ಹೊಂಗಿರಣ
ವಿವೇಕ ದಿವಟೆಯವರ ‘ಹೊಂಗಿರಣ’
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿರುವ ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಶ್ರೀ ವಿವೇಕ ದಿವಟೆಯವರು ದ್ವಿಭಾಷಾ ಕವಿಗಳು. ಅವರು ಹಿಂದಿಯಲ್ಲಿ ಬರೆದಿರುವ ಕವನ ಸಂಕಲನ ಪ್ರಕಟವಾಗಿದೆ. ಮೂಲತಃ ಹಿಂದಿ ಅಧ್ಯಾಪಕರಾಗಿರುವ ಅವರು ಕನ್ನಡದಲ್ಲಿಯೂ ಬರೆಯುವ ಪ್ರಯತ್ನವಾಗಿ ಅವರ ಕವನ ಸಂಕಲನ ‘ಹೊಂಗಿರಣ’ ೨೦೨೦ ರಲ್ಲಿ ವಿವೇಕ ಪ್ರಕಾಶನದಿಂದಲೇ ಪ್ರಕಟವಾಗಿದೆ. ಅವರ ಈ ಮೊದಲ ಕವನ ಸಂಕಲನಕ್ಕೆ ಬೆಳಗಾವಿಯ ಹಿರಿಯ ಪತ್ರಕರ್ತರಾದ ಶ್ರೀ ಎಲ್,ಎಸ್, ಶಾಸ್ತಿç ಯವರು ಮುನ್ನುಡಿ ಬರೆದು ಹರಸಿದ್ದು, ಇನ್ನೋರ್ವ ಹಿರಿಯ ಕವಿಗಳಾದ ಶ್ರೀ ಏ.ಏ ಸನದಿಯವರು ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ. ೪೩ ಪುಟ್ಟು ಪುಟ್ಟ ಕವಿತೆಗಳನ್ನು ಕವಿ ಇಲ್ಲಿ ಸಂಕಲಿಸಿದ್ದಾರೆ. ಇದೊಂದು ವಿಭಿನ್ನಗಳ ಭಾವನೆಗಳನ್ನು ಕವಿತೆಯಾಗಿಸಿದ ಸಂಕಲನ. ಇಲ್ಲಿ ದೈವ ಚಿಂತನೆ ಇದೆ. ರಾಷ್ಟ್ರದ ಸಮಕಾಲೀನ ಸಂಗತಿಗಳ ಚಿತ್ರಣವಿದೆ. ಪ್ರೀತಿ ಪ್ರೆಮದಂತಹ ಮನುಷ್ಯ ಸಹಜ ಭಾವಗಳ ಆವೇಗವೂ ಇದೆ.
ಕವಿಯ ಮನಸ್ಸಿನ ಭಾವನೆಗಳ ಪ್ರಾಮಾಣಿಕ ಅಭಿವ್ಯಕ್ತಿ ಕವಿತೆ. ತನಗೆ ಏನು ಭಾವಗಳು ಹೊಳೆಯುತ್ತವೆಯೋ ಅದನ್ನು ಕವಿ ಪ್ರಾಮಾಣಿಕವಾಗಿ ಹೊರ ಹಾಕುವ ಪ್ರಯತ್ನ ಸ್ತುತ್ಯಾರ್ಹವೇ ಈ ದೃಷ್ಟಿಯಿಂದ ವಿವೇಕ ದಿವಟೆಯವರು ಅಭಿನಂದನಾರ್ಹರೂ ಆಗಿದ್ದಾರೆ. ಅನೇಕ ಸಂಗತಿಗಳನ್ನು ಇಲ್ಲಿ ಕವಿತೆಯಾಗಿಸುವ ಪ್ರಯತ್ನವನ್ನು ಕವಿ ಮಾಡಿದ್ದಾರೆ.
ಉದಾತ್ತ ಚಿಂತನೆಗಳ ಈ ಕವಿ ಈ ಜಗತ್ತೆಲ್ಲವೂ ಪರಮಾತ್ಮನ ಸೃಷ್ಟಿ ಎಂಬುದನ್ನು ಸಾರುತ್ತಾರೆ ನಾವೆಲ್ಲ ಪರಮಾತ್ಮನ ಮಕ್ಕಳು ಎನ್ನುವ ಕವಿ ಹೀಗಿದ್ದಾಗ ನಮ್ಮ ನಡುವೆ ದ್ವೇಷ ಏಕೆ? ಎಂಬ ಪ್ರಶ್ನೆಯನ್ನು ಎತ್ತುವುದು ಸಹಜವಾಗಿಯೆ ಇದೆ. ಇಂದು ನಾವು ಮಹಾತ್ಮರನ್ನು ಜಾತಿ ಧರ್ಮಗಳಿಗೆ ಸೀಮಿತರಾಗಿ ಮಾಡಿಕೊಂಡು ಅವರು ನಮ್ಮವರು , ಇವರು ನಮ್ಮವರು ಎನ್ನುವ ಮಿತಿ ಹಾಕಿ ಹಾಕಿಕೊಂಡು ಪೂಜಿಸುವದು ಕವಿಗೆ ಕೋಪ ತರಿಸಿದೆ , ಅವರು ಎಲ್ಲರಿಗೂ ಸೇರಿದವರಲ್ಲವೆ ಎನ್ನುವ ಕವಿ ಅವರನ್ನು ಮಹಾಮಾನವರು, ದೈವಮಾನವರು ಎಂದು ಕರೆದು ಗೌರವಿಸುತ್ತಾರೆ.
