ಹೆಸರಿನ ಹಂಬಲ

ಹೆಸರಿನ ಹಂಬಲ

     ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:

     "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ ಪಡೆದಿದ್ದಾರಲ್ಲಾ, ಅವರಿಗೂ ಈಗ ಸಿಕ್ಕಿರುವ ಗೌರವದಿಂದ ಸಮಾಧಾನ ಆಗಿರುವುದಿಲ್ಲ. ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದೇನೆ, ಎಷ್ಟು ಹಣ, ಸಮಯ ಖರ್ಚು ಮಾಡಿದ್ದೇನೆ. ಅದಕ್ಕೆ ಹೋಲಿಸಿದರೆ ಈಗ ಸಿಕ್ಕಿರುವ ಗೌರವ ತುಂಬಾ ಕಡಿಮೆ ಆಯಿತು ಅಂತ ಕೊರಗುತ್ತಿರುತ್ತಾರೆ. ಇನ್ನೊಂದು ವಿಷಯ ಗೊತ್ತಾ? ಸಿಕ್ಕಿರುವ ಆ ಗೌರವವನ್ನು ಉಳಿಸಿಕೊಳ್ಳಲು ಅವರು ಇನ್ನು ಮುಂದೆಯೂ ಒದ್ದಾಡುತ್ತಲೇ ಇರಬೇಕು. ಒಣ ಹೆಸರು ಅನ್ನುವುದನ್ನು ಬಿಟ್ಟರೆ ಗೌರವ ಅನ್ನುವುದರಲ್ಲಿ ಏನಿದೆ?"

     "ಏನೆಂದೆ? ಸತ್ತವರಿಗೆ ಸಿಗುವ ಗೌರವವಾ? ಒಣ ಹೆಸರು ಮಾತ್ರ ಅಂತೀಯಾ?"

     "ಅಷ್ಟಲ್ಲದೇ ಏನು? ಒಂದು ಕಥೆ ಹೇಳ್ತೀನಿ, ಕೇಳು. ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ. ಒಂದು ದಿನ ಅಶರೀರವಾಣಿ ಅವನಿಗೆ ಕೇಳಿಸಿತು: 'ಎಲೈ ರಾಜನೇ, ಯಾರು ಹೆಚ್ಚು ದಾನ ಮಾಡುತ್ತಾರೋ ಅವರು ಸ್ವರ್ಗಕ್ಕೆ ಹೋಗುತ್ತಾರೆ. ಅವರ ಹೆಸರನ್ನು ಸ್ವರ್ಗದಲ್ಲಿರುವ ಬಂಗಾರದ ಬೆಟ್ಟದಲ್ಲಿ ಬರೆಯಲಾಗುವುದು'. ಸರಿ, ರಾಜನಿಗೆ ಬಂಗಾರದ ಬೆಟ್ಟದಲ್ಲಿ ತನ್ನ ಹೆಸರು ಕಾಣುವ ಬಯಕೆ ಗರಿಗಟ್ಟಿತು. ಪ್ರತಿದಿನ ಬಡಬಗ್ಗರಿಗೆ ಊಟ ಹಾಕಿಸಿದ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಿದ, ಧರ್ಮಛತ್ರಗಳನ್ನು ಕಟ್ಟಿಸಿದ. ಪ್ರವಾಸಿಗರಿಗೆ ಅನುಕೂಲವಾಗಲು ವಿಶ್ರಾಂತಿಧಾಮಗಳನ್ನು ಕಟ್ಟಿಸಿದ. ದೇವಸ್ಥಾನಗಳನ್ನು ನಿರ್ಮಿಸಿದ, ಅದು ಮಾಡಿದ, ಇದು ಮಾಡಿದ, ಏನೇನೋ ಮಾಡಿದ. ಎಲ್ಲಾ ಕಟ್ಟಡಗಳಲ್ಲೂ ರಾಜನ ಹೆಸರೋ ಹೆಸರು. ಎಲ್ಲೆಲ್ಲಿ ನೋಡಿದರೂ ರಾಜನ ದಾನ ಮಾಡಿದ ಕುರಿತು ಫಲಕಗಳೇ ಫಲಕಗಳು. ಒಂದು ದಿನ ರಾಜ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ಹೋದವನೇ ಮೊದಲು ಮಾಡಿದ ಕೆಲಸ ಎಂದರೆ ಬಂಗಾರದ ಬೆಟ್ಟ ಎಲ್ಲಿದೆ ಅಂತ ವಿಚಾರಿಸಿದ್ದು. ಬೆಟ್ಟದ ಹತ್ತಿರ ಹೋಗಿ ನೋಡಿದರೆ ಬೆಟ್ಟದ ತುಂಬೆಲ್ಲಾ ಜಾಗವೇ ಇಲ್ಲದಷ್ಟು ಹೆಸರುಗಳು ತುಂಬಿಹೋಗಿದ್ದವು. ಅಲ್ಲಿದ್ದ ಮೇಲ್ವಿಚಾರಕರನ್ನು ತನ್ನ ಹೆಸರು ಎಲ್ಲಿದೆ ಅಂತ ವಿಚಾರಿಸಿದ. ಅವನು ಒಂದು ಬರೆಯುವ ಸಾಧನ ಕೊಟ್ಟು ಹೇಗೆ ಬೇಕೋ ಹಾಗೆ, ಎಲ್ಲಿ ಬೇಕೋ ಅಲ್ಲಿ ಹೆಸರನ್ನು ಬರೆದುಕೊಳ್ಳಬಹುದೆಂದು ಹೇಳಿದ. ಬರೆಯಲು ಜಾಗವೇ ಇಲ್ಲವಲ್ಲಾ ಅಂದಿದ್ದಕ್ಕೆ, ತಿರುಗಿಯೂ ನೋಡದೆ ಆತ ಹೇಳಿದ್ದೇನೆಂದರೆ, 'ಇರುವ ಯಾವುದಾದರೂ ಹೆಸರನ್ನು ಅಳಿಸಿ ನಿನ್ನ ಹೆಸರು ಬರೆದುಕೊಳ್ಳಬಹುದು' ಅಂತ."

