ಹೆಣವಾಗುತ್ತಿರುವ ಗಣರಾಜ್ಯ

ಹೆಣವಾಗುತ್ತಿರುವ ಗಣರಾಜ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಆಂಗ್ಲ ಮೂಲ: ಪರಕಾಲ ಪ್ರಭಾಕರ್, ಕನ್ನಡಕ್ಕೆ: ರಾಹು
ಪ್ರಕಾಶಕರು
ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೪

ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಸಂಜಯ್ ಬಾರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...

“ಪರಕಾಲ ಪ್ರಭಾಕರ್ ಅವರು ಪುನರುಜ್ಜೀವಕ ಪುರುಷರು: ಒಬ್ಬ ವಿಖ್ಯಾತ ಅರ್ಥಶಾಸ್ತ್ರಜ್ಞರು; ಸಾರ್ವಜನಿಕ ಧೋರಣೆಯ ವೃತ್ತಿ ತಜ್ಞರು; ಕಾರ್ಪೊರೇಟ್ ಸಲಹೆಗಾರರು; ಸಾರ್ವಜನಿಕ ಅಭಿಪ್ರಾಯದ ಜನಮತ ಗಣನೆಯ ಪರಿಣಿತರು; ಕ್ರಿಯಾಶೀಲ ರಾಜಕೀಯ ಕಾರ್ಯಕರ್ತರು; ಸೂಕ್ಷ್ಮದೃಷ್ಟಿಯ ವಿಶ್ಲೇಷಕರು; ಗಣ್ಯ ಲೇಖಕರು; ತೆಲುಗು ಸಾಹಿತಿಗಳು; ಇದೆಲ್ಲಕ್ಕೂ ಮಿಗಿಲಾಗಿ, ಒಬ್ಬ ತರ್ಕಬದ್ಧ ಚಿಂತನೆಯ ಉದ್ದಾಮ ವಿದ್ವಾಂಸರು. ಪಠಣ ಕುತೂಹಲಂ ಎಂಬ ಶೀರ್ಷಿಕೆಯಡಿಯಲ್ಲಿ ಅವರು ಅಂದಾಜು ಎಪ್ಪತ್ತರಷ್ಟು ಲೇಖನಗಳನ್ನು ಪ್ರಕಟಿಸಿದ್ದಾರೆ. ಆ ಎಲ್ಲ ಬರಹಗಳ ಉದ್ದೇಶ ಜಗತ್ತಿನ ಉದ್ದಗಲಕ್ಕೂ ಇಂದು ಅಲ್ಲಲ್ಲಿ ನೆಲೆನಿಂತಿರುವ ಇಂದಿನ ತೆಲುಗರಿಗೆ ಒಬ್ಬ ಗುರುಜಾಡ ಮತ್ತು ಒಬ್ಬ ಜೋಶುವಾ ಅವರ ಗದ್ಯವನ್ನು ಪರಿಚಯಿಸುವುದು; ಒಬ್ಬ ಶ್ರೀ ಶ್ರೀ ಮತ್ತು ಒಬ್ಬ ದಾಸರಥಿಯವರ ಕಾವ್ಯವನ್ನು ತಲುಪಿಸುವುದು. ಈ ಎಲ್ಲ ಲೇಖನಗಳು ತೆಲುಗು ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಪರಿಸರದ ಬಗ್ಗೆ ಪ್ರಭಾಕರ್ ಅವರಿಗೆ ಇರುವ ಗಾಢವಾದ ಗ್ರಹಿಕೆ ಹಾಗೂ ಆಳವಾದ ತಿಳುವಳಿಕೆಗೆ ಜ್ವಲಂತ ಪುರಾವೆಗಳಾಗಿವೆ. ಮಿಡ್‌ವೀಕ್ ಮ್ಯಾಟರ‍್ಸ್ ಎಂಬುವುದು ಪ್ರಭಾಕರ್ ಅವರ ರಾಜಕೀಯ ವೇದಿಕೆಯಾಗಿದೆ. ಈ ವೇದಿಕೆಯಿಂದ ಹೊರಹೊಮ್ಮಿದ ಅನೇಕ ಮಾತುಕತೆಗಳು, ಲೇಖನಗಳು ನಮ್ಮ ಸಮಕಾಲೀನ ರಾಷ್ಟ್ರೀಯ ರಾಜಕೀಯ ಅರ್ಥವ್ಯವಸ್ಥೆಯ ಕುರಿತು ಅವರಿಗಿರುವ ತಲಸ್ಪರ್ಶಿ ತಿಳುವಳಿಕೆಗೆ, ವಿಸ್ತೃತ ಜ್ಞಾನಕ್ಕೆ ಕನ್ನಡಿ ಹಿಡಿಯುತ್ತದೆ. ಅಷ್ಟೇ ಅಲ್ಲ, ಭಾರತದ ಪ್ರಜಾಸತ್ತೆ, ಅಭಿವೃದ್ಧಿ ಮತ್ತು ಸಮಸ್ತ ನಾಗರಿಕರ ಶ್ರೇಯೋಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಕಟ ಬದ್ಧತೆಯನ್ನು ಎತ್ತಿ ತೋರಿಸುತ್ತವೆ. ಒಂದು ಅರ್ಥದಲ್ಲಿ, ಅವರ ಉದಾತ್ತ ವ್ಯಕ್ತಿತ್ವಕ್ಕೆ ಭಾಷ್ಯ ಬರೆಯುತ್ತವೆ.

