ಹೆಸರು

ಪ್ರತಿಯೊಬ್ಬರಿಗೂ ಅಂಕಿತ ನಾಮವಿದೆ. ಸ್ಥಳಗಳಿಗೆ ಬೇರೆ ಬೇರೆ ಹೆಸರುಗಳಿವೆ. ಒಂದೇ ಹೆಸರಿನ ಅಸಂಖ್ಯ ಊರುಗಳಿರುವಂತೆ ಒಂದೇ ಹೆಸರಿನ ಅಸಂಖ್ಯ ವ್ಯಕ್ತಿಗಳೂ ಇರುತ್ತಾರೆ. ಒಬ್ಬರಿಗೇ ಹಲವು ಹೆಸರುಗಳೂ ಇವೆ. ಉದಾಹರಣೆಗೆ “ಹರಿ”. ವಿಷ್ಣು ಸಹಸ್ರನಾಮಿಯೆಂದೇ ಶ್ರೀಹರಿಯನ್ನು ಉಲ್ಲೇಖಿಸುತ್ತಾರೆ. ಈಗೀಗ ಸಾಕು ಪ್ರಾಣಿಗಳಿಗೂ ಹೆಸರಿರಿಸಿ ಕರೆಯುವ ಸಂಪ್ರದಾಯವಿದೆ. ಹೆಸರು ಎನ್ನುವಾಗ ನಮಗೆ ಇನ್ನೊಂದು ಪದ ನೆನಪಿಗೆ ಬರುವುದು, “ಹೆಸರಾಗು”. ಹೆಸರಾಗು ಎಂದರೆ ಹೆಸರುವಾಸಿಯಾಗು, ಪ್ರಸಿದ್ಧಿಯಾಗು ಎಂದೇ ಅರ್ಥ.
ಹೆಸರುವಾಸಿಯಾಗಲು, ವ್ಯಕ್ತಿಯ ಸಾಧನೆಗಳು ಮಾತನಾಡಬೇಕಾಗುತ್ತವೆ. ಆದಿಕಾಲ ಯಾವಾಗ ಎಂಬುದು ನಮಗೆ ಸರಿಯಾಗಿ ಅರಿಯದು. ಆದರೆ ನಾವು ಹೆಸರು ಹೇಳುವ, ಸ್ಮರಿಸುವ ನೂರಾರು ಹೆಸರುಗಳಲ್ಲಿ ಸಹಸ್ರಾರು ವರ್ಷಗಳ ಹಿಂದಿನವರೂ ಸೇರಿದ್ದಾರೆಯೆಂಬುದು ಅವರ ಸಾಧನೆಗಳ ಪ್ರತಿಬಿಂಬ. ಈಗಲೂ ಸಾಧನೆ ಮಾಡಿ ಪ್ರಸಿದ್ಧರಾಗುವವರು ಇದ್ದಾರೆ. ಸೇವೆಯೇ ಸಾಧನೆಯ ಮೂಲ. ಬೇರೆ ಬೇರೆ ವ್ಯಕ್ತಿಗಳ ಸೇವೆಯ ಹಿರಿಮೆಗರಿಮೆಗಳ ಆಧಾರದಲ್ಲಿ ಅವರ ಹೆಸರನ್ನು ನಿತ್ಯ ಕೊಂಡಾಡುತ್ತೇವೆ. ಏಕಾತ್ಮಕತಾ ಸ್ತೋತ್ರದ ಮೂಲಕ ಅಸಂಖ್ಯ ಭಾರತೀಯ ಖ್ಯಾತ ನಾಮರನ್ನು ನಿತ್ಯ ಸ್ಮರಿಸುತ್ತೇವೆ. ದೇಶದ ಏಕತೆ, ಭಾವನೆಗಳ ಏಕತೆ, ಭಾಷಾ ಬೆಳವಣಿಗೆ, ಪರಿಸರದ ಉನ್ನತಿ, ಆರೋಗ್ಯ ಸಂರಕ್ಷಣೆ, ಜ್ಞಾನ ಪ್ರಸಾರ, ನಾಗರಿಕತೆಯ ವಿಕಾಸ ಹೀಗೆ ನೂರಾರು ಮಜಲುಗಳಲ್ಲಿ ಹೆಸರಾದವರು ಬಹಳಷ್ಟು ಜನರಿದ್ದಾರೆ. ಸಾಧಕರಾದ ಕರ್ಮಯೋಗಿಗಳ ಮನದೊಳಗೆ ಸ್ವಾರ್ಥವಿರಲಿಲ್ಲ. ಹೆಸರು ಬರಬೇಕು, ಪ್ರಸಿದ್ಧಿ ಪಡೆಯಬೇಕು ಎಂಬ ಇರಾದೆಯೂ ಇರಲಿಲ್ಲ. ಪ್ರತ್ಯುಪಕಾರದ ಬಯಕೆಯಿಲ್ಲದೆ ಉಪಕಾರಗಳನ್ನೇ ಮಾಡುತ್ತಾ ಗಂಧದ ಕೊರಡುಗಳಂತೆ ಜೀವನ ತೇದ ಕಾರಣಕ್ಕಾಗಿ ಅವರು ಸಮಾಜದಲ್ಲಿ ಸಹಸ್ರಾರು ವರ್ಷ ಉಳಿದಿದ್ದಾರೆ, ಅವರ ಹೆಸರು ನಮ್ಮ ನಾಲಿಗೆಯಲ್ಲಿ ಉರುಳಾಡುತ್ತಿದೆ. ಸಾಮಾಜಿಕ, ರಾಜಕೀಯ, ವೈಜ್ಞಾನಿಕ, ತಾಂತ್ರಿಕ ಹೀಗೆ ಸಾಧಕರ ಕ್ಷೇತ್ರಗಳು ನೂರಾರು. ಅವರು ತಮ್ಮ ಸಾಧನೆಯಿಂದಾಗಿ ಜನ ಮನಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.
ಹೆಸರಿನೊಂದಿಗೆ ಪದವಿಗಳನ್ನು ಜೋಡಿಸಿ ಬರೆಯುವುದು ಅಥವಾ ಉಲ್ಲೇಖಿಸುವುದಿದೆ. ರಾಮರಾಜ ಎಂ.ಎಸ್, (ಲಂಡನ್) ಇದು ಹೆಸರಿನೊಂದಿಗೆ ಪದವಿ ಉಲ್ಲೇಖಿತ ಬರವಣಿಗೆ. ಈ ಪದವಿಗಳು ಹೆಸರಿನ ಕೊನೆಗಿರುತ್ತವೆ. ಪದವಿ ಹಚ್ಚುವ ಹುಚ್ಚಿನ ಕೆಲವರು ಬರೆದು ಪಾಸಾದ ಇಲಾಖಾ ಪರೀಕ್ಷೆಗಳನ್ನೂ ಪದವಿಯೆಂದು ಬಿಂಬಿಸುವುದಿದೆ. ಅವು ಅವರು ಉತ್ತೀರ್ಣರಾದ ಯಾವುದೋ ಸ್ಪರ್ಧಾ ಪರೀಕ್ಷೆ ಮಾತ್ರವಾಗಿರುತ್ತದೆ. ಹೆಸರಿನೊಂದಿಗೆ ತಾವು ಎದುರಿಸಿದ ಸ್ಪರ್ಧಾ ಪರೀಕ್ಷೆಯನ್ನು ಪದವಿಯಂತೆ ಬಿಂಬಿಸುವುದರಿಂದ ನಗೆಪಾಟಲಿಗೊಳಗಾಗುತ್ತಾರೆ.