     "ಹಾಂ??"

     "ಆ ರಾಜನಿಗಾದರೋ ಸತ್ತ ಮೇಲೆ ತನ್ನ ಹೆಸರು ಬರೆದುಕೊಳ್ಳುವ ಅವಕಾಶವಾದರೂ ಸಿಕ್ಕಿತ್ತು. ನಿನಗೇನು ಸಿಗುತ್ತೆ? ಮಣ್ಣು. ಸತ್ತ ಮೇಲೆ ನಿನಗೇ ನೀನು ಯಾರು ಅಂತ ಗೊತ್ತಿರುತ್ತೋ ಇಲ್ಲವೋ! ಸತ್ತ ಮೇಲೆ ಗೌರವ ಸಿಗುತ್ತೆ ಅಂತ ಈಗ ಯಾಕೆ ಒದ್ದಾಡುತ್ತೀಯಾ?"

     "ಹಾಂ??"

     "ಹೌದು ಕಣೋ ಮಂಕೆ. ಆದರೆ ಒಂದು ಸಮಾಧಾನವಿದೆ. ಈಗ ಬದುಕಿದ್ದಾಗ ನಿನ್ನ ಕಾಲು ಎಳೆದವರೇ ಮುಂದೆ  ನೀನು ಸತ್ತ ಮೇಲೆ ನಿನ್ನ ಫೋಟೋಗೆ ಹಾರ ಹಾಕಿ 'ಅವರು ಎಷ್ಟು ದೊಡ್ಡ ವ್ಯಕ್ತಿ. ಆದರೆ ಅವರಿಗೆ ಬದುಕಿದ್ದಾಗ ಸಿಗಬೇಕಾದ ಗೌರವ ಸಿಗಲಿಲ್ಲ. ಅಂತಹ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಅವರ ಸಾವಿನಿಂದ ತುಂಬಲಾರದ ನಷ್ಟ ಆಗಿದೆ' ಅಂತ ಕಣ್ಣೀರು ಹಾಕ್ತಾರೆ. ನಿನ್ನದು ಒಂದು ಒಳ್ಳೆಯ ಪೋಸ್ ಇರುವ ಫೋಟೋ ಇಲ್ಲದಿದ್ದರೆ ಈಗಲೇ ತೆಗೆಸಿಟ್ಟಿರು. ಮುಂದೆ ಉಪಯೋಗಕ್ಕೆ ಬರುತ್ತೆ."

     "ಹಾಂ??"

     "ಈ ಹೆಸರಿನ ಹಂಬಲ ಇದೆಯಲ್ಲಾ, ಅದು ಮಾಡಬಾರದ್ದು ಮಾಡಿಸುತ್ತೆ. ತನಗಿಂತಾ ಹೆಚ್ಚು ಹೆಸರು ಇನ್ನೊಬ್ಬರಿಗೆ ಬರಬಾರದು ಅಂತ ಇತರರನ್ನು ಕೀಳಾಗಿ ನೋಡುವಂತೆ ಮಾಡುತ್ತೆ. ಅಧಿಕಾರ, ಹೆಸರು ಬರಲು ಕಾರಣರಾದವರನ್ನೇ ಮುಂದೆ ಅವರಿಂದ ತನ್ನ ಅಧಿಕಾರ, ಹೆಸರಿಗೆ ಕುತ್ತು ತರುತ್ತಾರೆಂದು ದ್ವೇಷಿಸುವಂತೆ ಮಾಡುತ್ತೆ. ಸ್ನೇಹಿತರು, ಬಂಧುಗಳೇ ಶತ್ರುಗಳಂತೆ ಕಾಣಿಸುವಂತೆ ಮಾಡುತ್ತೆ. ಈ ಹೆಸರು ದುಂಬಿ ಇದ್ದಂತೆ. ಅದು ಹಾಡೂ ಹೇಳುತ್ತೆ. ಚುಚ್ಚಿಯೂ ಚುಚ್ಚುತ್ತೆ."

     "ನಿಜ, ನಿಜ. ಈಗಿನ ರಾಜಕಾರಣಿಗಳನ್ನು ನೋಡಿದರೇ ಗೊತ್ತಾಗುತ್ತೆ."

     "ಬರೀ ರಾಜಕಾರಣಿಗಳೇನು, ಸಾಹಿತಿಗಳು, ಅಧಿಕಾರಿಗಳು, ವರ್ತಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಇಂಥವರು, ಅಂಥವರು, ನಾವು ಎಲ್ಲರೂ ಹೀಗೆ ಮಾಡುವವರೇ. ಅವರಿಗೂ ಶಾಂತಿಯಿಲ್ಲ, ಅವರಿಂದ ಬೇರೆಯವರಿಗೂ ಶಾಂತಿಯಿಲ್ಲ."

     "ಹಂಗಂತೀಯ??"

     "ಹಂಗನ್ನದೆ ಇನ್ನು ಹ್ಯಾಂಗನ್ನಲಿ, ಮಂಕಣ್ಣ. ಇನ್ನೊಂದು ವಿಷಯ ಗೊತ್ತಾ? ಈ ಹೆಸರು ಬಂದವರು ಇದ್ದಾರಲ್ಲಾ, ಅವರು ಮೊದಲು ಇದ್ದಂತೆ ಇರುವುದಿಲ್ಲ. ತಾವು ಎಲ್ಲರಿಗಿಂತ ಮೇಲು ಅಂದುಕೊಂಡು ಬೇರೆಯವರನ್ನು, ಬೇರೆಯವರಿರಲಿ, ತನ್ನ ಸ್ನೇಹಿತರು, ಬಂಧುಗಳನ್ನೇ ಹಗುರವಾಗಿ ಕಂಡು ಅವಮಾನ ಮಾಡುತ್ತಾರೆ. ಈ ಸ್ವಭಾವದಿಂದ ವಿನಾಕಾರಣ ಇತರರ ದ್ವೇಷ ಕಟ್ಟಿಕೊಳ್ಳುತ್ತಾರೆ."

     "ಅಯ್ಯಪ್ಪಾ! ನನಗೆ ಹಾರ ಹಾಕದಿದ್ದದ್ದೇ ಒಳ್ಳೆಯದಾಯಿತು ಬಿಡು."

