ಹೆತ್ತವರನ್ನು ಪ್ರೀತಿಸಿ, ಗೌರವಿಸಿ...
‘ತಂದೆ ಆಕಾಶ - ತಾಯಿ ಭೂಮಿ’ ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ ಸಿಗದೇ ಇರುವುದು. ತಾಯಿ ‘ಕ್ಷಮಯಾಧರಿತ್ರಿ’ ಕ್ಷಮೆ ನೆತ್ತರ ಹನಿಹನಿಯಲ್ಲಿ. ಸಹನಾ ಮೂರುತಿ ಆಕೆ. ಬುವಿಯನ್ನು ನಾವು ಏನೆಲ್ಲಾ ಮಾಡ್ತೇವೆ, ಆದರೂ ಸಹನಾಶೀಲೆ ಅಲ್ಲವೇ?
ಹೌದು, ನಮ್ಮನ್ನು ಬೆಳೆಸಿ, ಪಾಲನೆ ಪೋಷಣೆ ಮಾಡಿ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉತ್ತಮ ಸ್ಥಾನಕ್ಕೆ ತಂದು ನಿಲ್ಲಿಸಿದ ಹಿರಿಮೆ ಹೆತ್ತವರಿಗೇ ಸಲ್ಲಬೇಕು ಅಲ್ಲವೇ? ಮನೆಯಲ್ಲಿ ತಂದೆ ಅಥವಾ ತಾಯಿ ಇಲ್ಲವಾದಲ್ಲಿ ಆ ಕೊರತೆಯನ್ನು ನೀಗಿಸುವುದು ಬಹಳ ಕಷ್ಟ. ಈಗಿನ ಕಾಲದಲ್ಲಿ ‘ಸಿಂಗಲ್ ಪೇರೆಂಟ್' ಸಂಸ್ಕೃತಿಯೇ ಕಾಣ ಸಿಗುತ್ತಿದೆ. ಮದುವೆಯ ನಂತರ ಹೊಂದಾಣಿಕೆಯ ಕೊರತೆಯಿಂದ ತಂದೆ ತಾಯಿಯವರು ವಿಚ್ಚೇದನ ತೆಗೆದುಕೊಂಡಾಗ ಮಗು ತಂದೆ ಅಥವಾ ಹೆಚ್ಚಾಗಿ ತಾಯಿ ಬಳಿ ಉಳಿದು ಬಿಡುತ್ತದೆ. ಆಗ ಮಗು ಬಹಳ ಗೊಂದಲದಲ್ಲಿ, ಅತಂತ್ರ ಪರಿಸ್ಥಿತಿಯಲ್ಲಿ ಬೆಳೆಯುತ್ತದೆ. ಕೆಲವು ಸಲ ತಂದೆ ಅಥವಾ ತಾಯಿಯ ಅಕಾಲಿಕ ನಿಧನದಿಂದಲೂ ಈ ಸಮಸ್ಯೆ ಉದ್ಭವವಾಗುವುದಿದೆ. ಬಹಳಷ್ಟು ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳೆಸುತ್ತಾರೆ. ಒಂದೆಡೆ ಮಕ್ಕಳು ದೊಡ್ದವರಾದ ಬಳಿಕ ಉತ್ತಮ ಕೆಲಸಕ್ಕೆ ಸೇರಿ ತಮ್ಮ ಸಂಧ್ಯಾಕಾಲದಲ್ಲಿ ಆಸರೆಯಾಗುತ್ತಾರೆ ಎಂಬ ಪುಟ್ಟ ಆಸೆಯೂ ಇರುತ್ತದೆ. ಇದು ಸಹಜವೂ ಹಾಗೂ ಮಾನವ ಧರ್ಮವೂ ಆಗಿದೆ.
ಆದರೆ ಬದಲಾದ ಸಮಯದಲ್ಲಿ ಹುಟ್ಟಿದ ಊರಿನಲ್ಲಿ ಕೆಲಸ ಸಿಗುವುದು ದುಸ್ತರವಾಗಿದೆ. ಕೆಲಸದ ಹುಡುಕಾಟದಲ್ಲಿ ಹೆತ್ತವರನ್ನು ಬಿಟ್ಟು ಮಕ್ಕಳು ದೂರದ ಊರು ಅಥವಾ ದೇಶಕ್ಕೆ ತೆರಳುವುದು, ಕ್ರಮೇಣ ಅಲ್ಲಿಯೇ ನೆಲೆ ನಿಲ್ಲುವುದು ಸಹಜವೇ ಆಗಿದೆ. ಹುಡುಕಲು ಹೋದರೆ ಶೇಕಡಾ ೯೦ ಮಂದಿ ಮಕ್ಕಳು ಹೆತ್ತವರಿಂದ ದೂರವೇ ಇರುವ ಸಾಧ್ಯತೆಗಳು ಇದೆ. ಪುಟ್ಟ ಊರಿನಲ್ಲಿ, ಕೃಷಿ, ತೋಟ ನೋಡಿಕೊಂಡಿದ್ದ ಹೆತ್ತವರಿಗೆ ದೊಡ್ಡ ಪಟ್ಟಣ, ವಿದೇಶಗಳಲ್ಲಿ ಮಕ್ಕಳ ಜೊತೆ ನಿಲ್ಲಲು ಸಮಸ್ಯೆ ಇದ್ದೇ ಇರುತ್ತದೆ. ಮಗನ ಮನೆಯಲ್ಲಿ ಕೆಲವು ಸಲ ಸೊಸೆಯ ಜೊತೆ ತಕರಾರು ಬೆಳೆದಿರುತ್ತದೆ. ಹೀಗೆ ಹೆತ್ತವರು ತಮ್ಮ ತಮ್ಮ ಊರಿನಲ್ಲೇ ಹಿಂದಿರುಗಿ ಬಾರದ ಮಕ್ಕಳಿಗಾಗಿ ಪರಿತಪಿಸುತ್ತಾ ಕುಳಿತಿದ್ದಾರೆ. ಇರಲಿ, ಆದರೆ ಮಕ್ಕಳಾದವರಿಗೆ ಇರುವ ಜವಾಬ್ದಾರಿಗಳ ಬಗ್ಗೆ ಅವರು ಅರ್ಥ ಮಾಡಿಕೊಳ್ಳಲೇ ಬೇಕು.
ಬಾಲ್ಯದಿಂದ ತಾವು ಹೊಟ್ಟೆಗೆ ತಿನ್ನದೇ ಇದ್ದರೂ, ಮಕ್ಕಳು ಹಸಿದಿರಬಾರದು ಎಂದು ಕಷ್ಟಪಟ್ಟಾದರೂ ದುಡಿದು ವಿದ್ಯಾಭ್ಯಾಸ ನೀಡಿ ಒಂದು ಉತ್ತಮ ಸ್ಥಿತಿಗೆ ತಲುಪಿಸಲು ಹೆತ್ತವರು ಹೆಣಗಾಡುತ್ತಾರೆ. ಕಲಿತ ಮಕ್ಕಳು ಉತ್ತಮ ಕೆಲಸಕ್ಕೆ ಸೇರಿ, ದುಡಿದು ಹೆತ್ತರವರ ವೃಧ್ಯಾಪ್ಯದಲ್ಲಿ ಅವರಿಗೆ ಆಸರೆಯಾಗಬೇಕು. ಆದರೆ ಈಗ ವೃದ್ಧಾಶ್ರಮಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಮಕ್ಕಳ ಬಳಿ ಹಣ ಇದೆ, ಹೆತ್ತವರನ್ನು ಗಮನಿಸಲು ಸಮಯವೇ ಇಲ್ಲ. ಅವರು ಸಾವಿರ ಅಲ್ಲ, ಲಕ್ಷ ಲಕ್ಷ ಹಣ ತೆತ್ತು ಬೇಕಾದರೆ ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ತಯಾರಾಗಿರುತ್ತಾರೆ. ಆದರೆ ಅವರ ಜೊತೆ ಕಡೇ ಪಕ್ಷ ಸ್ವಲ್ಪ ಸಮಯವನ್ನಾದರೂ ಕಳೆಯುವುದಿಲ್ಲ. ಹೊಂದಾಣಿಕೆ ಮಾಡಲು ಮಕ್ಕಳಿಗೆ ಆಗುವುದೇ ಇಲ್ಲ. ಕೆಲವು ಕಡೆ ಹೆತ್ತವರು ಮೊಮ್ಮಕ್ಕಳನ್ನು ನೋಡಿಕೊಳ್ಳುವ ‘ಬೇಬಿ ಸಿಟ್ಟಿಂಗ್' ಆಯಾಗಳಂತೆ ಆಗಿ ಹೋಗಿದ್ದಾರೆ. ಮಕ್ಕಳು ದೊಡ್ಡವರಾದ ತಕ್ಷಣ ಹೆತ್ತವರಿಗೆ ಗೇಟ್ ಪಾಸ್ ನೀಡುತ್ತಾರೆ ಮಕ್ಕಳು. ಇವೆಲ್ಲಾ ನಿಲ್ಲ ಬೇಕು.
ಹೆತ್ತವರಿಗೆ ಗೌರವ ನೀಡುವುದನ್ನು ಕಲಿಯಬೇಕು. ಕೆಲಸದ ಅನಿವಾರ್ಯತೆಯಿಂದ ಹೊರ ಊರಿನಲ್ಲಿ, ವಿದೇಶದಲ್ಲಿ ಇದ್ದರೆ ನೀವು ಸಾಧ್ಯವಾದಷ್ಟು ಹೆತ್ತವರ ಸಂಪರ್ಕದಲ್ಲಿರಿ. ಅವರಿಗೆ ಬಹಳ ಸಮಯ ನೀವಿದ್ದ ಜಾಗದಲ್ಲಿ ನಿಲ್ಲಲು ಅಸಾಧ್ಯವಾದರೆ (ಒಗ್ಗದ ಹವೆ, ಪರಿಸರ ಇತ್ಯಾದಿ ಕಾರಣಗಳಿಂದ) ಕನಿಷ್ಟ ಒಂದೆರಡು ತಿಂಗಳಿಗಾದರೂ ನಿಮ್ಮ ಜೊತೆ ಇರಿಸಿಕೊಂಡಿರಿ. ನೀವು ರಜೆಯಲ್ಲಿ ಊರಿಗೆ ಹೋಗಿ ಅವರ ಜೊತೆ ಇರಿ. ಈಗಂತೂ ವೀಡಿಯೋ ಕಾಲ್ ಮುಖಾಂತರ ಸಂಪರ್ಕ ಸಾಧ್ಯ. ಹೀಗೆ ನೀವು ಮತ್ತು ಮೊಮ್ಮಕ್ಕಳು ಅವರ ಜೊತೆ ಮಾತನಾಡುತ್ತಿರಿ. ಸಂತೋಷ, ದುಃಖಗಳನ್ನು ಹಂಚಿಕೊಳ್ಳುತ್ತಿರಿ. ಯಾವುದಾದರೂ ರೀತಿಯಲ್ಲಿ ಅವರ ಜೊತೆ ಸಂಪರ್ಕದಲ್ಲಿರಿ. ಅವರನ್ನು ಏಕಾಂಗಿತನ ಕಾಡದಂತೆ ನೋಡಿಕೊಳ್ಳುತ್ತಿರಿ.
ಏನಿದು ಪೋಷಕರ, ಹೆತ್ತವರ ದಿನ? ಅವರಿಗೂ ಒಂದು ದಿನ ಬೇಕೇ? ಹೌದು, ಇಂದಿನ ಕಾಲಘಟ್ಟದಲ್ಲಿ ಅಗತ್ಯ. ಎಲ್ಲಿ ಕೂಡು ಕುಟುಂಬ ಇದೆಯೋ ಅವರಿಗೆ ಬೇಡ. ಯಾವಾಗ 'ಪಾಲಕರು ನಮಗೆ ಹೊರೆ, ಅವರು ಬೇಡ, ನಮ್ಮಷ್ಟಕ್ಕೇ ನಾವು ಹಾಯಾಗಿರೋಣ, ಇವರಿಗೆ ಬೇರೆ ಖರ್ಚು, ಕಾಲಿಗೆ ತೊಡರುವವರು, ನಮ್ಮ ಎಲ್ಲಾ ಬದುಕಿನ ಹಂತಗಳಿಗೆ ತೊಂದರೆ ಇವರಿಂದ' ಎಂಬ ಭಾವನೆ ಮೂಡಿತೋ ಅಂದಿನಿಂದ ಇದು ಅಗತ್ಯವಾಗಿದೆ. ಈ ಕಾರಣದಿಂದಲೇ ಅಮ್ಮನ ದಿನ, ಅಪ್ಪನ ದಿನ, ಕುಟುಂಬ ದಿನ, ವೃದ್ಧರ ದಿನ ಎಲ್ಲಾ ಆಚರಣೆಗೆ ಬಂದಿರುವುದು.
ಮಕ್ಕಳ ಪಾಲನೆ ಪೋಷಣೆ, ಜೊತೆಗೆ ರಕ್ಷಣೆ, ಕುಟುಂಬದ ಪ್ರೀತಿ, ಮಮತೆ, ವಾತ್ಸಲ್ಯ, ಆರೋಗ್ಯ, ಎಲ್ಲಾ ರೀತಿಯ ಸುಖಸಂತೋಷಗಳನ್ನು ನೀಡುವ ಪಾಲಕರಿಗೆ ಕೃತಜ್ಞತಾ ಸಮರ್ಪಣೆ ಈ ದಿನ. ೧೯೯೩ ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರಸ್ಥಾವನೆಯಾದರೂ ೧೯೯೪ರಲ್ಲಿ ಅಂಗೀಕಾರವಾಗಿ, ಪ್ರತೀ ವರುಷದ ಜುಲೈ ೪ನೇ ಭಾನುವಾರ ‘ರಾಷ್ಟ್ರೀಯ ಪಾಲಕರ ದಿನ’ ಎಂಬುದಾಗಿ ಆಚರಿಸಲಾಗುತ್ತಿದೆ. (ಜೂನ್ ೧ ನ್ನು ವಿಶ್ವ ಪಾಲಕರ ದಿನ ಎಂದೂ ಆಚರಿಸಲಾಗುತ್ತದೆ)
ಈ ದಿನ ಪ್ರಪಂಚದ ಎಲ್ಲಾ ಪಾಲಕರಿಗೂ ಕೃತಜ್ಞತೆ ಸಲ್ಲಿಸುವ ದಿನ. ನಮ್ಮನ್ನು ಈ ಬುವಿಗೆ ತಂದು, ಬದುಕುವ ದಾರಿ ಹೇಳಿ ತೋರಿಸಿಕೊಟ್ಟ, ಕಣ್ಣಿಗೆ ಕಾಣಿಸುವ ದೇವರುಗಳು ನಮ್ಮ ಹೆತ್ತವರು. ನಮ್ಮ ಬದುಕಿಗೆ ನೆಲೆ-ಬೆಲೆ--ಸ್ಫೂರ್ತಿಯ ಸೆಲೆ ಒದಗಿಸಿದ ಮಹಾನ್ ಚೇತನರು. ಮಗು ಮತ್ತು ಪಾಲಕರ ಮಧ್ಯೆ ಇರುವ ಅಸ್ತ್ರ ಎಂದರೆ ಪ್ರೀತಿ, ವಾತ್ಸಲ್ಯ, ಮಮಕಾರದ ಸೆಳೆತ. ಅದೇ ಅಲ್ಲವೇ ಕರುಳ ಸಂಬಂಧ.
ಈ ಕೊರೊನಾದಂಥ ಸಂಕಷ್ಟದಲ್ಲಿ ಪಾಲಕರ ಜವಾಬ್ದಾರಿ ಬಹಳ ಗುರುತರವಾದ್ದು. ತಮ್ಮ ಜೊತೆಗೆ ತಮ್ಮ ಸಂತಾನಗಳ ಕೊಂಡಿಯನ್ನು ಉಳಿಸಲು ಹೋರಾಟ ನಡೆಸಿದ್ದಾರೆ. ಮಾನಸಿಕ ಬಲ, ದೃಢತೆ ತುಂಬಲು, ಆರೋಗ್ಯ ಕಾಪಾಡಿಕೊಳ್ಳಲು ಪಟ್ಟಪಾಡು ಅಳತೆಗೂ ಸಿಗದು. ಒಂದೆಡೆ ಕೆಲಸವಿಲ್ಲ, ಹೊಟ್ಟೆಗೆ ಅನ್ನವಿಲ್ಲ, ಅದನ್ನು ಗಳಿಸಲು ಮನೆಯಿಂದ ಹೋಗುವ ಹಾಗಿಲ್ಲ, ಎಷ್ಟೋ ದಿನ ನೀರೇ ಗತಿ ಅಂಥ ಸಂಕಷ್ಟದಲ್ಲೂ ತಮ್ಮ ಕುಡಿಗಳಿಗೆ ನೋವಾಗದಂತೆ ನೋಡಿಕೊಂಡವರು ಪಾಲಕರು. ಅವರಿಗೆ ಕೃತಜ್ಞತೆ ಸಲ್ಲ ಬೇಕಲ್ಲವೇ?
ತಂದೆ ಪರ್ವತದ ಎತ್ತರದ ಹಾಗೆ, ತಾಯಿ ಸಮುದ್ರದ ಆಳದಂತೆ ಹೇಳುತ್ತಾರೆ. ಖಂಡಿತಾ ಸತ್ಯ. ಅಪ್ಪನ ಒಳಗುದಿ ಅರ್ಥವಾಗುವುದು ನಾವು ಅಪ್ಪ ಅನಿಸಿದಾಗ. ಅಪ್ಪ ಯಾವತ್ತೂ ಮೌನಿ. ಸಂಗಾತಿ ಬಂದಾಗ ಕೈ ಹಿಡಿದು ಮುಂದೆ ಸಾಗೋಣ, ಆದರೆ ಹಿಂದಿರುಗಿ ನೋಡೋಣ, ಹೆಜ್ಜೆ ಹಾಕಲು ಕಲಿಸಿದವರನ್ನು, ಮುಂದೆ ಹೋಗಲು ಹುರಿದುಂಬಿಸಿದವರನ್ನು.
ಹಾಗಾದರೆ ವೃದ್ಧಾಶ್ರಮಗಳು ಏಕೆ ಹುಟ್ಟಿಕೊಂಡವು? ಎಂಬ ಪ್ರಶ್ನೆ ಕಣ್ಣೆದುರು ಬರುವುದು ಸಹಜ. ಐದೂ ಬೆರಳುಗಳು ಒಂದೇ ಹಾಗಿಲ್ಲವಲ್ಲ. ವಿದೇಶಕ್ಕೆ ಹೋಗಿ ಸಂಪಾದಿಸುವ ಭರಾಟೆಯಲ್ಲಿ ಹೆತ್ತವರ ನೆನಪು ದೂರವಾಗುತ್ತದೆ. ಹಣದೆದುರು ಎಲ್ಲಾ ಗೌಣ. ಯಾರೂ ಇಲ್ಲದವರಿಗೆ ಅಥವಾ ಧಾರಾಳ ಇದ್ದೂ ಅನಾಥರಾದವರಿಗೆ ಇದೇ ಆಸರೆಯ ತಾಣ. ಪಾಲಕರ ದಿನದ ಬಾಬ್ತು, ಈ ಒಂದು ದಿನವಾದರೂ ಅವರ ತ್ಯಾಗಕ್ಕೆ, ಜಗತ್ತನ್ನು ಪರಿಚಯಿಸಿದ ಮಹಾಚೇತನ ಶಕ್ತಿಗಳಿಗೆ, ಬೆಲೆಕಟ್ಟೋಣ, ಗೌರವ ಸಲ್ಲಿಸೋಣ.
‘ಹೆತ್ತವರ ಮಡಿಲು ಪ್ರೀತಿಯ ಕಡಲು’ ಎಂಬ ಮಾತನ್ನು ಮರೆಯದಿರೋಣ. ಯಾರೂ ಕೈಬಿಟ್ಟರೂ ಬನ್ನಿ ಎಂದು ಬಾಚಿ ತಬ್ಬಿ ಸಂತೈಸುವ ಹಿರಿಯ ಜೀವಿಗಳನ್ನು ಮರೆಯದಿರೋಣ.
ಸಹಕಾರ: ರತ್ನಾ ಭಟ್ ತಲಂಜೇರಿ
ಚಿತ್ರ : ಅಂತರ್ಜಾಲ ತಾಣ