ಸಮಕಾಲೀನ ಸಂದರ್ಭಕ್ಕೂ ಕವಿ ಪ್ರತಿಕ್ರಿಯಿಸುವದನ್ನು ಮರೆತಿಲ್ಲ. ಆಧುನಿಕ ಭಾರತವನ್ನು ನೋಡಿದ ಕವಿಗೆ ಇಲ್ಲಿ ಲಗ್ಗೆಯಿಡುತ್ತಿರುವ ಪರದೇಶದ ಪ್ರಭಾವವನ್ನು ಕಂಡು ನಾವು ಇನ್ನೊಮ್ಮೆ ಈಷ್ಟ ಇಂಡಿಯ ಕಂಪನಿ ಯ ಅಧೀನಕ್ಕೆ ಒಳಗಾಗಲು ಬಯಸುತ್ತಿದ್ದೇವೆಯೇ ? ಎಂಬ ಸಂಶಯ ಬರುತ್ತದೆ. ಬಹುರಾಷ್ಟಿçÃಯ ಕಂಪನಿಗಳು ಬಂದು ನಮ್ಮ ದೇಶÀವನ್ನು ಮತ್ತೊಮ್ಮೆ ಆಕ್ರಮಿಸಿಕೊಳ್ಳುತ್ತಿವೆಯೇ ಎಂಬ ಸಂಶಯ ಬಂದಿದೆ. ಈ ವಿದೇಶಿ ಸಂಸ್ಕೃತಿಯ ಪ್ರಭಾವ ಕವಿಗೆ ನೂತನ ಖಡ್ಗದಂತೆ ಕಾಣಿಸುತ್ತದೆ. ನಾವೇ ನಮ್ಮ ಕೈ ಮತ್ತು ಹಗ್ಗವನ್ನು ಕೊಟ್ಟು ಕೈಯನ್ನು ಕಟ್ಟಿಕೊಳ್ಳುತ್ತಿದ್ದೇವೆ ಎನಿಸುತ್ತದೆ. ಆದ್ದರಿಂದಲೇ
ನೂತನ ತಕ್ಕಡಿಯ ಕೈಯಲ್ಲಿ
ನೂತನ ಖಡ್ಗವಿರಬಹುದೇನೋ
ಎಂದು ಸಂಶಯಿಸುವದನ್ನು ಗಮನಿಸಬೇಕು. ಆದರೆ ನಮ್ಮನ್ನಾಳುವವರು ಇದಾವ ಸಂಶಯವನ್ನೂ ಮನದಲ್ಲಿ ಭಾವಿಸದೇ ವಿಧೇಶಿ ವ್ಯಾಪಾರಿ ಪದ್ಧತಿಗೆ ಮಣೆ ಹಾಕುವದು ಕವಿಗೆ ಆತಂಕ ತರಿಸಿದೆ. ಮಕ್ಕಳ ಮುಗ್ಧತೆಯನ್ನು ಹಾಳು ಮಡಿ ಅವರನ್ನು ಬಂದಿಸಿಟ್ಟಿರುವ ದೊಡ್ಡವರ ನಡೆಯನ್ನು ಇಲ್ಲಿ ಗುಬ್ಬಚ್ಚಿಯ ನಡೆಯಂಬ ರೂಪಕದ ಮೂಲಕ ಕವಿ ವಿಡಂಬಿಸುತ್ತಾರೆ. ಹಾರಬೇಕಿದ್ದ ಗುಬ್ಬಚ್ಚಿಯನ್ನು ಲಾಂದ್ರವೊಂದರ ಮುಂದೆ ಓದು ಎಂದು ಕಟ್ಟಿ ಹಾಕಿರುವ ಹಿರಿಯರಿಗೆ ಗುಬ್ಬಚ್ಚಿ
ಆದರೆ ನಾನು ಇಲ್ಲಿ ಬಂದಿಯಾಗಿರಬೇಕು!
ಇದು ಯಾರಿಗೆ ಬೇಕು?
ಹಾಳು ಅಧಿಕಾರಿ ನಾನಾಗುವುದು?