     "ಈಗ ಹಾಕದಿದ್ದರೇನಂತೆ, ಮುಂದೆ ಒಂದು ದಿನ ಹಾಕುತ್ತಾರೆ, ಬಿಡು. ಈ ಹೆಸರಿನ ಹಂಬಲ ಇದೆಯಲ್ಲಾ, ಇದು ಎಂಥಾ ದೊಡ್ಡ ವ್ಯಕ್ತಿಗಳನ್ನೂ ಬಿಡುವುದಿಲ್ಲ. ಹೆಸರು, ಅಧಿಕಾರಕ್ಕಾಗಿ ಅವರು ಸ್ವಂತ ವ್ಯಕ್ತಿತ್ವವನ್ನೇ ಮರೆತುಬಿಡುತ್ತಾರೆ."

     "ಅದೇನೋ ಸರಿ, ಈಗಿನ ದೇಶದ ನಾಯಕರು ಇರೋದೇ ಹಾಗೆ. ಆದರೂ ಅವರು ನಾಯಕರು. ನೀನು ಮಾತನ್ನು ಎಲ್ಲೆಲ್ಲಿಗೋ ತಿರುಗಿಸುತ್ತಿದ್ದೀಯಾ. ಈಗಿನ ಸಂದರ್ಭದ ಬಗ್ಗೆ ಮಾತನಾಡು. ಕೊನೆಯ ಪಕ್ಷ ಬಾಯಿಮಾತಿನಲ್ಲಾದರೂ ಹಾಳು ಬಿದ್ದು ಹೋಗಲಿ ಅಂದುಕೊಂಡು ನನ್ನ ಬಗ್ಗೆ ಎರಡು ಒಳ್ಳೆಯ ಮಾತು ಹೇಳಬಹುದಿತ್ತಲ್ಲವಾ?"

      "ಹೇಳಿದ್ದರೆ ನಿನಗೆ ಏನು ಸಿಗುತ್ತಿತ್ತು? ಅವರಿಗೆ ಹೇಳಲು ಬೇಕಿಲ್ಲದಿರಬಹುದು. ನಿನ್ನನ್ನು ಹೊಗಳಿದರೆ ಅವರಿಗೆ ಬೆಲೆ ಕಡಿಮೆ ಆಗುತ್ತೆ ಅಂದುಕೊಂಡಿರಬಹುದು. ಸೇರಿರುವ ಜನ ಯಾರನ್ನು ಯಾರು ಗೌರವಿಸಿದರೂ ಅಷ್ಟೆ, ಗೌರವಿಸದಿದ್ದರೂ ಅಷ್ಟೆ, ತಲೆ ಕೆಡಿಸಿಕೊಳ್ಳದವರು. ಹಾಗಿರುವಾಗ ನಿನಗೆ ಅವರಿಂದ ಗೌರವಿಸಿಕೊಳ್ಳಬೇಕು ಅನ್ನುವ ಹಂಬಲ ಯಾಕೆ? ಒಂದು ಮಾತು ಹೇಳ್ತೀನಿ ಕೇಳು, ಪ್ರತಿಭೆ ಅನ್ನುವುದು ದೇವರ ಕೊಡುಗೆ. ದೇವರಿಗೆ ತಲೆಬಾಗಬೇಕು. ಗೌರವ ಜನರು ಕೊಡುವುದು. ಕೊಟ್ಟರೆ  ಅವರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ನಮಗೆ ನಾವೇ ಕೊಟ್ಟುಕೊಳ್ಳುವುದು. ಎಚ್ಚರವಿರಬೇಕು."

     ಅಷ್ಟರಲ್ಲಿ ಧ್ವನಿವರ್ಧಕದಲ್ಲಿ ಮೊಳಗಲು ಪ್ರಾರಂಭವಾಯಿತು, "ಮಂಕಣ್ಣನವರು ಎಲ್ಲಿದ್ದರೂ ಬರಬೇಕು. ಮಾನ್ಯ ಅತಿಥಿಗಳು ಅವರಿಗೆ ಮಾಲಾರ್ಪಣೆ ಮಾಡಲಿದ್ದಾರೆ". ಮಂಕಣ್ಣ ಕೂಡಲೇ ಅಡ್ಡವಿದ್ದವರನ್ನು ಪಕ್ಕಕ್ಕೆ ಸರಿಸುತ್ತಾ ವೇದಿಕೆಯ ಕಡೆಗೆ ಧಾವಿಸಿದ! ಹಾರ ಹಾಕಿಸಿಕೊಂಡು ಬೀಗುತ್ತಾ ಬಂದ ಮಂಕನನ್ನು ಮೂಢ ಕೆಣಕಿದ, "ಅಂತೂ ಹಾರ ಹಾಕಿಸಿಕೊಂಡೆಯಲ್ಲಾ! ಸಮಾಧಾನವಾಯಿತಾ?" ಈ ಮಾತು ಕೇಳಿ ಮಂಕಾದ ಮಂಕನನ್ನು ಕಂಡು ಮರುಕಪಟ್ಟು ಹೇಳಿದ:

     "ನಿಜ, ನೀನು ನಿಜವಾಗಿಯೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀಯಾ. ಆದರೆ ಅಲ್ಲಿ ವೇದಿಕೆಯ ಮೇಲೆ ಕುಳಿತವರನ್ನೊಮ್ಮೆ ನೋಡು. ಅವರು ನಿನ್ನ, ನಿನ್ನಂತಹವರ ಶ್ರಮದಲ್ಲಿ ಕೆಲಸ ಮಾಡದೇ ಗೌರವ ಪಡೆಯುತ್ತಿದ್ದಾರೆ. ಜನ ಅವರಿಗೇ ಹಾರ ಹಾಕಿ, ಅವರ ಮಾತಿಗೆ ಚಪ್ಪಾಳೆ ತಟ್ಟುತ್ತಾರೆ. ಅದು ಅವರ ಸಾಮರ್ಥ್ಯ. ಎಲ್ಲರಿಗೂ ಅದು ಬರಲ್ಲ."

     "ಅದೇನೋ ಸರಿ ಬಿಡು. ನಾನು ಪಡೆದದ್ದು ನನಗೆ. ಅವರು ಪಡೆದದ್ದು ಅವರಿಗೆ."

     "ಕನ್ನಡದ ಸುಪ್ರಸಿದ್ಧ ಗೀತ ರಚನಕಾರ ಎಸ್.ಕೆ. ಕರೀಮ್‌ಖಾನರ ಹೆಸರು ಕೇಳಿದ್ದೀಯಲ್ಲವಾ? ಅವರ ಬಡತನವನ್ನು ದುರುಪಯೋಗಿಸಿಕೊಂಡು ಅವರಿಂದ ಗೀತೆಗಳನ್ನು ಬರೆಸಿ ತಮ್ಮ ಹೆಸರಿನಲ್ಲಿ ಹಾಕಿಕೊಂಡು ಪ್ರಸಿದ್ಧರಾದವರೂ ಈ ನೆಲದಲ್ಲಿ ಇದ್ದರು."

     "ಹೌದಾ?"

     "ನಿಜ ಕಣೋ. ಈಗ ಹೆಸರಿನ ಹಿಂದೆ ಡಾಕ್ಟರ್ ಅಂತ ಸೇರಿಸಿಕೊಳ್ಳೋದು ಕಷ್ಟವೇನಿಲ್ಲ. ಹಣ ಖರ್ಚು ಮಾಡಿದರೆ ಡಾಕ್ಟೊರೇಟ್ ಕೊಡಿಸುವ ದಲ್ಲಾಳಿಗಳು ಡಾಕ್ಟೊರೇಟ್ ಕೊಡಿಸುತ್ತಾರೆ. ನೀನು ಸಾಹಿತಿಯಾಗಿ ಒಂದೆರಡು ಪುಸ್ತಕ ಬರೆದು, ಲೇಖನಗಳನ್ನು ಬರೆದುಬಿಟ್ಟೆಯೋ ನಿನ್ನ ಅಂತಸ್ತು ಸ್ವಲ್ಪ ಏರುತ್ತದೆ. ಶ್ರಮ ಪಟ್ಟರೆ, ರಾಜಕಾರಣಿಗಳ ಬೆನ್ನು ಬಿದ್ದರೆ ಪ್ರಶಸ್ತಿಯೂ ಸಿಕ್ಕಿಬಿಡುತ್ತದೆ."

     "ಹಾಗಾದರೆ ಪ್ರಶಸ್ತಿ ಪಡೆದವರೆಲ್ಲಾ ಹೀಗೆಯೇ ಪಡೆದವರಾ?"

