ಹೆಣ್ಣು ಅಬಲೆಯಲ್ಲ, ಸಬಲೆ !

ಹೆಣ್ಣು ಅಬಲೆಯಲ್ಲ, ಸಬಲೆ !

'ಅಬಲೆಯರಲ್ಲ ಮೃದು ಮನಸ್ಸಿನವರು

ನಭದಲಿ ವಿಹರಿಸಿದ ಧೀರೆಯರು

ಸಭೆಯಲಿ ಮಿನುಗುವ ತಾರೆಯರು

ಶುಭದೊಸಗೆ ಹೇಳುತ ಹಾರೈಸುವರು

ಸೊಬಗಿನಲಿ ಮಕ್ಕಳ ಪೋಷಿಸುವರು

ಕಬಳಿಸುವ ಬುದ್ಧಿಗೆ ಛೀಮಾರಿ ಹಾಕುವರು

ಸಬಲರಾಗಿ ಮಹಿಳಾ ಶಕ್ತಿಯಲಿ ಮೆರೆವರು

ಶುಭ ಸಮಾರಂಭದಿ ಸಂಭ್ರಮಿಸುವರು

'ಹೆಣ್ಣಿನ ಮನಸ್ಸನ್ನು ಅರಿಯಲಾಗದು' ಸಾಮಾನ್ಯವಾಗಿ ಹೇಳುವ ಮಾತು.ಆಕೆಯ ಅಂತರಂಗವನ್ನು ಅರ್ಥೈಸಿಕೊಳ್ಳುವವರು ಬೆರಳೆಣಿಕೆಯ ಮಂದಿ ಮಾತ್ರ. ಆಕೆ ಎಲ್ಲವನ್ನೂ, ಎಲ್ಲರಲ್ಲಿಯೂ ಹೇಳಿಕೊಳ್ಳಲಾರಳು. ಅದು ಸಾಧುವೂ ಅಲ್ಲ. ಮನೆಯ ಗೌಪ್ಯತೆಯನ್ನು ಬೀದಿರಂಪ ಹಾದಿರಂಪ ಮಾಡಬಾರದು. ಕ್ಷಮಯಾಧರಿತ್ರಿಯಾಗಿ, ಸಹನೆಯಿಂದ ವರ್ತಿಸುವುದು ಆಕೆಗೂ, ಮನೆತನಕ್ಕೂ ಕ್ಷೇಮ. ಮನೆಯ ಸದಸ್ಯರು ಜೊತೆಗೂಡಿ ಸಹಕರಿಸಿದರೆ ಬಾಳು ನಂದನ.

ಮನೆಯಂಗಳದಿ ಹೆಣ್ಣು ಮಗು ಓಡಾಡುತ್ತಿದ್ದರೆ ಹೆತ್ತವರಿಗೆ ಸಂತೋಷ, ಆನಂದ, ಬದುಕು ಸುಂದರ. ಹೆಣ್ಣು ದೇವತಾ ಸ್ವರೂಪಿ. ಎರಡು ಮನೆಗಳ ಮನಗಳನ್ನು ಬೆಳಗಿಸಿ ಬೆಳಗುವ ನಂದಾದೀಪ. ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮೌಲ್ಯಗಳ ನೀಡಿ, ಆರೋಗ್ಯವಾದ ಬೆಳವಣಿಗೆಗೆ ಎಲ್ಲರೂ ಕಾರಣರಾಗಬೇಕು. ಆಕೆಯ ರಕ್ಷಣೆ ಎಲ್ಲರ ಹೊಣೆ.

ಹೆಣ್ಣು ಮಗಳ ಸ್ವಾಭಿಮಾನವನ್ನು ಕೆಣಕುವುದು ಎಂದರೆ ಕಷ್ಟಗಳನ್ನು ಮೈಮೇಲೆ ಎಳೆದು ಹಾಕಿಕೊಂಡಂತೆ. ಸ್ವಾಭಿಮಾನ ಆಕೆಗೆ ಕೋಟಿ ಹೊನ್ನಿಗಿಂತಲೂ ಮಿಗಿಲು. ಆತ್ಮಾಭಿಮಾನ ಮತ್ತು ಶೀಲವನ್ನು ಕಾಪಿಡುವುದು ಪ್ರತಿಯೋರ್ವ ಹೆಣ್ಣು ಮಗಳ ಆದ್ಯ ಕರ್ತವ್ಯ. ಮನೆ, ಸಮಾಜ,ಪರಿಸರ ಇದಕ್ಕೆ ಪೂರಕ ವಾತಾವರಣ ಕಲ್ಪಿಸಿ ‌ಸಹಕರಿಸಬೇಕು. ಅದೇ ಆಕೆಗೆ ರಕ್ಷಣಾಬೇಲಿ. ಎಲ್ಲಾ ಹೆಣ್ಣುಮಕ್ಕಳನ್ನು ಗೌರವಿಸೋಣ. ಎಲ್ಲರಿಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