ನಾನು ಮುಕ್ತವಾಗಿ ಹಾರಬೇಕು
ಎಂದು ಬಯಸುವದು ಕೇವಲ ಗುಬ್ಬಚ್ಚಿಯ ಆಸೆ ಮಾತ್ರವಾಗಿಲ್ಲ, ಮಗುವಿನ ಆಸೆಯೂ ಆಗಿದೆ. ಇಂದು ನಾವು ಓದು ಓದು ಎಂದು ಮಗುವನ್ನು ಕೋಣೆಯಲ್ಲಿ ಕೂಡ್ರಿಸಿ ಕೊಳೆಸುವದನ್ನು ಅವರು ಸಹಜವಾಗಿಯೇ ವಿಡಂಬಿಸಿದ್ದಾರೆ.
ಕವಿ ಜಗವೆಲ್ಲ ಪ್ರೀತಿಯಿಂದ ತುಂಬಲಿ ಎಂದು ಬಯಸುತ್ತಾರೆ. “ಹೇ ಮನ ನೀನು ಬಯಸು,ಈ ಜಗವೆಲ್ಲ ಪ್ರೀತಿಯಿಂದ ತುಂಬಲೆಂದು, ಸುಂದರ ಅಂದದ ತೋಟ ಅಗಲೆಂದು , ಇಲ್ಲಿ ಸ್ವಧವೇ ನಿರ್ಮಾಣವಾಗಲೆಂದು “ ಎಂದು ಬಯಸುತ್ತಾರೆ . ನಿಜ, ಅದರೆ ಇದು ಕವಿಯ ಕನಸಷ್ಟೇ ವಾಸ್ತವ ಭಿನ್ನವಾಗಿಯೆ ಇದೆ. ಅದರೂ ಕವಿ ಕನಸು ಕಾಣುತ್ತಲೆ ಇರುತ್ತಾನೆ ಈ ಬಗೆಯ ಆಶಯ ಗೀತೆಗಳು ಇಲ್ಲಿವೆ.
\ಪ್ರೇಮ ಒಂದೇಯಲ್ಲವೇ\ ? ಎಂಬ ಕವಿತೆ ಇಡಿ ಜಗತ್ತಿನ ಮನುಷ್ಯರೆಲ್ಲ ಒಂದೇ ಎಂದು ಸಾರುತ್ತದೆ. ‘ಪಾಪ ಪುಣ್ಯಗಳ ಅಡಕೊತ್ತಿನಲಿ ‘ಹೋಗೋಣ ನಡಿರಿ ಶಾಲೆಗೆ’. ‘ನಾನು ಹೊರಡುವೆ ಹೊಲಕ್ಕೆ’ . ‘ಮುಕ್ತಿ ಮಾರ್ಗ’ ಮೊದಲಾದ ಕವಿತೆಗಳು ಭಾವಗೀತ ಶೈಲಿಯಲ್ಲಿವೆ. ನಮ್ಮಲ್ಲಿ ಕಡಿಮೆಯಾಗುತ್ತಿರುವ ದೇಶಾಭಿಮಾನವನ್ನು ಕವಿ ವಿಡಂಬಿಸುತ್ತಾರೆ. ‘ದಯಾಳುಗಳು’ ಎಂಬ ಕವಿತೆ ನಮ್ಮ ಈ ಗುಣವನ್ನು
ನಮ್ಮ ಪಾರ್ಲಿಮೆಂಟಿನ ಮೇಲೆ
ಹಲ್ಲೆ ಮಾಡಿದ ಅಫಜಲ್‌ನಿಗೆ
ಕ್ಷಮಿಸಿ ಬಿಡಿ ಎನ್ನವಷ್ಟು
ದಯಾಳುಗಳಾಗಿದ್ದೇವೆ
ಎನ್ನುವ ಸಾಲಿನಲ್ಲಿ ಕವಿ ನಮ್ಮ ಹೇಡಿತನವನ್ನು, ನಿರಭಿಮಾನವನ್ನೂ ಚಿತ್ರಿಸುತ್ತಾರೆ. ‘ಹೇಗೆ ಹಾಡಲಿ ಗೀತೆ ನಾನು’ ಎನ್ನುವ ಕವಿ ಸಂಸಾರದ ವಿಕಟತೆಯನ್ನು ಸಾರುತ್ತಾರೆ. ‘ಮಾನವನ್ಹೇಗೆ’ ದಂತ ಹ ಕವಿತೆಗಳು ಹೆಚ್ಚು ತಾತ್ವಿಕ ವಾಗಿವೆ .’ಭಾರತೀಯ’ , ‘ನವ ರಾಷ್ಟç ನಿರ್ಮಾಣ ಮಾಡೋಣ ಬನ್ನಿ’ ಕವಿತೆಗಳಲ್ಲಿ ದೇಶಭಕ್ತಿ ಎದ್ದು ತೋರುತ್ತದೆ. ಭಾರತೀಯ ಕವಿತೆಯಲ್ಲಿ
ನಾನು ಭಾರತೀಯನಾದರೆ ಸಾಕು
ಮತ್ತೇನು ಬೇಕು ನನಗೆ?