ಈ ಗ್ರಂಥದಲ್ಲಿ ಪ್ರಭಾಕರ್ ಅವರು, ನನ್ನದು ನಿರ್ಭೀತ ವಿಮರ್ಶಾತ್ಮಕ ನಿಲುವು; ಧೃತಿ ಧಾರಣದ ಧೀರ ಧ್ವನಿ ಎಂದಿದ್ದಾರೆ : ಯಾವುದೇ ಪರಿತಾಪ, ಪಶ್ಚಾತ್ತಾಪವಿಲ್ಲದ, ಭಿನ್ನಮತದ ದನಿ... ನಾನು ಹೆಗಲಿಗೇರಿಸಿಕೊಂಡಿರುವ ಕಾರ್ಯಭಾರ ಸತ್ವತಃ ಸರಳವಾದುದ್ದು; ಮಿತವಾದ ಉದ್ದೇಶದ್ದು. ಆದರೆ, ಸ್ಪಷ್ಟವಾದ ಗುರಿಯುಳ್ಳದ್ದು; ಏಕೋದೃಢ ದೃಷ್ಟಿಯ ಮೊನಚುಳ್ಳದ್ದು. ನಮ್ಮ ಸರ್ಕಾರ, ನಮ್ಮ ಸಾರ್ವಜನಿಕ ಸಂಸ್ಥೆಗಳು ಮತ್ತು ನಮ್ಮ ನಾಯಕರು ನಮ್ಮ ಗಣರಾಜ್ಯದ ಆದರ್ಶ ಮಾರ್ಗದಿಂದ ದೂರ ಸರಿದಾಗ, ಅವರು ಘೋಷಿಸಿದ ಗೊತ್ತುಗುರಿಗಳು, ಜನತೆಗೆ ನೀಡಿದ ಆಶ್ವಾಸನೆಗಳು-ಮುಂತಾದವುಗಳಿಂದ ವಿಮುಖರಾಗಿ, ಮತಭ್ರಷ್ಟರಾಗಿ ಹೆಜ್ಜೆ ಹಾಕತೊಡಗಿದಾಗ ಅದನ್ನು ಎತ್ತಿ ತೋರಿಸುವುದು; ಅಧಿಕಾರದಲ್ಲಿರುವವರ ಸಮ್ಮುಖದಲ್ಲಿ ನಿರ್ಭಯದಿಂದ ಸತ್ಯವನ್ನು ಹೇಳುವ ಸಹಜ ಸರಳ ಪ್ರಯತ್ನ-ಎಲ್ಲ ಕಾಲದಲ್ಲೂ ರುಜು ಮಾರ್ಗದೆಡೆಗೆ ಬೆರಳು ಮಾಡಿ ತೋರಿಸುವುದು.