ಹೆಸರಿನೊಂದಿಗೆ “ಒಳ್ಳೆಯ” ಎಂಬುದಾಗಿ ಜೋಡಿಸಿ ಹೇಳುವ ಸಂಪ್ರದಾಯವೂ ಇದೆ. ಆದರೆ “ಒಳ್ಳೆಯ” ಇದನ್ನು ಸ್ವಯಂ ಆಗಿ ಯಾರೂ ಉದ್ಧರಿಸುವುದಿಲ್ಲ. ಇತರರು ಮಾತನಾಡುವಾಗ “ಒಳ್ಳೆಯ” ಎಂಬ ಅಭಿದಾನ ಸೇರಿಸಿಯೇ ಹೆಸರು ಹೇಳುತ್ತಾರೆ. ಇದು ಅತ್ಯುತ್ತಮ ಗೌರವದ ಪದವಿ. ಒಳ್ಳೆಯ ಗೋವೀಂದ, ಒಳ್ಳೆಯ ಕೇಶವ, ಒಳ್ಳೆಯ ಮಹಮ್ಮದ್, ಒಳ್ಳೆಯ ಜಾನ್, ಒಳ್ಳೆಯ ಕಮಲ ಹೀಗೆ “ಒಳ್ಳೆಯ” ಎಂಬ ಬಿರುದು ಹೆಸರಿಗೆ ಮೊದಲು ಛಾಪಿತವಾಗುವಂತಾದರೆ ಅದೇ ಮಹಾನ್ ಹೆಸರು. ಒಳ್ಳೆಯದನ್ನೇ ಮಾಡಿದವರಿಗೆ ಒಳ್ಳೆಯ ಎಂಬ ಅಂಕಿತ ಸೇರಿಸಿಯೇ ಜನರು ಮಾತನಾಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಪೂರ್ವಾಶ್ರಮದಲ್ಲಿ ದರೋಡೆಕೋರರಾಗಿದ್ದರು. ಋಷಿಯಾಗಿ ಅವರು ಜಗತ್ತಿಗೆ ರಾಮಾಯಣದ ಮೂಲಕ ಅತ್ಯದ್ಭುತವಾದ ಜೀವನ ಸಂಧೇಶ ನೀಡಿ ಖ್ಯಾತ ನಾಮರಾದರು. ಕೆಲವರು ಕುಪ್ರಸಿದ್ಧರಾಗಿಯೂ ನಂತರ ತಪ್ಪುಗಳನ್ನು ಕಳಚಿ ಪ್ರಸಿದ್ಧರಾದ ಅನೇಕ ದೃಷ್ಠಾಂತಗಳಿವೆ. ದಾನವೀಯುವುದು ಹೆಸರು ಪಡೆಯುವ ಸುಲಭ ವಿಧಾನ. ದಾನದ ಮಹತ್ವಕ್ಕೆ ಇದರಿಂದ ಆಘಾತವೇ ಆಗುತ್ತದೆ. ಬಲಗೈ ನೀಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಪ್ರಾಜ್ಞರ ಸಲಹೆಯಿದೆ. ದಾನ ಗೌಪ್ಯವಾದರೆ ಅದು ಶ್ರೇಷ್ಠವೆಂದು ಪರಿಗಣನೆಯಾಗುತ್ತದೆ.
ಹೆಸರಿಗೆ ಕೆಸರೆರಚುವುದು, ಕೆಸರೆರಚಿಸಿಕೊಳ್ಳುವುದು ಬಹಳ ಸುಲಭ. ವೀರಪ್ಪನ್ ಎಂಬ ಹೆಸರು ಇತಿಹಾಸದಲ್ಲಿರುತ್ತದೆ. ಆದರೆ ಆ ಹೆಸರಿನೊಂದಿಗೆ ಕಳಂಕವಿರುವುದಲ್ಲಾ! ಆದುದರಿಂದ ಆ ಹೆಸರು ಕೆಟ್ಟವನೆಂಬ ಪದ ಜೋಡಿತವಾಗಿಯೇ ಉಳಿಯುತ್ತದೆ. ಹೆಸರಾಗೋಣ ಆದರೆ ಸಜ್ಜನಿಕೆ, ಸೇವೆಯ ಮೂಲಕ ಹೆಸರುಗಳಿಸೋಣ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ : ಇಂಟರ್ನೆಟ್ ತಾಣ