ಎನ್ನುವ ಕವಿಯ ಸಾಲಿಗೆ ನಾವೂ ಸೈಯೆನ್ನಲೇಬೇಕು. ಇದೇ ಭಾವ ‘ನವ ರಾಷ್ಟ್ರ ನಿರ್ಮಾಣ ಮಾಡೋಣ ಬನ್ನಿ ‘ ಕವಿತೆಯಲ್ಲಿಯೂ ಇದೆ. ಕೊರೋನಾ ಕಾಲದಲ್ಲಿ ಕೊರೋನಾದ ಅಟ್ಟ ಹಾಸವನ್ನು ಕರೋನಾ ರಾಣಿ ಎಂಬ ಕವಿತೆ ವಿವರಿಸಿದೆ.
ಆದರೆ ಇಲ್ಲಿ ಕವಿ ಹೆಚ್ಚು ವಾಚ್ಯತೆಯತ್ತ, ವಿವರಣೆಯತ್ತ ಸಾಗಿದ್ದಾರೆ. ಇದಕ್ಕೆ ‘ಧರ್ಮ’, ‘ಪೃಕೃತಿ ಸೌಂದರ್ಯ’ ,’ ಕರಿ ಎತ್ತು ‘ ದಂತಹ ಕವಿತೆಗಳನ್ನು ಉದಾಹರಣೆಗೆಯಾಗಿಟ್ಟುಕೊಳ್ಳಬಹುದು .ಹೆಚ್ಚು ವಿವರನಾತ್ಮಕವಾದಷ್ಟೂ ಕವಿತೆ ಜಾಳಗುವದನ್ನು ಪ್ರತಿ ಕವಿ ಅರಿಯಬೇಕು. ಕವಿತೆ ವಿವರಿಸಿದ್ದಲ್ಲ ಸೂಚಿಸಿದ್ದು ಎಂದು ಹಿರಿಯರು ಹೇಳಿದ್ದನ್ನು ನೆನಪಿಡಬೇಕು. ಕವಿತೆಯಾಗದೆ ಸಾಲುಗಳು ಗದ್ಯವೇ ಕೊರೆದಿಟ್ಟಂತೆ ಭಾಸವಾಗುತ್ತವೆ. ಇಂತಹುದನ್ನು ಕವಿ ತಾವೇ ತಿದ್ದಿಕೊಳ್ಳಬೇಕು. ಕವಿತೆ ಮಾಡುವ ಹೊಣೆಗಾರಿಕೆ ಅವನದೇ ಅಲ್ಲವೇ? ಇದು ವಿವೇಕ ದಿವಟೆಯವರ ಮೊದಲ ಸಂಕಲವಾದ್ದರಿಂದ ಮುಂದಿನ ರಚನೆಗಳಲ್ಲಿ ಅವರು ತಿದ್ದಿಕೊಳ್ಳುತ್ತಾರೆಂಬ ಭರವಸೆ ಪ್ರತಿ ಓದುಗನಿಗೆ ಇದ್ದೇ ಇದೆ. ಇದನ್ನು ಮುನ್ನುಡಿಯಲ್ಲಿ ಸೂಕ್ಷ್ಮವಾಗಿ ಹಿರಿಯರಾದ ಶ್ರೀ ಎಲ್.ಎಸ್. ಶಾಸ್ತ್ರಿಯವರು ಹೇಳಿದ್ದಾರೆ.
ಕವಿ ಹೆಚ್ಚು ಹೆಚ್ಚು ಗೇಯ ಕವಿತೆಗಳನ್ನು ಬರೆಯಬಲ್ಲರು. ಆ ದಿಶೆಯಲ್ಲಿ ಇವರ ಪ್ರಯತ್ನ ಸಾಗಲಿ ಎಂದು ನಾನು ಹಾರೈಸುತ್ತೇನೆ. ಅನುಭವಿಗಳೂ ಉಭಯ ಭಾಷೆ ಸಾಹಿತ್ಯಗಳ ಪರಿಚಯವಿದ್ದವರೂ ಆದ ವಿವೇಕ ದಿವಟೆಯವರಿಂದ ಹೆಚ್ಚು ಹೆಚ್ಚು ಸಾಹಿತ್ಯ ರಚನೆಯಾಗಲಿ ಎಂದು ಬಯಸುತ್ತೇನೆ.
ಡಾ. ವೈ.ಎಂ.ಯಾಕೊಳ್ಳಿ, ಸವದತ್ತಿ