ತಮ್ಮ ಅಭಿಪ್ರಾಯ, ದೃಷ್ಟಿ ಧೋರಣೆಗಳನ್ನು ಸಮರ್ಥಿಸಲು ಪ್ರಭಾಕರ್ ಅವರು ಅನೇಕ ಸತ್ಯ-ತಥ್ಯಗಳನ್ನು ಸಂಚಯಿಸಿ ಸಾದರಪಡಿಸುತ್ತಾರೆ. ಅವುಗಳೇ ಅವರ ಲೇಖನಿ ಮತ್ತು ಲೇಖನಗಳಿಗೆ ವಿಪುಲ ಶಕ್ತಿ ಪೂರೈಸುತ್ತವೆ. ಅವರು ಕೇವಲ ವಾಗ್ವಾದಕ್ಕೆ ಜೋತು ಬೀಳುವವರಲ್ಲ. ಅನೇಕ ರಾಜಕೀಯ ವಿಶ್ಲೇಷಕರು ಹಾಗೂ ವ್ಯಾಖ್ಯಾನಕಾರರಂತೆ ಊಹಾಪೋಹಗಳನ್ನು ಆಧರಿಸಿ, ಅಂತಿಮ ನಿರ್ಣಯಕ್ಕೆ ಬರುವವರೂ ಅಲ್ಲ. ಭಾರತೀಯ ಮಾಧ್ಯಮಗಳಲ್ಲಿಯ ರಾಜಕೀಯ ವಿಶ್ಲೇಷಣೆಯ ಬಹುಭಾಗ, ಕಲ್ಪಿತ ಸಂಗತಿ ಹಾಗೂ ವಿಸ್ತೃತ ವದಂತಿಗಳನ್ನೇ ಆಶ್ರಯಿಸಿರುವುದನ್ನು ಕಾಣುತ್ತೇವೆ. ನಿರಾಧಾರವಾದ ಊಹೆ ನಮ್ಮ ಮಾಧ್ಯಮಗಳ ವಿಶ್ಲೇಷಣೆಯ ಜೀವಜೀವಾಳವಾಗಿರುವುದು ನಿಚ್ಚಳ. ಪ್ರಭಾಕರ್ ಅವರು ಸುಸಂಬದ್ಧವಾಗಿ ತರಬೇತಿ ಪಡೆದ ಅರ್ಥಶಾಸ್ತ್ರಜ್ಞರು. ಆ ಕಾರಣದಿಂದಾಗಿಯೇ ಅವರ ಅಭಿಪ್ರಾಯಗಳೆಲ್ಲ ಗಟ್ಟಿಯಾದ ನಿಜಸಂಗತಿಯ ನೆಲೆಯ ಮೇಲೆ ನಿಂತಿರುತ್ತವೆ. ಅವರು ನಿಯಮಿತವಾಗಿ ಬರೆದು ಪ್ರಕಟಿಸಿದ ಈ ಅಂಕಣಗಳೆಲ್ಲ, ಅವರೊಬ್ಬ ಸೂಕ್ಷ್ಮದೃಷ್ಟಿಯ ಮೊನಚು ಮತಿಯ ಸಂಶೋಧಕರು ಎಂಬುವುದನ್ನು ಢಾಳಾಗಿ ಎತ್ತಿ ತೋರಿಸುತ್ತದೆ. ತಮ್ಮ ವಾದಗಳನ್ನು ಸಶಕ್ತಗೊಳಿಸಿ, ಸಾದರಪಡಿಸುವ ಉದ್ದೇಶದಿಂದ ಅವರು ಸತತವಾಗಿ, ಅಷ್ಟೇ ಸುಸಂಬದ್ಧವಾಗಿ ಸಾಕ್ಷಿ ಪುರಾವೆಗಳನ್ನು ಶೋಧಿಸಿ, ಸಂಗ್ರಹಿಸುತ್ತಲೇ ಇರುತ್ತಾರೆ.