     "ಛೇ, ಛೇ. ಹಾಗೆಂದರೆ ಬಾಯಲ್ಲಿ ಹುಳ ಬೀಳುತ್ತದೆ. ಅರ್ಹತೆಯಿದ್ದು ಪ್ರಶಸ್ತಿ ಪಡೆದವರು ತಮ್ಮ ತೂಕ ಉಳಿಸಿಕೊಂಡಿರುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಹಾಗೆ. ಆದರೆ ಲಾಬಿ ಮಾಡಿ ಪ್ರಶಸ್ತಿ ಪಡೆದವರ ತಲೆಯೇ ನಿಲ್ಲುವುದಿಲ್ಲ. ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಾ, ವಿವಾದ ಸೃಷ್ಟಿಸುತ್ತಾ ಸದಾ ತಮ್ಮ ಹೆಸರು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿರುತ್ತಾರೆ."

     "ದೊಡ್ಡವರ ವಿಷಯ ನಮಗೇಕೆ ಬಿಡು. ಭೋಗಿ ಪಡೆದಿದ್ದು ಭೋಗಿಗೆ, ಜೋಗಿ ಪಡೆದಿದ್ದು ಜೋಗಿಗೆ."

     "ಹೋಗಲಿ ಬಿಡು. ಏನೋ, ಹಾರ ಹಾಕಲಿಲ್ಲ ಅಂತ ನೀನು ಪೇಚಾಡ್ತಾ ಇದ್ದಿಯಲ್ಲಾ, ಅದಕ್ಕೆ ನಾಲ್ಕು ಮಾತಾಡಿದೆ ಅಷ್ಟೆ. ಈ ಮನುಷ್ಯರ ಪ್ರಪಂಚ ನಡೀತಿರೋದೇ ಈ ನಾನು, ನಾನು ಅನ್ನೋ ಹೆಸರಿನ ಹಂಬಲದಿಂದ. ನಾನೂ, ನೀನೂ ಇದಕ್ಕೆ ಹೊರತಾದವರೇನಲ್ಲ."

     ಅಕ್ಕ ಪಕ್ಕದಲ್ಲಿದ್ದವರಿಗೆ ಇವರ ಮಾತುಗಳಿಂದ ಕಿರಿಕಿರಿಯಾಗುತ್ತಿದ್ದರಿಂದ ಇವರನ್ನು ಅಸಹನೆಯಿಂದ ನೋಡುತ್ತಿದ್ದರು. ಇದನ್ನು ಗಮನಿಸಿದ ಇವರೂ ಸುಮ್ಮನೆ ಕುಳಿತು ಸಭಾಕಲಾಪ ವೀಕ್ಷಿಸತೊಡಗಿದರು.

-ಕ.ವೆಂ.ನಾಗರಾಜ್.

 

Comments

Submitted by lpitnal Sat, 05/10/2014 - 14:32

ಕವಿನಾ ಸರ್ ಗೆ, ವಂದನೆಗಳು. ಹೆಸರಿನ ಹಂಬಲ ಲೇಖನ ತುಂಬ ಚನ್ನಾಗಿ ಮೂಡಿದೆ, ಕಥೆಯೂ ಸುಂದರವಾಗಿ, ಪೂರಕವಾಗಿದೆ. ಸರ್, ಧನ್ಯವಾದಗಳು

Submitted by swara kamath Sat, 05/10/2014 - 20:18

ಕವಿ ನಾಗರಾಜರಿಗೆ ನಮಸ್ಕಾರ
ತುಂಬಾ ದಿನಗಳಿಂದ ಕಾಣೆಯಾಗಿದ್ದ ಮಂಕ ಮೂಢರು ಪುನಃ ಬಂದಿದ್ದಾರೆ. ಇವರ ಮೂಲಕ ' ಈ ನಾನು, ನನ್ನ ಹೆಸರಿನ ಹಂಬಲ ' ಇರುವ ವ್ಯಕ್ತಿಗಳ ಮನದಾಳವನ್ನ ಬಹಳ ಚನ್ನಾಗಿ ತಮ್ಮ ಕಲಾಕುಂಚದಿಂದ ಬರೆದ ಚಿತ್ರ ದೊಂದಿಗೆ ತಿಳಿಸಿದ್ದೀರಿ.<<<ಎಡಬಿಡಂಗಿ ಹೇಳಿಕೆಗಳನ್ನು ಕೊಡುತ್ತಾ, ವಿವಾದ ಸೃಷ್ಟಿಸುತ್ತಾ ಸದಾ ತಮ್ಮ ಹೆಸರು ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿರುತ್ತಾರೆ.">>>> ಇದು ಬಹಳ ಸತ್ಯವಾದ ಮಾತು.
ವಂದನೆಗಳು.........ರಮೇಶ ಕಾಮತ್.

