪ್ರಸಿದ್ಧ ಪ್ಯಾರಾಸಿಟಾಮಲ್ ಮಾತ್ರೆಯೊಂದರ ಬೆಲೆ 2 ರೂ.. ಇವರು ಎರಡು ಸಾವಿರ ಕೋಟಿ ರೂಗಳ ಉಡುಗೊರೆಗಳನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಮುಖರಿಗೆ ನೀಡುತ್ತಾರೆಂದರೇ ಇನ್ನೂ ನೂರಾರು ರುಪಾಯಿಯ ಮಾತ್ರೆಗಳನ್ನು ಮಾರುವ ಕಂಪನಿಗಳ ಲಾಭಾಂಶ ಎಷ್ಟಿರಬಹುದು?

ಯಾವುದೋ ರೋಗ... ಯಾವುದೋ ಔಷಧಿ... ಮತ್ತ ಯಾವುದೋ ಸೈಡ್ ಎಪೆಕ್ಟ್....!ಯಾವುದೋ ಪ್ರಾಬಲಮ್ ಗೆ ಸಂಬಂಧವೇ ಇಲ್ಲದ ರೋಗ ಗುರುತಿಸುವಿಕೆ....! ಅದು ಚಿಕಿತ್ಸೆಯಾಗುವುದಿಲ್ಲ. ರೋಗಿಗಳಿಗೆ ಹಣಕಾಸಿನ ಹೊಡೆತದೊಂದಿಗೆ ಪ್ರಾಣವೇ ಹೋಗುತ್ತೆ. ಸಾಲದ್ದಕ್ಕೆ ಮತ್ತೊಂದು ಸೈಡ್ ಎಫೆಕ್ಟ್ ಆಗುವುದರಿಂದ ಆರೋಗ್ಯವಂತರು ಅನಾರೋಗ್ಯದಿಂದ ಶಾಶ್ವತವಾಗಿ ನರಳುವರು.

ಊದು ತುಟಿಯನ್ನಿಟ್ಟುಕೊಂಡು ಮನೆಗೆ ಬಂದೆ. ಕುಮುದಾಳ ಸಮಾಧಾನಕ್ಕೆ ನಾನು ಆಸ್ಪತ್ರೆಗೆ ಹೋಗಿದ್ದು. cetirizine ಮಾತ್ರೆ ಈ ಜೇನು ಹುಳ ಕಚ್ಚಿದ್ದಕ್ಕೆ ಎಷ್ಟರ ಮಟ್ಟಿಗೆ ಕೆಲಸ ಮಾಡಿತೋ ಗೊತ್ತಿಲ್ಲ. ಮರುದಿನ ಸಬ್ ರಿಜಿಸ್ಟರ್ ಆಫೀಸ್ ನ writer ಈ ದಿನ ಮೊದಲು ನಿಮ್ಮದೇ ಇದೆ ಸಾರ್... ಸ್ವಲ್ಪ ಬೇಗನೇ ಬಂದಿರ್ರಿ ಎಂದು ಬೆಳಗ್ಗೆಯೇ ಕಾಲ್ ಮಾಡಿ ತಿಳಿಸಿದರು. ಮುಖ ತುಟಿಗಳು ಊದಿಕೊಂಡೇ ಇವೆ. ಆದರೆ ರಾತ್ರಿ ಹನ್ನೊಂದು ಹನ್ನೆರಡು ಗಂಟೆಯಲ್ಲಿದ್ದಷ್ಟು ಪ್ರಮಾಣದಲ್ಲಿರಲಿಲ್ಲ. ಗಣನೀಯ ಪ್ರಮಾಣದಲ್ಲಿ ತಗ್ಗಿತ್ತು. ಅದೇ ಮುಖದಲ್ಲಿ ಅಂತೂ ಬಹಳ ದಿನದ ನಮ್ಮ ಕನಸಿನ ಮನೆಯ ನೊಂದಣಿಯಂತೂ ಆಯಿತು. ಇಪ್ಪತ್ತು ಮೂವತ್ತು ನಿಮಿಷ ರಿಜಿಸ್ಟರ್ ಆದ ದಸ್ತಾವೇಜುಗಳಿಗಾಗಿ ಕಾಯುತ್ತಿದ್ದಾಗ ಸರ್ಕಾರದಿಂದ breaking news ಒಂದು ಬಂತು.. 'ಇಂದು ಮದ್ಯರಾತ್ರಿಯಿಂದಲೇ Lock down ' ಎಂದು ಆರ್ಡರ್ ಮತ್ತು ಅನ್ನೌನ್ಸ್ಮೆಂಟ್ ಆಯಿತು. ತದ ನಂತರ ಕೊರೋನಾದ ರುದ್ರ ನರ್ತನ...!ಅನೇಕ ಗೊತ್ತು ಪರಿಚಯದವರುಗಳ ಮರಣದ ಸುದ್ದಿಯನ್ನು ನಿರಂತರ ಕೇಳಬೇಕಾಯಿತು. ನ್ಯೂಸ್ ಗಳಲ್ಲಿ ತೋರಿಸುತ್ತಿದ್ದ ಅಮಾನವೀಯ ಚಿತ್ರಣಗಳು, ದಿನದಿಂದ ದಿನಕ್ಕೆ ರೋಗ ಪ್ರಮಾಣ ಸಾವಿನ ಪ್ರಮಾಣ ಹೆಚ್ಚುತ್ತಾ ಹೋಯಿತು. ಕೋರೋನಾ ಬಾರದಿದ್ರೂ ಕೆಲವರು ಕೊರೋನಾದ ಭಯದಿಂದ ಸತ್ತರು. ಕೋರೋನಾ ಬಂದವರು ನಿಗದಿತ ಔಷಧ ಇಲ್ಲದೇ ಯಾವು ಯಾವುದೋ ಮಾತ್ರೆಗಳನ್ನು ತೆಗೆದುಕೊಂಡು ಶಾಶ್ವತವಾಗಿ ಶುಗರ್ ಬಿಪಿ ಯಾವ್ಯಾವೋ ರೋಗಗಳನ್ನು ದೇಹಕ್ಕೆ ಅಂಟಿಸಿಕೊಂಡರು. ಕೆಲ ವ್ಯಾಪಾರಿಗಳು ಕೋರೋನಾ ಹೆಸರಲ್ಲಿ ಲಾಭಾಂಶ ಗಳಿಸಿ ಬದುಕಿ ಹೋದರು. ಶಾಲಾಮಕ್ಕಳು ಎಕ್ಸಾಮ್ಸ್ ಇಲ್ಲದೇ ಪಾಸ್ ಆದದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯು ಹತ್ತು ವರ್ಷಗಳಷ್ಟು ಹಿಂದೆಹೋದದ್ದು, ಮೊಬೈಲ್ ಗೆ ಅಂಟಿಕೊಂಡು ಓದದೇ ಬರೆಯದೇ ಆಡಬಾರದ ಆಟಗಳನ್ನು ಆಡುತ್ತಿರುವುದು ಸಾಮಾನ್ಯವಾಗಿದೆ. ಇದೊಂದು ಸರ್ವತೋಮುಖ ಪ್ರಗತಿಯ ಹಿನ್ನಡೆ ಎನ್ನಬಹುದು. ನೆಪ ಹೇಳುತ್ತಾ ಬರೀ ಅನುಪಯುಕ್ತ ಕೆಲಸಗಳನ್ನೇ ಮಾಡುವ ಬದಲು ನಾಗರೀಕತೆ ಮುಂದೆ ಸಾಗಲು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ದಾಪುಗಾಲು ಹಾಕಬೇಕಿದೆ.

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