ಪ್ರಭಾಕರ್ ಅವರ ರಾಜಕೀಯ ವಿಮರ್ಶೆ, ಟೀಕೆ ಟಿಪ್ಪಣಿಗಳಿಗೆ ಸತ್ಯ ತಥ್ಯಗಳ ಸದೃಢವಾದ ನೆಲೆಗಟ್ಟಿರುತ್ತದೆ. ಆದ್ದರಿಂದಲೇ ಅವರ ಅಭಿಪ್ರಾಯಗಳು ಅಜೇಯ-ವಾಗಿರುತ್ತವೆ. ಭಾರತವು ಮುಂದಿನ ಮಹಾಚುನಾವಣೆಗಳ ಕಡೆಗೆ ಭರದಿಂದ ಸಾಗುತ್ತಿರುವಂತೆಯೇ ಹರಿದು ಬರುತ್ತಿರುವ ಅನೇಕ ಸತ್ಯ ಸಂಗತಿಗಳು, ದರಿದ್ರ ದಾಖಲೆಗಳು ಮುಖಕ್ಕೆ ರಾಚುತ್ತಿವೆ. ಅಭಿವೃದ್ಧಿ ಹಾಗೂ ಉತ್ತಮ ಆಡಳಿತ-ಎರಡೂ ದೃಷ್ಟಿಯಿಂದಲೂ ಅದರ ವಿಫಲತೆ ಎದ್ದುಕಾಣುತ್ತಿವೆ. ಆದ್ದರಿಂದ ಈ ಮುಂಬರುವ ಚುನಾವಣೆಯಲ್ಲಿ ಸದ್ಯದ ಅಧಿಕಾರಸ್ಥ ಸರ್ಕಾರವು, ತನ್ನ ಮೇಲ್ಮೆ, ಮುನ್ನಡೆಯ ಆಧಾರದ ಮೇಲೆ ಚುನಾವಣೆಯ ಪ್ರಚಾರಕ್ಕೆ ಇಳಿಯಲಾರದು. ಯಾಕೆಂದರೆ, ಜನರ ಮುಂದೆ ಹೇಳಿಕೊಳ್ಳಲು ಯಾವುದೇ ಅದ್ಭುತ ಸಾಧನೆಯ ಬಾಣಗಳು ಅದರ ಬತ್ತಳಿಕೆಯಲ್ಲಿಲ್ಲ. ಹಾಗಾಗಿ, ಅದು ಜನರ ಮುಂದೆ ಸತ್ಯ ಸಂಗತಿಗಳನ್ನು ಮಂಡಿಸಿ, ತನ್ನ ತರ್ಕಬದ್ಧವಾದ ನೆಲೆಯ ಮೇಲೆ ನಿಂತು, ಜನರ ಮತ ಯಾಚಿಸಲಾರದು. ಬದಲಾಗಿ ಅದು ಹಲವಾರು ಭ್ರಮೆ ವಿಭ್ರಮೆಗಳನ್ನು ಬಳಸಿ, ಜನರನ್ನು ಸಮ್ಮೋಹಗೊಳಿಸುವ ಭ್ರಾಮಕ ಬಲೆಯನ್ನು ಬೀಸಲಿದೆ. ಅಮೃತಕಾಲ ಎಂಬ ಉದ್‌ಭ್ರಮೆಯಲ್ಲಿ ಜನರನ್ನು ಓಲಾಡಿಸುವ, ತೇಲಾಡಿಸುವ ಖೋಟಾ ಕೆಲಸಕ್ಕೆ ಈಗಾಗಲೇ ಕೈಹಾಕಿದೆ. 

ಪ್ರಭಾಕರ್ ಅವರ ಗದ್ಯದ ಮೂಲ ಹೈದ್ರಾಬಾದು. ಅಲ್ಲಿಂದ ಅಂಕುರಿಸಿ ಸಿಡಿದು ಹೊರಬರುವ ಅದು, ದೇಶದ ಸಮಸ್ತ ಜನತೆ, ಅಷ್ಟೇ ಅಲ್ಲ, ಇಡೀ ಪ್ರಪಂಚದ ಜನತೆಯ ವಾಚನಕ್ಕೆ ಲಾಯಕ್ಕಾಗಿದೆ. ಭಾರತದ ವರ್ತಮಾನ ಹಾಗೂ ಭವಿಷ್ಯತ್ತಿನ ಬಗ್ಗೆ ಕಿಂಚಿತ್ ಕಾಳಜಿಯಿರುವ ಎಲ್ಲರೂ ಓದಲೇಬೇಕಾದ, ಅದ್ಭುತ ಸತ್ಯಸಂಧ, ಸಬಲ ಗದ್ಯ ಅವರದು.”