Submitted by kavinagaraj Sun, 05/11/2014 - 14:05

In reply to by swara kamath

ಕೇವಲ ಲೇಖನ ಬರೆದರೆ ಸ್ವಾರಸ್ಯವಿರದೆಂದು ಮಂಕ. ಮೂಢರ ಸಂಭಾಷಣೆ ಮೂಲಕ ಮಂಡಿಸಿರುವೆ. ಮೆಚ್ಚಿದ್ದಕ್ಕೆ ವಂದನೆಗಳು, ರಮೇಶ ಕಾಮತರೇ.

Submitted by nageshamysore Tue, 05/13/2014 - 06:43

ಕವಿಗಳೆ ನಮಸ್ಕಾರ. ಸಂವಾದದ ರೀತಿ ಮಂಡಿಸಿದ ಬಗೆ ಪರಿಣಾಮಕಾರಿಯಾಗಿದೆ. ಒಮ್ಮೆ ಹೊಟ್ಟೆ ಬಟ್ಟೆಯ ಅಗತ್ಯಗಳು ತೀರಿದ ಮೇಲೆ ಸರಿಸುಮಾರು ಎಲ್ಲರನ್ನು ಕಾಡುವ ಪ್ರಮುಖ ಅಂಶ ಈ ಹೆಸರು ಮಾಡುವ ಹಂಬಲ - ಹಣ ಆಸ್ತಿ ಪಾಸ್ತಿ ಮಾಡಿಕೊಂಡು ಸರೀಕರಲ್ಲಿ ಹೆಸರು ಮಾಡುವುದರಿಂದ ಹಿಡಿದು ತಮ್ಮಲ್ಲಿರುವ ಕಲೆಯ ಅನಾವರಣದ ಮೂಲಕ ಹೆಸರಾಗುವವರೆಗೆ. ಬರೆಯುವ ಹಂಬಲವುಳ್ಳ ನಮ್ಮಲ್ಲೂ ಕೂಡ ಆ ಹೆಸರು ಮಾಡುವ ಆಕಾಂಕ್ಷೆ ಸುಪ್ತಗಂಗೆಯಂತೆ ಇನಿತಾದರೂ ಇರುತ್ತದೆಂಬುದನ್ನು ಅಲ್ಲಗಳೆಯಲಾಗದು. ವಿಪರ್ಯಾಸವೆಂದರೆ ಹೆಸರನ್ನು ಬೆನ್ನಟ್ಟಿ ಹೋದವರಿಗೆಲ್ಲ ಅದು ಕೈಗೆ ಸಿಗುವುದಿಲ್ಲ - ಸಿಕ್ಕರೂ ಕೊಸರಷ್ಟೆ. ಹೆಸರಿನ ಬೆನ್ನಟ್ಟದೆ ನಿಜ ಕಾಳಜಿಯಿಂದ ಕರ್ಮನಿರತರಾದವರಿಗೆ ಹೆಸರು ಸಿಗಲಿ, ಬಿಡಲಿ - ಬೆಲೆ ಕಟ್ಟಲಾಗದ ಆತ್ಮ ತೃಪ್ತಿ, ಸಂತೋಷವಂತೂ ಸಿಗುತ್ತದೆ. ನಿಮ್ಮ ಸುಂದರ ಬರಹ ಆ ಭಾವಕ್ಕೆ ಹಿಡಿದ ಸೊಗಸಾದ ಕನ್ನಡಿ.

Submitted by kavinagaraj Tue, 05/13/2014 - 15:21

In reply to by nageshamysore

ನಮಸ್ತೆ, ನಾಗೇಶರೇ. ಆತ್ಮ ತೃಪ್ತಿಗಿಂತ ಮಿಗಿಲಿಲ್ಲ ಎಂಬ ನಿಮ್ಮ ಅನಿಸಿಕೆ ಸಮಂಜಸವಾಗಿದೆ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು.